Udayavani | Feb 04, 2012
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕ್ಷಣದಲ್ಲೂ ಸಾರ್ವತ್ರಿಕ ಚುನಾವಣೆ ಎದುರಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಕ್ಷ ಭರ್ಜರಿ ಚುನಾವಣಾ ತಯಾರಿ ಆರಂಭಿಸಿದೆ. ಶನಿವಾರ ನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದೆ. ಜತೆಗೆ, ಸಣ್ಣ-ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ರವಾನಿಸಿದೆ.

ಅಲ್ಲದೆ, ಆಡಳಿತಾರೂಢ ಬಿಜೆಪಿಯ ವೈಫಲ್ಯಗಳನ್ನು ಹೆಕ್ಕಿ ಜನತೆಗೆ ತೋರಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪರೇಷೆ ಮತ್ತು ಪಕ್ಷದ ಬಲವರ್ಧನೆಗೆ ರೂಪಿಸಬೇಕಾದ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಕೂಲಂಕಷ ಚರ್ಚೆ ನಡೆಸಲಾಯಿತು.
ಅರಮನೆ ಮೈದಾನದಲ್ಲಿ ಶನಿವಾರ ಇಡೀ ದಿನ ನಡೆದ ಸಭೆಯಲ್ಲಿ ಕಾಂಗ್ರೆಸ್‌ನ ಎಲ್ಲ ಹಿರಿಯ ಮತ್ತು ಕಿರಿಯ ನಾಯಕರು, ಕೇಂದ್ರದ ಸಚಿವರು ಪಾಲ್ಗೊಂಡಿದ್ದರು. ರಾಜ್ಯದ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸಿŒ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿ ಆಡಳಿತ ವೈಫಲ್ಯವನ್ನು ತೀವ್ರವಾಗಿ ಖಂಡಿಸಲಾಯಿತು.

ಅಲ್ಲದೆ, ಲೋಕಾಯುಕ್ತರ ನೇಮಕ-ವರದಿ ಜಾರಿ, ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ, ಪ್ರಾದೇಶಿಕ ಅಸಮಾನತೆ ಸರಿಪಡಿಸಲು 371 ವಿಧಿ ಜಾರಿಗೆ ಒತ್ತಾಯ ಸೇರಿದಂತೆ ಸಭೆಯಲ್ಲಿ 10 ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಇಡೀ ದಿನದ ಸಭೆಯು ಯಾವುದೇ ಗೊಂದಲ, ಆರೋಪ-ಪ್ರತ್ಯಾರೋಪಗಳಿಲ್ಲದೆ ಸುಸೂತ್ರವಾಗಿ ನಡೆಯಿತು.

ಕೆಪಿಸಿಸಿ ಸದಸ್ಯರು, ಶಾಸಕರು, ಕೇಂದ್ರದ ಸಚಿವರು, ಹಿರಿಯ ನಾಯಕರು, ತಾಲೂಕು-ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮೋಟಮ್ಮ ಉಪಸ್ಥಿತರಿದ್ದರು. ಹಿರಿಯ ನಾಯಕರಾದ ಎಚ್. ವಿಶ್ವನಾಥ್, ಎಚ್.ಕೆ. ಪಾಟೀಲ್, ಬಿ.ಎಲ್. ಶಂಕರ್, ಡಿ.ಕೆ. ಶಿವಕುಮಾರ್ ಮತ್ತಿತ್ತರರು ಪಾಲ್ಗೊಂಡಿದ್ದರು.
ಸಭೆ ಉದ್ಘಾಟಿಸಿ ಮಾತನಾಡಿದ ಮಧುಸೂದನ್ ಮಿಸಿŒ, ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 20 ಸಾವಿರ ಕೋಟಿ ರೂ.ಗಳ ಅನುದಾನ ನೀಡಿವೆ. ಆದರೆ, ಅದರ ಒಂದು ಭಾಗದಷ್ಟು ಹಣವನ್ನು ಬಿಜೆಪಿ ಸರ್ಕಾರ ಖರ್ಚು ಮಾಡಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಹೀಗಿರುವಾಗ, ಭ್ರಷ್ಟ ಮತ್ತು ಕೋಮವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲ ಸದಸ್ಯರು ಪಣ ತೊಡಬೇಕು ಎಂದು ಮನವಿ ಮಾಡಿದರು.
ಮಾಧ್ಯಮದಿಂದ ದೂರವಿರಿ:

ಪಕ್ಷದೊಳಗೆ ಆಂತರಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ನಾಲ್ಕು ಗೋಡೆಗಳ ನಡುವೆ ಅಥವಾ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದುಬಿಟ್ಟು, ಸಣ್ಣ ವಿಚಾರ, ಸಮಸ್ಯೆಗಳನ್ನು ಮಾಧ್ಯಮದ ಮುಂದೆ ತೋಡಿಕೊಳ್ಳುವುದು ಸರಿಯಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಯನ್ನೂ ಗಮನಿಸುತ್ತಿದ್ದೇನೆ. ಹೀಗಾಗಿ, ಇನು °ಮುಂದೆ ಪಕ್ಷದ ನಾಯಕರು, ಸದಸ್ಯರು ಏನೇ ಅಸಮಾಧಾನ, ನೋವು ಇದ್ದರೂ ಅದನ್ನು ಮಾಧ್ಯಮದ ಮುಂದೆ ಬಹಿಂಗಪಡಿಸಬಾರದು ಎಂದು ಮಿಸಿŒ ಎಲ್ಲಾ ನಾಯಕರಿಗೂ ತಾಕೀತು ಮಾಡಿದರು.
ಸಭೆಯ 8 ನಿರ್ಣಯಗಳು
- ಕೃಷಿ, ವಿದ್ಯುತ್, ಬರ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಬಿಜೆಪಿ ಸರ್ಕಾರದ ವೈಫಲ್ಯ ಜನರ ಮುಂದಿಡುವುದು.
- ಲೋಕಾಯುಕ್ತ ವರದಿ ಜಾರಿ, ಸ್ವೀಕರ್ ತೀರ್ಮಾನಕ್ಕೆ ಸುಪ್ರಿಂಕೋರ್ಟ್ ಹಾಗೂ ಲೋಕಾಯುಕ್ತರ ನೇಮಕದಲ್ಲಿ ಸರ್ಕಾರದ ನಿರ್ಲಕ್ಷÂಕ್ಕೆ ಖಂಡನೆ
- ಜಾತಿ, ಹಣ ಬಲದ ರಾಜಕಾರಣ ಮತ್ತು ಸಂಘ ಪರಿವಾರದ ಹಿಡಿತದಲ್ಲಿ ಬಿಜೆಪಿ ಸರ್ಕಾರವಿರುವುದನ್ನು ಜನರ ಮುಂದಿಡುವುದು.
- ಪ್ರಾದೇಶಿಕ ಅಸಮಾನತೆ ಸರಿಪಡಿಸಲು 371 ವಿಧಿ ಜಾರಿಗೆ ಒತ್ತಾಯ.
- ಬಿಬಿಎಂಪಿಯಲ್ಲಿನ ಅವ್ಯವಹಾರ-ಹಗರಣಗಳ ವಿರುದ್ಧ ಹೋರಾಟ
- ಯುಪಿಎ 1 ಮತ್ತು 2ನೇ ಅವಧಿ ಸಾಧನೆ ಜನರಿಗೆ ಮನದಟ್ಟು ಮಾಡಿಕೊಡಲು ನಿರ್ಧಾರ.
- ವಿದ್ಯಾರ್ಥಿ, ಯುವಜನತೆ ಮತ್ತು ಮಹಿಳೆಯರ ಸಮಸ್ಯೆಗೆ ಪರಿಹಾರ.
- ಅಲ್ಪಸಂಖ್ಯಾತರ ಸಮುದಾಉಗಳಿಗೆ ಒಳ ಮೀಸಲು ನೀಡುತ್ತಿರುವ ಯುಪಿಎ ಸರ್ಕಾರಕ್ಕೆ ಅಭಿನಂದನೆ.
ಪಕ್ಷ ಚಟುವಟಿಕೆ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಪಕ್ಷದೊಳಗೆ ಕೆಲವರು ಗುಂಪುಗಾರಿಕೆ ನಡೆಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ¨ªಾರೆ. ಇಂಥ ನಾಯಕರ ವಿರುದ್ಧ ಪಕ್ಷವು ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಬೇಕೆಂದು ಕೆಲವು ನಾಯಕರು ಸಭೆಯಲ್ಲಿ ಒತ್ತಾಯಿಸಿದರು. ಜತೆಗೆ ಬೆಂಗಳೂರು ವಿಭಾಗ ಅಧ್ಯಕ್ಷ ಸ್ಥಾನ ಸೇರಿದಂತೆ ಬ್ಲಾಕ್ ಮಟ್ಟ ಮತ್ತಿತರ ಭಾಗಗಳಲ್ಲಿ ಖಾಲಿಯಿರುವ ಪದಾಧಿಕಾರಿಗಳ ಹುದ್ದೆ ಭರ್ತಿ ಮಾಡಬೇಕು ಎನ್ನುವ ಒತ್ತಾಯ ಕೂಡ ಸಭೆಯಲ್ಲಿ ವ್ಯಕ್ತವಾಯಿತು.