ಕತ್ರಿನ್ ಬೈಂಡರ್ | Feb 05, 2012
ಕನ್ನಡ ಕರಾವಳಿಗೆ ಬಂದು ಯಕ್ಷಗಾನವನ್ನು ಕಲಿತು, ವಿಶೇಷ ಅಧ್ಯಯನ ಮಾಡಿದವರಲ್ಲಿ ಮಾರ್ತಾ ಆ್ಯಶ್ಚನ್‌ರ ಬಳಿಕ ಬಹು ಮುಖ್ಯವಾದ ಹೆಸರು ಜರ್ಮನಿಯ ಕತ್ರಿನ್ ಬೈಂಡರ್. ಅವರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ...
ಈ ಮಾಗಿಯಲ್ಲಿ ಮತ್ತೆ ಭಾರತಕ್ಕೆ ಬಂದು ಉಡುಪಿಯಲ್ಲಿ ಇಳಿದಿದ್ದೇನೆ. ಹತ್ತು ವರ್ಷಗಳ ಕೆಳಗೆ ಇಂಥದೇ ಎಲೆಯುದುರುವ ಶಿಶಿರದಲ್ಲಿ ಬಂದದ್ದು ನೆನಪಾಗುತ್ತಿದೆ. ಜರ್ಮನಿಯಲ್ಲಿ ನನ್ನ ಪ್ರಾಧ್ಯಾಪಕರಾದ ಪ್ರೊ. ಹೈಡ್ರೂಕ್ ಬ್ರೂಕ್ನರ್ ಅವರ ಮಾರ್ಗದರ್ಶನದಂತೆ, ನನ್ನ ಎಂ. ಎ. ತರಗತಿಯ ವಿಶೇಷ ಅಧ್ಯಯನವಾಗಿ ಯಾವುದಾದರೊಂದು ವಿಷಯದಲ್ಲಿ ವಿಶೇಷ ತರಬೇತಿ ಪಡೆಯಲು ನೇರವಾಗಿ ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಬಂದಿದ್ದೆ. ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರು ಯಕ್ಷಗಾನದ ಸಪ್ತ ತಾಳಗಳನ್ನು ವಿವರವಾಗಿ ಹೇಳಿಕೊಟ್ಟರು. ಮುಂಜಾನೆಯಿಂದ ಸಂಜೆ ಯವರೆಗೆ ಕೈಯಲ್ಲಿ ತಾಳಗಳನ್ನು ತಟ್ಟುತ್ತ , ಬಾಯಿತಾಳಗಳನ್ನು ಹೇಳುತ್ತ ನಿಧಾನವಾಗಿ ಪೂರ್ವರಂಗದೊಳಕ್ಕೆ ಪ್ರವೇಶ ಮಾಡಿದೆ.
ಯಕ್ಷಗಾನದೊಂದಿಗೆ ಕನ್ನಡ ಭಾಷೆಯನ್ನು ಕಲಿತೆ. ಕನ್ನಡ ಮಾತನಾಡಲು ಕಲಿತೆ, ಓದಲು ಕಲಿತೆ.
2002, ಫೆಬ್ರವರಿ ತಿಂಗಳ ಒಂದು ದಿನ, ಮೊದಲ ಬಾರಿಗೆ ಬಾಲಗೋಪಾಲನ ವೇಷ ಧರಿಸಿ ರಂಗ ಪ್ರವೇಶ ಮಾಡಿದೆ. ಹಾಗೆ, ಯಕ್ಷಗಾನದ ಮೂಲಕ ಇಲ್ಲಿನ ಅದ್ಭುತವಾದ ಸಾಂಸ್ಕೃತಿಕ ಲೋಕದೊಳಕ್ಕೆ ಪ್ರವೇಶಿಸಿ ವಿಶಿಷ್ಟವಾದ ಅನುಭವವನ್ನು ಪಡೆದುಕೊಂಡೆ.
2004ರಲ್ಲಿ ನನ್ನ ಎಂ.ಎ. ಸಂಶೋಧನ ಪ್ರಬಂಧವು ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಈ ಮಧ್ಯೆ ನಾನು ಅಭಿಮನ್ಯು ಕಾಳಗವನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದಲ್ಲದೆ, ಯಕ್ಷಗಾನದ ಇತಿಹಾಸ ಮತ್ತು ಸಮಕಾಲೀನ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿದೆ. ಬಹುಶಃ ಅಭಿಮನ್ಯು ಕಾಳಗ ಪಾಶ್ಚಾತ್ಯ ಭಾಷೆಯಲ್ಲಿ ಪ್ರಕಟಗೊಂಡ ಪ್ರಪ್ರಥಮ ಯಕ್ಷಗಾನ ಪ್ರಸಂಗ ಮತ್ತು ಜರ್ಮನ್ ಭಾಷೆಯಲ್ಲಿ ಲಭ್ಯವಿರುವ ಮೊತ್ತಮೊದಲ ಯಕ್ಷಗಾನ ಪ್ರಸಂಗ. ಈ ಪ್ರಸಂಗದ ಭಾಷಾಂತರ ಕೆಲಸವು ನನ್ನ ಪಾಲಿಗೆ ಭಾರತೀಯ ಪುರಾಣ - ಸಂಸ್ಕೃತಿಗಳ ಅಧ್ಯಯನಕ್ಕೆ ಪ್ರೇರಕವಾಯಿತು. ಯಕ್ಷಗಾನ ಕವಿಗಳ ಕಾವ್ಯ ಪ್ರತಿಭೆಯಿಂದ ಮತ್ತು ಭಾರತೀಯ ಸಶಕ್ತ ಪೌರಾಣಿಕ ಜಗತ್ತಿನಿಂದ ನಾನು ನಿಜವಾಗಿಯೂ ಪ್ರಭಾವಿತಳಾಗಿದ್ದೆ. ನನ್ನ ಕೃತಿಯು ಅಭಿಮನ್ಯು ಕಾಳಗ ಪ್ರಸಂಗ ಪಠ್ಯವನ್ನು ಕುಮಾರವ್ಯಾಸನ ಕರ್ನಾಟಕ ಭಾರತ ಕಥಾಮಂಜರಿಯೊಂದಿಗೆ ತೌಲನಿಕವಾಗಿ ಮಾಡಿದ ಅಧ್ಯಯನವನ್ನೂ ಒಳಗೊಂಡಿದೆ. ಶಿವರಾಮ ಕಾರಂತರಂಥ ವಿದ್ವಾಂಸರು ಯಕ್ಷಗಾನ ಪ್ರಸಂಗ ಪಠ್ಯಗಳು ಕನ್ನಡ ಕಾವ್ಯ ಪರಂಪರೆಯನ್ನು ನಿಕಟವಾಗಿ ಅನುಸರಿಸಿವೆೆ ಎಂದು ಹೇಳಿದ್ದಾರೆ. ಆದರೆ, ನಾನು ನನ್ನ ಅಧ್ಯಯನದಲ್ಲಿ , ಯಕ್ಷಗಾನ ಕವಿಗಳು ವಿಭಿನ್ನವಾದ ಛಂದಸ್ಸು ಮತ್ತು ಲಯದೊಂದಿಗೆ ರಂಗ ಪ್ರಸ್ತುತಿಗೆ ಪೂರಕವಾದ ರೀತಿಯಲ್ಲಿ ಸೊಗಸಾದ, ಅಪೂರ್ವವಾದ ಮತ್ತು ಸ್ವಂತಿಕೆಯಿಂದ ಒಡಗೂಡಿದ ಸಾಲುಗಳನ್ನು ಹೊಸೆದಿದ್ದಾರೆ ಎಂಬುದನ್ನು ಗಮನಿಸಿದ್ದೇನೆ.
ನನ್ನ ಎಂ.ಎ. ಮುಗಿದ ಮೇಲೆ ನಾನು ಬಾಸೆಲ್ ಮಿಶನ್ ಸಂಗ್ರಹಾ ಲಯವನ್ನು ಸಂಪರ್ಕಿಸಿ, ಯಕ್ಷಗಾನದ ನೆಲದಲ್ಲಿ 1840ರಿಂದ ಮಿಶನರಿಗಳು ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಮೊಗ್ಲಿಂಗ್ ಮತ್ತು ಕಿಟೆಲ್ ಮಹಾಶಯರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಅದ್ವಿತೀಯ ಕೊಡುಗೆಗಳನ್ನು ಪರಿಶೀಲಿಸುವಾಗ ಈ ಮಿಶನರಿಗಳು ಯಕ್ಷಗಾನದ ಕುರಿತು ಏನು ಬರೆದಿದ್ದಾರೆ ಎಂದು ತಿಳಿಯಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ಹಳೆಯ ಜರ್ಮನ್ ಹಸ್ತಾಕ್ಷರದ ದಾಖಲೆಗಳನ್ನು ಜಾಲಾಡುವುದು ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾದೀತು ಎಂದು ಅನ್ನಿಸುತ್ತಿರುವಾಗಲೇ ಒಂದೆಡೆ 1900ರಷ್ಟು ಪೂರ್ವದ ಕರಾವಳಿ ಕರ್ನಾಟಕದ ಬದುಕಿನ ಬಗ್ಗೆ ಅದ್ಭುತವಾದ ವಿವರಗಳನ್ನು ಕಂಡೆ. ಆದರೆ, ಅಲ್ಲಿ "ಪ್ರಾದೇಶಿಕ ರಂಗಭೂಮಿ' ಎಂಬಂಥ ಒಂದರ್ಧ ವಾಕ್ಯವನ್ನಷ್ಟೇ ಯಕ್ಷಗಾನಕ್ಕೆ ಅನ್ವಯಿಸಿ ಬರೆಯಲಾಗಿದೆ ಎಂಬುದು ನನ್ನ ಗಮನಕ್ಕೆ ಬಂತು. ಆದರೂ, ಮೊಗ್ಲಿಂಗ್ ಬಿಬಲಿಯೊಥಿಕ್ ಕರ್ನಾಟಕಕ್ಕಾಗಿ ರಾವಣ ದಿಗ್ವಿಜಯ ಯಕ್ಷಗಾನ ಪ್ರಸಂಗ ವನ್ನು ಪ್ರಕಟಿಸಿದ್ದರು. ಜೊತೆಗೆೆ, ಮಿಶನರಿಗಳು ಕನ್ನಡದ ಕುರಿತು ಅಧ್ಯಯನ ಮಾಡುವಾಗ ಪ್ರಸಂಗಗಳನ್ನು ವ್ಯಾಪಕವಾಗಿ ಗಮನಿಸಿದ್ದಾªರೆ .
ಎಂಬುದು ನನ್ನ ಅರಿವಿಗೆ ಬಂತು.
ಮುಂದೆ, ನಾನು ನನ್ನ ಪಿಎಚ್.ಡಿ ಅಧ್ಯಯನಕ್ಕೆ ಯಕ್ಷಗಾನವನ್ನೇ ಆಯ್ದುಕೊಂಡಾಗ ಈ ಕಲೆಯ ಥಿಯರಿಟಿಕಲ್ ಭಾಗದಷ್ಟೇ ಕಲಾತ್ಮಕವಾದ ಮತ್ತು ಪ್ರಾಕ್ಟಿಕಲ್ ಅಂಶಗಳು ಎಷ್ಟೊಂದು ಅಗತ್ಯ ಎಂಬುದು ಗೊತ್ತಾಯಿತು. ಪ್ರಮೇಯ ಮತ್ತು ಪ್ರಯೋಗವನ್ನು ಸಮನ್ವಯ ದೃಷ್ಟಿಯಲ್ಲಿ ಗ್ರಹಿಸಿದ ನನ್ನ ಅಧ್ಯಯನ ವಿಚಾರಗಳನ್ನು ಪಿಎಚ್‌ಡಿ ಮಹಾಪ್ರಬಂಧದ ಕೊನೆಯ ಅಧ್ಯಾಯದಲ್ಲಿ ದಾಖಲಿಸಿದ್ದೇನೆ. ಯಕ್ಷಗಾನ ತರಬೇತಿ ಮತ್ತು ಯಕ್ಷಗಾನ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವಂತೆ ನನ್ನ ಈ ಕಲೆಯ ಕುರಿತ ಹೊಸ ಒಳನೋಟಗಳು ಲಭಿಸಿದ್ದವು. ಮುಂದೆ ನಾನು ಸಾಂಪ್ರದಾಯಿಕ ಶೈಲಿಯ ಯಕ್ಷಗಾನದ ಬಗ್ಗೆ ಹೆಚ್ಚು ಒತ್ತು ನೀಡಿದೆ. ಪ್ರಯೋಗಾತ್ಮಕ ನೆಲೆಯಲ್ಲಿ ನಾನು ಅಗಾಧ ಅನುಭವ ಗಳಿಸಲು ಸಾಧ್ಯವಾಗಿದ್ದು ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಮಾರ್ಗದರ್ಶನದಿಂದಾಗಿ. ಯಕ್ಷಗಾನ ಲೋಕವನ್ನು ಹೊರಗಿನಿಂದ ನೋಡದೆ, ಒಳಹೊಕ್ಕು ಅಧ್ಯಯನ ಮಾಡಿದ ಕಾರಣದಿಂದಾಗಿಯೇ ಈ ಕಲೆಯನ್ನು ಇಷ್ಟೊಂದು ಗಂಭೀರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಭಾವಿಸಿದ್ದೇನೆ.
ಶೀಘ್ರದಲ್ಲಿಯೇ ನನ್ನ ಪಿಎಚ್‌ಡಿ ಮಹಾಪ್ರಬಂಧ (ಇಂಗ್ಲಿಷ್‌ನಲ್ಲಿದೆ) ಪ್ರಕಟಣೆಗೆ ಸಿದ್ಧವಾಗುತ್ತಿದೆ. ನನ್ನ ತರಬೇತಿಯ ಸಮಯದಲ್ಲಿ ಸಿಕ್ಕಿದ ಎಲ್ಲ ವಿವರಗಳನ್ನು ನನ್ನ ಮಹಾಪ್ರಬಂಧದಲ್ಲಿ ದಾಖಲಿಸಿದ್ದೇನೆ. ಸಭಾಲಕ್ಷಣ, ಪೂರ್ವರಂಗ ಮತ್ತು ಒಡ್ಡೋಲಗದ ನಾಟ್ಯ ವೈವಿಧ್ಯವನ್ನು ಕಾಣಿಸಿದ್ದೇನೆ. ಇದನ್ನು ಕನ್ನಡ ಗೊತ್ತಿಲ್ಲದ, ಆದರೆ ಈ ಕಲೆೆಯಲ್ಲಿ ಆಸಕ್ತಿ ಇರುವ ಪಾಶ್ಚಾತ್ಯ ಅಧ್ಯಯನಕಾರರ ಮತ್ತು ರಂಗಕರ್ಮಿಗಳನ್ನು ಲಕ್ಷ್ಯದಲ್ಲಿಟ್ಟು ಬರೆದಿದ್ದೇನೆ.
ಇನ್ನೊಂದು ಅಧ್ಯಾಯದಲ್ಲಿ ಮೂರು ಬಡಗುತಿಟ್ಟು ಮೇಳಗಳ ಪ್ರದರ್ಶನಗಳನ್ನು ವಿಶ್ಲೇಷಿಸಿದ್ದೇನೆ. ಒಂದು, ಪೆರ್ಡೂರು ಮೇಳದ ವಾಣಿಜ್ಯ ದೃಷ್ಟಿಕೋನದ ಪ್ರದರ್ಶನ. ಇನ್ನೊಂದು, ಮಂದರ್ತಿ ಮೇಳದ ಹರಕೆಯ ಆಟ. ಮೂರು ಪೂರ್ಣಚಂದ್ರ ಮೇಳದ ಹಗಲು ಪ್ರದರ್ಶನ. ಎರಡು ಇಡೀರಾತ್ರಿ ಪ್ರದರ್ಶನಗಳಲ್ಲಿ ನಾಟ್ಯ, ಹಾಡು, ವೇಷಭೂಷಣಗಳಲ್ಲಿ ತೆಂಕುತಿಟ್ಟಿನ ಕೆಲವು ಅಂಶಗಳನ್ನು ಅಳವಡಿಸಿಕೊಂಡದ್ದು ನಾನು ಗಮನಿಸಿದ ಸಮಾನ ವಿಚಾರ. ಹಾಗೆಂದು, ಮಾತುಗಾರಿಕೆಯೊಂದೇ ಉಳಿದ ಅಂಶಗಳಿಗಿಂತ ಮುಖ್ಯವಾಗಿಲ್ಲದಿರುವುದನ್ನೂ ನಾನು ಗಮನಿಸಿದೆ. ಅಲ್ಲದೆ, ಉದಯವಾಣಿ ದಿನಪತ್ರಿಕೆಯಲ್ಲಿ ಬರುವ ಯಕ್ಷಗಾನದ ಜಾಹೀರಾತುಗಳನ್ನು ಆಧಾರವಾಗಿಟ್ಟುಕೊಂಡು, ಯಕ್ಷಗಾನ ಮೇಳಗಳು, ರಂಗಭೂಮಿಯ ಸ್ವರೂಪ, ಕಲಾಪೋಷಕರು- ಮುಂತಾದ ವಿಷಯಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಯಕ್ಷಗಾನದಲ್ಲಿ ವಾಣಿಜ್ಯ ಮೇಳಗಳು ಅವನತಿಯ ದಾರಿ ಹಿಡಿದದ್ದನ್ನು ನಾನು ಗಮನಿಸಿದೆ ಮತ್ತು ಈ ಮೂಲಕ ಯಕ್ಷಗಾನದಲ್ಲಿ ವಾಣಿಜ್ಯೀಕರಣವು ಪ್ರಾಬಲ್ಯವನ್ನು ಸಾಧಿಸಿಲ್ಲದಿರುವುದನ್ನು ಕಂಡುಕೊಂಡೆ. ತುಳು ಯಕ್ಷಗಾನ ಮೇಳಗಳು ಹೆಚ್ಚುಕಡಿಮೆ ಕಣ್ಮರೆಯಾಗಿದ್ದೇ ಇದಕ್ಕೊಂದು ಉದಾಹರಣೆ. ಆದರೆ, ಇನ್ನೊಂದೆಡೆ, ಹವ್ಯಾಸಿ ಯಕ್ಷಗಾನ ರಂಗ ಸಶಕ್ತವಾಗಿದೆ. ಒಟ್ಟಾರೆಯಾಗಿ ನಾನು ಗಮನಿಸಿದ ಮುಖ್ಯ ವಿಚಾರವೆಂದರೆ, ಹವ್ಯಾಸಿ-ವೃತ್ತಿಪರ, ಹರಕೆ- ವಾಣಿಜ್ಯಿಕ- ಇಂಥ ವಿಭಾಜಕ ರೇಖೆಗಳು ತುಂಬ ತೆಳುವಾಗಿವೆ ಎಂಬುದು.
ನಾನು ಅಧ್ಯಯನ ಮಾಡಿದ ಯಕ್ಷಗಾನ ಕೇಂದ್ರವು ಹಳೆಯ ಪ್ರಸಂಗ ಪಠ್ಯಗಳ ಮೇಲೆಯೇ ಅವಲಂಬಿತವಾಗಿದೆ. ಹರಕೆಯಾಟದ ಮೇಳಗಳು ಕೂಡಾ ಹಳೆಯ ಪ್ರಸಂಗ ಪಠ್ಯವನ್ನೇ ಬಳಸುತ್ತವೆ. ಆಗಾಗ ಹೊಸ ಪ್ರಸಂಗಗಳನ್ನು ಪ್ರದರ್ಶಿಸುವುದೂ ಇದೆ. ಆದರೆ, ಸಾಮಾಜಿಕ ಕಥಾನಕಗಳು ಯಕ್ಷಗಾನ ರಂಗಭೂಮಿಗೆ ಅಷ್ಟಾಗಿ ಒಗ್ಗುವುದಿಲ್ಲ ಎಂದು ನನ್ನ ಅಭಿಪ್ರಾಯ.ಮತ್ತೂಂದೆಡೆಯಲ್ಲಿ ಯಕ್ಷಗಾನದ ಪಾರಂಪರಿಕ ವೇಷಭೂಷಣಗಳು ಕಣ್ಮರೆಯಾಗುತ್ತಿವೆ ಅಥವಾ ಬದಲಾವಣೆಗೆ ಒಳಗಾಗುತ್ತಿವೆ. ಅದೇ ಸಂದರ್ಭದಲ್ಲಿ ದೈವಿಕ (ರಿಚುವಲ್) ವಾತಾವರಣವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ; ವಾಣಿಜ್ಯ ಉದ್ದೇಶದ ಮೇಳಗಳಲ್ಲೂ . ಎಂಥ ಬದಲಾವಣೆಗಳು ಬಂದರೂ ಈ ಕಲೆಯ ಬೇರುಗಳು , ಬೇಗನೆ ಸ್ಥಿತ್ಯಂತರಕ್ಕೊಳಗಾಗದಷ್ಟು ಆಳದಲ್ಲಿ ಹರಡಿಕೊಂಡಿವೆ ಎಂಬುದು ನಾನು ಕಂಡುಕೊಂಡ ವಿಚಾರ.
ನನ್ನ ಅಧ್ಯಯನಕ್ಕೆ ನಾನು ವಿವರಗಳನ್ನು ಕಲೆ ಹಾಕಿದ್ದು 2004-2005ರಲ್ಲಿ . ಆದರೆ ಇವತ್ತಿಗೆ ಯಕ್ಷಗಾನದ ಚಿತ್ರ ಸಾಕಷ್ಟು ಬದಲಾಗುತ್ತ ಬಂದಿದೆ. ಅನೇಕ ಮೇಳಗಳು ಹುಟ್ಟಿಕೊಂಡಿವೆ. ಕೆಲವು ಮೇಳಗಳು ನಿಂತು ಹೋಗಿವೆ. ಆದರೆ ಇಂದಿಗೂ ನನ್ನ ಪಾಲಿಗೆ ನಿಗೂಢವಾದ ಸಂಗತಿಯೆಂದರೆ, ಯಕ್ಷಗಾನವು ವೈಷ್ಣವ ತಾತ್ವಿಕ ಹಿನ್ನೆಲೆಯ ರಂಗಕಲೆಯಾಗಿದ್ದರೂ ಅವು ದೇವೀ ದೇವಸ್ಥಾನಗಳೊಂದಿಗೆ ಏಕೆ ಬೆಸೆದುಕೊಂಡಿವೆ ಎಂಬುದು! ಯಕ್ಷಗಾನವೆಂಬ ಪದದ ನಿಜವಾದ ಮೂಲ ಯಾವುದಿರಬಹುದು? ತುಳು ಪ್ರಾಬಲ್ಯದ ಪ್ರದೇಶದಲ್ಲಿಯೇ ಶುದ್ಧವಾಗಿ ಕನ್ನಡ ಮಾತನಾಡುವ ಈ ಕಲೆ ಏಕೆ ಜನಪ್ರಿಯವಾಯಿತು? ಇಂಥ ಅನೇಕ ಜಿಜ್ಞಾಸೆಗಳು ಹಾಗೆಯೇ ಉಳಿದಿವೆ.
ಇತ್ತೀಚೆಗೆ ನಾನು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಬಂದಾಗ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರು, ಒಂದಷ್ಟು ವಿದ್ಯಾರ್ಥಿಗಳನ್ನು ಕೇಂದ್ರದಲ್ಲಿ ಉಳಿಸಿಕೊಂಡು, ಅವರಿಗೆ ಶಾಲಾ- ಕಾಲೇಜಿನ ಶಿಕ್ಷಣವನ್ನೂ ಕೊಟ್ಟು, ಬಿಡುವಿನ ವೇಳೆಯಲ್ಲಿ ಯಕ್ಷಗಾನವನ್ನೂ ಕಲಿಸುತ್ತಿದ್ದಾರೆ. ಇದನ್ನು ನಾನು ಮಹತ್ವದ ಬೆಳವಣಿಗೆಯೆಂದು ಭಾವಿಸಿದ್ದೇನೆ. ಇದರಿಂದಾಗಿ, ಯಕ್ಷಗಾನದ ಕುರಿತು ಗಂಭೀರವಾಗಿ, ಎಕಡಮಿಕ್ ತಿಳುವಳಿಕೆಯೊಂದಿಗೆ ಯೋಚಿಸುವವರು ಸಿಗುತ್ತಾರೆ. ಆಧುನಿಕ ವಿದ್ಯಾಭ್ಯಾಸ ಎಂಬುದು ಈ ಕಾಲದಲ್ಲಿ ಎಲ್ಲರಿಗೂ ಅಗತ್ಯವಾದುದು. ಆದರೆ, ಹೀಗೆ ವಿದ್ಯಾಭ್ಯಾಸ ಪಡೆದವರು ಮುಂದೆ ಮೇಳದಲ್ಲಿ ವೇಷಧಾರಿಗಳಾಗುವ ಕಠಿಣ ಪರಿಶ್ರಮದ ದುಡಿಮೆಯ ಹಾದಿಯನ್ನು ಅನುಸರಿಸುತ್ತಾರೆಯೇ, ಎಂಬುದು ನನ್ನ ಕುತೂಹಲ. ಜೊತೆಗೆ, ಪೂರ್ಣ ರಾತ್ರಿ ಯಕ್ಷಗಾನವನ್ನು ವೀಕ್ಷಿಸುವ ಮಂದಿಯೂ ಕಡಿಮೆಯಾಗುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಯಕ್ಷಗಾನದ ಭವಿಷ್ಯವನ್ನು ಕಲ್ಪಿಸಿಕೊಳ್ಳಬೇಕಾಗಿದೆ.
ಈ ಹಿಂದೆ ನಾನು ಇಲ್ಲಿಗೆ ಬಂದಾಗ ಮಹಿಳೆಯರ ಯಕ್ಷಗಾನ ತಂಡವು ಗಮನಾರ್ಹವಾಗಿರಲಿಲ್ಲ. ಈಗಂತೂ ಸಾಕಷ್ಟು ಮಹಿಳೆಯರು, ವಿದ್ಯಾರ್ಥಿನಿಯರು ಯಕ್ಷಗಾನ ಕೇಂದ್ರದಲ್ಲಿ ಕಲಿಯುತ್ತಿದ್ದಾರೆ. ಇದನ್ನು ಸಾಮಾಜಿಕವಾಗಿ ಗಮನಾರ್ಹ ಬೆಳವಣಿಗೆಯೆಂದು ಭಾವಿಸಿದ್ದೇನೆ. ಇನ್ನೂ ಸಾಕಷ್ಟು ಮಹಿಳೆಯರು ಈ ಕಲಾಕ್ಷೇತ್ರಕ್ಕೆ ಬಂದು ಸಾಧಿಸಿ ತೋರಿಸಬೇಕೆಂದು ಹಾರೈಸುತ್ತೇನೆ.