Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕ್ಯಾನ್ಸರ್‌ ಮತ್ತು ರೇಡಿಯೇಷನ್‌ ಚಿಕಿತ್ಸೆ
    • ರೇಡಿಯೇಷನ್‌ ತೆರಪಿ ಯಂತ್ರ

      • ಡಾ| ಕಮಲಾಕ್ಷ ಶೆಣೈ ಮುಖ್ಯಸ್ಥರು, ರೇಡಿಯೇಷನ್‌ ಆಂಕಾಲಜಿ ವಿಭಾಗ, | Feb 05, 2012

        ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಅಸಹಜ ಜೀವಕೋಶಗಳು ಅನಿಯಂತ್ರಿತವಾಗಿ ವಿಭಜನೆಗೊಂಡು ಸಂಖ್ಯೆಯಲ್ಲಿ ವೃದ್ಧಿಯಾಗುವುದು ಮತ್ತು ದೇಹದ ಇತರ ಅಂಗಾಂಗಗಳಿಗೆ ಹಾನಿ ಮಾಡುವ ಸ್ಥಿತಿಯೇ ಕ್ಯಾನ್ಸರ್‌. ಈ ಕ್ಯಾನ್ಸರ್‌ಗ್ರಸ್ತ ಜೀವಕೋಶಗಳು ರಕ್ತ ಪ್ರವಾಹ ಹಾಗೂ ದುಗ್ಧ ಗ್ರಂಥಿ ವ್ಯವಸ್ಥೆ ಗಳ ಮೂಲಕ ದೇಹದ ಇತರ ಭಾಗಗಳಿಗೂ ಹರಡಬಲ್ಲವು. ಕ್ಯಾನ್ಸರ್‌ನಲ್ಲಿ ಸುಮಾರು 100ಕ್ಕೂ ಮಿಕ್ಕಿ ವಿಧಗಳಿವೆ. ಹೆಚ್ಚಿನ ಕ್ಯಾನ್ಸರ್‌ಗಳನ್ನು, ಅವು ದೇಹದ ಯಾವ ಭಾಗದಲ್ಲಿ ಆರಂಭಗೊಂಡಿವೆ ಎಂಬುದನ್ನಾಧರಿಸಿ ಹೆಸರಿಸಲಾಗುತ್ತದೆ. ಉದಾಹರಣೆಗೆ, ಸ್ತನಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಸ್ತನ ಕ್ಯಾನ್ಸರ್‌ ಅನ್ನಿಸಿಕೊಂಡರೆ, ದುಗ್ಧ ಗ್ರಂಥಿಗಳಲ್ಲಿ ಕಾಣಿಸಿಕೊಂಡ ಕ್ಯಾನ್ಸರ್‌ ಲಿಂಫೋಮಾ ಅನ್ನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕ್ಯಾನ್ಸರನ್ನು 5 ಮುಖ್ಯ ಭಾಗಗಳಲ್ಲಿ ವಿಂಗಡಿಸಿ ನೋಡಲಾಗುತ್ತದೆ. ಅವು ಯಾವುದೆಂದರೆ-

        * ಕಾರ್ಸಿನೋಮಾ: ಚರ್ಮ ಅಥವಾ ದೇಹದ ಆಂತರಿಕ ಅಂಗಗಳ ಹೊರ ಪದರ ಅಥವಾ ಒಳ ಪದರಗಳ ಅಂಗಾಂಶಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌.

        * ಸಾರ್ಕೋಮಾ: ಮೂಳೆ, ಮೃದ್ವಸ್ಥಿ, ಕೊಬ್ಬು, ಸ್ನಾಯು,  ರಕ್ತನಾಳಗಳು ಮತ್ತಿತರ ಬಂಧಕ ಅಥವಾ ಬೆಂಬಲ ಅಂಗಾಂಶಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌.

        * ಲ್ಯುಕೇಮಿಯಾ: ರಕ್ತ ಉತ್ಪಾದನೆಯಾಗುವ ಮೂಳೆ ಮಜ್ಜೆಯಲ್ಲಿ ಕಾಣಿಸಿಕೊಳ್ಳುವ ಹಾಗೂ ರಕ್ತ ಪ್ರವಾಹದಲ್ಲಿ ಅಸಂಖ್ಯ ಪ್ರಮಾಣದ ಅಸಹಜ ರಕ್ತ ಕಣಗಳು ಉತಿ³ತ್ತಿ ಆಗುವ ಸ್ಥಿತಿ.

        * ಲಿಂಫೋಮಾ ಮತ್ತು ಮಯೆಲೋಮಾ: ರೋಗ ನಿರೋಧಕ ವ್ಯವಸ್ಥೆಯ ಕೋಶಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌.

        ಕೇಂದ್ರ ನರಮಂಡಲದ ಕ್ಯಾನ್ಸರ್‌: ಮೆದುಳು ಮತ್ತು ಬೆನ್ನು ಹುರಿಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌.

        ಈ ಎಲ್ಲ ಕ್ಯಾನ್ಸರ್‌ಗಳೂ ಆರಂಭಗೊಳ್ಳುವುದು ದೇಹದ ಮೂಲಭೂತ ಅಂಶವಾದ ಜೀವ ಕಣಗಳಲ್ಲೇ. ಕ್ಯಾನ್ಸರ್‌ ಎಂದರೇನೆಂದು ಅರ್ಥ ಮಾಡಿಕೊಳ್ಳಲು, ಆರೋಗ್ಯವಂತ ಮತ್ತು ಕ್ಯಾನ್ಸರ್‌ ಪೀಡಿತ ಕೋಶಗಳ ನಡುವಿನ ವ್ಯತ್ಯಾಸ ತಿಳಿದಿರುವುದು ಬಹಳ ಮುಖ್ಯ. ದೇಹದಲ್ಲಿ ಹಲವಾರು ವಿಧದ ಜೀವಕೋಶಗಳಿರುತ್ತವೆ. ಇವು ಬೆಳೆದು ವಿಭಜನೆಗೊಂಡು, ಹೊಸ ಕೋಶಗಳು ಉತ್ಪತ್ತಿ ಆಗುತ್ತವೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತವೆ. ಈ ಕೋಶಗಳು ಹಳೆಯದಾದಾಗ-ಹಾನಿಗೊಂಡಾಗ, ಅವುಗಳ ಸ್ಥಾನದಲ್ಲಿ ಹೊಸ ಕೋಶಗಳು ಬರುತ್ತವೆ.ಬಹಳ ನಿಯಂತ್ರಿತವಾಗಿ ನಡೆಯುವ ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ತೊಂದರೆ ಸಂಭವಿಸುತ್ತದೆ.

        ಕೋಶದ ಜೀವವಾಹಿಗಳು (ಡಿಎನ್‌ಎ) ಹಾನಿಗೊಂಡಾಗ, ಬದಲಾದಾಗ ಆಗುವ ಬದಲಾವಣೆಗಳು ಆರೋಗ್ಯವಂತ ಕೋಶದ ಬೆಳವಣಿಗೆ ಮತ್ತು ವಿಭಜನೆಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಹೀಗಾದಾಗ, ವಯಸ್ಸಾಗಿ ಸಾಯಬೇಕಾದ ಜೀವಕೋಶಗಳು ಸಾಯುವುದಿಲ್ಲ  ಮತ್ತು ಅದರ ಸ್ಥಾನದಲ್ಲಿ ಅಗತ್ಯವಿಲ್ಲದಿದ್ದರೂ ಹೊಸ ಕೋಶಗಳು ಉತ್ಪತ್ತಿ ಆಗುತ್ತವೆ. ಈ ಹೆಚ್ಚುವರಿ ಕೋಶಗಳೆಲ್ಲ ಗಡ್ಡೆಯಾಗಿ ಪರಿವರ್ತನೆಗೊಳ್ಳುತ್ತವೆ. ಈ ಗಡ್ಡೆಗಳು ನಿರಪಾಯಕಾರಿ ಆಗಿರಬಹುದು ಅಥವಾ ಹರಡಿ ಬೆಳೆಯುವಂತಾಗಿರಬಹುದು. ನಿರಪಾಯಕಾರಿ ಗಡ್ಡೆಗಳು ಕ್ಯಾನ್ಸರ್‌ ಅಲ್ಲ. ಅವುಗಳನ್ನು ತೆಗೆದು ಹಾಕಬಹುದು; ಮತ್ತು ಅವು ಮರುಕಳಿಸಲಾರವು. ಅಲ್ಲದೆ ಅವು ದೇಹದ ಇತರ ಭಾಗಗಳಿಗೆ ಹರಡಿ ಬೆಳೆಯಲಾರವು.

        ಆದರೆ ಕ್ಯಾನ್ಸರ್‌ ಕೋಶಗಳು ದೇಹದ ಇತರ ಭಾಗಗಳಿಗೆ ಹರಡಬಲ್ಲವು ಮತ್ತು ಈ ರೀತಿ ಕ್ಯಾನ್ಸರ್‌ ಹರಡುವ ಕ್ರಿಯೆಯನ್ನು ಮೆಟಾಸ್ಟಾಸಿಸ್‌ ಎಂದು ಗುರುತಿಸಲಾಗುತ್ತದೆ. ಕೆಲವು ಕ್ಯಾನ್ಸರ್‌ಗಳಲ್ಲಿ ಗಡ್ಡೆಗಳಿರಬೇಕೆಂದಿಲ್ಲ. ಉದಾಹರಣೆಗೆ, ಲ್ಯುಕೇಮಿಯಾ ಎಂಬುದು ಮೂಳೆ ಮಜ್ಜೆ ಹಾಗೂ ರಕ್ತದ ಕ್ಯಾನ್ಸರ್‌.
        ಕ್ಯಾನ್ಸರ್‌ಗೆ 4 ಮುಖ್ಯವಾದ ಚಿಕಿತ್ಸಾ ವಿಧಾನಗಳಿವೆ. ಅವೆಂದರೆ, ಶಸ್ತ್ರಕ್ರಿಯೆ, ರೇಡಿಯೇಷನ್‌, ಕೀಮೋತೆರಪಿ ಹಾಗೂ ಬಯಾಲಾಜಿಕಲ್‌ ತೆರಪಿಗಳು. ಇವಲ್ಲದೆ ಹಾರ್ಮೋನು ಚಿಕಿತ್ಸೆ ಮತ್ತು ಟ್ರಾನ್ಸ್‌ ಪ್ಲಾಂಟ್‌ ಅವಕಾಶಗಳೂ ಇವೆ. ಈ ಲೇಖನ ರೇಡಿಯೇಷನ್‌ ತೆರಪಿ ಬಗ್ಗೆ ಚರ್ಚಿಸಲಿದೆ.

        ರೇಡಿಯೇಷನ್‌ ತೆರಪಿ

        ರೇಡಿಯೇಷನ್‌ ತೆರಪಿಯಲ್ಲಿ ಅತಿ ಚೈತನ್ಯದ ವಿಕಿರಣಗಳನ್ನು ಬಳಸಿ, ಕ್ಯಾನ್ಸರ್‌ ಗಡ್ಡೆಗಳನ್ನು  ಕುಗ್ಗಿಸುವ, ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುವ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಕ್ಷ-ಕಿರಣ, ಗಾಮಾ ಕಿರಣ ಮತ್ತು
        ಚಾರ್ಜ್‌ಡ್‌ ಪಾರ್ಟಿಕಲ್‌ಗ‌ಳನ್ನು  ವಿವಿಧ ಕ್ಯಾನ್ಸರ್‌ ಚಿಕಿತ್ಸೆಗಳಲ್ಲಿ ರೇಡಿಯೇಷನ್‌ಗಾಗಿ ಬಳಸಲಾಗುತ್ತದೆ.  ರೇಡಿಯೇಷನ್‌ ಚಿಕಿತ್ಸೆಯನ್ನು ದೇಹದ ಹೊರಭಾಗದಲ್ಲಿ ಯಂತ್ರವೊಂದರ ಮೂಲಕ ಅಥವಾ ದೇಹದ ಒಳಗೇ ವಿಕಿರಣಶೀಲ ವಸ್ತುಗಳನ್ನು ಇರಿಸಿ ವಿಕಿರಣ ನೀಡುವ ಮೂಲಕ (ಬ್ರಾಕಿ ತೆರಪಿ) ಹೀಗೆ ಎರಡು ವಿಧಗಳಲ್ಲಿ  ನೀಡಬಹುದಾಗಿದೆ.

        ನೂರಕ್ಕೆ 80ರಷ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ ಒಂದಿಲ್ಲೊಂದು ವಿಧಾನದಲ್ಲಿ ವಿಕಿರಣ ಚಿಕಿತ್ಸೆಯನ್ನು ನೀಡಲಾಗುತ್ತದೆ. ವಿಕಿರಣ ಚಿಕಿತ್ಸೆಯಲ್ಲಿ ವಿಕಿರಣಗಳು ಕೋಶಗಳ ಡಿಎನ್‌ಎಗೆ ಹಾನಿ ಮಾಡುವ ಮೂಲಕ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುತ್ತವೆ. ಇದು ವಿಕಿರಣಗಳಿಂದ ನೇರವಾಗಿ ಸಂಭವಿಸಬಹುದು, ಇಲ್ಲವೇ ಅವು ಉತ್ಪಾದಿಸಿದ ಚಾರ್ಜ್‌ಡ್‌ ಪಾರ್ಟಿಕಲ್‌ಗ‌ಳ ಮೂಲಕ ಸಂಭವಿಸಬಹುದು.ತೀವ್ರ ಹಾನಿಗೀಡಾದ ಕ್ಯಾನ್ಸರ್‌ ಕೋಶಗಳ ಡಿಎನ್‌ಎಯು ವಿಭಜನೆಗೊಳ್ಳುವುದನ್ನು ನಿಲ್ಲಿಸಿ ಸಾಯುತ್ತದೆ. ಹೀಗೆ ಸತ್ತಾಗ ಅವು ದೇಹದಿಂದ ಬೇರ್ಪಟ್ಟು, ನೈಸರ್ಗಿಕ ಪ್ರಕ್ರಿಯೆಯ ಮೂಲಕವೇ ದೇಹದಿಂದ ವಿಸರ್ಜನೆಗೊಳ್ಳುತ್ತವೆ.

        ರೇಡಿಯೇಷನ್‌ ತೆರಪಿಯಿಂದ ಆರೋಗ್ಯವಂತ ಕೋಶಗಳಿಗೂ ಹಾನಿ ಆಗಿ ಅಡ್ಡ ಪರಿಣಾಮಗಳಾಗುತ್ತವೆಯಾದರೂ, ಈ ಬಗ್ಗೆ ವೈದ್ಯರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡೇ ರೇಡಿಯೇಷನ್‌ ತೆರಪಿಯನ್ನು ಯೋಜಿಸುತ್ತಾರೆ. ದೇಹ ಸ್ವೀಕರಿಸಬಹುದಾದ ಸಹಜ ರೇಡಿಯೇಷನ್‌ ಪ್ರಮಾಣ ಪ್ರತಿಯೊಂದು ದೇಹ ಭಾಗಕ್ಕೂ ನಿರ್ಧರಿತವಾಗಿರುತ್ತದೆ. ಇದರ ಆಧಾರದಲ್ಲೇ ರೇಡಿಯೇಷನ್‌ ತೆರಪಿಯನ್ನು ಹೇಗೆ ನೀಡಬೇಕೆಂದು ನಿರ್ಧರಿಸಲಾಗುತ್ತದೆ. ರೇಡಿಯೇಷನ್‌ ಆಂಕಾಲಜಿಸ್ಟ್‌ರು ಮೇಲೆ ವಿವರಿಸಲಾದ ವಿವರಗಳನ್ನು ಗಮನದಲ್ಲಿರಿಸಿಕೊಂಡೇ ಚಿಕಿತ್ಸಾ ಯೋಜನೆಯನ್ನೂ ತಯಾರಿಸುತ್ತಾರೆ. ರೋಗಿಯನ್ನು ಬಾಡಿ ಮೌಲ್ಡ್‌ಗಳನ್ನು ಬಳಸಿ, ಚಲಿಸದಂತೆ ಮಾಡಲಾಗುತ್ತದೆ. ಮುಖಕ್ಕೂ ಕವಚ ಮತ್ತಿತರ ಸುರಕ್ಷಾ ಪರಿಕರಗಳನ್ನು ಬಳಸಲಾಗುತ್ತದೆ. ರೋಗಿ ಇದರಿಂದಾಗಿ ಚಿಕಿತ್ಸೆಯ ವೇಳೆ ಸ್ಥಿರ ಭಂಗಿಯಲ್ಲಿರುವುದು ಸಾಧ್ಯವಾಗುತ್ತದೆ. ರೋಗಿಯ ಯಾವ ಭಾಗಕ್ಕೆ ವಿಕಿರಣ ಹಾಯಿಸಬೇಕೋ, ಆ ಭಾಗವನ್ನು ಸ್ಪಷ್ಟವಾಗಿ ಗುರುತು ಮಾಡಿ, ಅಲ್ಲಿ ಟಾಟೂ ಅಥವಾ ತಾತ್ಕಾಲಿಕ ಗುರುತು ಹಾಕಲಾಗುತ್ತದೆ.ಇದಾದ ಬಳಿಕ ಸಿಮ್ಯುಲೇಶನ್‌ ವೇಳೆ ರೋಗಿಯ ಗಡ್ಡೆ ಇರುವ ಸ್ಥಳ, ಅದರ ಸುತ್ತಲಿನ ಸಹಜ ಅಂಗಾಂಶ ಭಾಗಗಳನ್ನು ಖಚಿತವಾಗಿ ಗುರುತಿಸಲಾಗುತ್ತದೆ.

        ಇದು ಸಿ.ಟಿ. ಸ್ಕ್ಯಾನ್‌ ಮೂಲಕ ನಡೆಯುತ್ತದೆ. ಕೆಲವೊಮ್ಮೆ ಎಂಆರ್‌ಐ ಅಥವಾ ಪಿಇಟಿ ಮತ್ತು ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ಗಳನ್ನೂ ಬಳಸಲಾಗುತ್ತದೆ. ಸಿಮ್ಯುಲೇಶನ್‌ ಬಳಿಕ ರೇಡಿಯೇಷನ್‌  ಆಂಕಾಲಜಿಸ್ಟ್‌ರು  ಚಿಕಿತ್ಸೆ ನಡೆಯಬೇಕಾದ ಭಾಗವನ್ನು ಖಚಿತವಾಗಿ ಗುರುತಿಸಿ, ಅಲ್ಲಿಗೆ ತಲುಪಿಸಬೇಕಾದ ವಿಕಿರಣ ಪ್ರಮಾಣವನ್ನು ಲೆಕ್ಕಾಚಾರ ಮಾಡುತ್ತಾರೆ. ಜೊತೆಗೆ ಗಡ್ಡೆಯ ಸುತ್ತ ಇರುವ ಆರೋಗ್ಯವಂತವಾದ ಭಾಗಗಳಿಗೆ ತಲುಪುವ ವಿಕಿರಣ ಎಷ್ಟೆಂಬುದನ್ನೂ ಲೆಕ್ಕಾಚಾರ ಮಾಡುತ್ತಾರೆ. ರೇಡಿಯೇಷನ್‌ ದೇಹವನ್ನು ತಲುಪಬೇಕಾದ ಸುರಕ್ಷಿತ ಕೋನ ಯಾವುದು ಎಂಬುದನ್ನೂ ನಿರ್ಧರಿಸುತ್ತಾರೆ.ರೇಡಿಯೇಷನ್‌ ಆಂಕಾಲಜಿಸ್ಟರ ಸಿಬ್ಬಂದಿ (ಫಿಸಿಸಿಸ್ಟ್‌ ಮತ್ತು ಡೋಸಿಮೆಟ್ರಿಸ್ಟ್‌) ಅತ್ಯಾಧುನಿಕ ಕಂಪ್ಯೂಟರ್‌ ಬಳಸಿ ವಿವರವಾದ ಯೋಜನೆಯನ್ನು ತಯಾರಿಸುತ್ತಾರೆ.

        ಈ  ಯೋಜನೆಗೆ ಒಪ್ಪಿಗೆ ದೊರೆತ ಬಳಿಕವಷ್ಟೇ ಚಿಕಿತ್ಸೆ ಆರಂಭವಾಗುತ್ತದೆ. ಚಿಕಿತ್ಸೆಯ ಮೊದಲ ದಿನ ಮತ್ತು ಆ ಬಳಿಕ ಕನಿಷ್ಠ ಪ್ರತೀ ವಾರಕ್ಕೊಮ್ಮೆ ಎಲ್ಲವೂ ಸುಗಮವಾಗಿ, ಸುರಕ್ಷಿತವಾಗಿ, ಯೋಜನೆಯಂತೆ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಚಿಕಿತ್ಸೆಯನ್ನು ರೇಡಿಯೋ ತೆರಪಿಸ್ಟ್‌ ಅಥವಾ ರೇಡಿಯೇಶನ್‌ ತಂತ್ರಜ್ಞರು ನೀಡುತ್ತಾರೆ.ಹೊರಗಿನಿಂದ ವಿಕಿರಣ ತಲುಪಿಸುವ ಯಂತ್ರವನ್ನು ಕೋಬಾಲ್ಟ್ ಮಷೀನ್‌ ಅಥವಾ ಲೀನಿಯರ್‌ ಆಕ್ಸೆಲರೇಟರ್‌ (ಎಲ್‌ಐಎನ್‌ಎಸಿ) ಎನ್ನುತ್ತಾರೆ.

        ಕೋಬಾಲ್ಟ್ ಯಂತ್ರ ಗಾಮಾ ಕಿರಣಗಳನ್ನು (ಕೋಬಾಲ್ಟ್ 60 ಎಂಬ ವಿಕಿರಣಶೀಲ ವಸ್ತು)ಬಳಸಿದರೆ, ಎಲ್‌ಐಎನ್‌ಎಸಿ ಯಂತ್ರವು ವಿದ್ಯುತ್ತನ್ನು ಬಳಸಿ, ವೇಗವಾಗಿ ಚಲಿಸುವ ಪರಮಾಣು ಅಂಶಗಳನ್ನು ಉತ್ಪಾದಿಸುತ್ತದೆ. ಈ ಅಂಶಗಳು ಅತೀ ಚೈತನ್ಯಶೀಲ ವಿಕಿರಣವನ್ನು ಉತ್ಪಾದಿಸುತ್ತವೆ. ಸಾಮಾನ್ಯವಾಗಿ ರೋಗಿಗಳು ಪ್ರತೀ ದಿನಕ್ಕೊಮ್ಮೆಯಂತೆ ಹಲವಾರು ವಾರಗಳ ಕಾಲ ಈ ಚಿಕಿತ್ಸೆ ಪಡೆಯುತ್ತಾರೆ. ಎಷ್ಟು ಬಾರಿ ಈ ಚಿಕಿತ್ಸೆ ನೀಡಬೇಕೆಂಬುದು ಒಟ್ಟು ವಿಕಿರಣ ಡೋಸ್‌ ಸಹಿತ ಹಲವಾರು ಅಂಶಗಳನ್ನಾಧರಿಸಿ ನಿರ್ಧಾರವಾಗುತ್ತದೆ.ಬಾಹ್ಯ ರೇಡಿಯೇಶನ್‌ ಬೀಮ್‌ ತೆರಪಿ ಈ ಕೆಳಗಿನ ಯಾವುದಾದರೊಂದು ವಿಧಾನದಲ್ಲಿ ನಡೆಯುತ್ತದೆ.

        * 3 ಡಿಸಿಆರ್‌ಟಿ:

        ಮೂರು ಆಯಾಮಗಳ ಕನ್ಫಾರ್ಮಲ್‌ ರೇಡಿಯೊತೆರಪಿಯು ಅತ್ಯಂತ ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಧಾನವಾಗಿದೆ. ಇದು ಅತ್ಯಾಧುನಿಕ ಕಂಪ್ಯೂಟರ್‌ ತಂತ್ರಜ್ಞಾನ ಮತ್ತು ಆಧುನಿಕ ಚಿಕಿತ್ಸಾ ಯಂತ್ರಗಳನ್ನಾಧರಿಸಿ ನಡೆಯುತ್ತದೆ ಮತ್ತು ನಿರ್ದಿಷ್ಟ ವಿನ್ಯಾಸದ ಗುರಿಯನ್ನು ತಲುಪುವಂತೆ ಇದನ್ನು ಏರ್ಪಡಿಸುವುದು ಸಾಧ್ಯವಿದೆ.

        * ಐಎಂಆರ್‌ಟಿ:

        ಇಂಟೆನ್ಸಿಟಿ ಮೊಡ್ಯುಲೆಟೆಡ್‌ ರೇಡಿಯೇಷನ್‌ ತೆರಪಿಯಲ್ಲಿ ಒಂದು ಡೋಸ್‌ ರೇಡಿಯೇಷನ್‌ಗೆ ಹಲವಾರು ಕಿರು ವಿಕಿರಣದ ಎಳೆಗಳನ್ನು ಬಳಸಲಾಗುತ್ತದೆ. ಮಲ್ಟಿಲೀಫ್‌ ಕಾಲಿಮೇಟರ್‌ ಎಂಬ ವಿಶೇಷ ಸೌಲಭ್ಯ ಬಳಸಿ, ಇದನ್ನು  ಏರ್ಪಡಿಸಲಾಗುತ್ತದೆ. ಇವು ಚಿಕಿತ್ಸೆಯ ವೇಳೆ ಸ್ಥಿರವಾಗಿರಬಹುದು ಅಥವಾ ಚಲಿಸಬಹುದು. ಆ ಮೂಲಕ ಚಿಕಿತ್ಸೆಯ ತೀವ್ರತೆಯಲ್ಲಿ ಏರಿಳಿತಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ, ಗಡ್ಡೆಯ ವಿವಿಧ ಭಾಗಗಳಿಗೆ ವಿವಿಧ ಪ್ರಮಾಣದ ವಿಕಿರಣ ತಲುಪಲು ಸಾಧ್ಯವಾಗುತ್ತದೆ. ಇದರ ಉದ್ದೇಶ ಅಗತ್ಯ ಇರುವ ಭಾಗಗಳಿಗಷ್ಟೇ ತೀವ್ರ ಪ್ರಮಾಣದ ವಿಕಿರಣವನ್ನು ತಲುಪಿಸುವುದು. 3ಡಿಸಿಆರ್‌ಟಿ ಮತ್ತು ಐಎಂಆರ್‌ಟಿ ಗಳಿಗೆ ಹೋಲಿಸಿದರೆ ಇದರಲ್ಲಿ ಅಡ್ಡ ಪರಿಣಾಮಗಳು ಕಡಿಮೆ. ಉದಾಹರಣೆಗೆ ತಲೆ-ಕುತ್ತಿಗೆ ಕ್ಯಾನ್ಸರ್‌ ಚಿಕಿತ್ಸೆಯ ವೇಳೆಗೆ ಲಾಲಾ ರಸಗ್ರಂಥಿಗಳಿಗೆ ಹಾನಿ/ಬಾಯಿ ಒಣಕಲಾಗುವುದು, ಎಂಜಲು ಪ್ರಮಾಣ ಕಡಿಮೆ ಆಗುವುದು) ಕನಿಷ್ಠ ಪ್ರಮಾಣದಲ್ಲಿ ಇರಸಬಹುದು. ಆದರೆ ಐಎಂಆರ್‌ಟಿಯಲ್ಲಿ ಒಟ್ಟಾರೆ ನೋಡಿದಾಗ ಆರೋಗ್ಯವಂತ ಅಂಗಾಂಶಗಳು ಹೆಚ್ಚಿನ ಪ್ರಮಾಣದಲ್ಲಿ  ವಿಕಿರಣಕ್ಕೆ ತುತ್ತಾಗುತ್ತವೆ. 3ಡಿ-ಸಿಆರ್‌ಟಿಗೆ ಹೋಲಿಸಿದರೆ ಇದು ಹೆಚ್ಚು ಉಪಯುಕ್ತವೇ ಎಂಬ ಬಗ್ಗೆ ಇನ್ನೂ ಖಚಿತವಾಗಿ ತಿಳಿದಿಲ್ಲ.

        * ಟೊಮೊತೆರಪಿ:

         ಇದು ಐಎಂಆರ್‌ಟಿಯ ಸುಧಾರಿತ ರೂಪವಾಗಿದ್ದು, ಇಲ್ಲಿ ಸಿ.ಟಿ. ಬಿಂಬಗಳ ಮೂಲಕ ಖಚಿತವಾದ ಜಾಗಕ್ಕೆ ವಿಕಿರಣವನ್ನು ತಲುಪಿಸಬಹುದು. ಇಲ್ಲಿ ಸಿ.ಟಿ. ಯಂತ್ರದಂತೆ ರೇಡಿಯೇಷನ್‌ ಕೂಡ ದೇಹದ ಸುತ್ತ ಚಲಿಸಬಲ್ಲದು. ಚಿಕಿತ್ಸೆಯ ಸ್ವಲ್ಪವೇ ಮೊದಲಿನ ಕ್ಷಣದ ಸಿ.ಟಿ. ಬಿಂಬ ದೊರಕುವುದರಿಂದ, ತಲುಪಿಸಬೇಕಾದ ವಿಕಿರಣದ ಲೆಕ್ಕಾಚಾರ ಮತ್ತು ಆರೋಗ್ಯವಂತ ಕೋಶಗಳಿಗೆ ಅನಗತ್ಯ ಹೆಚ್ಚು
        ಹಾನಿ ಆಗದಂತೆ ಎಚ್ಚರಿಕೆ ಎರಡೂ ಸಾಧ್ಯ. ಇದು ಮತ್ತು 3ಡಿ-ಸಿಆರ್‌ಟಿಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆ ಖಚಿತವಾದ ಕ್ಲಿನಿಕಲ್‌ ಅಧ್ಯಯನಗಳು ಇನ್ನೂ ಆಗಿಲ್ಲ.

        * ಸ್ಟೀರಿಯೊ ಟ್ಯಾಕ್ಟಿಕ್‌ ರೇಡಿಯೊತೆರಪಿ:

        ಇದು ವಿಶೇಷವಾಗಿ ಮೆದುಳಿನಲ್ಲಿ ಇರುವ ಸ್ಪಷ್ಟ ಗಡ್ಡೆಗಳಿಗೆ ತಲುಪಿಸುವ ವಿಕಿರಣ  ಚಿಕಿತ್ಸೆಯಾಗಿದ್ದು, ಸವಿವರವಾದ ಬಿಂಬಗಳನ್ನಾಧರಿಸಿ ನಡೆಯುತ್ತದೆ. ಇಲ್ಲಿ  ಕಂಪ್ಯೂಟರೀಕೃತ 3 ಆಯಾಮಗಳ ಚಿಕಿತ್ಸಾ ಯೋಜನೆ ಮತ್ತು ನಿಖರವಾಗಿ ವಿಕಿರಣ ಹಾಯಿಸುವ ಏರ್ಪಾಡು ಇರುತ್ತದೆ.

        ಅಂತಿಮವಾಗಿ ಯಶಸ್ವೀ ರೇಡಿಯೇಶನ್‌ ಚಿಕಿತ್ಸೆ ಎಂಬುದು ಒಂದು ತಂಡ ಪ್ರಯತ್ನವಾಗಿದ್ದು, ಇದರಲ್ಲಿ ರೇಡಿಯೇಶನ್‌ ಆಂಕಾಲಜಿಸ್ಟ್‌, ಮೆಡಿಕಲ್‌ ಫಿಸಿಸಿಸ್ಟ್‌, ಡೋಸಿಮೆಟ್ರಿಸ್ಟ್‌, ರೇಡಿಯೊ ತೆರಪಿ ತಂತ್ರಜ್ಞರ ಧನಾತ್ಮಕ ಯೋಗದಾನ ಅಗತ್ಯವಿರುತ್ತದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus