ಚಿತ್ರ-ವರದಿ : ರಮೇಶ್ ಅಮೀನ್ | Feb 05, 2012
ಮುಂಬಯಿ: ಭಾರತೀಯ ಜೀವ ವಿಮಾ ನಿಗಮ ಭವಿಷ್ಯತ್ತಿನ ಬದುಕಿಗೊಂಡು ಭದ್ರತೆಯೊದಗಿಸುವ ಸಂಸ್ಥೆ. ಇಂದು ನಾವು ಅಲ್ಪ ಪ್ರಮಾಣದಲ್ಲಿ ಕಟ್ಟುವ ವಿಮಾ ಪ್ರಿಮಿಯಮ್ ನಾಳಿನ ದುಬಾರಿ ಚಿಕಿತ್ಸೆಯ ಖರ್ಚು, ಅಪಘಾತ ಉಂಟಾದ ಸಂದರ್ಭದಲ್ಲಿ ರಕ್ಷಣೆಯೊದಗಿಸುತ್ತದೆ ಎಂದು ಜೀವ ವಿಮಾ ನಿಗಮದ ಸಿನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಡಿವಿಜನ್ ಆಫೀಸರ್ ಅಶೋಕ್ ಶೆಟ್ಟಿ ಹೇಳಿದರು.
ಶನಿವಾರ ದಹಿಸರ್ ಪೂರ್ವದ ಅಶೋಕವನದ ಸೌರಾಷ್ಟ್ರ ಪಟೇಲ್ ಸಮಾಜ ಸಭಾಗೃಹದಲ್ಲಿ ತನ್ನ ಸಹದ್ಯೋಗಿಗಳಿಗೆ ಆಯೋಜಿಸಿದ ಸ್ನೇಹಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ಕಠಿನ ಪರಿಶ್ರಮ, ಏಕಾಗ್ರತೆ ಮತ್ತು ತಾಳ್ಮೆಯಿಂದ ನಾನು ಎಲ್‌ಐಸಿಯ ಎಲ್ಲ ಪಾಲಿಸಿದಾರರ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿರುವೆ ಎಂಬುದಕ್ಕೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವ 110 ಏಜೆಂಟರು ಮತ್ತು ಬೃಹತ್ ಸಂಖ್ಯೆಯಲ್ಲಿ ಸೇರಿದ ಸದಸ್ಯರು ಸ್ಪಷ್ಟ ನಿದರ್ಶನವಾಗಿದ್ದಾರೆ. ಇದರಲ್ಲಿ ನಾಲ್ವರು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ನಡೆಯುವ 2012ರ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಎಲ್‌ಐಸಿ ಸಮಾವೇಶದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇದು ಹೆಮ್ಮೆಪಡುವಂಥ ವಿಷಯವಾಗಿದೆ. ನಿಮ್ಮ ಸಹಕಾರಿ ಇದೇ ರೀತಿ ಇರಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲತಾ ಸುಬ್ರಾಯ್ಡು ಅವರು ಎಲ್‌ಐಸಿಯ ವಿವಿಧ ಉಪಯುಕ್ತ ಮಾಹಿತಿ ನೀಡಿದರು.
ಗೌರವ ಅತಿಥಿ ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ವಿನೋದಾ ಶೆಟ್ಟಿ ಅವರು ಮಿಲಿಯನ್ ಡಾಲರ್ ರೌಂಡ್ ಟೇಬಲ್‌ಗೆ ಆಯ್ಕೆಯಾದ ರವಿ ಶೆಟ್ಟಿ, ಬೇಲಾ ಜೋಶಿ, ಹೇಮಂತ್ ಶಾ, ಜ್ಯೋತಿ ಪಾಟೋಲಿಯಾ ಅವರನ್ನು ನೆನಪಿನ ಕಾಣಿಕೆ, ಹೂಗುಚ್ಚ ನೀಡಿ ಗೌರವಿಸಿದರು.
ಸದಾಶಿವ ಶೆಟ್ಟಿ, ಸುಮಿತ್ರಾ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಶ್ಮಿ ಮೆಹ್ತಾ, ವಿನಯ್ ವ್ಯಾಸ್, ಅಲೆಕ್ಸ್, ಕಾಪು ಪ್ರಕಾಶ್ ಶೆಟ್ಟಿ, ಅನೀತಾ ಶೆಟ್ಟಿ, ಸಂತೋಷ್ ಗೋಯಲ್ , ವೀರೇಂದ್ರ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪಾಲ್ಗೊಂಡರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್‌ಐಸಿ ಜೀವ ವಿಮಾ ಪಾಲಿಸಿದಾರರ ಮಕ್ಕಳಿಂದ ವೈವಿಧ್ಯಮಯ ಜಾನಪದ ನೃತ್ಯ ಮತ್ತು ಭರತ ನಾಟ್ಯ ಪ್ರದರ್ಶನಗೊಂಡಿತು.
