Udayavani | Feb 05, 2012
ಮುಂಬಯಿ: ಹಿಂದಿ ಚಿತ್ರನಟ ಅಭಿಷೇಕ್ ಬಚ್ಚನ್ ಭಾನುವಾರ 36ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಬಾಲಿವುಡ್ ತಾರೆಯರು ಶುಭಾಶಯ ಸಲ್ಲಿಸಿದ್ದಾರೆ.
ಪತ್ನಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪ್ರೀತಿಯಿಂದ ಬೇಟಿ ಬಿ ಎಂದು ಕರೆಯಲ್ಪಡುವ ನವಜಾತ ಪುತ್ರಿಯ ಜತೆ ಅಭಿಷೇಕ್ ಹುಟ್ಟು ಹಬ್ಬ ಆಚರಿಸಿಕೊಂಡರು.
ವಾತಾವರಣ ಬದಲಾವಣೆ ವಿರುದ್ಧದ ಹೋರಾಟಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಈ ವರ್ಷ ಅಭಿಷೇಕ್ ಬಚ್ಚನ್ ಅವರನ್ನು ಗ್ರೀನ್ ಗ್ಲೋಬಲ್ ಆವಾರ್ಡ್ ನೀಡಿ ಸಮ್ಮಾನಿಸಲಾಗಿದೆ. ಅಬ್ಟಾಸ್ ಮುಸ್ತಾನ್ ಅವರ ಸಾಹಸಮಯ ಪ್ಲೇಯರ್ ಈ ವರ್ಷ ಬಿಡುಗಡೆಗೊಂಡ ಅಭಿಷೇಕ್ ಅವರ ಮೊದಲ ಚಿತ್ರ. ಆದರೆ ಸಾಕಷ್ಟು ಪ್ರಚಾರದ ಹೊರತೂ ಚಿತ್ರ ಬಾಕ್ಸಾಫೀಸ್‌ನಲ್ಲಿ ಹಿಟ್ ಆಗಲು ವಿಫಲವಾಯಿತು. ರೋಹಿತ್ ಶೆಟ್ಟಿ ನಿರ್ದೇಶನದ ಮತ್ತು ಅಜಯ್ ದೇವಗನ್, ಅಸಿನ್ ಮತ್ತು ಪ್ರಾಚಿ ದೇಸಾಯಿ ಅವರ ತಾರಾಗಣ ಒಳಗೊಂಡ ಹಾಸ್ಯಮಯ ಬೋಲ್ ಬಚ್ಚನ್ ಚಿತ್ರ ಜುಲೈಯಲ್ಲಿ ಬಿಡುಗಡೆಗೊಳ್ಳಲಿದೆ.
ಟ್ವೀಟರ್‌ನಲ್ಲಿ ಸ್ನೇಹಿತರು ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಸಂಗೀತ ಸಂಯೋಜಕ ವಿಶಾಲ್ ದಾದಲಾನಿ, ನಟಿ ಸೋನಮ್ ಕಪೂರ್, ನಟ ನೀಲ್ ನಿತಿನ್ ಮುಕೇಶ್, ಬಿಪಾಶಾ ಬಸು, ರಾಣು ದಾಗ್ಗುಬಟಿ, ಸಂಗೀತ ಸಂಯೋಜಕ ಆದೇಶ್ ಶ್ರೀವಾಸ್ತವ್, ನಿರ್ದೇಶಕ ರೋಹಣ್ ಸಿಪ್ಪಿ, ತರುಣ್ ಮನ್‌ಸುಖಾನಿ, ವಸ್ತ್ರವಿನ್ಯಾಸಕ ನಚಿಕೇತ್ ಬರ್ವೆ ಶುಭಾಶಯ ಸಲ್ಲಿಸಿದ್ದಾರೆ.