Udayavani | Feb 05, 2012
ಮುಂಬಯಿ: ಅವಿಭಜಿತ ದ.ಕ.ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ ಅಂಧೇರಿಯ ಮಾರೋಲ್‌ನ ಹೊಟೇಲ್ ಸಿಲ್ವರ್ ಇನ್ ಸಭಾಗೃಹದಲ್ಲಿ ಸಮಿತಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಡಾ| (ಪ್ರೊ.) ಪದ್ಮಭೂಷಣ ಬಿ.ಎಂ. ಹೆಗ್ಡೆ ಸಭೆಯಲ್ಲಿ ಭಾಗವಹಿಸಿದ್ದರು.
ಅಂದಿನ ನಾಗಾರ್ಜುನ (ಯುಪಿಸಿಎಲ್) ವಿದ್ಯುತ್ಛಕ್ತಿ ಉತ್ಪಾದನಾ ಯೋಜನೆಗೆ ಪ್ರಾಮಾಣಿಕವಾಗಿ ಒತ್ತಾಯಿಸಿದ ಪರಿಣಾಮವಾಗಿ ಯೋಜನೆ ಜಾರಿಗೆ ಬಂದರೂ ಯುಪಿಸಿಎಲ್ ಅಪ್ರಧಾನ ಸ್ಥಿತಿಯ ಯಂತ್ರೋಪಕರಣಗಳನ್ನು ಅಳವಡಿಸಿ ಕೆಲಸ ಪೂರ್ಣಗೊಳಿಸದ ಕಾರಣ ಸಮಿತಿ ಜನತೆಯ ಕೆಂಗಣ್ಣಿಗೆ ಗುರಿಯಾಗಿರಬಹುದು. ಆದರೆ ನಮ್ಮ ಊರು ಇಂದು ಅಭಿವೃದ್ಧಿ ಕಾಣುತ್ತಿದ್ದು, ಶ್ರೀಮಂತ ನಾಡಾಗಿ ಬದಲಾಗುತ್ತಿದೆ ಎನ್ನುವುದು ಸಂತೋಷದ ವಿಚಾರ. ಯುಪಿಸಿಎಲ್‌ನಿಂದ ಆಗುವ ಹಾನಿಗಳನ್ನು ಸರಿಪಡಿಸುವಂತೆ ನಾವೆಲ್ಲರೂ ಜಾಗೃತರಾಗಬೇಕು ಮತ್ತು ಸರಕಾರಕ್ಕೆ ಒತ್ತಡ ಹೇರಬೇಕು. ಗುಡ್ಡ-ಬೆಟ್ಟ, ನದಿ-ಸಮುದ್ರ ಹಾಳಾಗದಂತೆ ಎಚ್ಚರವಹಿಸಿ ನಾಡನ್ನು ರಕ್ಷಿಸಬೇಕು. ಕಂಪೆನಿಗಳಿಂದ ಕರಾರು ಪತ್ರಗಳನ್ನು ಮಾಡಿಸಿಕೊಂಡು ಜನರ ಜತೆ ನಾವು ಮುನ್ನಡೆಯಬೇಕು ಎಂದು ಸಲಹೆಗಳನ್ನು ನೀಡಿದರು.
ನಮ್ಮಲ್ಲಿ ಹಿಂದಿನಿಂದಲೂ ಕಟ್ಟಿಗೆಗಳಿಂದ ಹೆಣ ಸುಡುವ ಪದ್ಧತಿಯಿದೆ. ಈ ಬಗ್ಗೆ ಭವಿಷ್ಯದಲ್ಲಿ ಚಿಂತಿಸುವ ಪ್ರಮೇಯ ಬರಬಹುದು. ಆದ್ದರಿಂದ ಪ್ರತಿ ಗ್ರಾಮ, ನಗರಪಂಚಾಯತ್ ವ್ಯಾಪ್ತಿಯಲ್ಲಿ ಆಧುನಿಕ ತಂತ್ರಜ್ಞಾನವಿರುವ ಶವದಹನ ಕ್ರಿಯಾ ಕೇಂದ್ರ ಸ್ಥಾಪಿಸಿದರೆ, ನೂರಾರು ಟನ್ ಕಟ್ಟಿಗೆ ಉಳಿಸಲು ಸಾಧ್ಯವಿದೆ. ಇದರಿಂದ ಅರಣ್ಯನಾಶ ನಿಲ್ಲಬಹುದು ಎಂದು ಅಭಿಪ್ರಾಯಪಟ್ಟರು.
ನಮ್ಮ ಉದ್ದೇಶಗಳು ಮತ್ತು ಪ್ರಯತ್ನಗಳು ಖಂಡಿತ ಫಲಕಾರಿಯಾಗುವುವು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ನಾಗಾರ್ಜುನ ಯೋಜನೆ ಕಳಂಕ ತಂದಿದೆ. ನಾಗಾರ್ಜುನ ಕಂಪೆನಿ ನಮ್ಮ ಜತೆ ಮಾಡಿಕೊಂಡ ಒಪ್ಪಂದವನ್ನು ಪಾಲಿಸದೆ, ಮನಬಂದಂತೆ ಕೆಲಸ ಮಾಡಿರುವುದು ಸಮಸ್ಯೆಗೆ ಮೂಲವಾಯಿತು. ಆದರೆ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಸಮಿತಿ ಪ್ರಬಲವಾಗಿ ಖಂಡಿಸುತ್ತಿದ್ದು, ಇದಕ್ಕೆ ಸಮರ್ಪಕ ಪರಿಹಾರ ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ. ನದಿ-ಸಮುದ್ರ ಮಾಲಿನ್ಯ ಪರಿಹರಿಸಲು, ಜನತೆಯಲ್ಲಿ ಸಾಮಾಜಿಕ ಕಳಕಳಿಯುಂಟು ಮಾಡಲು ಸಮಿತಿ ಶ್ರಮಿಸಲಿದೆ ಎಂದು ಜಯಕೃಷ್ಣ ಶೆಟ್ಟಿ ಹೇಳಿದರು.
ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರತ್ನಾಕರ ವಿ.ಶೆಟ್ಟಿ, ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷ ಅಶೀತ್ ಶೆಟ್ಟಿ, ರಾಮರಾಜ ಕ್ಷತ್ರೀಯ ಸಂಘ ಮುಂಬಯಿ ಅಧ್ಯಕ್ಷ ಸುಧೇಶ್ ನಾಯಕ್, ಜವಾಬ್ ಅಧ್ಯಕ್ಷ ರಘು ಎಲ್.ಶೆಟ್ಟಿ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು. ಅವರನ್ನು ಬಿ.ಎಂ. ಹೆಗ್ಡೆ ಪುಷ್ಪ ಗುಚ್ಚ ನೀಡಿ ಗೌರವಿಸಿದರು.
ಸಮಿತಿಯ ಉಪಾಧ್ಯಕ್ಷರುಗಳಾದ ಪಿ.ಕೆ.ಸಾಲ್ಯಾನ್, ಜೊತೆ ಕಾರ್ಯದರ್ಶಿ ತೋನ್ಸೆ ಸಂಜೀವ್ ಪೂಜಾರಿ, ಗೌರವ ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಬೆಳ್ಚಡ, ಉದ್ಯಮಿಗಳಾದ ಕೆ.ಸಿ. ಶೆಟ್ಟಿ, ಎಸ್.ಕೆ. ಶ್ರೀಯಾನ್, ಶ್ಯಾಮ್ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಯು.ಮಾಡಾ ಕಾರ್ಯಕ್ರಮ ನಿರೂಪಿಸಿದರೆ, ಉಪಾಧ್ಯಕ್ಷರಾದ ಬಿ.ಮೊಹಿದ್ದೀನ್ ನ್ಯಾಯವಾದಿ ಮುಂಡ್ಕೂರು ಸ್ವಾಗತಿಸಿದರು. ನ್ಯಾಯವಾದಿ ಸಂಜೀವ ಕಾಂಚನ್, ಬಾಲಕೃಷ್ಣ ಪಿ.ಭಂಡಾರಿ, ಗೌರವ ಕೋಶಾಧಿಕಾರಿ ಸಿಎ ಐ.ಆರ್.ಶೆಟ್ಟಿ ವೇದಿಕೆಯಲ್ಲಿದ್ದರು. ಗೌರವ ಕಾರ್ಯದರ್ಶಿ ಹರೀಶ್ ಕುಮಾರ್ ಶೆಟ್ಟಿ ವಂದಿಸಿದರು.