Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನವೆಂಬರ್‌ 1
    • ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ
    • ಡಿ.ವಿ.ಸದಾನಂದಗೌಡ
    • ಈ ಬಾರಿಯ ರಾಜ್ಯೋತ್ಸವ ದಿನ (ನ.1)ದಿಂದ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸುವುದಾಗಿ...

      • Udayavani | Feb 05, 2012

        ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೇರಿದ ಕಟ್ಟಡಗಳಲ್ಲಿ ಈ ಬಾರಿಯ ರಾಜ್ಯೋತ್ಸವ ದಿನ (ನ.1)ದಿಂದ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.


        ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹೊರ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಇಲ್ಲಿ ಪ್ರಕಟಿಸುವುದು ಸರಿಯಲ್ಲ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಶೀಘ್ರ ಸಂಪುಟ ಸಭೆ ಮುಂದಿಟ್ಟು ಪ್ರಕಟಿಸಲಾಗುವುದು ಎಂದು ಹೇಳಿದರು.

        ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ಸಿಗಬೇಕು. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸೇರಿದಂತೆ ಮತ್ತಿತರ ಶಿಫಾರಸ್ಸು ಒಳಗೊಂಡಿರುವ ಸರೋಜಿಷಿ ಮಹಿಷಿ ವರದಿ ಪರಿಷ್ಕರಣೆಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

        ಕನ್ನಡ ಭಾಷೆ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಭಾಷಾ ಸೂತ್ರ ಕುರಿತು ಸರ್ಕಾರ ಕೈಗೊಳ್ಳುವ ತೀರ್ಮಾನಗಳು ನ್ಯಾಯಾಲಯದ ಮಧ್ಯಪ್ರವೇಶದಿಂದ ಅನುಷ್ಟಾನಗೊಳ್ಳುತ್ತಿಲ್ಲ. ಹೀಗಾಗಿ, ಈ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಕಾನೂನು ಬದ್ಧ ನಿಯಮ ರೂಪಿಸಬೇಕಿದೆ ಎಂದು ಹೇಳಿದರು.

        ಹೊರ ರಾಜ್ಯಗಳಲ್ಲಿರುವ ಕನ್ನಡ ಅಧ್ಯಯನ ಕೇಂದ್ರಗಳು ಉತ್ತಮವಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ. ಕನ್ನಡ ಭಾಷೆ, ಕನ್ನಡಿಗರ ಅಭಿವೃದ್ಧಿ ಕುರಿತಂತೆ ಪ್ರಾಧಿಕಾರದ ವತಿಯಿಂದ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

        ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ನವೆಂಬರ್‌ 1 ರಂದು ಸರ್ಕಾರಿ ಸೇರಿದಂತೆ ಎಲ್ಲ ಕಚೇರಿ, ಸಂಸ್ಥೆಗಳು ಕನ್ನಡ ಧ್ವಜ ಹಾರಿಸುವ ಸಂಬಂಧ ಕಾನೂನು ಬದ್ಧ ಆದೇಶ ಹೊರಡಿಸುವ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಾಧಿಕಾರದ ಈ ಪ್ರಸ್ತಾವನೆಗೆ ನನ್ನ ಬೆಂಬಲವಿದೆ ಎಂದರು.

        ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಕನ್ನಡ ಶಾಲೆ ಮುಚ್ಚುತ್ತಿರುವುದು ಕಳವಳಕಾರಿ ಸಂಗತಿ. ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿ ಶಾಲೆ ಮುಚ್ಚದಂತೆ ಕ್ರಮ ಕೈಗೊಳ್ಳಬೇಕು. ನಮ್ಮ ಸರ್ಕಾರ ಹಾಗೂ ನೆರೆ ರಾಜ್ಯಗಳ ಸರ್ಕಾರ ಸೇರಿ ಒಂದು ಒಪ್ಪಂದಕ್ಕೆ ಬರಬೇಕು. ಗಡಿ ಭಾಗದ ಎರಡೂ ಕಡೆ 20 ಕಿ.ಮೀ. ವ್ಯಾಪ್ತಿಯಲ್ಲಿ ಪರಸ್ಪರ ಎರಡೂ ಭಾಷಣೆಗಳ ಶಾಲೆಗಳನ್ನು ಆರಂಭಿಸಬೇಕು. ಇದೊಂದೇ ಪರಿಹಾರ ಎಂದು ಸಲಹೆ ನೀಡಿದರು.

        1 ರಿಂದ 10 ನೇ ತರಗತಿ ವರೆಗೆ ಎಲ್ಲ ಭಾಷಿಕ ವಿದ್ಯಾರ್ಥಿಗಳು ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಹೇಳಿದರು.

        ಮನವಿ

        ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯೋತ್ಸವ ದಿನದಂದು ಕನ್ನಡ ಧ್ವಜ ಹಾರಿಸುವ ಸಂಬಂಧ ಕಾನೂನು ಬದ್ಧ ನಿಯಮ ತಂದು ಸುತ್ತೋಲೆ ಹೊರಡಿಸಬೇಕು. ಕನಿಷ್ಠ ಹತ್ತು ವರ್ಷ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಶೇಕಡ 5 ರಷ್ಟು ಒಳಮೀಸಲಾತಿ ಎಂಬ ನಿಯಮದ ಬದಲಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಎಂಬ ಸರ್ಕಾರಿ ಆದೇಶ ಸೇರ್ಪಡೆ ಮಾಡಬೇಕು. ವೃತ್ತಿ ಶಿಕ್ಷಣ ಹಾಗೂ ಪದವಿ ಶಿಕ್ಷಣದಲ್ಲಿ ಕನ್ನಡ ಪಠ್ಯ ಕಡ್ಡಾಯಗೊಳಿಸಬೇಕು. ಆದಿಕವಿ ಪಂಪನ ಹೆಸರಿನಲ್ಲಿ ಪ್ರಾಚೀನ ಕನ್ನಡ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

        ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್‌.ಆಚಾರ್ಯ, ಬೆಳಗಾವಿ ಮಾಜಿ ಮೇಯರ್‌ ಸಿದ್ಧನಗೌಡ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

        ಕಾರ್ಯಕ್ರಮದಲ್ಲಿ 2011-12 ನೇ ಸಾಲಿನಲ್ಲಿ ಹೊರ ರಾಜ್ಯದ ಏಳು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ 103 ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ತಲಾ 20 ಸಾವಿರ ರೂ.ಗಳಂತೆ ವಿದ್ಯಾರ್ಥಿ ವೇತನ ಚೆಕ್‌ ವಿತರಿಸಲಾಯಿತು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus