ಬೆಂಗಳೂರು: ಪಾಕಿಸ್ಥಾನಿ ಕ್ರಿಕೆಟಿಗರಿಗೂ ಐಪಿಎಲ್‌ಗೂ ಎಣ್ಣೆ-ಸೀಗೆ ಸಂಬಂಧ. ಆದರೂ ಈ ಬಾರಿಯ ಹರಾಜಿನಲ್ಲಿ ಪಾಕ್ ಕ್ರಿಕೆಟಿಗನೋರ್ವ ಸೇಲ್ ಆದದ್ದು ಅಚ್ಚರಿಯ ವಿದ್ಯಮಾನಗಳಲ್ಲೊಂದು. ಈ ಕ್ರಿಕೆಟಿಗನೇ ಅಜರ್ ಮಹಮೂದ್.36ರ ಹರೆಯದ, ರಾವಲ್ಪಿಂಡಿ ಮೂಲದ ಅಜರ್ ಮಹಮೂದ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 200,000 ಡಾಲರ್ ನೀಡಿ ಖರೀದಿಸಿದೆ. ಇವರೀಗ ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ ಪ್ರಜೆಯಾದ್ದರಿಂದ ಐಪಿಎಲ್‌ನಲ್ಲಿ ಆಡುವಂತಾಯಿತು.ಅಜರ್ ಮಹಮೂದ್ ಪಾಕ್ ಪರ 21 ಟೆಸ್ಟ್ ಹಾಗೂ 143 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 2007ರ ವಿಶ್ವಕಪ್‌ನಲ್ಲಿ ಕೊನೆಯ ಸಲ ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದರು.2008ರ ಮೊದಲ ಐಪಿಎಲ್ ಬಳಿಕ ಪಾಕಿಸ್ಥಾನಿ ಆಟಗಾರರಿಗೆ ಇಲ್ಲಿ ಜಾಗ ಸಿಗುತ್ತಿಲ್ಲ. ಅದೇ ವರ್ಷ ನಡೆದ ಮುಂಬಯಿ ಮೇಲಿನ ದಾಳಿಯೇ ಇದಕ್ಕೆ ಕಾರಣ.