Udayavani | Feb 04, 2012
ಬೆಂಗಳೂರು : ಕರ್ನಾಟಕದಲ್ಲಿ ಮಾರಕ ಕ್ಯಾನ್ಸರ್‌ನ ವಿವಿಧ ಮಾದರಿಯ ಪೈಕಿ ಗರ್ಭಕೋಶ ಕ್ಯಾನ್ಸರ್ ನಂ.1 ಸ್ಥಾನದಲ್ಲಿದೆ.
ನಂತರದ ಸ್ಥಾನವನ್ನು ಕ್ರಮವಾಗಿ ಸ್ತನ ಮತ್ತು ಬಾಯಿ ಕ್ಯಾನ್ಸರ್‌ಗಳು ಆಕ್ರಮಿಸಿಕೊಂಡಿವೆ.
ವಿಶ್ವಮಟ್ಟದ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಸ್ತನ ಕ್ಯಾನ್ಸರ್ ಮೊದಲ ಶ್ರೇಣಿಯಲ್ಲಿದೆ. ಆದರೆ, ಭಾರತದಲ್ಲಿ ಸ್ತನ ಕ್ಯಾನ್ಸರ್ 2ನೇ ಸ್ಥಾನದಲ್ಲಿದ್ದು, ಗರ್ಭಕೋಶ ಕ್ಯಾನ್ಸರ್ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕರ್ನಾಟಕ ಕೂಡ ಇದಕ್ಕೆ ಹೊರತಾಗಿಲ್ಲ ಎಂಬುದು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ| ಎಂ. ವಿಜಯಕುಮಾರ್ ತಿಳಿಸಿದ್ದಾರೆ.
ಕಿದ್ವಾಯಿ ಆಸ್ಪತ್ರೆಗೆ ಬರುವ ಎಲ್ಲ ರೀತಿಯ ಕ್ಯಾನ್ಸರ್ ರೋಗಿಗಳಲ್ಲೂ ಗರ್ಭಕೋಶ ಕ್ಯಾನ್ಸರ್‌ನವರೇ ಹೆಚ್ಚು. ಇತರೆ ಎಲ್ಲ ರೀತಿಯ ಕ್ಯಾನ್ಸರ್‌ಗಳನ್ನು ಒಟ್ಟಾಗಿ ಗಮನಿಸಿದಾಗಲೂ ನಮಗೆ ಸಿಗುವ ಒಟ್ಟು ಫಲಿತಾಂಶ ಸಹ ಗರ್ಭಕೋಶ, ಸ್ತನ ಮತ್ತು ಬಾಯಿ ಕ್ಯಾನ್ಸರ್ ಕಡೆಗೇ ವಾಲಿದೆ ಎಂಬುದಕ್ಕೆ ಶೇ.60 ರಷ್ಟು ಕ್ಯಾನರ್ ರೋಗಪೀಡಿತರು ಈ ಮೂರು ಮಾದರಿಯ ಕ್ಯಾನ್ಸರ್‌ಗೆ ತುತ್ತಾಗಿರುತ್ತಾರೆ.
ಈ ಮೂರು ಮಾದರಿಯ ಕ್ಯಾನ್ಸರ್ ಆರಂಭವಾದಾಗ ರೋಗಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ. ಗರ್ಭಕೋಶದ ಕ್ಯಾನ್ಸರ್ ಬರುವಾಗ ಮುಟ್ಟಿನಲ್ಲಿ ವ್ಯತ್ಯಾಸ ಆಗುತ್ತದೆ. ತಿಂಗಳಿಗೆ 2 ಬಾರಿ ಆಗಬಹುದು, ಪದೇ ಪದೇ ರಕ್ತ ಅಥವಾ ರಕ್ತದ ರೀತಿಯ ದ್ರವ ಬರಬಹುದು. ಈ ರೀತಿ ಆದಾಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮುಟ್ಟು ನಿಂತವರಿಗೆ ಈ ಕ್ಯಾನ್ಸರ್ ಬಂದರೆ ತೊಂದರೆ.
ಸ್ತನ ಕ್ಯಾನ್ಸರ್ ನೋವಿಲ್ಲದ ಗಡ್ಡೆಯ ರೂಪದಲ್ಲಿ ಮತ್ತು ನಿಪ್ಪಲ್ ಡಿಸಾcರ್ಜ್‌ನಿಂದ (ದ್ರವ ಹೊರಬರುವುದು) ಆರಂಭ ಆಗುತ್ತದೆ. ಗಡ್ಡೆ ಕ್ಯಾನ್ಸರ್‌ನ ಕೊನೇ ಹಂತ ತಲುಪಿದಾಗ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲಿವರೆಗೆ ಕಾಯದೇ ಗಡ್ಡೆ ಕಾಣಿಸಿದ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಬಾಯಿಯಲ್ಲಿ ಹುಣ್ಣು ಆಗಿ, ವಾಸಿಯಾಗದಿದ್ದರೆ ಅದು ಬಾಯಿ ಕ್ಯಾನ್ಸರ್‌ಗೆ ಕಾರಣ ಆಗಿರಬಹುದು. ಇದಲ್ಲದೇ ನಿರಂತರ ಕಫ, ಧ್ವನಿ ಬದಲಾವಣೆ, ಮೈಯಲ್ಲಿ ಹುಣ್ಣು ಆಗಿ 3-4 ವಾರದೊಳಗೆ ವಾಸಿಯಾಗದಿದ್ದರೆ ಅದು, ಕ್ಯಾನ್ಸರ್ ಲಕ್ಷಣವೇ ಆಗಿರಬಹುದು. ಹಾಗಾಗಿ, ಈ ಎಲ್ಲ ಲಕ್ಷಣ ಕಾಣಿಸಿದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲ ಕ್ಯಾನ್ಸರ್‌ಗಳಿಗೂ ಪರಿಹಾರ ಇದೆ ಎನ್ನುತ್ತಾರೆ ಡಾ| ಎಂ. ವಿಜಯಕುಮಾರ್.