Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಸಂತ ಋತುವಿನಲ್ಲಿ ಇರಾನ್‌ ಮೇಲೆ ಇಸ್ರೇಲ್‌ ದಾಳಿ?
    • ಇಸ್ರೇಲ್‌ ಇರಾನ್‌ನ ಪರಮಾಣು ಸಂಸ್ಥಾಪನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ

      • Udayavani | Feb 04, 2012

        ಬ್ರಸೆಲ್ಸ್‌: ವಸಂತ ಋತುವಿನಲ್ಲಿ ಇಸ್ರೇಲ್‌ ಇರಾನ್‌ನ ಪರಮಾಣು ಸಂಸ್ಥಾಪನೆಗಳ ಮೇಲೆ ದಾಳಿ ನಡೆಸುವ 'ಪ್ರಬಲ ಸಾಧ್ಯತೆಗಳಿವೆ' ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೋನ್‌ ಪನೆಟ್ಟ ಅಭಿಪ್ರಾಯಪಟ್ಟಿದ್ದಾರೆ.

        ಬ್ರಸೆಲ್ಸ್‌ಗೆ ನ್ಯಾಟೋ ಸಭೆಗಾಗಿ ತೆರಳುತ್ತಿದ್ದ ಪನೆಟ್ಟ ಅವರಲ್ಲಿ ಸುದ್ದಿಗಾರರು ಇಸ್ರೇಲ್‌ ದಾಳಿಯ ಸಾಧ್ಯತೆ ಕುರಿತು ಕೇಳಿದಾಗ ಮೇಲಿನಂತೆ ಉತ್ತರಿಸಿದರು. ''ಇಸ್ರೇಲ್‌ ತಾನು ಇರಾನ್‌ ಮೇಲೆ ದಾಳಿ ನಡೆಸುವ ಸಾಧ್ಯತೆಯಿರುವುದಾಗಿ ನಮಗೆ ತಿಳಿಸಿದೆ ಮತ್ತು ನಾವು ಈ ಕುರಿತು ನಮ್ಮ ಕಳವಳವನ್ನು ಇಸ್ರೇಲ್‌ಗೆ ತಿಳಿಯಪಡಿಸಿದ್ದೇವೆ'' ಎಂದವರು ಹೇಳಿದರು.

        ಇರಾನ್‌ ಪರಮಾಣು ಬಾಂಬ್‌ ನಿರ್ಮಿಸುವುದಕ್ಕೆ ಆರಂಭಿಸುವ ಮುನ್ನ ಎಪ್ರಿಲ್‌, ಮೇ ಅಥವಾ ಜೂನ್‌ನಲ್ಲಿ ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸಲಿದೆ ಎಂದು ಪನೆಟ್ಟ ಭಾವಿಸಿರುವುದಾಗಿ ವಾಷಿಂಗ್ಟನ್‌ ಪೋಸ್ಟ್‌ ಸಂಪಾದಕೀಯದಲ್ಲಿ ಹೇಳಲಾಗಿದೆ.

        ಇಸ್ರೇಲ್‌ ಇರಾನ್‌ ಮೆಲೆ ದಾಳಿ ನಡೆಸಿದಲ್ಲಿ ಅಣು ಬಾಂಬ್‌ ನಿರ್ಮಿಸದಂತೆ ಇರಾನನ್ನು ತಡೆಯುವ ನಿಟ್ಟಿನಲ್ಲಿ ಈಗ ಹೆಚ್ಚು ಹೆಚ್ಚು ಯಶಸ್ವಿಯಾಗುತ್ತಿರುವ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧ ಕಾರ್ಯಕ್ರಮ ಹಾಗೂ ಇತರ ಮಿಲಿಟರಿಯೇತರ ಪ್ರಯತ್ನಗಳು ಹಳಿ ತಪ್ಪಬಹುದೆಂದು ಅಧ್ಯಕ್ಷ ಬರಾಕ್‌ ಒಮಾಮಾ ಮತ್ತು ಪನೆಟ್ಟ ಭಾವಿಸಿದ್ದು, ಇಸ್ರೇಲ್‌ ದಾಳಿ ನಡೆಸುವುದನ್ನು ಅಮೆರಿಕ ವಿರೋಧಿಸುತ್ತದೆಯೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಆದರೆ ಇಸ್ರೇಲ್‌ ದಾಳಿ ನಡೆಸಿದಲ್ಲಿ ಅಮೆರಿಕ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂದು ಶ್ವೇತಭವನ ಇನ್ನೂ ನಿರ್ಧರಿಸಿಲ್ಲ.

        ಇರಾನ್‌ಗೆ ಪರಮಾಣು ಅಸ್ತ್ರವೊಂದನ್ನು ನಿರ್ಮಿಸಲು ಸಾಕಷ್ಟು ಸಂಸ್ಕರಿತ ಯುರೇನಿಯಂ ಉತ್ಪಾದಿಸುವುದಕ್ಕೆ ಸುಮಾರು ಒಂದು ವರ್ಷದ ಅಗತ್ಯವಿದೆ ಮತ್ತು ಪೂರೈಕೆಯೋಗ್ಯ ವಾಹನವೊಂದಕ್ಕೆ ಜೋಡಿಸಲು ಮತ್ತೂ ಒಂದೆರಡು ವರ್ಷಗಳು ಬೇಕಾದೀತೆಂದು ಪನೆಟ್ಟ ರವಿವಾರ ಸಿಬಿಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

        ತನ್ನ ಪರಮಾಣು ಕಾರ್ಯಕ್ರಮ ಶಾಂತಿಯುತ ಉದ್ದೇಶದ್ದಾಗಿದೆಯೆಂದು ಇರಾನ್‌ ಪ್ರತಿಪಾದಿಸುತ್ತಿದೆ ಮತ್ತು ಹೊಸ ನಿರ್ಬಂಧಗಳನ್ನು ಹೇರಿರುವುದಕ್ಕೆ ಹೋರ್ಮುಜ್‌ ಜಲಸಂಧಿಯಲ್ಲಿ ನೌಕಾಯಾನಕ್ಕೆ ಅಡ್ಡಿಪಡಿಸುವುದರ ಸಹಿತ ಪ್ರತಿಕಾರದ ಕ್ರಮಗಳನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿದೆ.

        ಇರಾನ್‌ ಮೇಲೆ ಇಸ್ರೇಲ್‌ ಮುಂಚಿತ ವೈಮಾನಿಕ ದಾಳಿ ನಡೆಸುವ ಆಯ್ಕೆಯನ್ನು ಕಳೆದ ವರ್ಷ ದೇಶದ ಬೇಹು ಸಂಸ್ಥೆ ವಿರೋಧಿಸಿದ್ದರೆ, ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಮತ್ತು ರಕ್ಷಣಾ ಸಚಿವ ಎಹುದ್‌ ಬರಾಕ್‌ ಅವರು ಬೆಂಬಲಿಸಿದ್ದರು. ಇಸ್ರೇಲಿ ಬೇಹು ಸಂಸ್ಥೆ ಮೊಸಾದ್‌ ಮುಖ್ಯಸ್ಥ ತಮೀರ್‌ ಪರ್ಡೊ ಅವರು ಕಳೆದ ವಾರ ವಾಷಿಂಗ್ಟನ್‌ಗೆ ನೀಡಿದ ಭೇಟಿ ವೇಳೆ ಇಸ್ರೇಲ್‌ ಏಕಪಕ್ಷೀಯ ದಾಳಿ ನಡೆಸುವ ಸಾಧ್ಯತೆಯನ್ನು ಪ್ರಸ್ತಾವಿಸಿದ್ದರೆಂದು ಇಸ್ರೇಲಿ ಟೆಲಿವಿಜನ್‌ ಹೇಳಿದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus