Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರವೀಂದ್ರ ಜಡೇಜ, ವಿನಯ್‌ ಕುಮಾರ್‌ ಐಪಿಎಲ್‌ ಕೋಟಿಪತಿಗಳು
    • ಜಡೇಜ ಮತ್ತು ವಿನಯ್‌ ಕುಮಾರ್‌ ಐಪಿಎಲ್‌ ಹರಾಜಿನಲ್ಲಿ ಅನಿರೀಕ್ಷಿತ ಬಂಪರ್‌ ಪಡೆದು ಕೋಟ್ಯಧಿಪತಿಗಳಾಗಿ ಹೊರಹೊಮ್ಮಿದ್ದಾರೆ

      • Udayavani | Feb 04, 2012

        ಬೆಂಗಳೂರು : ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳಾದ ರವೀಂದ್ರ ಜಡೇಜ ಮತ್ತು 'ದಾವಣಗೆರೆ ಎಕ್ಸ್‌ಪ್ರೆಸ್‌' ಆರ್‌. ವಿನಯ್‌ ಕುಮಾರ್‌ ಶನಿವಾರ ನಡೆದ ಐಪಿಎಲ್‌ ಹರಾಜಿನಲ್ಲಿ ನಿರೀಕ್ಷಿತ ಹಾಗೂ ಅನಿರೀಕ್ಷಿತ ಬಂಪರ್‌ ಪಡೆದು ಕೋಟ್ಯಧಿಪತಿಗಳಾಗಿ ಹೊರಹೊಮ್ಮಿದ್ದಾರೆ.



        ನಗರದ ಪಂಚತಾರ ಹೊಟೇಲ್‌ನಲ್ಲಿ ರಿಚರ್ಡ್‌ ಮೆಡ್ಲ್ ನಡೆಸಿಕೊಟ್ಟ ಹರಾಜಿನಲ್ಲಿ 11 ದೇಶಗಳ 144 ಆಟಗಾರರ ಪೈಕಿ ಮೂವರು ಆಟಗಾರರು ಕೋಟಿಪತಿಗಳ ಪಟ್ಟ ಅಲಂಕರಿಸಿದರು. ಈ ಅದೃಷ್ಟ ಸಂಪಾದಿಸಿದ ತೃತೀಯ ಕ್ರಿಕೆಟಿಗ ಶ್ರೀಲಂಕಾ ತಂಡದ ನಾಯಕ ಮಾಹೇಲ ಜಯವರ್ಧನ. ಈ ಮೂವರೂ ಆಟಗಾರರು ವಜಾಗೊಂಡ ಕೊಚ್ಚಿ ಟಸ್ಕರ್ಸ್‌ ಕೇರಳ ತಂಡದ ಸದಸ್ಯರೆಂಬುದು ವಿಶೇಷ.



        ಸೀಮಿತ ಓವರ್‌ಗಳ ಪಂದ್ಯದಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿರುವ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು 10 ಕೋಟಿ ರೂ.ಗಳಿಗೆ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿಸಿತು. ಈ ಬಾರಿಯ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಮಾರಾಟವಾದ ಖ್ಯಾತಿಗೆ ಜಡೇಜ ಪಾತ್ರರಾದರು. ಕಳೆದ ಬಾರಿ ಜಡೇಜ ಕೊಚ್ಚಿ ತಂಡಕ್ಕೆ 4.75 ಕೋಟಿ ರೂ.ಗೆ ಮಾರಾಟವಾಗಿದ್ದರು.



        'ದಾವಣಗೆರೆ ಎಕ್ಸ್‌ಪ್ರೆಸ್‌' ಆರ್‌. ವಿನಯ್‌ ಕುಮಾರ್‌ ಅವರನ್ನು ತವರಿನ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ 5 ಕೋಟಿ ರೂ.ಗಳಿಗೆ ತನ್ನದಾಗಿಸಿಕೊಂಡಿತು. ಕಳೆದ ಬಾರಿ ವಿನಯ್‌ ಕುಮಾರ್‌ ಕೊಚ್ಚಿ ತಂಡಕ್ಕೆ 4.5 ಕೋಟಿ ರೂ.ಗೆ ಮಾರಾಟವಾಗಿದ್ದರು. ಶ್ರೀಲಂಕಾದ ಮಾಹೇಲ ಜಯವರ್ಧನ 7 ಕೋಟಿ ಮೊತ್ತಕ್ಕೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಪಾಲಾದರು.



        ಮಧ್ಯಮ ವೇಗಿ ರುದ್ರಪ್ರತಾಪ್‌ ಸಿಂಗ್‌ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ 35 ಲಕ್ಷ ರೂ.ಗೆ ಖರೀದಿಸಿತು. ವಿದೇಶಿ ಆಟಗಾರರ ಪೈಕಿ ನಿರೀಕ್ಷೆಗೂ ಮೀರಿ ದೊಡ್ಡ ಮೊತ್ತ ಗಳಿಸಿದ್ದು ವೆಸ್ಟ್‌ ಇಂಡೀಸಿನ ಸ್ಪಿನ್ನರ್‌ ಸುನೀಲ್‌ ನಾರಾಯಣ್‌. 25 ಲಕ್ಷ ಮೂಲಧನ ಹೊಂದಿದ್ದ ಸುನೀಲ್‌ ನಾರಾಯಣ್‌ ಅವರನ್ನು ಡೇರ್‌ ಡೆವಿಲ್ಸ್‌ ತಂಡ 35 ಲಕ್ಷ ರೂ.ಗೆ ಸೆಳೆದುಕೊಂಡಿತು.

        ಮಾರಾಟವಾಗದ ಲಕ್ಷ್ಮಣ್‌



        ಆಸ್ಟ್ರೇಲಿಯ ವಿರುದ್ಧದ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ ವಿವಿಎಸ್‌ ಲಕ್ಷ್ಮಣ್‌ ಅವರನ್ನು ಖರೀದಿಸಲು ನಿರೀಕ್ಷೆಯಂತೆ ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಅತೀ ಹೆಚ್ಚು ಮೂಲಬೆಲೆ (2 ಕೋಟಿ ರೂ.)ಹೊಂದಿದ್ದ ಲಕ್ಷ್ಮಣ್‌ ಯಾರಿಗೂ ಬೇಡವಾದರು.



        ಉಳಿದಂತೆ ಇಂಗ್ಲಂಡಿನ ಸ್ಪಿನ್ನರ್‌ ಗ್ರೇಮ್‌ ಸ್ವಾನ್‌, ಮಧ್ಯಮ ವೇಗಿ ಜೇಮ್ಸ್‌ ಆಂಡರ್ಸನ್‌, ಬ್ಯಾಟ್ಸ್‌ಮನ್‌ ಇಯಾನ್‌ ಬೆಲ್‌, ಶ್ರೀಲಂಕಾದ ಸ್ಪಿನ್ನರ್‌ ಅಜಂತ ಮೆಂಡಿಸ್‌, ರಂಗನ ಹೆರಾತ್‌, ಆಸ್ಟ್ರೇಲಿಯದ ಪೀಟರ್‌ ಸಿಡ್ಲ್, ಕ್ಸೇವಿಯರ್‌ ಡೊಹರ್ಟಿ, ದಕ್ಷಿಣ ಆಫ್ರಿಕಾದ ಮಾರ್ಕ್‌ ಬೌಷರ್‌, ವೆರ್ನನ್‌ ಫಿಲಾಂಡರ್‌, ಲೊನ್ವಾಬೊ ಸೊಸೊಬೆ ಅವರೂ ಫ್ರಾಂಚೈಸಿಗಳನ್ನು ಆಕರ್ಷಿಸಲು ವಿಫ‌ಲರಾದು.

        ಗಿಬ್ಸ್ ಕಡಿಮೆ ಮೊತ್ತ



        ದಕ್ಷಿಣ ಅಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಹರ್ಷಲ್‌ ಗಿಬ್ಸ್ ಮೂಲಧನವಾದ 50 ಸಾವಿರ ಡಾಲರ್‌ (25 ಲಕ್ಷ ರೂ.) ಮೊತ್ತಕ್ಕೇ ಮುಂಬಯಿ ಇಂಡಿಯನ್ಸ್‌ ಪಾಲಾದರು. ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಆಗಿದ್ದರೂ ಫ್ರಾಂಚೈಸಿಗಳು ಗಿಬ್ಸ್ ಖರೀದಿಗೆ ಆಸಕ್ತಿ ತೋರಲಿಲ್ಲ.

        ಆರ್‌ಸಿಬಿಗೆ ವಿನಯ್‌, ಮುರಳಿ

        ಆಸ್ಟ್ರೇಲಿಯ ವಿರುದ್ಧದ ಟಿ-20ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಆರ್‌. ವಿನಯ್‌ ಕುಮಾರ್‌ಗೆ ವರವಾಗಿ ಪರಿಣಮಿಸಿತು; ದೊಡ್ಡ ಮೊತ್ತಕ್ಕೆ ಮಾರಾಟವಾಗಲು ನೆರವಾಯಿತು.

        ಮೂಲಧನ 50 ಲಕ್ಷ ರೂ. ಹೊಂದಿದ್ದ ವಿನಯ್‌ ಕುಮಾರ್‌ ಅವರ ಹೆಸರು ಕರೆಯುತ್ತಿದ್ದಂತೆ ಡೆಕ್ಕನ್‌ ಚಾರ್ಜರ್ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು ಪೈಪೋಟಿಗೆ ಇಳಿದವು. ಇದರಿಂದ ಸ್ಫೂರ್ತಿಗೊಂಡ ರಾಜಸ್ಥಾನ್‌ ರಾಯಲ್ಸ್‌ ಕೂಡ ವಿನಯ್‌ ಕುಮಾರ್‌ ಅವರನ್ನು ಸೆಳೆಯಲು ಯತ್ನಿಸಿತು. ಇದರಿಂದ ಹರಾಜಿನ ಮೊತ್ತ 3 ಕೋಟಿ ದಾಟುತ್ತಿದ್ದಂತೆ ರಾಯಲ್‌ ಚಾಲೆಂಜರ್ ಬೆಂಗಳೂರು ದಿಢೀರನೆ ಮಧ್ಯ ಪ್ರವೇಶಿಸಿತು.



        ಆಗ ಡೆಕ್ಕನ್‌ ಚಾರ್ಜರ್ ಹಿಂದೆ ಸರಿಯಿತು. ಅನಂತರ ವಿನಯ್‌ ಕುಮಾರ್‌ ಸೆಳೆಯಲು ರಾಹುಲ್‌ ದ್ರಾವಿಡ್‌ ನಾಯಕತ್ವದ ರಾಜಸ್ಥಾನ್‌, ನೆಸ್‌ ವಾಡಿಯಾ ಮಾಲಕತ್ವದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಅನಿಲ್‌ ಕುಂಬ್ಳೆ ಮಾರ್ಗದರ್ಶಿಯಾಗಿರುವ ಆರ್‌ಸಿಬಿ ನಡುವೆ ಪೈಪೋಟಿ ಏರ್ಪಟ್ಟಿದ್ದರಿಂದ ವಿನಯ್‌ ಕುಮಾರ್‌ ಬೆಲೆ ಕ್ಷಣದಿಂದ ಕ್ಷಣಕ್ಕೆ ಜಿಗಿಯತೊಡಗಿತು.



        ಮಧ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಿಂದೆ ಸರಿದರೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪೈಪೋಟಿ ಮುಂದುವರಿಸಿತು. ಕೊನೆಗೆ ವಿನಯ್‌ ಕುಮಾರ್‌ ಮೊತ್ತ 5 ಕೋಟಿ ಗಡಿ ಮುಟ್ಟುತ್ತಿದ್ದಂತೆ ಕಿಂಗ್ಸ್‌ ಇಲೆವೆನ್‌ ಮೌನಕ್ಕೆ ಶರಣಾಯಿತು. ಇದರಿಂದ ಆರ್‌ಸಿಬಿ ತಂಡ ರಾಜ್ಯ ಆಟಗಾರನನ್ನು ಪಡೆಯುವಲ್ಲಿ ಯಶಸ್ವಿಯಾಯಿತು.



        ಇದಕ್ಕೂ ಮುನ್ನ ಆರ್‌ಸಿಬಿ ತಂಡ ಶ್ರೀಲಂಕಾದ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಅವರನ್ನು 11 ಲಕ್ಷ ರೂ.ಗೆ ಖರೀದಿಸಿತು. ಮುರಳೀಧರನ್‌ ಅವರನ್ನು ಖರೀದಿ ಮಾಡಿದ್ದನ್ನು ಸಮರ್ಥಿಸಿಕೊಂಡ ಆರ್‌ಸಿಬಿ ತಂಡದ ನಿರ್ದೇಶಕ ಸಿದ್ಧಾರ್ಥ್ ಮಲ್ಯ, 'ಮುರಳೀಧರನ್‌ ವಯಸ್ಸಿಗಿಂತ ಅವರ ಸಾಮರ್ಥ್ಯ ಮುಖ್ಯ. ಪರ್ಯಾಯ ಸ್ಪಿನ್ನರ್‌ ಸ್ಥಾನವನ್ನು ಮುರಳೀಧರನ್‌ ತುಂಬುವ ವಿಶ್ವಾಸವಿದೆ. ಡೇನಿಯಲ್‌ ವೆಟರಿ ರಾಷ್ಟ್ರೀಯ ತಂಡದ ಪರ ಆಡಬೇಕಾದ ಸಂದರ್ಭ ಎದುರಾದರೆ ಮುರಳೀಧರನ್‌ ಸೇವೆಯನ್ನು ಬಳಸಿಕೊಳ್ಳಬಹುದು' ಎಂದರು.

        ಜಡೇಜ ಟೈ-ಬ್ರೇಕರ್‌



        ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ ರವೀಂದ್ರ ಜಡೇಜ 10 ಕೋಟಿ ರೂ.ಗೆ (ಹೆಚ್ಚು ಕಡಿಮೆ 9.70 ಕೋಟಿ) ಮಾರಾಟವಾದರು. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆಟಗಾರರನ್ನು ಖರೀದಿಸಲು ತಂದದ್ದು ಕೇವಲ 10 ಕೋಟಿ ರೂ. ಮಾತ್ರ. ಜಡೇಜ ಖರೀದಿಗೆ ಚೆನ್ನೈ ಮತ್ತು ಡೆಕ್ಕನ್‌ ಚಾರ್ಜರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಸ್ಪಷ್ಟ ನಿಲುವಿನೊಂದಿಗೆ ಬಂದಿದ್ದ ಚೆನ್ನೈ ಫ್ರಾಂಚೈಸಿ ಇದ್ದಬದ್ದ ಹಣವನ್ನೆಲ್ಲ ಹೂಡಿ ಜಡೇಜ ಅವರನ್ನು ಟೈ-ಬ್ರೇಕರ್‌ನಲ್ಲಿ ಖರೀದಿಸುವಲ್ಲಿ ಯಶಸ್ವಿಯಾಯಿತು. ಅನಂತರ ಬಂದ ಕೆಲಸ ಮುಗಿಯಿತು ಎಂಬಂತೆ ಕೆಲವೇ ಕ್ಷಣಗಳಲ್ಲಿ ಹರಾಜು ಕೊಠಡಿಯಿಂದ ಜಾಗ ಖಾಲಿ ಮಾಡಿತು.

        ಜಡೇಜ ಅವರ ಖರೀದಿಯ ಗೌಜಿ ಯಾವ ಹಂತ ಮುಟ್ಟಿತೆಂದರೆ, ಒಂದೇ ಪ್ರಮಾಣದ ಮೊತ್ತವನ್ನು ಚೆಲ್ಲಿದ ಚೆನ್ನೈ ಮತ್ತು ಡೆಕ್ಕನ್‌ ಕೊನೆಗೆ ರಹಸ್ಯವಾಗಿ ಬೇರೊಂದು ಮೊತ್ತವನ್ನು ದಾಖಲಿಸಬೇಕಾಯಿತು. ಇಲ್ಲಿ ಹೆಚ್ಚುವರಿ ಮೊತ್ತ ದಾಖಲಿಸಿದ ಚೆನ್ನೈಗೆ ಜಡೇಜ ಒಲಿದರು!



        ಐಪಿಎಲ್‌: ಹರಾಜಾದವರು...
        ಆಟಗಾರ ಫ್ರಾಂಚೈಸಿ ಮೊತ್ತ (ಅಂದಾಜು, ರೂ.ಗಳಲ್ಲಿ)


        ರವೀಂದ್ರ ಜಡೇಜ ಚೆನ್ನೈ ಸೂಪರ್‌ಕಿಂಗ್ಸ್‌ 10 ಕೋಟಿ

        ಮಾಹೇಲ ಜಯವರ್ಧನ ಡೆಲ್ಲಿ ಡೇರ್‌ಡೆವಿಲ್ಸ್‌ 7 ಕೋಟಿ

        ವಿನಯ್‌ ಕುಮಾರ್‌ ಆರ್‌ಸಿಬಿ 5 ಕೋಟಿ ರೂ.

        ಮುತ್ತಯ್ಯ ಮುರಳೀಧರನ್‌ ಆರ್‌ಸಿಬಿ 1.1 ಕೋಟಿ

        ಬ್ರೆಂಡನ್‌ ಮೆಕಲಂ ಕೋಲ್ಕತಾ ನೈಟ್‌ರೈಡರ್ 4.5 ಕೋಟಿ

        ಹರ್ಷಲ್‌ ಗಿಬ್ಸ್ ಮುಂಬೈ ಇಂಡಿಯನ್ಸ್‌ 25 ಲಕ್ಷ

        ಬ್ರಾಡ್‌ ಹಾಜ್‌ ರಾಜಸ್ಥಾನ್‌ ರಾಯಲ್ಸ್‌ 2.37 ಲಕ್ಷ

        ಪಾರ್ಥಿವ್‌ ಪಟೇಲ್‌ ಡೆಕ್ಕನ್‌ ಚಾರ್ಜರ್ 3.25 ಕೋಟಿ

        ದಿನೇಶ್‌ ಚಾಂಡಿಮಲ್‌ ರಾಜಸ್ಥಾನ್‌ ರಾಯಲ್ಸ್‌ 25 ಲಕ್ಷ

        ಆಂದ್ರೆ ರಸೆಲ್‌ ಡೆಲ್ಲಿ ಡೇರ್‌ಡೆವಿಲ್ಸ್‌ 22.5 ಲಕ್ಷ

        ಮಿಚೆಲ್‌ ಜಾನ್ಸನ್‌ ಮುಂಬೈ ಇಂಡಿಯನ್ಸ್‌ 1.5 ಕೋಟಿ

        ಆರ್‌.ಪಿ. ಸಿಂಗ್‌ ಮುಂಬೈ ಇಂಡಿಯನ್ಸ್‌ 3 ಕೋಟಿ

        ಎಸ್‌. ಶ್ರೀಶಾಂತ್‌ ರಾಜಸ್ಥಾನ್‌ ರಾಯಲ್ಸ್‌ 2 ಕೋಟಿ

        ರಮೇಶ್‌ ಪೊವಾರ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 80 ಲಕ್ಷ

        ಬ್ರಾಡ್‌ ಹಾಗ್‌ ರಾಜಸ್ಥಾನ್‌ ರಾಯಲ್ಸ್‌ 90 ಲಕ್ಷ

        ಸುನೀಲ್‌ ನಾರಾಯಣ್‌ ಕೋಲ್ಕತಾ ನೈಟ್‌ರೈಡರ್ 35 ಲಕ್ಷ

        ರಾಬ್‌ ಪೀಟರ್‌ಸನ್‌ ಮುಂಬೈ ಇಂಡಿಯನ್ಸ್‌ 50 ಲಕ್ಷ

        ಕೆವಿನ್‌ ಕೂಪರ್‌ ರಾಜಸ್ಥಾನ್‌ ರಾಯಲ್ಸ್‌ 25 ಲಕ್ಷ

        ಜೇಮ್ಸ್‌ ಫೌಲಂಕರ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 80 ಲಕ್ಷ

        ಅಜರ್‌ ಮೆಹಮೂದ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 1 ಕೋಟಿ

        ತಿಸ್ಸರ ಪೆರೆರ ಮುಂಬೈ ಇಂಡಿಯನ್ಸ್‌ 650 ಸಾವಿರ ಡಾಲರ್‌ 3.25 ಕೋಟಿ

        ಮರ್ಚೆಂಟ್‌ ಡಿ ಲಾಂಗ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 25 ಲಕ್ಷ

        ಡ್ಯಾರನ್‌ ಬ್ರಾವೊ ಡೆಕ್ಕನ್‌ ಚಾರ್ಜರ್ 1 ಕೋಟಿ

        ಡೇನಿಯಲ್‌ ಹ್ಯಾರಿಸ್‌ ಡೆಕ್ಕನ್‌ ಚಾರ್ಜರ್ 3.5 ಕೊಟಿ

        ಡಗ್‌ ಬ್ರೇಸ್‌ವೆಲ್‌ ಡೆಲ್ಲಿ ಡೇರ್‌ಡೆವಿಲ್ಸ್‌ 25 ಲಕ್ಷ


        ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದವರು

        ಆಟಗಾರ ದೇಶ ಅಂದಾಜು ಮೊತ್ತ (ರೂ.) ತಂಡ

        ರವೀಂದ್ರ ಜಡೇಜ ಭಾರತ 10 ಕೋಟಿ ಚೆನ್ನೈ

        ಮಾಹೇಲ ಜಯವರ್ಧನ ಶ್ರೀಲಂಕಾ 7 ಕೋಟಿ ಡೆಲ್ಲಿ

        ಆರ್‌. ವಿನಯ್‌ ಕುಮಾರ್‌ ಭಾರತ 5 ಕೋಟಿ ಆರ್‌ಸಿಬಿ

        ಬ್ರೆಂಡನ್‌ ಮೆಕಲಂ ನ್ಯೂಜಿಲಂಡ್‌ 45 ಲಕ್ಷ ಕೆಕೆಆರ್‌

        ಸುನೀಲ್‌ ನಾರಾಯಣ್‌ ವೆಸ್ಟ್‌ ಇಂಡೀಸ್‌ 35 ಲಕ್ಷ ಕೆಕೆಆರ್‌

        ಪಾರ್ಥಿವ್‌ ಪಟೇಲ್‌ ಭಾರತ 32.5 ಲಕ್ಷ ಡೆಕ್ಕನ್‌

        * ಖರೀದಿಯಾಗದ ಪ್ರಮುಖರು

        ಆಟಗಾರ ದೇಶ ಮೂಲಧನ (ರೂ.)


        ವಿವಿಎಸ್‌ ಲಕ್ಷ್ಮಣ್‌ ಭಾರತ 2 ಕೋಟಿ

        ಗ್ರೇಮ್‌ ಸ್ವಾನ್‌ ಇಂಗ್ಲಂಡ್‌ 2 ಕೋಟಿ

        ಜೇಮ್ಸ್‌ ಆಡರ್ಸನ್‌ ಇಂಗ್ಲಂಡ್‌ 1.5 ಕೋಟಿ

        ಅಜಂತ ಮೆಂಡಿಸ್‌ ಶ್ರೀಲಂಕಾ 25 ಲಕ್ಷ

        ಪೀಟರ್‌ ಸಿಡ್ಲ್ ಆಸ್ಟ್ರೇಲಿಯ 1 ಕೋಟಿ

        * ಹರಾಜು ಪ್ರಕ್ರಿಯೆ

        ಒಟ್ಟು ಆಟಗಾರರು 144


        ಒಟ್ಟು ಹೂಡಿಕೆ 55 ಕೋಟಿ

        ಖರೀದಿಗೆ ಅವಕಾಶ 37

        ಹರಾಜಾದಾವರು 25

        ಹರಾಜಾಗದವರು 119

        ಇಂದಿನಿಂದ ಆಟಗಾರರ ವರ್ಗಾವಣೆ

        ರವಿವಾರದಿಂದ ಆಟಗಾರರ ವರ್ಗಾವಣೆಗೆ ಎರಡನೇ ಬಾರಿ ಅವಕಾಶ ಕಲ್ಪಿಸಲಾಗಿದೆ. ಫ್ರಾಂಚೈಸಿಗಳು ಹರಾಜಿನಲ್ಲಿ ಖರೀದಿ ಆಗದೇ ಉಳಿದ ಆಟಗಾರರನ್ನು ಸೆಳೆಯಬಹುದು. ಗಾಯಗೊಂಡ ಆಟಗಾರರ ಬದಲಿಗೆ ಅದೇ ಮೂಲಧನ ಹೊಂದಿರುವ ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಬಹುದಾಗಿದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus