ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಈ ವರ್ಷವೂ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ದಿನೇ ದಿನೇ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಆರು ಪ್ರಕರಣಗಳು ದೃಢಪಟ್ಟಿವೆ. ಇದಲ್ಲದೆ ಕೆಲವೆಡೆ ಶಂಕಿತ ಪ್ರಕರಣಗಳು ಕಂಡುಬರುತ್ತಿದ್ದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.ಹೊಸನಗರ ತಾಲೂಕಿನಲ್ಲಿ ಶನಿವಾರ ಶಂಕಿತ ಮಂಗನಕಾಯಿಲೆ ಪ್ರಕರಣವೊಂದು ಪತ್ತೆಯಾಗಿದೆ. ಹೊಸನಗರ ತಾಲೂಕಿನ ಬುಕ್ಕಿಕೆರೆ ಗ್ರಾಮದ ನಿವಾಸಿ ಅಪ್ಪಣ್ಣ ಶೆಟ್ಟಿ (51) ಶಂಕಿತ ಮಂಗನಕಾಯಿಲೆಗೆ ತುತ್ತಾದ ವ್ಯಕ್ತಿ ಎಂದು ಗುರತಿಸಲಾಗಿದೆ. ಆತ ಕಳೆದ ಎರಡು ದಿನಗಳ ಹಿಂದೆಯೇ ಶಿವಮೊಗ್ಗ ನಗರದ ಖಾಸಗಿ ಪ್ರಿಯಾಂಕ ಆಸ್ಪತ್ರೆಗೆ ದಾಖಲಾಗಿದ್ದಾರೆನ್ನಲಾಗಿದೆ. ಈ ವಿಷಯ ತಿಳಿದ ಶಿವಮೊಗ್ಗ ಜಿಲ್ಲಾ ಆರೋಗ್ಯಧಿಕಾರಿ ಚೆನ್ನಬಸಪ್ಪ ಹಾಗೂ ಪಂಚಾಯತ್ ಸದಸ್ಯ ಕಲಗೋಡು ರತ್ನಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.ಕೆಎಫ್‌ಡಿ ವ್ಯಾಕ್ಸಿನೇಶನ್ ವಿಳಂಬಈ ವರ್ಷ ಕೆಎಫ್‌ಡಿ ವ್ಯಾಕ್ಸಿನೇಶನ್ ಪೂರೈಸುವಲ್ಲಿ ಆಗಿರುವ ವಿಳಂಬ ಕಾಯಿಲೆ ಉಲ್ಬಣಿಸಲು ಕಾರಣವಾಗಿದ್ದು, ಈಗ ಎಚ್ಚೆತ್ತುಗೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ ತತ್‌ಕ್ಷಣ ವ್ಯಾಕ್ಸಿನ್ ತರಿಸಲು ಮುಂದಾಗಿದೆ.ಚಿಕಿತ್ಸೆಗಾಗಿ ಕ್ರಮಮಂಗನಕಾಯಿಲೆ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ಈ ಭಾಗದ ಪ್ರತಿ ಮನೆಮನೆಗೆ ಆರೋಗ್ಯ ಕಾರ್ಯಕರ್ತರನ್ನು ಕಳುಹಿಸುತ್ತಿದೆ. ಜ್ವರ ಕಾಣಿಸಿಕೊಂಡವರ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದೆ. ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವಾಹನ ಬಳಸಿಕೊಂಡು ಹಳ್ಳಿಗಳಲ್ಲಿ ಆರೋಗ್ಯ ಕಾರ್ಯಕರ್ತರ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತ್ಯೇಕ ಮೊಬೈಲ್ ಯೂನಿಟ್ ಒಂದನ್ನು ಸಿದ್ಧಗೊಳಿಸಲಾಗಿದ್ದು, ಇದು ರೋಗ ಕಾಣಿಸಿಕೊಂಡ ಭಾಗದಲ್ಲಿ ಔಷಧ ವಿತರಣೆ ಮತ್ತು ಚಿಕಿತ್ಸಾ ಕಾರ್ಯ ನಡೆಸುತ್ತಿದೆ.ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೋಗ ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಚೆನ್ನಬಸಪ್ಪ ತಿಳಿಸಿದ್ದಾರೆ.ಇಲ್ಲಿ ಚಿಕಿತ್ಸೆ ನೀಡಿದಾಗ್ಯೂ ಜ್ವರ ಕಡಿಮೆಯಾಗದಿದ್ದಲ್ಲಿ, ಅಂತಹ ತೀರಾ ಬಡವರಿಗೆ ಹೆಚ್ಚುವರಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದವರು ಹೇಳಿದ್ದಾರೆ.ರೋಗ ಹೇಗೆ ಬರುತ್ತದೆ?ಇದು ಮಂಗನಿಂದ ಮಾನವರಿಗೆ ಬರುವ ಕಾಯಿಲೆಯಾಗಿದ್ದು, ಕಾಡಿನಲ್ಲಿ ಇರುವ ಇಂಬಳ ಅಥವಾ ಜಿಗಣಿಯಿಂದ ಬರುತ್ತದೆ. ಕಾಡಿಗೆ ಹೋಗುವ ರೈತರು ಮತ್ತು ಕೂಲಿ ಕಾರ್ಮಿಕರಲ್ಲಿ ಜಿಗಣಿ ಕಚ್ಚಿ ಮಂಗನ ಕಾಯಿಲೆಯ ವೈರಸ್ ಹರಡುತ್ತದೆ. ಆರಂಭದಲ್ಲಿ ಜ್ವರ ಕಾಣಿಸಿಕೊಂಡು ತೀವ್ರ ಸ್ವರೂಪಕ್ಕೆ ತಿರುಗುತ್ತದೆ. ತತ್‌ಕ್ಷಣ ಚಿಕಿತ್ಸೆ ನೀಡಿದಲ್ಲಿ ಸುಲಭವಾಗಿ ಗುಣಮುಖರಾಗುತ್ತಾರೆ. ಅನಗತ್ಯ ವಿಳಂಬ ಮಾಡಿದಲ್ಲಿ ಜೀವಕ್ಕೆ ಸಂಚಕಾರವಾಗಬಹುದು.ಈ ಕಾಯಿಲೆ ಸಾಮಾನ್ಯವಾಗಿ ಬೇಸಗೆ ಆರಂಭವಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತದೆ. ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದೂ ಕರೆಯಲ್ಪಡುವ ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆ ಬೀಳುತ್ತಿದ್ದಂತೆ ಈ ಕಾಯಿಲೆ ತನ್ನಿಂದತಾನೇ ನಿಯಂತ್ರಣಕ್ಕೆ ಬರುತ್ತದೆ.ಮುಂಜಾಗರುಕತಾ ಕ್ರಮಕಾಡಿಗೆ ಹೋಗುವವರು ಡಿಎಂಪಿ ಎಣ್ಣೆಯನ್ನು ಮೈಗೆ ಸವರಿಕೊಂಡು ಹೋಗಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಇದರಿಂದಾಗಿ ಜಿಗಣಿ ಕಚ್ಚುವುದನ್ನು ತಡೆಯಲು ಸಾಧ್ಯ. ಜತೆಗೆ ಕೆಎಫ್‌ಡಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು.