Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಫ್ಘಾನಿಸ್ಥಾನದಲ್ಲಿ ಅಮೆರಿಕದ ವಿಶೇಷ ಪಡೆ
      • Udayavani | Feb 05, 2012

        ವಾಷಿಂಗ್ಟನ್‌: ಅಫ್ಘಾನಿಸ್ಥಾನದಲ್ಲಿ ನ್ಯಾಟೊ ನೇತೃತ್ವದ ಸೈನಿಕ ಕಾರ್ಯಾಚರಣೆಯನ್ನು 2014ಕ್ಕೆ ಮುಕ್ತಾಯಗೊಳಿಸುವುದಾಗಿ ಅಮೆರಿಕ ಹೇಳಿದ್ದರೂ ಬಂಡುಕೋರ ನಾಯಕರನ್ನು ಬೇಟೆಯಾಡಲು ಮತ್ತು ಅಫ್ಘಾನ್‌ ಪಡೆಗೆ ತರಬೇತಿ ನೀಡುವ ಸಲುವಾಗಿ ವಿಶೇಷ ಕಾರ್ಯಾಚರಣೆ ಪಡೆಯನ್ನು ನಿಯೋಜಿಸುವ ಬಗ್ಗೆ ಚಿಂತಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

        ಅಧ್ಯಕ್ಷ ಬರಾಕ್‌ ಒಬಾಮಾ ಈ ಪ್ರಸ್ತಾವನೆಯನ್ನು ಅನುಮೋದಿಸಿದರೆ ಇದೊಂದು ಮಹತ್ವದ ಬೆಳವಣಿಗೆಯಾಗಲಿದೆ. ಅಫ್ಘಾನ್‌ನಲ್ಲಿ ತಾಲಿಬಾನ್‌ ವಿರುದ್ಧ ಕಾರ್ಯಾಚರಣೆ ನಡೆಸಲು ಒಬಾಮಾ ಈಗಾಗಲೇ 32,000 ಹೆಚ್ಚುವರಿ ಯೋಧರನ್ನು ರವಾನಿಸಿದ್ದಾರೆಂದು ಪೆಂಟಗನ್‌ ಅಧಿಕಾರಿಯೊಬ್ಬರನ್ನು ಉದ್ಧರಿಸಿ 'ದ ನ್ಯೂಯಾರ್ಕ್‌ ಟೈಮ್‌' ವರದಿ ಮಾಡಿದೆ.

        ಯೋಜನೆಯ ಪ್ರಕಾರ ಅಫ್ಘಾನ್‌ನಲ್ಲಿ ಪೊಲೀಸ್‌ ಕೆಲಸ ಮಾಡುತ್ತಿರುವ ಸಾಂಪ್ರದಾಯಿಕ ಪಡೆ ಮೊದಲಾಗಿ ನಿರ್ಗಮಿಸಬೇಕು. ಆದರೆ ಸಾವಿರಾರು ವಿಶೇಷ ಕಾರ್ಯಾಚರಣೆ ಪಡೆ ಯೋಧರು ಅಫ್ಘಾನ್‌ನಲ್ಲಿ ಉಳಿಯುತ್ತಾರೆ. ಈ ಯೋಧರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ ಅಮೆರಿಕ ಪಡೆಯ ಶೇಕಡಾವಾರು ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಪತ್ರಿಕೆ ಹೇಳಿದೆ.

        ಅಫ್ಘಾನ್‌ನಿಂದ ಪಡೆಯನ್ನು ಹಿಂಪಡೆದುಕೊಳ್ಳುವ ಕಾರ್ಯತಂತ್ರ ಇರಾಕ್‌ಗಿಂತ ಭಿನ್ನವಾಗಿದೆ. ಇರಾಕ್‌ನಿಂದ ಸಮಸ್ತ ಅಮೆರಿಕ ಪಡೆ ನಿರ್ಗಮಿಸಿದೆ. ಮುಂದಿನ ದಿನಗಳಲ್ಲಿ ಅಫ್ಘಾನ್‌ ಮೇಲಾಗಲಿರುವ ಯಾವುದೇ ರೀತಿಯ ಭೀತಿವಾದಿ ದಾಳಿಯನ್ನು ಸಂಪೂರ್ಣವಾಗಿ ವಿಫ‌ಲಗೊಳಿಸಲು ಅಂತೆಯೇ ಅಫ್ಘಾನ್‌ ಸೈನ್ಯಕ್ಕೆ ಕಠಿನ ಕಾರ್ಯಾಚರಣೆಯ ತರಬೇತಿ ನೀಡುವ ಸಲುವಾಗಿ ವಿಶೇಷ ಕಾರ್ಯಾಚರಣೆ ಪಡೆ ಉಳಿಯಲಿದೆ. ಗ್ರೀನ್‌ ಬೆರೆಟ್ಸ್‌ ಎಂದು ಅರಿಯಲಾಗುವ ಆರ್ಮಿ ಸ್ಪೆಷಲ್‌ ಫೋರ್ಸ್‌ನ ಕಾರ್ಯಭಾರ ಇನ್ನು ಮುಂದೆ ಹೆಚ್ಚಾಗಲಿದೆ.

        ವಿದೇಶಗಳಲ್ಲಿ ಸದ್ದಿಲ್ಲದ ಕಾರ್ಯಾಚರಣೆ ನಡೆಸುವುದಕ್ಕಾಗಿ ಹಿಂದಿನ ಅಧ್ಯಕ್ಷ ಜಾನ್‌ ಎಫ್. ಕೆನಡಿ 1960ರಲ್ಲಿ ಗ್ರೀನ್‌ ಬೆರೆಟ್ಸ್‌ ಪ್ರಾರಂಭಿಸಿದ್ದಾರೆ. ವಿದೇಶಿ ನೆಲದಲ್ಲಿ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿತುಕೊಂಡು ಸ್ಥಳೀಯ ಪಡೆಯನ್ನು ತರಬೇತುಗೊಳಿಸುವ ವಿಶೇಷ ಪಡೆಯ ಕಾರ್ಯಾಚರಣೆಯನ್ನು ಕೆನಡಿ 'ವಿದೇಶಿ ಆಂತರಿಕ ಭದ್ರತೆ' ಎಂದು ಕರೆದಿದ್ದರು.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus