ಭೋಪಾಲ್: ಮಾಹಿತಿ ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆಗೈದ ಮಧ್ಯ ಪ್ರದೇಶವು 'ನ್ಯಾಶನಲ್ ಇ-ಗವರ್ನೆನ್ಸ್ ಪ್ರಶಸ್ತಿ'ಗೆ ಆಯ್ಕೆಯಾಗಿದೆ ಎಂದು ಅಧಿಕೃತ ಮೂಲಗಳು ರವಿವಾರ ತಿಳಿಸಿವೆ.ಭುವನೇಶ್ವರದಲ್ಲಿ ಫೆ. 10ರಿಂದ ನಡೆಯುವ ಇ- ಗವರ್ನೆನ್ಸ್‌ನ ಎರಡು ದಿನಗಳ 15ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಲಾಗುವುದು.ಈ ಪ್ರಶಸ್ತಿ ಸಿಗುವಂತಾಗಲು ಸಹಕರಿಸಿದ ಮತ್ತು ಶಕ್ತಿಮೀರಿ ಶ್ರಮಿಸಿದ ಎಲ್ಲ ಅಧಿಕಾರಿಗಳನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅಭಿನಂದಿಸಿದ್ದಾರೆ. 7 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಅದರಲ್ಲಿ ಒಂದು ವಿಭಾಗದಲ್ಲಿ ಮಧ್ಯಪ್ರದೇಶ ಸರಕಾರ ಪ್ರಶಸ್ತಿಯನ್ನು ಗಳಿಸಿದೆ. ಕೇಂದ್ರ ಸರಕಾರ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ.ಗ್ವಾಲಿಯರ್ ಜಿಲ್ಲೆಯಲ್ಲಿರುವ ರಾಜ್ಯ ಸರಕಾರದ ಇ ಗವರ್ನೆನ್ಸ್ ಯೋಜನೆ ಈ ಪ್ರಶಸ್ತಿಗೆ ಪಾತ್ರವಾಗಿದೆ.