Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • 2ಜಿ ಸ್ಪೆಕ್ಟ್ರಂ ಹಗರಣ: ಚಿದುಗೆ ಕ್ಲೀನ್‌ಚಿಟ್‌
    • ಪಿ.ಚಿದಂಬರಂ ಅವರು ಯಾವುದೇ ಕ್ರಿಮಿನಲ್‌ ಒಳಸಂಚಿನಲ್ಲಿ ಭಾಗಿಯಾಗಿಲ್ಲ

      • Udayavani | Feb 04, 2012

        ಹೊಸದಿಲ್ಲಿ: ವಿವಾದಾತ್ಮಕ 2ಜಿ ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರೊಂದಿಗೆ ತೆಗೆದುಕೊಂಡ ನಿರ್ಧಾರಗಳಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರು ಯಾವುದೇ ಕ್ರಿಮಿನಲ್‌ ಒಳಸಂಚಿನಲ್ಲಿ ಭಾಗಿಯಾಗಿಲ್ಲ ಅಥವಾ ಯಾವುದೇ ಹಣಕಾಸು ಲಾಭ ಪಡೆದಿಲ್ಲವೆಂದು ತೀರ್ಮಾನಿಸಿ ದಿಲ್ಲಿಯ ಕೋರ್ಟೊಂದು ಅವರನ್ನು ಆರೋಪಿಯನ್ನಾಗಿ ಮಾಡಲು ಕೋರಿದ್ದ ಅರ್ಜಿಯನ್ನು ಶನಿವಾರ ತಿರಸ್ಕರಿಸುವುದರೊಂದಿಗೆ ಚಿದಂಬರಂ ಹಾಗೂ ಯುಪಿಎ ಸರಕಾರಕ್ಕೆ ಬಹುದೊಡ್ಡ ಬಿಡುಗಡೆ ದೊರೆತಂತಾಗಿದೆ.

        2008ರ ವಿವಾದಾತ್ಮಕ 2ಜಿ ಸ್ಪೆಕ್ಟ್ರಂ ಹಂಚಿಕೆ ವೇಳೆ ವಿತ್ತ ಸಚಿವರಾಗಿದ್ದ ಚಿದಂಬರಂ ಅವರಿಗೆ ನಿಷ್ಕಳಂಕಿತನೆಂಬ ಹಣೆಪಟ್ಟಿ ನೀಡಿದ ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ, ಚಿದಂಬರಂ ಅವರು ಸ್ಪೆಕ್ಟ್ರಂ ದರಗಳನ್ನು 2001ರ ಮಟ್ಟದಲ್ಲಿ ಇರಿಸಿದ ಮತ್ತು ಎರಡು ಕಂಪೆನಿಗಳ ಈಕ್ವಿಟಿಯನ್ನು ಮಾರಾಟ ಮಾಡಿದ ಎರಡು ನಿರ್ಧಾರಗಳಲ್ಲಿ ಮಾತ್ರ ಭಾಗಿಯಾಗಿದ್ದರು ಮತ್ತು ಇವು ಕ್ರಿಮಿನಲ್‌ ಕೃತ್ಯಗಳಲ್ಲ ಎಂದು ಹೇಳಿದರು.

        ತೀರ್ಪು ಚಿದಂಬರಂ ಅವರಿಗೆ ವೈಯಕ್ತಿಕವಾಗಿ ಒಂದು ಪರಿಹಾರವಾಗಿ ಬಂದಿದೆಯಷ್ಟೇ ಅಲ್ಲ, ಈಚಿನ ದಿನಗಳಲ್ಲಿ 2ಜಿ ಹಾಗೂ ಇತರ ವಿಷಯಗಳಲ್ಲಿ ಅನೇಕ ನ್ಯಾಯಾಂಗ ತೀರ್ಪುಗಳಿಂದ ಹೊಡೆತ ತಿಂದಿರುವ ಯುಪಿಎ ಸರಕಾರದ ಪಾಲಿಗೆ ಕೂಡ ಮೊದಲ ಶುಭ ಸಂಗತಿಯಾಗಿ ಬಂದಿದೆ.

        64 ಪುಟಗಳ ಆದೇಶ:

        ಚಿದಂಬರಂ ಅವರ ಕಡೆಯಿಂದ ಇನ್ನಾವುದೇ ತಪ್ಪು ಸಂಭವಿಸದಿರುವುದರಿಂದ ಅವರು ಕ್ರಿಮಿನಲ್‌ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗದೆಂದು ವಿಶೇಷ ಕೋರ್ಟು ಹೇಳಿತು. 'ಸ್ಪೆಕ್ಟ್ರಂ ದರದ ಪರಿಷ್ಕರಣೆ ನಡೆಸದ ಮತ್ತು ಎರಡು ಕಂಪೆನಿಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಭಾಗಿಯಾಗಿದ್ದ ವೇಳೆ ಅವರು ಕ್ರಿಮಿನಲ್‌ ಒಳಸಂಚು ನಡೆಸುತ್ತಿದ್ದರೆಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಅದರಂತೆ ಚಿದಂಬರಂ ವಿರುದ್ಧ ಮುಂದುವರಿಯುವುದಕ್ಕೆ ನನಗೆ ಯಾವುದೇ ಆಧಾರ ಕಂಡುಬಂದಿಲ್ಲ. ಅವರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಅದನ್ನು ವಜಾಗೊಳಿಸಲಾಗಿದೆ' ಎಂದು ನ್ಯಾಯಾಧೀಶರು ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯನ್‌ ಸ್ವಾಮಿ ಸಲ್ಲಿಸಿದ್ದ ಖಾಸಗಿ ಕ್ರಿಮಿನಲ್‌ ದೂರನ್ನು ತಿರಸ್ಕರಿಸುತ್ತ ತಮ್ಮ 64 ಪುಟಗಳ ಆದೇಶದಲ್ಲಿ ಹೇಳಿದರು.

        ಟೆಲಿಕಾಂ ನೀತಿಯನ್ನು ಬುಡಮೇಲುಗೊಳಿಸುವುದಕ್ಕೆ ಮತ್ತು ತನಗೆ ಅಥವಾ ಇನ್ನಾವುದೇ ವ್ಯಕ್ತಿಗೆ ಹಣಕಾಸು ಲಾಭ ಪಡೆಯುವುದಕ್ಕೆ ಚಿದಂಬರಂ ಹಾಗೂ ರಾಜಾ ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತೆಂದು ಹೇಳುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

        'ಇಲ್ಲೊಂದಿಷ್ಟು ಪುರಾವೆ ಮತ್ತು ಅಲ್ಲೊಂದಿಷ್ಟು ಪುರಾವೆ ಕ್ರಿಮಿನಲ್‌ ಪಿತೂರಿ ನಡೆದಿದ್ದ ಬಗ್ಗೆ ಮೇಲ್ನೋಟದ ಪುರಾವೆಯಾಗುವುದಿಲ್ಲ. ನಿರ್ಧಾರವೊಂದರಲ್ಲಿ ಯಾವುದೇ ಪ್ರಮಾಣದಲ್ಲಿ ಸಹಭಾಗಿಯಾಗಿಯಾದ ಒಬ್ಬನನ್ನು ಮತ್ತು ಪ್ರತಿಯೊಬ್ಬನನ್ನು ಆರೋಪಿಯೆಂದು ಪರಿಗಣಿಸಲಾಗದು' ಎಂದು ಸ್ವಾಮಿ ಅವರ ಅರ್ಜಿಯನ್ನು ತಳ್ಳಿಹಾಕುತ್ತ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು. ಸ್ವಾಮಿ ಅವರು ಆಪಾದಿಸಿರುವಂತೆ ಚಿದಂಬರಂ ಅವರು 2001ರ ದರದಲ್ಲಿ ಸ್ಪೆಕ್ಟ್ರಂ ಬೆಲೆ ನಿಗದಿಗೊಳಿಸುವಲ್ಲಿ ಮತ್ತು ಈಕ್ವಿಟಿ ಮಾರಾಟಕ್ಕೆ ಅನುಮತಿಸುವಲ್ಲಿ ಸ್ವೇಚ್ಛೆಯಿಂದ ವರ್ತಿಸಿಲ್ಲ ಎಂದು ಕೋರ್ಟು ಹೇಳಿತು.

        ಕ್ರಿಮಿನಲ್‌ ಒಳಸಂಚಿನಲ್ಲಿ ಭಾಗಿಯಲ್ಲ:

        ಚಿದಂಬರಂ ಅವರು ರಾಜಾ ಅವರೊಂದಿಗೆ ಸ್ಪೆಕ್ಟ್ರಂ ಲೈಸೆನ್ಸ್‌ಗಳಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಪ್ರವೇಶ ದರಗಳನ್ನು ನಿಗದಿಪಡಿಸಿದರು ಮತ್ತು ಅವರು ಸ್ವಾನ್‌ ಟೆಲಿಕಾಂ ಹಾಗೂ ಯುನಿಟೆಕ್‌ ಲಿಮಿಟೆಡ್‌ ಸಂಸ್ಥೆಗಳು ಈಕ್ವಿಟಿಯನ್ನು ವಿದೇಶಿ ಸಂಸ್ಥೆಗಳಿಗೆ ಮಾರಾಟ ಮಾಡುವುದಕ್ಕೆ ಅನುಮತಿಸಿದ್ದಕ್ಕೆ ರಾಜಾ ಅವರೊಂದಿಗೆ ಶಿಕ್ಷೆಗೆ ಅರ್ಹರಾಗಿದ್ದಾರೆಂಬ ಸ್ವಾಮಿ ಅವರ ವಾದವನ್ನು ಪ್ರಸ್ತಾವಿಸಿದ ಕೋರ್ಟು, 'ಕ್ರಿಮಿನಲ್‌ ಪಿತೂರಿ ಪ್ರಕರಣವೊಂದರಲ್ಲಿ ಕೋರ್ಟು ಇಬ್ಬರು ವ್ಯಕ್ತಿಗಳು ಒಂದೇ ಉದ್ದೇಶದೊಂದಿಗೆ ಪ್ರತ್ಯೇಕವಾಗಿ ಮುಂದುವರಿದಿದ್ದಾರೆಯೇ ಅಥವಾ ಸಮಾನ ಉದ್ದೇಶದೊಂದಿಗೆ ಜೊತೆಯಾಗಿ ಮುಂದುವರಿದಿದ್ದಾರೆಯೇ ಎಂಬುದನ್ನು ನೋಡಬೇಕಾಗಿದೆ. ಒಬ್ಟಾತ ಅಮಾಯಕನಾಗಿ ಕಾರ್ಯಪ್ರವೃತ್ತನಾಗಿರಬಹುದು ಮತ್ತು ಇನ್ನೊಬ್ಟಾತ ಕ್ರಿಮಿನಲ್‌ ಉದ್ದೇಶದಿಂದ ಮುಂದುವರಿದಿರಬಹುದು. ಕೇಡು ಬಗೆಯದ, ಎಚ್ಚರವಿಲ್ಲದ ಅಥವಾ ಅಮಾಯಕ ಕೃತ್ಯಗಳು ಒಬ್ಟಾತನನ್ನು ಒಳಸಂಚಿನಲ್ಲಿ ಭಾಗಿಯನ್ನಾಗಿ ಮಾಡುವುದಿಲ್ಲ' ಎಂದು ಹೇಳಿತು.

        2001ರಲ್ಲಿ ನಿಗದಿಪಡಿಸಲಾಗಿದ್ದ ದರವನ್ನು ಪುನರ್ವಿಮರ್ಶಿಸುವ ಅಗತ್ಯವಿಲ್ಲ ಎಂದು ಚಿದಂಬರಂ ಅವರು ರಾಜಾ ಅವರಿಗೆ ಹೇಳಿದ್ದರೆಂದು ಸ್ಪೆಕ್ಟ್ರಂ ದರ ನಿಗದಿ ಕುರಿತು 2003ರ ಅ. 31ರಂದು ಸಂಪುಟ ಕೈಗೊಂಡ ನಿರ್ಧಾರ ಕುರಿತ ಟಿಪ್ಪಣಿಯೊಂದನ್ನು ಕೂಡ ಕೋರ್ಟು ಉಲ್ಲೇಖೀಸಿತು.

        ಸಾರ್ವಜನಿಕ ಸೇವಕನೋರ್ವ ಕೈಗೊಂಡ ನಿರ್ಧಾರ ಸಾರ್ವಜನಿಕ ಬೊಕ್ಕಸಕ್ಕೆ ನಷ್ಟವುಂಟುಮಾಡಿದೆಯೆಂಬ ಸರಳ ಕಾರಣಕ್ಕೆ ಅಥವಾ ಬೇರೆಯವರಿಗೆ ಆರ್ಥಿಕ ಲಾಭವುಂಟುಮಾಡಿದೆಯೆಂಬ ಕಾರಣಕ್ಕೆ ಕ್ರಿಮಿನಲ್‌ ಆಗುವುದಿಲ್ಲ. ಕೇವಲ ಸಭೆಯಲ್ಲಿ ಪಾಲ್ಗೊಳ್ಳುವುದು ಮತ್ತು ಅಲ್ಲಿ ನಿರ್ಧಾರಗಳನ್ನು ಕೈಗೊಳ್ಳುವುದು ಕ್ರಿಮಿನಲ್‌ ಕೃತ್ಯವಲ್ಲ ಎಂದು ಕೋರ್ಟು ಅಭಿಪ್ರಾಯಪಟ್ಟಿತು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus