Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೆಳಬೆನ್ನು ನೋವು - ಕಾರಣಗಳು, ರೋಗಪತ್ತೆ ಮತ್ತು ಚಿಕಿತ್ಸೆ
    • ಬೆನ್ನು ಹುರಿಯ ಡಿಸ್ಕ್ ಗಳ ವಿವಿಧ ತೊಂದರೆಗಳು.

      • ಡಾ| ಶಾಮ್‌ಸುಂದರ್‌ ಭಟ್‌ ಎನ್‌. ಅಸೋಸಿಯೇಟ್‌ ಪ್ರೊಫೆಸರ್‌, ಮೂಳೆ ರೋಗಗಳ ಚಿಕಿತ್ಸಾ ವಿಭಾಗ, | Feb 05, 2012

        ಕೆಳಬೆನ್ನಿನ ರಚನೆ :

        ಕೆಳಬೆನ್ನಿನ ನೋವಿಗೆ ಕಾರಣವಾಗಿರುವ ವಿವಿಧ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಮೊದಲು ದೇಹದ ಈ ಭಾಗದ ಬಗೆಗೆ ತಿಳಿದುಕೊಳ್ಳುವುದು ಆವಶ್ಯಕ. ಬೆನ್ನಿನ ಕೆಳಭಾಗ, ಕಶೇರು ಮಣಿಗಳು ಮತ್ತು  ಮಿದುಳ ಬಳ್ಳಿ, ಕಶೇರು ಬಿಲ್ಲೆಗಳು, ನರಗಳು, ಕೆಳಬೆನ್ನಿನ ಸ್ನಾಯುಗಳು, ಪೆಲ್ವಿಸ್‌ ಹಾಗೂ ಹೊಟ್ಟೆಯ ಆಂತರಿಕ ಅಂಗಗಳು ಸೇರಿದಂತೆ ಕಳೆಬೆನ್ನಿನ ಈ ಪ್ರಮುಖ ಭಾಗಗಳಿಗೂ ನೋವಿಗೂ ಹತ್ತಿರದ ಸಂಬಂಧ ಇದೆ.

        ಕಶೇರುಮಣಿಗಳು ಒಂದರೊಳಗೊಂದು ವ್ಯವಸ್ಥಿತವಾಗಿ ಸೇರಿಕೊಂಡಿರುವ ಕಾರಣದಿಂದಾಗಿ, ಆ ಭಾಗವನ್ನು ಸುಲಭವಾಗಿ ಅತ್ತಿತ್ತ ಬಾಗಿಸಲು, ಇಡಿಯ ಶರೀರಕ್ಕೆ ಆಧಾರ ನೀಡಲು ಹಾಗೂ ತೀವ್ರವಾದ ಏಟಿನಿಂದ ಮಿದುಳು ಬಳ್ಳಿಗೆ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಮೆದುಳಿನಿಂದ ಕೆಳಮುಖವಾಗಿ ಹೊರಬರುವ  ಮಿದುಳ ಬಳ್ಳಿ ಕಶೇರು ಮಣಿಗಳ  ನಾಳವನ್ನು ಸೇರಿಕೊಳ್ಳುತ್ತದೆ. ಬೆನ್ನು ಹುರಿಯ ಮುಂಭಾಗದಲ್ಲಿರುವ   ಕಶೇರುಮಣಿಯ  ಮುಖ್ಯ ಭಾಗ.

        ಹಾಗೂ ದೇಹದ ಭಾರವನ್ನು ಆಧರಿಸುವ ಬುನಾದಿಯಾಗಿದೆ. ಬೆನ್ನು ಮೂಳೆಯ ಹಿಂಭಾಗದ ಪ್ರತೀ ಕಶೇರು  ಮಣಿಯಲ್ಲಿ ಮೂಳೆಯ ಚಾಚುವಿಕೆ ಇದ್ದು, ಅದು ಮಿದುಳ ಬಳ್ಳಿಯನ್ನು ಅವರಿಸಿ, ತೀವ್ರ ಸ್ವರೂಪದ ಏಟುಗಳಾಗುವ ಸಂದರ್ಭದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಕೆಳಬೆನ್ನಿನ ಕೊನೆಯಲ್ಲಿ ಸಾಕ್ರಮ್‌ (sacrum)  ಮೂಳೆ ಇದ್ದು ಎರಡೂ ಬದಿಯಲ್ಲಿಯೂ, ಪೆಲ್ವಿಸ್‌ನ ಇಲಿಯಾಕ್‌ (iliac) ಮೂಳೆಯನ್ನು ಸಂಧಿಸಿ, ಸಾಕ್ರೋಇಲಿಯಾಕ್‌  (sacroiliac) ಸಂಧಿ ಉಂಟಾಗುತ್ತದೆ.

        ಕಶೇರು ಬಿಲ್ಲೆಗಳು ಕಶೇರು ಮಣಿಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ನಿಭಾಯಿಸಲು ಸಹಕರಿಸುತ್ತವೆ. ಪ್ರತೀ ಬಿಲ್ಲೆಯು ಮಧ್ಯಭಾಗದಲ್ಲಿ  ಮೃದುವಾದ ಅಂಗಾಂಶವನ್ನು  ಹೊಂದಿದ್ದು, ಇದರ ಸುತ್ತಲಿನ ಹೊರಭಾಗವು  ನಾರಿನಂತ ಪಟ್ಟಿಯಿಂದ ಆವೃತವಾಗಿರುತ್ತದೆ. ಈ ಬಿಲ್ಲೆಯ ಮಧ್ಯಭಾಗವು ಪಟ್ಟಿಯನ್ನು ಮೀರಿ ಹೊರಚಾಚಿದರೆ, ಆಗ ಪಕ್ಕದ ನರದ ಬೇರುಗಳಿಗೆ ಕಿರಿಕಿರಿ ಉಂಟಾಗಿ, ಸಯಾಟಿಕ (sciatica) ತೊಂದರೆ ಬರುತ್ತದೆ.

        ಮೂಳೆಯನ್ನು ಮೂಳೆಗೆ ಜೋಡಿಸುವ ನಾರು ಅಂಗಾಂಶಗಳಿಗೆ ಲಿಗಮೆಂಟ್ಸ್‌  ಎಂದು ಹೆಸರು.  ಇವು ಕಶೇರುಮಣಿಗಳನ್ನು ಪರಸ್ಪರ ಜೋಡಿಸುತ್ತವೆ.

        ಕೆಳಬೆನ್ನು ಮೂಳೆಯಿಂದ ಹೊರಡುವ ನರದ ಬೇರುಗಳು ಕಿಂಡಿಗಳ ಮೂಲಕ  ಹೊರಬಂದು ಮುಂದೆ ಅವಯವಗಳಾದ ಕಾಲುಗಳಿಗೆ ಸಂವೇದನೆಯನ್ನು ಒದಗಿಸುವ ಹಾಗೂ ಪ್ರಚೋದನೆಯನ್ನು ನೀಡುವ ಸ್ನಾಯುಗಳ ನರಗಳಾಗಿ ಮಾರ್ಪಡುತ್ತವೆ.

        ದೇಹವನ್ನು ಬಾಗಿಸಲು, ತಿರುಗಿಸಲು ಹಾಗೂ ಕಾಲುಗಳ ಚಾಲನೆಗೆ ಸ್ನಾಯುಗಳ ಸಮೂಹ ಅತ್ಯಗತ್ಯ. ಈ ಸ್ನಾಯುಗಳು ಸ್ನಾಯುರಜ್ಜುಗಳ ಮೂಲಕ ಸೊಂಟದ ಮೂಳೆಗಳಿಗೆ ಜೋಡಿಸಲ್ಪಟ್ಟಿರುತ್ತವೆ.

        ದೇಹದ ಕೆಳಭಾಗದಿಂದ ಮಲಿನ ರಕ್ತವನ್ನು ಸಾಗಿಸುವ ಹಾಗೂ ಶುದ್ಧ ರಕ್ತವನ್ನು ಸಾಗಿಸುವ ಆಯೋರ್ಟಾ ರಕ್ತನಾಳಗಳು ಮುಂಭಾಗದಲ್ಲಿದ್ದು , ಈ ರಕ್ತನಾಳಗಳ ಸುತ್ತಲೂ, ವಿಸರ್ಜನಾಂಗಗಳನ್ನು ನಿಯಂತ್ರಿಸುವ ಅನೈಚ್ಛಿಕ ನರವ್ಯೂಹದ ಅಂಗಾಂಶಗಳು ಹಾಗೂ ದುಗ್ಧಗ್ರಂಥಿಗಳು ಆವರಿಸಿರುತ್ತವೆ.

        ಮಹಿಳೆಯರ ದೇಹದಲ್ಲಿ  ಗರ್ಭಕೋಶ ಹಾಗೂ ಅಂಡಾಶಯಗಳು ಪೆಲ್ವಿಸ್‌ ಭಾಗದ ಬಹಳ ಪ್ರಮುಖ ಅಂಗಗಳು. ಪುರುಷರ ದೇಹದಲ್ಲಿ  ಶುಕ್ಲಗ್ರಂಥಿಯು ಪೆಲ್ವಿಸ್‌ನ ಪ್ರಮುಖ ಅಂಗವಾಗಿರುತ್ತದೆ. ಕೆಳ ಬೆನ್ನಿನ ಕಶೇರು ಮಣಿಗಳ ಎರಡೂ ಬದಿಗಳಲ್ಲಿ  ಮೂತ್ರಪಿಂಡಗಳು ಇರುತ್ತವೆ.

        ಕೆಳಬೆನ್ನಿನ ಚಟುವಟಿಕೆಗಳು
        (funtions of the low back)

        ಕೆಳಬೆನ್ನು  ಬಾಗಲು ದೇಹಕ್ಕೆ ಆಧಾರ ನೀಡುವುದು ಹಾಗೂ ಮಿದುಳು ಬಳ್ಳಿಗೆ ರಕ್ಷಣೆ ನೀಡುವುದು, ಹೀಗೆ ಮಾನವನ ದೇಹದ ಬಹಳಷ್ಟು  ಪ್ರಮುಖ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

        ನಾವು ನಿಂತಾಗ ಕೆಳಬೆನ್ನು ನಮ್ಮ ದೇಹದ ಮೇಲ್ಭಾಗದ ಭಾರವನ್ನು ಆಧರಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಾವು ಮುಂದಕ್ಕೆ, ಹಿಂದಕ್ಕೆ ಬಾಗಲು ಅಥವಾ ದೇಹವನ್ನು ತಿರುಗಿಸಲು ಕೆಳಬೆನ್ನು ಸಹಕರಿಸುತ್ತದೆ. ಹಾಗಾಗಿ, ದೇಹದ ಭಾರವನ್ನು ಆಧರಿಸುವ ಬೆನ್ನುಹುರಿ, ಸ್ನಾಯುಗಳು, ನರವ್ಯೂಹದ ಮೃದು ಅಂಗಾಂಶಗಳನ್ನು, ಪೆಲ್ವಿಸ್‌ ಹಾಗೂ ಹೊಟ್ಟೆಯಾಳ ಅಂಗಗಳನ್ನು ರಕ್ಷಿಸುವುದು, ಸೊಂಟದ ಮೂಳೆ ಹಾಗೂ ಅದರ ಸಮಾಂತರ ಸ್ನಾಯುಗಳ ಪ್ರಮುಖ ಚಟುವಟಿಕೆಯಾಗಿದೆ.

        ಕೆಳಬೆನ್ನು ನೋವಿಗಿರುವ
        ಸಾಮಾನ್ಯ ಕಾರಣಗಳು :

        ಕೆಳಬೆನ್ನಿನ ನೋವು ಉಂಟಾಗಲು ಬೆನ್ನಿನ ಮೇಲಿನ ಒತ್ತಡ, ರಾಡಿಕ್ಯುಲೋಪತಿ, ಮೂಳೆಯ ಒತ್ತುವರಿ ಹಾಗೂ ಮೂಳೆ, ಸಂಧಿಗಳ ಸ್ಥಿತಿ... ಇತ್ಯಾದಿ ಅಂಶಗಳು ಪರಿಣಾಮ ಬೀರುತ್ತವೆ. ಈ ಎಲ್ಲಾ  ಅಂಶಗಳನ್ನು ಕೆಳಗೆ ವಿಶ್ಲೇಷಿಸಲಾಗಿದೆ.

        1. ಬೆನ್ನಿನ ಮೇಲಿನ ಒತ್ತಡ
        ( ತೀವ್ರ, ದೀರ್ಘ‌ಕಾಲಿಕ )

        ಕೆಳಬೆನ್ನಿನ ಸ್ನಾಯುಗಳು ಅಥವಾ ಸ್ನಾಯು ರಜ್ಜುಗಳ ಎಳೆತದಿಂದಾಗಿ, ಸೊಂಟದ ಮೇಲೆ ಒತ್ತಡ ಬಿದ್ದು  ನೋವು ಉಂಟಾಗಬಹುದು. ಎಳೆತದಿಂದಾಗಿ ಈ ಭಾಗದ ಜೀವಕೋಶಗಳು ಅತಿಸೂಕ್ಷ್ಮವಾಗಿ ಹರಿದಿರುವ ಸಾಧ್ಯತೆಗಳಿವೆ. ಇದು  ಕೆಳಬೆನ್ನು ನೋವಿಗೆ ಇರುವ ಒಂದು ಸಾಮಾನ್ಯ ಕಾರಣವಾಗಿರುತ್ತದೆ. ಈ ಭಾಗದ ಅತಿಬಳಕೆ, ಅಸಮರ್ಪಕ ಬಳಕೆ ಅಥವಾ ಏಟುಗಳಿಂದಾಗಿ ಈ ಭಾಗಕ್ಕೆ  ಹಾನಿಯಾಗಬಹುದು. ಹಾನಿಯನ್ನು ಹಠಾತ್‌ ಹಾಗೂ ದೀರ್ಘ‌ಕಾಲಿಕ ಎಂಬುದಾಗಿ ವಿಂಗಡಿಸಬಹುದು. ಹಠಾತ್‌ ಅಂದರೆ ಇತ್ತೀಚಿನ ಕೆಲವು ದಿನಗಳಿಂದ ಅಥವಾ ವಾರಗಳಿಂದ ಆಗಿರುವ ಹಾನಿ. ಒಂದು ವೇಳೆ ಹಾನಿ ಉಂಟಾಗಿ ಮೂರು ವಾರಗಳಿಗೂ ಹೆಚ್ಚು ಸಮಯವಾಗಿದ್ದರೆ, ಆಗ ಅದನ್ನು ದೀರ್ಘ‌ಕಾಲಿಕ ಹಾನಿ ಎಂದು ಹೇಳಬಹುದು.

        40ರ ಪ್ರಾಯದಲ್ಲಿ  ಕೆಳಬೆನ್ನಿನ ಮೇಲಿನ ಒತ್ತಡವು ಹೆಚ್ಚಾಗುತ್ತದೆಯಾದರೂ, ಇದು ಯಾವುದೇ ವಯಸ್ಸಲ್ಲಾದರೂ ಕಂಡು ಬರಬಹುದು. ಕೆಳಬೆನ್ನಿನ ಭಾಗದಲ್ಲಿ ತೀವ್ರ ನೋವು ಕಂಡುಬಂದಾಗ ಈ ಭಾಗದ ಮೇಲಿನ ಒತ್ತಡವು ಅರಿವಿಗೆ ಬರುತ್ತದೆ. ಕೆಳಬೆನ್ನಿನ ಸ್ನಾಯುಗಳ ಸೆಳೆತವನ್ನು ಆಧರಿಸಿ, ಒತ್ತಡವು ಸಾಧಾರಣದಿಂದ ತೀವ್ರ ಸ್ವರೂಪದಲ್ಲಿರಬಹುದು.

        ಹಾನಿಯ ಹಿನ್ನೆಲೆ, ನೋವು ಇರುವ ಜಾಗ, ನರವ್ಯೂಹಕ್ಕಾದ ಹಾನಿ ಇತ್ಯಾದಿಗಳನ್ನು ಆಧರಿಸಿ ರೋಗಿಯ ತಪಾಸಣೆ ಮಾಡಲಾಗುತ್ತದೆ. ಮೂಳೆಯ ಅಸಹಜತೆಗಳೇನಾದರೂ ಇವೆಯೇ ಎಂದು ಪತ್ತೆ ಮಾಡಲು ಕ್ಷ-ಕಿರಣಗಳನ್ನು ಬಳಸಲಾಗುತ್ತದೆ.

        2. ಲಂಬಾರ್‌ ರೆಡಿಕ್ಯುಲೋಪತಿ (lumbar radiculopathy):

        ಲಂಬರ್‌ ರೆಡಿಕ್ಯುಲೋಪತಿ ಎಂಬುದು ನರದ ಬೇರುಗಳಿಗೆ ಆಗುವ ಹಾನಿ. ಕಶೇರುಮಣಿಗಳ ಮಧ್ಯೆ ಇರುವ ಬಿಲ್ಲೆಗಳ ಬಾಗುವಿಕೆಯಿಂದಾಗಿ ಈ ತೊಂದರೆ ಉಂಟಾಗುತ್ತದೆ.  ಇದರಿಂದಾಗಿ ಮಿದುಳು ಬಳ್ಳಿಗೆ ಒತ್ತಿಕೊಳ್ಳುತ್ತದೆ. ಈ ನೋವು ಕೆಳಬೆನ್ನು , ಅಂಡಿನ ಭಾಗ ಹಾಗೂ ಕಾಲನ್ನು ಆವರಿಸುತ್ತದೆ. ಸಯಾಟಿಕ ಉಂಟಾಗುವುದಕ್ಕೆ ಮೊದಲು ಹಲವಾರು ಬಾರಿ ಕೆಳ ಬೆನ್ನು ನೋವು ಹಾಗೂ ಮರಗಟ್ಟುವಿಕೆ ಇತ್ಯಾದಿ ಲಕ್ಷಣಗಳು ಕಂಡುಬರಬಹುದು. ಕೆಳಬೆನ್ನಿನಲ್ಲಿ  ತೀವ್ರವಾದ  ನೋವಿದ್ದು, ಅತ್ತಿತ್ತ  ಬಾಗಿದಾಗ, ಕೆಮ್ಮಿದಾಗ, ಸೀನಿದಾಗ ನೋವು ಹೆಚ್ಚಾಗಬಹುದು. ಸಯಾಟಿಕ ನೋವು ತೀವ್ರವಾಗಿರುವ ಸಂದರ್ಭದಲ್ಲಿ, ಅನಿಯಂತ್ರಿತ ಮಲ, ಮೂತ್ರ ವಿಸರ್ಜನೆ ಅಥವಾ ಪಾದದ ಶಕ್ತಿಗುಂದುವುದು... ಇತ್ಯಾದಿ ತೀವ್ರ ಲಕ್ಷಣಗಳು ಬಾಧಿಸಬಹುದು. ಸೊಂಟದ ರಾಡಿಕ್ಯುಲೋಪತಿಯ ಸಯಾಟಿಕ ನೋವು ಸಾಮಾನ್ಯವಾಗಿ ದೇಹದ ಒಂದೇ ಬದಿಯನ್ನು ಬಾಧಿಸುತ್ತದೆ.

        ಮೇಲಿನ ಲಕ್ಷಣಗಳ ಆಧಾರದಿಂದ ಸೊಂಟದ ರಾಡಿಕ್ಯುಲೋಪತಿ ಇರುವುದನ್ನು  ವೈದ್ಯರು ಪತ್ತೆ ಮಾಡುತ್ತಾರೆ. ಕೈ-ಕಾಲು ಎತ್ತಿದಾಗ ತೀವ್ರವಾಗುವ ನೋವು ತಪಾಸಣೆಯನ್ನು ದೃಢಪಡಿಸುತ್ತದೆ. ಸಿ.ಟಿ., ಎಂ.ಆರ್‌.ಐ. ನಂತಹ ಬಿಂಬ ಪರೀಕ್ಷೆಗಳ ಮೂಲಕ ಬಿಲ್ಲೆ ಜಾರುವಿಕೆಯನ್ನು ವಿವರವಾಗಿ ತಿಳಿಯಬಹುದಾಗಿದೆ.

        3. ಮೂಳೆಯ ಒತ್ತುವರಿ :

        ಕಶೇರುಮಣಿಗಳ ನಡುವಿನ ನಾಳವು ಯಾವುದೇ ಕಾರಣದಿಂದ ಸಪೂರವಾದರೆ ಆಗ ಕೆಳಬೆನ್ನಿನ ಭಾಗದಲ್ಲಿ, ಬೆನ್ನುಹುರಿ ಹಾಗೂ ಅದರ ಪಾರ್ಶ್ವದ ನರಗಳಿಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಮೂಳೆಯ ಒತ್ತುವರಿಯಾಗಲು ಇರುವ ಕಾರಣಗಳಲ್ಲಿ, ಸಂಧಿವಾತ, ಸ್ಪಾಂಡಿಲೋಲಿಸ್ಥೆàಸಿಸ್‌ (ಕಶೇರು ಮಣಿಗಳು ಒಂದರ ಮೇಲೊಂದು ಜಾರುವುದು) ಇತ್ಯಾದಿ ಅಂಶಗಳು ಸೇರುತ್ತವೆ. ಬೆನ್ನು ಮೂಳೆಯ ಸ್ಟೆನಾಸಿಸ್‌ನಿಂದ ಕಾಲುಗಳನ್ನು ಬಾಧಿಸುವ ನೋವು ಕಾಲಿನ ನರದ ಬೇರುಗಳಿಗೆ ಒತ್ತಡ ಉಂಟಾಗುತ್ತದೆ. ನಡೆದಾಡಿದಾಗ ತೀವ್ರವಾಗಿ, ಕುಳಿತಾಗ ಕಡಿಮೆಯಾಗುತ್ತದೆ. (ರಕ್ತಪರಿಚಲನೆಯ ಕೊರತೆಯಾದಾಗ ಆಗುವ ನೋವಿನ ರೀತಿಯಲ್ಲಿಯೇ ಈ ನೋವು ಸಹ ಇರುತ್ತದೆ.)

        4. ಬೆನ್ನುಮೂಳೆ ಹಾಗೂ
        ಸಂ—ಗಳ ತೊಂದರೆಗಳು:

        ಎ) ಬೆನ್ನಿನ ಜನ್ಮಜಾತ ತೊಂದರೆಗಳು:

        ಕೆಳಬೆನ್ನು  ನೋವಿಗೆ ಕಾರಣವಾಗಿರುವ ಜನ್ಮಜಾತ ತೊಂದರೆಗಳೆಂದರೆ, ಸ್ಕೇಲಿಯೋಸಿಸ್‌ (ಬೆನ್ನು ಹುರಿಯು ಪಕ್ಕಕ್ಕೆ ಬಾಗುವುದು) ಹಾಗೂ ಸ್ಪೈನಾ ಬೈಫಿದಾ. ಬೆನ್ನುಮೂಳೆಯ ರಚನೆಯಲ್ಲಿಯೇ ಅಸಹಜತೆ ಇದ್ದಾಗಲೂ, ಅದು ಒಂದು ಪಕ್ಕಕ್ಕೆ ಬಾಗುತ್ತದೆ. ರಚನಾ ಬಾಗುವಿಕೆ ಇರುವ ಮಕ್ಕಳಲ್ಲಿ  ಬಾಹ್ಯ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ತೀವ್ರತೆಯನ್ನು ಕಡಿಮೆ ಮಾಡಬಹುದು. ವಯಸ್ಕರಿಗೆ ಹಿಡಿಕೆಯಿಂದ ಹೆಚ್ಚಿನ ಉಪಯೋಗವಾಗಬಹುದು.

        ಸ್ಪೈನಾ ಬೈಫಿದಾ ಎಂಬುದು ಸಹ ಒಂದು ಜನ್ಮಜಾತ ನ್ಯೂನತೆ. ಈ ನ್ಯೂನತೆ ಇರುವವರ ಬೆನ್ನುಮೂಳೆಯ ನಾಳದ ಹಿಂದಿರುವ  ಚಾಟು ಎಳೆಯಲ್ಲಿ  ನ್ಯೂನತೆ ಇರುತ್ತದೆ. ಈ ನ್ಯೂನತೆಯು ಸಾಮಾನ್ಯವಾಗಿ ಕೆಳಗಿನ ಕಶೇರುಮಣಿಗಳು ಹಾಗೂ ಸಾಕ್ರಮ್‌ ಮೂಳೆಯ ಮೇಲಿನ ಭಾಗವನ್ನು ಹೆಚ್ಚು ಬಾಧಿಸುತ್ತದೆ. ಕೆಲವು ಸಲ ಈ ರೀತಿಯ ನ್ಯೂನತೆ ಇರುವ ಜಾಗದ ಮೇಲಿನ ಚರ್ಮದಲ್ಲಿ  ಅಸಹಜ ರೀತಿಯಲ್ಲಿ  ಕೂದಲು ಹೆಚ್ಚಾಗಿ ಬೆಳೆದಿರುತ್ತದೆ. ಸ್ಪೈನಾ ಬೈಫಿದಾ ಎಂಬುದು ತೊಂದರೆಗಳ ಲಕ್ಷಣ ರಹಿತವಾದ ಮೂಳೆಯ ಸಣ್ಣ  ಪ್ರಮಾಣದ ಅಸಹಜತೆ. ಹಾಗಿದ್ದರೂ ಸಹ, ಕೆಲವು ಸಲ ಈ ನ್ಯೂನತೆಯೊಂದಿಗೆ, ಕಾಲುಗಳ ನರಗಳ ತೀವ್ರ ಅಸಹಜತೆಯೂ ಸೇರಿರುವ ಸಾಧ್ಯತೆಗಳಿವೆ.

        ಆ ) ಮೂಳೆ ಹಾಗೂ ಸಂಧಿಯ ಅವನತಿಯ ಸ್ಥಿತಿ:

        ನಮಗೆ ವಯಸ್ಸಾದಂತೆ, ನಮ್ಮ ಮೃದ್ವಸ್ಥಿಗಳಲ್ಲಿರುವ ನೀರು ಹಾಗೂ ಪ್ರೊಟೀನ್‌ಗಳ ಪ್ರಮಾಣದಲ್ಲಿ  ವ್ಯತ್ಯಾಸವಾಗುತ್ತದೆ. ಇದರಿಂದ ಮೃದ್ವಸ್ಥಿಗಳು ತೆಳುವಾಗಿ, ನಾಜೂಕಾಗಿ, ದುರ್ಬಲವಾಗುತ್ತವೆ. ಕಶೇರು ಮಳಿಗಳನ್ನು ಜೋಡಿಸುವ ಬಿಲ್ಲೆಗಳು ಹಾಗೂ ಸಂಧಿಗಳು ಮೃದ್ವಸ್ಥಿಗಳಿಂದಾಗಿರುವ ಕಾರಣ, ಈ ಭಾಗಗಳು ಸವೆಯುವ ಸಾಧ್ಯತೆಗಳು ಹೆಚ್ಚು. ಇದಕ್ಕೆ  ಸ್ಪಾಂಡಿಲೋಸಿಸ್‌ ಎಂದು ಹೆಸರು. ಕ್ಷ-ಕಿರಣದ ಮೂಲಕ ಸ್ಪಾಂಡಿಲೋಸಿಸ್‌ ಪತ್ತೆಯಾಗುತ್ತದೆ. ಕಶೇರುಖಂಡಗಳ ನಡುವಿನ  ಬಿಲ್ಲೆಗಳ ಸ್ಥಳಾವಕಾಶವು ತೆಳ್ಳಗಾಗಿರುವುದು ಬೆನ್ನೆಲುಬಿನ ಕ್ಷ-ಕಿರಣದಲ್ಲಿ  ಗೋಚರಿಸುತ್ತದೆ.

        ಸಿ) ಮೂಳೆ ಹಾಗೂ ಸಂಧಿಗಳಿಗಾಗುವ ಏಟು:

        ಸೊಂಟದ ಮೂಳೆ ಹಾಗೂ ಸಾಕ್ರಮ್‌ ಮೂಳೆ ಮುರಿತ - ಇದು ಆಸ್ಟಿಯೊಪೋರೋಸಿಸ್‌ ಅಥವಾ ಮೂಳೆ ಸವೆಯುವ ಕಾಯಿಲೆ ಇರುವ ವಯಸ್ಕರಲ್ಲಿ  ಸಾಮಾನ್ಯವಾಗಿ ಕಂಡು ಬರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ  ಋತುಬಂಧವಾದ ಅನಂತರ, ಬಹಳ ದೀರ್ಘ‌ ಸಮಯದಿಂದ ಸ್ಟಿರಾಯ್ಡ ಔಷಧ ತೆಗೆದುಕೊಂಡಿರುವವರಲ್ಲಿ  ಈ ರೀತಿ ಆಗುವುದಿದೆ. ಇಂತಹ ಜನರಲ್ಲಿ,  ಜಾರಿ ಬಿದ್ದರೂ ಸಹ ಅವರ ಬೆನ್ನು ಮೂಳೆಯ ಕಶೇರುಕದ ಮುರಿತಕ್ಕೆ ಕಾರಣವಾಗಿ, ಆ ಕೂಡಲೇ ತೀವ್ರವಾದ ನೋವು ಕೆರಳಬಹುದು, ಈ ನೋವು ಸಾಮಾನ್ಯವಾಗಿ ಕಾಲುಗಳಿಗೆ ಪಸರಿಸುವುದಿಲ್ಲ. ಯುವಜನರಲ್ಲಿ  ವಾಹನ ಅಪಘಾತ, ಎತ್ತರದಿಂದ ಬೀಳುವಿಕೆ ಇತ್ಯಾದಿ ಬಹಳ ತೀವ್ರ ರೂಪದ ಜಖಂ ಆದಾಗ ಮಾತ್ರವೇ ಈ ರೀತಿ ಕಶೇರುಮಣಿಗಳ ಮುರಿತವಾಗುತ್ತದೆ ಮತ್ತು  ಮಿದುಳು ಬಳ್ಳಿಗೆ ಹಾನಿಯಾಗಬಹುದು.

        ಈ) ಸಂಧಿವಾತಗಳು:

        ಇದು ಉರಿಯೂತದ ರೀತಿಯ ಸಂಧಿವಾತವಾಗಿದೆ. ಅದು ಬೆನ್ನು ಹಾಗೂ ಸೇಕ್ರಾಲಿಕ್‌ ಸಂಧಿಗಳನ್ನು ಬಾಧಿಸುತ್ತದೆ. ಉದಾಹರಣೆಗೆ ರಿಯಾಕ್ಟಿವ್‌ ಸಂಧಿವಾತ ( ರೀಟರ್ಸ್‌ ಕಾಯಿಲೆ), ಆಂಕಿಲೋಸಿಂಗ್‌ ಸ್ಪಾಂಡಿಲೈಟಿಸ್‌, ಸೋರಿಯಾಟಿಕ್‌ ಸಂಧಿವಾತ ಇತ್ಯಾದಿ. ಈ ಎಲ್ಲಾ ಕಾಯಿಲೆಗಳಲ್ಲಿ  ಕೆಳಬೆನ್ನಿನಲ್ಲಿ  ನೋವು ಹಾಗೂ ಸೆಟೆತ ಬಾಧಿಸುತ್ತದೆ ಹಾಗೂ ಈ ಲಕ್ಷಣಗಳು ಬೆಳಗ್ಗಿನ ಹೊತ್ತು ಬಹಳ ತೀವ್ರವಾಗಿರುತ್ತವೆ. ಈ ರೋಗ ಸ್ಥಿತಿಗಳು ಜೀವನದ ಎರಡು ಹಾಗೂ ಮೂರನೇ ದಶಕಗಳಲ್ಲಿ  ಆರಂಭವಾಗುತ್ತವೆ.

        ಉ) ಸೋಂಕು :

        ಕೆಳಬೆನ್ನಿನ ನೋವಿಗೆ ಕಾರಣವಾಗಿರುವ ಸೋಂಕುಗಳು ಸಾಮಾನ್ಯವಾಗಿ ರಕ್ತ ಜನ್ಯವಾಗಿದ್ದು, ದೇಹದ  ಬೇರೆ ಭಾಗದಿಂದ ಹರಡಿರುತ್ತದೆ ಅಥವಾ ಕ್ಷಯದ ರೀತಿಯ ಸೋಂಕುಗಳಿಗೆ ಸೋಂಕಿನ ಸ್ಪಾಂಡಿಲೈಟಿಸ್‌ ಎಂದು ಹೆಸರು.

        ಊ) ಗಡ್ಡೆಗಳು :

        ಮಲ್ಟಿಪಲ್‌ ಮಯೆಲೋಮಾದಂತಹ ಮೂಳೆಯ ಪ್ರಾಥಮಿಕ ಗಡ್ಡೆಗಳು ಅಥವಾ ದೇಹದ ಇನ್ನೊಂದು ಭಾಗದಿಂದ ಹರಡಿದ ಕ್ಯಾನ್ಸರ್‌ ಗಡ್ಡೆಗಳ ಕಾರಣ ಗಳಿಂದಲೂ ಕೆಳಬೆನ್ನಲ್ಲಿ  ನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ  ಬೆನ್ನಿನ ಒಂದಕ್ಕಿಂತ ಹೆಚ್ಚು ಕಶೇರುಗಳು ಬಾಧಿತ ವಾಗುತ್ತವೆ. ಥೈರಾಯಿಡ್‌ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌, ಮೂತ್ರಪಿಂಡಗಳ ಕ್ಯಾನ್ಸರ್‌ ಹಾಗೂ ಪುರುಷರಲ್ಲಿ  ಶುಕ್ಲಗ್ರಂಥಿಯ ಕ್ಯಾನ್ಸರ್‌- ಇವು ಮೂಳೆಗಳಿಗೆ ಹರಡುವಂತಹ ಕೆಲವು ಸಾಮಾನ್ಯ ವಿಧದ ಕ್ಯಾನ್ಸರ್‌ಗಳಾಗಿವೆ.

        ರೋಗಿಯ ವೈದ್ಯಕೀಯ ಪರೀಕ್ಷೆಗಳು :

        1. ರೋಗಿಯ ಆರೋಗ್ಯ ಹಿನ್ನೆಲೆ :

        ಹಲವಾರು ಕಾರಣಗಳಿಂದ ಕೆಳಬೆನ್ನು ನೋವು ಬಾಧಿಸಬಹುದು. ಈ ನಿಟ್ಟಿನಲ್ಲಿ  ರೋಗಿಯ ಆರೋಗ್ಯದ ಹಿನ್ನೆಲೆಯು ಪರೀಕ್ಷೆಯ ಒಂದು ಭಾಗವಾಗಿರುತ್ತದೆ. ಇಲ್ಲಿ  ಕೇಳುವ ಕೆಲವೊಂದು ಪ್ರಶ್ನೆಗಳು ನೋವಿಗೆ ಸಂಬಂಧಿಸಿದ್ದಲ್ಲ  ಅನ್ನಿಸಿದರೂ, ನೋವಿನ ಮೂಲವನ್ನು ಗೊತ್ತು ಮಾಡುವುದರಲ್ಲಿ  ಈ ಪ್ರಶ್ನೆಗಳು ಬಹಳ ಅಗತ್ಯ.

        ನೋವಿನ ತೀವ್ರತೆಯ ಬಗೆಗೆ ನಿಮ್ಮ ವೈದ್ಯರು ಅನೇಕ ಪ್ರಶ್ನೆಗಳನ್ನು ಕೇಳಬಹುದು. ( ನೀವು ಭಾರವನ್ನು ಎತ್ತಿದಾಗ, ಆ ಕೂಡಲೇ ನೋವು ಕಾಣಿಸುತ್ತದೆಯೇ ಅಥವಾ ನಿಧಾನವಾಗಿ ನೋವು ಕಾಣಿಸುತ್ತದೆಯೇ ಇತ್ಯಾದಿ). ನಿಮಗೆ ಏನು ಮಾಡಿದಾಗ ನೋವು ಕಡಿಮೆಯಾಗುತ್ತದೆ ಅಥವಾ ಹೆಚ್ಚುತ್ತದೆ, ಇಂತಹ ನೋವು ಈ ಮೊದಲು ಇತ್ತೇ, ಇತ್ತೀಚೆಗೆ ನೀವು ಖಾಯಿಲೆ ಬಿದ್ದದ್ದು, ಆಗ ನಿಮಗೆ ಇದ್ದ ಕೆಮ್ಮು, ಜ್ವರ, ಮೂತ್ರ ವಿಸರ್ಜನೆಯ ತೊಂದರೆಗಳು, ಅಥವಾ ಹೊಟ್ಟೆ ನೋವು ಇತ್ಯಾದಿ ಲಕ್ಷಣಗಳ ಬಗ್ಗೆ  ವೈದ್ಯರು ಪ್ರಶ್ನೆಗಳನ್ನು ಕೇಳಬಹುದು. ಮಹಿಳೆಯರಾಗಿದ್ದರೆ ಬಿಳಿ  ಸ್ರಾವವಾಗುತ್ತಿದೆಯೇ, ಸೆಳೆತ ಇದೆಯೇ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ  ಪೆಲ್ವಿಸ್‌ನಲ್ಲಿಯ ನೋವು ಸಾಮಾನ್ಯವಾಗಿ ಬೆನ್ನಿನಲ್ಲಿಯೂ ಅನುಭವಕ್ಕೆ ಬರಬಹುದು.

        2. ದೈಹಿಕ ಪರೀಕ್ಷೆ :

        ನಿಮ್ಮ ಕಾಲಿನ ನರಗಳಿಗೆ ಹಾನಿಯಾಗಿದೆಯೇ ಎಂದು ತಿಳಿದುಕೊಳ್ಳಲು, ವೈದ್ಯರು ನಿಮ್ಮನ್ನು ಹಿಮ್ಮಡಿ ಹಾಗೂ ಬೆರಳುಗಳ ಮೂಲಕ ನಡೆದಾಡಿಸಿ, ನಡಿಗೆಯಲ್ಲಿ  ವ್ಯತ್ಯಾಸವಿದೆಯೇ ಎಂದು ಗಮನಿಸಬಹುದು. ಅನೈಚ್ಛಿಕ ಪ್ರತಿಕ್ರಿಯೆಯನ್ನು ರಿಫ್ಲೆಕ್ಸ್‌  ಹ್ಯಾಮರ್‌ ಮೂಲಕ ಮಂಡಿ ಹಾಗೂ ಪಾದದ ಗಂಟಿನ ಹಿಂಭಾಗದ ಪರೀಕ್ಷಿಸುತ್ತಾರೆ. ಬೆನ್ನ ಮೇಲೆ ಮಲಗಿ ಸಹಾಯದಿಂದ ಹಾಗೂ ಸಹಾಯರಹಿತವಾಗಿ ಒಮ್ಮೆಗೆ ಒಂದು ಕಾಲನ್ನು, ಬಳಿಕ ಮತ್ತೂಂದು ಕಾಲನ್ನು ಮೇಲಕ್ಕೆತ್ತಿ ಬೇರುಗಳಿಗೆ  ಸಯಾಟಿಕ್‌ ನರದ ಒತ್ತಡವೇನಾದರೂ ಇದೆಯೆ ಎಂದು ವೈದ್ಯರು ಪರೀಕ್ಷಿಸುತ್ತಾರೆ. ಚೂಪಾದ ಪಿನ್‌ ಹಾಗೂ ಹತ್ತಿಯನ್ನು ಗಳನ್ನು ಬಳಸಿ, ಕಾಲಿನ ಸ್ಪರ್ಷ ಜ್ಞಾನಕ್ಕೆ ಹಾನಿಯಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಕಾಲಿನ ಸಾಮರ್ಥ್ಯವನ್ನೂ ಸಹ ಪರೀಕ್ಷಿಸುತ್ತಾರೆ.

        ಪರೀಕ್ಷೆಗಳು :

        ಯಾವ ಕಾರಣದಿಂದಾಗಿ ಬೆನ್ನುನೋವು ಬಾಧಿಸುತ್ತಿದೆ ಎಂದು ಪತ್ತೆ ಮಾಡಲು ವೈದ್ಯರು ಹಲವಾರು ತಪಾಸಣೆಗಳನ್ನು ನಡೆಸುತ್ತಾರೆ. ಕಾಯಿಲೆಯ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಯಾವುದೇ ಒಂದು ಪರೀಕ್ಷೆಯಿಂದ 100% ನಿಖರವಾಗಿ ಹೇಳುವುದು ಅಸಾಧ್ಯ.

        ಅ. ಅನಿಮಿಯಾ ಅಥವಾ ಬಿಳಿ ರಕ್ತ ಕಣಗಳ ವಿಶ್ಲೇಷಣೆಗಾಗಿ ಸಂಪೂರ್ಣ ರಕ್ತ ಗಣನೆ.

        2. ದೇಹದಲ್ಲಿ  ಉರಿಯೂತವೇನಾ ದರೂ ಇದೆಯೇ ಎಂಬುದನ್ನು ಕಂಡುಕೊಳ್ಳಲು ರಕ್ತ ಪರೀಕ್ಷೆಯ ಮೂಲಕ ಎರಿಥ್ರೋಸೈಟ್‌ ಸೆಡಿಮೆಂಟೇಷನ್‌ ಪ್ರಮಾಣದ ಪರೀಕ್ಷೆ.

        ಈ ಪರೀಕ್ಷೆಯ ಆಧಾರದಿಂದ ಇನ್ನಷ್ಟು  ವಿವರವಾದ ಪರೀಕ್ಷೆಗಳನ್ನು ಮಾಡಬೇಕಾಗಬಹುದು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus