Udayavani | Feb 05, 2012
ಬೆಂಗಳೂರು: ಭೂಹಗರಣ ಸಂಬಂಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ 1ನೇ ದೂರಿನ ಆರೋಪಿಗಳಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕುಟುಂಬದವರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನ್ಯಾಯಾಲಯ ಶನಿವಾರ ಸಮನ್ಸ್ ಜಾರಿಗೊಳಿಸಿದೆ.
ಮಾ.3ರಂದು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ, ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು ಶಾಸಕ ಕೃಷ್ಣಯ್ಯ ಶೆಟ್ಟಿಗೆ ಸೂಚಿಸಲಾಗಿದೆ.
ರಾಚೇನಹಳ್ಳಿಯಲ್ಲಿ ಅಕ್ರಮ ಡಿನೋಟಿಫಿಕೇಷನ್ ಮತ್ತು ವೈಯಾಲಿಕಾವಲ್ ಗೃಹ ನಿರ್ಮಾಣ ಸಂಘದ ಬಡಾವಣೆಗೆ ಸೇರಿದ ಸಾರ್ವಜನಿಕ ರಸ್ತೆಯನ್ನು ನಿವೇಶನವಾಗಿ ಪರಿವರ್ತಿಸಿದ ಪ್ರಕರಣ ಸಂಬಂಧ ಈ ಸಮನ್ಸ್ ಜಾರಿಗೊಳಿಸಲಾಗಿದೆ.
ಆದರೆ, ರಾಚೇನಹಳ್ಳಿ ಪ್ರಕರಣದಲ್ಲಿ ಯಡಿಯೂರಪ್ಪ ಹಾಗೂ ಪುತ್ರರು ಈಗಾಗಲೇ ಹೈಕೋರ್ಟ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ, ವಿಚಾರಣೆಗೆ ಹಾಜರಾದರೂ ಅವರಿಗೆ ಬಂಧನದ ಭೀತಿ ಇರುವುದಿಲ್ಲ. ಒಂದು ವೇಳೆ ವಿಚಾರಣೆಗೆ ಹಾಜರಾಗದೆ ಹೈಕೋರ್ಟ್ ಹಾಕಿರುವ ಷರತ್ತುಗಳ ಉಲ್ಲಂಘನೆ ಆದರೆ ಮಾತ್ರ ಆರೋಪಿಗಳ ನಿರೀಕ್ಷಣಾ ಜಾಮೀನು ರದ್ದುಗೊಳ್ಳುವ ಸಾಧ್ಯತೆ ಇದೆ.
ಗಂಭೀರತೆ ಅರಿತು ಸಮನ್ಸ್:
ಈ ಪ್ರಕರಣದಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಬೇಕೆ ಬೇಡವೇ ಎನ್ನುವ ಬಗ್ಗೆ ನ್ಯಾಯಾಧೀಶ ಸುಧೀಂದ್ರ ರಾವ್ ತೀರ್ಪು ಕಾಯ್ದಿರಿಸಿದ್ದರು. ಅದರಂತೆ ಶನಿವಾರ ಆದೇಶ ನೀಡಿದ ನ್ಯಾಯಾಧೀಶರು, 'ಈಗಾಗಲೇ ಹೈಕೋರ್ಟ್ ಆರೋಪಿಗಳ ವಿರುದ್ಧದ 2 ಮತ್ತು 3ನೇ ದೂರಿನಲ್ಲಿ ಮಹತ್ವದ ತೀರ್ಪು ನೀಡಿದೆ. ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿ ನೀಡಿದ ತೀರ್ಪು ಪರಿಶೀಲಿಸಲಾಗಿದೆ. ಆ ಆಧಾರದಲ್ಲಿ ಪ್ರಕರಣದ ಗಂಭೀರತೆ ಅರಿತು ವಿಚಾರಣೆಗೆ ಸಮನ್ಸ್ ಜಾರಿಗೊಳಿಸಲಾಗಿದೆ' ಎಂದು ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧದ 1ನೇ ದೂರಿನಲ್ಲಿನ ಆರೋಪಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಈಗಾಗಲೇ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಲ್ಲಿಸಿರುವ ಈ ವರದಿಯಲ್ಲಿ ಯಡಿಯೂರಪ್ಪ ಮತ್ತು ಕುಟುಂಬದ ಸದಸ್ಯರು ರಾಚೇನಹಳ್ಳಿ ಡಿನೋಟಿಫಿಕೇಷನ್‌ನಲ್ಲಿ ತಪ್ಪು ಮಾಡಿದ್ದು, ಕಾನೂನಿನ ಉಲ್ಲಂಘನೆ ಆಗಿದೆ ಎಂದು ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದಾರೆ.
ಇದೇ ರೀತಿ ಕಳೆದ ವರ್ಷ ಆಗಸ್ಟ್ 8ರಂದು ಸಿರಾಜಿನ್ ಬಾಷಾ ಅವರು ನೀಡಿದ 2 ಮತ್ತು 3ನೇ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಬಳಿಕ ಈ ಪ್ರಕರಣಗಳಲ್ಲಿ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರನ್ನು ಜೈಲಿಗೂ ಕಳುಹಿಸಲಾಗಿತ್ತು.