Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಂಗಳೂರಲ್ಲೊಬ್ಬ ಮಲ್ಟಿಟಾಸ್ಕ್ ಮನುಷ್ಯ
      • ನಾಗತಿಹಳ್ಳಿ ಚಂದ್ರಶೇಖರ್‌ | Feb 12, 2012

        ಇವರು ಸನ್‌ ಸಾವಿರದ ಒಂಬೈನೂರ ಐವತ್ತೂಂದರಲ್ಲಿ ಶಾಲಿವಾಹನ ಶಕೆೆ ಶುಭ ಮುಂಜಾನೆ ಜನಿಸಿದರು- ಇತ್ಯಾದಿಯಾಗಿ ಗೆಳೆಯರ ಬಗ್ಗೆ ಬರೆಯುವುದು ಅಸಹಜ ಮತ್ತು ಕೃತಕ. ಗೆಳೆಯ ನಾ. ದಾಮೋದರ ಶೆಟ್ಟಿಯವರ ಬಗ್ಗೆ ಹೀಗೆ ಬರೆಯತೊಡಗುವುದು ಮತ್ತೂ ಕೃತಕ. ಇವರನ್ನು ಹತ್ತಿರದಿಂದ ಇಲ್ಲವೇ ದೂರದಿಂದ ಅಥವಾ ಸದೂರದಿಂದ ಕಾಣತೊಡಗಿ ಅನೇಕ ವರ್ಷಗಳಾಗಿರಬೇಕು. ಇವರ ತಲೆಗೂದಲು ನನ್ನ ಕಣ್ಣೆದುರೇ ಬೆಳ್ಳಗಾದವು. ನಾವು ತಲೆಗೆ ಎಣ್ಣೆ ಹಚ್ಚುವಾಗ ಇವರು ರಂಗದ ಮೇಲೆ ಮುಖಕ್ಕೆ ಬಣ್ಣ ಹಚ್ಚುತ್ತಿದ್ದರೆನಿಸುತ್ತದೆ. ನಾ. ದಾಮೋದರ ಶೆಟ್ಟಿಯವರನ್ನು ಲೋಕ "ನಾದಾ' ಎಂದು ಕರೆಯುತ್ತಾರೆ. ಇದು ಎಷ್ಟು ಬರೋಬ್ಬರಿಯಾಗಿದೆ ಎಂದರೆ ಇವರು ನಾದದ ಮೂರು ಬಗೆಗಳಾದ ಸುನಾದ, ಮಹಾನಾದ ಮತ್ತು ನಿಷ್ಕಲನಾದಗಳಿಗೆ ಇನ್ನೊಂದು ಹೆಸರು. ಇದೆಲ್ಲ ಬಿಟಾØಕಿ ನೋಡಿದರೆ ಇವರು ನಮ್ಮ ಪ್ರೀತಿಯ ನಾದ. ನನ್ನಂಥವರಿಗೆ ಮಂಗಳೂರು ಎಂದರೆ ನಾದ, ನಾದ ಎಂದರೆ ಮಂಗಳೂರು. ನೂರು ಜನರ ಸಂತೆ ಸೇರಿಸಿಕೊಂಡೇ ಅಡ್ಡಾಡುವ ನಾದ, ಅವನ್ಯಾರೇ ಸಂಸ್ಕೃತಿಯ ಲೇಪ ಹೊತ್ತ ಮನುಷ್ಯರೂಪಿ ಮಂಗಳೂರಿನಲ್ಲಿಳಿಯಲಿ, ಅವನನ್ನು ತಬ್ಬಿ ತಡವುತ್ತಾರೆ. ಎಲ್ಲ ಕೆಲಸ ಬದಿಗಿಟ್ಟು ಹೊರಟುಬಿಡುತ್ತಾರೆ. ಇಲ್ಲಾ ಬಂದವನನ್ನೂ ಕಂಕುಳಲ್ಲಿರಿಸಿಕೊಂಡು ಲೋಕದರ್ಶನಕ್ಕೆ ರೆಡಿಯಾಗುತ್ತಾರೆ. ಅವನು ಸುಗಮ ಸಂಗೀತ ಗಾಯಕನಾಗಲಿ, ಸಾಹಿತಿಯಾಗಲಿ, ರಂಗಭೂಮಿಯವನಾಗಲಿ, ಚಿತ್ರಗಾರನಾಗಲಿ, ಸಿನಿಮಾದವನಾಗಲಿ ನಾದರ ಹೆಗಲೇರುತ್ತಾರೆ. ನಾದರು ತಮ್ಮ ಕೆಲಸ ಬದಿಗಿಟ್ಟು ಅಥವಾ ಜೊತೆಗಿಟ್ಟುಕೊಂಡೇ ಮಂಗಳೂರಿನ ಒಂದು ಮಿಡಿತದಂತೆ ಜೊತೆಗಿದ್ದುಬಿಡುತ್ತಾರೆ. ಟೆರಿಬಲ್ಲಾದ ವ್ಯಾಪಾರೀ ಜಗತ್ತಿನ ಪ್ರತಿನಿಧಿಯಂತೆ ಕಾಣುವ ಮಂಗಳೂರಿನಲ್ಲಿ , ವ್ಯಾಪಾರೀಕರಣದಲ್ಲಿ ಬೆಂಗಳೂರನ್ನು ಮೀರಿಸುವ ಮಂಗಳೂರಿನಲ್ಲಿ , ನಮ್ಮ ನಾದಾ ಅದೇನೋ ಬೇರೆಯದಕ್ಕೆ ಚಡಪಡಿಸುವ ಜೀವ. ನನಗೆ ಈ ಶೆಟ್ಟರ, ರೈಗಳ, ಆಳ್ವರ ಮತ್ತು ಚೌಟರ ಸಂಗ ಅತಿಯಾಗಿದೆ. ಎಲ್ಲ ಮೀನು ಮಹಾತೆ¾. ಮೀನುಗಳಿಗಾಗಿ ಮಂಗಳೂರಿಗೆ ಹೋಗುತ್ತೇನೋ ಅಥವಾ ಮನುಷ್ಯರಿಗಾಗಿಯೋ ಎಂಬುದಿನ್ನೂ ಇತ್ಯರ್ಥವಾಗಬೇಕಾಗಿದೆ !

        ನಾದ ಮೂವತ್ತನಾಲ್ಕು ವರ್ಷಗಳಿಂದ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದಾರೆ. ನಲುವತ್ತರೊಳಗಿನ ಇಪ್ಪತ್ತರಾಚೆಯ ಮನುಷ್ಯರನ್ನಷ್ಟೇ ಅಲ್ಲ ಗಿಡಮರಗಳು, ಪ್ರಾಣಿಪಕ್ಷಿಗಳನ್ನು ಮಾತನಾಡಿಸಿದರೂ "ತಾನು ನಾದರ ಶಿಷ್ಯ' ಎಂದು ತಲೆದೂಗುತ್ತವೆ. ಶಿಷ್ಯಸಂಕುಲವು ತರಗತಿ ಕೋಣೆಯದೋ, ನಾಟಕ ಶಿಬಿರಧ್ದೋ, ಯಾವುದೋ ಕಾರ್ಯಾಗಾರಧ್ದೋ, ಸಮ್ಮೇಳನದಲ್ಲಿ ಸಿಕ್ಕಿಧ್ದೋ, ಪುಸ್ತಕ ಓದಿಧ್ದೋ ಆಗಿರಬಹುದು. ಮೇಸ್ಟರಾಗಿದ್ದವರಿಗೆ ಇಂಥ ಪ್ರಮೇಯಗಳಿರುತ್ತವೆ.
        ನಾದರನ್ನು ಪದ್ಯ ಓದಿ ಅಂತ ಸಂಸ್ಕೃತಿ ಹಬ್ಬಕ್ಕೆ ನಮ್ಮೂರಿಗೆ ಕರೆದುಕೊಂಡು ಹೋಗಿದ್ದೆ. ನಡುಮನೆಯಲ್ಲಿ ಕುಳಿತಿದ್ದೆವು. ಕದಬಹಳ್ಳಿಯ ಬ್ಯಾಂಕ್‌ ಮ್ಯಾನೇಜರ್‌ ಗುರುಪ್ರಸಾದ್‌ ಅನ್ನುವವರು ಬಂದರು. "ತಾವು ನಾದರ ಶಿಷ್ಯ' ಎಂದು ಹೇಳತೊಡಗಿದರು. ಎದುರಿಗೆ ಕುಳಿತವರೇ ನಾದ ಎಂದು ಅವರಿಗೇ ತಿಳಿದಿಲ್ಲ. ಗುರುವಾದವನು "ಮಿತ್‌' ಆಗುವುದು ಅಂದರೆ ಹೀಗೇ ಅನ್ನಿಸಿತು. ಮೊನ್ನೆ ನನಗೊಂದು ಫೋನು ಬಂದಿತ್ತು. ""ಗುರುಗಳೇ ಎಂಪೀಗೆ ನಿಲ್ತಿದ್ದೀನಿ. ಆಶೀರ್ವಾದ ಮಾಡಿ'. ನಾನು ಹೇಳಿದೆ: ""ನನಗೆ ಆಶೀರ್ವಾದದಲ್ಲಿ ನಂಬಿಕೆ ಇಲ್ಲ'. ""ಹಂಗನ್ನಬೇಡಿ ನಾನು ರಾಜಕಾರಣಿ ಆಗ್ತಿರೋದು ನಿಮ್ಮಿಂದಲೇ'. ಗಾಬರಿ ಆಯ್ತು. ""ಹ್ಯಾಗಪ್ಪಾ ದೊರೆ?' ಅಂದೆ. ""ಕ್ಲಾಸಲ್ಲಿ ಬೈತಿದ್ರಿ. ನೀನು ಪುಢಾರಿ ಆಗೋಕೆ ಲಾಯಖುV ಅಂತ. ಅದ್ಕೆ ಆಗೇಬಿಟ್ಟೆ'.

        ನಮ್ಮ ನಾದಾ ಎಲ್ಲರಂತೆ ಅಥವಾ ಅನೇಕರಂತೆ ಬರೀ ಪಾಠ ಹೇಳಿಕೊಂಡು ತರಗತಿ ಕೋಣೆಯೊಳಗೆ ಉಳಿದುಬಿಟ್ಟಿದ್ದರೆ ಇಂಥ ಶಿಷ್ಯ ಪರಂಪರೆ, ಇಷ್ಟು ಬಹುಮುಖೀ ಆಟಗಳು ಇರುತ್ತಿರಲಿಲ್ಲ. ನನಗೂ ಮಲ್ಟಿಟಾಸ್ಕ್ ಮಹನೀಯರೆಂದರೆ ಇಷ್ಟ ಮತ್ತು ಕುತೂಹಲ. ನಾದಾರೊಳಗೆ ಕವಿ, ನಾಟಕಕಾರ, ಅನುವಾದಕ, ಸಂಶೋಧಕ, ಸಂಪಾದಕ, ಸಂಘಟಕ ಎಲ್ಲ ಇದ್ದಾನೆ. ಅವರವೇ ಇಪ್ಪತ್ತೈದು ಪುಸ್ತಕಗಳು, ಸಂಪಾದಿಸಿದ್ದು ಹನ್ನೊಂದು ಪುಸ್ತಕಗಳು, ನಾಲ್ಕು ಧ್ವನಿಮುದ್ರಿಕೆಗಳು, ಹತ್ತಾರು ಕಾರ್ಯಾಗಾರಗಳು, ವ್ಯವಸ್ಥೆ ಮಾಡಿದ ಸಮ್ಮೇಳನಗಳು, ಕಟ್ಟಿದ ಸಂಘಟನೆಗಳು, ಸದಸ್ಯತ್ವಗಳು, ನೆರವಾದ ರಿಸರ್ಚುಗಳು...
        ಹೀಗೆ ನಾದ ಬಹು ಬಹು ಬಹುಮುಖೀ. ಅವರು ಪಠ್ಯಪುಸ್ತಕ ರಚನಾ ಸಮಿತಿಯಲ್ಲಿದ್ದವರು, ನಾಟಕ ನಿರ್ದೇಶನ ಮಾಡಿದವರು, ಅನೇಕ ಕಡೆ ಸಂಪನ್ಮೂಲ ವ್ಯಕ್ತಿಯಾಗಿದ್ದವರು, ಅಕಾಡೆಮಿ ಪುರಸ್ಕೃತರು, ಕೇಂದ್ರದ ಭಾಷಾಭಾರತೀ ಸನ್ಮಾನ ಪಡೆದವರು. ಈ ಎಲ್ಲ ರೆಸ್ಯೂಮ್‌ಗಳ ಜೊತೆಗೆ ಅದಾವ ಮಾಯೆಯಲ್ಲೋ ಒಂದೆರಡು ಚಿತ್ರಗಳಲ್ಲಿ , ಸೀರಿಯಲ್‌ಗ‌ಳಲ್ಲಿ ಅಭಿನಯಿಸಿಯೂ ಬಿಟ್ಟಿದ್ದಾರೆ. ಅಡೂರು ಗೋಪಾಲಕೃಷ್ಣನ್‌ರಿಗೆ ವಿಧೇಯನ್‌ ಸಿನೆಮಾಗೆ ಸಹಾಯಕರೂ ಆಗಿದ್ದಾರೆ.

        ಅವರ ಜೀವನಾನುಭವದ ಗ್ರಾಫ‌ು ಎಳೆಯುವುದು ಕಷ್ಟ . ಭಿನ್ನ ಆಸಕ್ತಿ, ಭಿನ್ನ ಕ್ಷೇತ್ರಗಳು. ಅದು ಅಲೋಶಿಯಸ್‌ ಕಾಲೇಜಿನ ಅಧ್ಯಾಪನದಿಂದ ಶುರುವಾಗಿ ಶಿಕ್ಷಣ, ಭಾಷೆ, ಅನುವಾದ, ಆಕಾಶವಾಣಿ, ರಂಗಭೂಮಿ, ಕರಿತೆರೆ, ಮರಿತೆರೆ, ಹಿರಿತೆರೆ, ಸಂಘಟನೆ, ಸಂಗೀತ, ಯಕ್ಷಗಾನ ಹೀಗೆ ಎಲ್ಲ ಕಡೆ ಹರಿದಾಡಿಸಿ ಕೊನೆಗೆ ಅಲೋಶಿಯಸ್‌ ಕಾಲೇಜಿಗೇ ತಂದುಬಿಡುತ್ತದೆ. ಇದೆಲ್ಲದರ ನಡುವೆಯೂ ಕ್ಲಾಸು ತಪ್ಪಿಸದೆ ಕಿರಿಯರನ್ನೂ, ಸಹೋದ್ಯೋಗಿಗಳನ್ನೂ ಜೊತೆಗಿರಿಸಿಕೊಂಡು ತಮ್ಮ ಕ್ಯಾಂಪಸ್ಸಿನಲ್ಲೂ ಅದೇನೋ ಒಂದನ್ನು ಕಲ್ಚರ್‌ಗೆ ಸಂಬಂಧಿಸಿದ್ದನ್ನು ಮಾಡುತ್ತಿರುತ್ತಾರೆ. ಈ ನಡುವೆ ತೆಂಕಣದ ಸುಳಿಗಾಳಿ ಅನ್ನುವ ಅಂಕಣವನ್ನೂ ಪತ್ರಿಕೆಗೆೆ ಬರೆಯುತ್ತಿದ್ದರು. ನಾದಾ ಬೆಂಗಳೂರಿನಲ್ಲಿ ಒಂದು ದಿನ ಹಳೆಯ ಮೊಪೆಡ್‌ನ‌ಲ್ಲಿ ಹೊಸ ಪುಸ್ತಕಗಳ ಬಂಡಲನ್ನು ಕೂರಿಸಿಕೊಂಡು ರಣ ರಣ ಬಿಸಿಲಿನಲ್ಲಿ ಸಾಹಿತ್ಯ ಗಾಂಭೀರ್ಯದಿಂದ ಸಾಗುತ್ತಿದ್ದರು. ಏನು ವಿಷಯ ಎಂದು ವಿಚಾರಿಸಿದರೆ ಯಾರೋ ಒಬ್ಬ ವೃದ್ಧ ಲೇಖಕಿಯ ಕೃತಿಗಳನ್ನು ಅವತ್ತು ಲಾಸ್ಟ್‌ ಡೇಟ್‌ ಆದ್ದರಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ತಲುಪಿಸಲು ಹೊರಟಿದ್ದರು. ಇವರ ಚಡಪಡಿಕೆ, ಸಂಸ್ಕೃತಿ ಸೇವೆ ಮಂಗಳೂರಿಗೆ ಮಾತ್ರ ಮೀಸಲಲ್ಲ ಎಂದು ಆಗಲೇ ತಿಳಿದದ್ದು. ಕನ್ನಡದ ಜತೆಗೆ ನಾದ ಅವರಿಗೆ ಮಲಯಾಳ  ಗೊತ್ತು. ಅವರಿಂದ ಹಲವಾರು ಕೃತಿಗಳು ಕನ್ನಡಕ್ಕೂ ಬಂದಿವೆ. ಕೇರಳ ರಾಜ್ಯದ ಪಠ್ಯಪುಸ್ತಕ ಸಮಿತಿಯ ಪರಿಶೀಲಕರೂ ಆಗಿದ್ದರು.

        ನಾದಾರ ಶಕ್ತಿ ಮೂಲ ಯಾವುದು? ಅವರು ಯಾಕೆ ಹೀಗೆ ಚಡಪಡಿಸುತ್ತಿರುತ್ತಾರೆ? ಅಷ್ಟೊಂದು ಸ್ವಪ್ರಯೋಜನವಿಲ್ಲದ ಕೆಲಸಗಳಲ್ಲಿ ಬಹುವಾಗಿ ಯಾಕೆ ತೊಡಗಿಸಿಕೊಂಡಿರುತ್ತಾರೆ? ಇಪ್ಪತ್ನಾಲ್ಕು ಗಂಟೆಗಳಿಗೆ, ನಲುವತ್ತೆಂಟು ಕೆಲಸವನ್ನು ಹಮ್ಮಿಕೊಳ್ಳುತ್ತಾರೆ? ಬಹಳ ಸಲ ಯೋಚಿಸಿದ್ದೇನೆ. ಪಾಠ ಮಾಡುವ ಮೇಸ್ಟ್ರೆ , ಚೀಟಿ ಹಾಕುವ ಮೇಸ್ಟ್ರೆ , ಹೊಸ ಪುಸ್ತಕ ಓದದ ಮೇಸ್ಟ್ರೆ, ಸಂಜೆಯಾದೊಡನೆ ಕ್ಲಬ್‌ಗ ಓಡುವ ಮೇಸ್ಟ್ರೆಗಳ ನಡುವೆ ನಾದಾರಂಥ ಕೆಲವರು ಗುರುಪರಂಪರೆಯ ಗೌರವ ಉಳಿಸುವವರು.
        ಮಂಗಳೂರಿನಲ್ಲಿ ಸಂಸ್ಕೃತಿ ಕೆಲಸ ಮಾಡುವ "ಸಂದೇಶ'ವಿರಲಿ, ಮೋಹನ್‌ ಆಳ್ವರ "ನುಡಿಸಿರಿ' ಇರಲಿ, ಕಾಸರಗೋಡಲ್ಲಿ ಕನ್ನಡ ಮೇಳವಿರಲಿ, ಕರಾವಳಿಯಲ್ಲಿ ಕಲ್ಚರ್‌ಗೆ ಸಂಬಂಧಿಸಿದ್ದು ಏನಾದರಿರಲಿ ಅಲ್ಲಿ ನಾದಾ ಸಕ್ರಿಯ. ಚಿಕ್ಕ ಹುಡುಗರ ಖುಷಿ, ಸಂಭ್ರಮ, ಜೋಕು, ಉತ್ಸಾಹ, ಕ್ರಿಯಾಶೀಲತೆಗಳ ಜೊತೆ ಅಲ್ಲಿಗೆ ಹಾಜರ್‌. ನಾದಾರ ಜೊತೆಗೆ ದೊಡ್ಡದೊಂದು ಗೆಳೆಯರ ಗುಂಪು. ಡಾ. ಜಯಪ್ರಕಾಶ ಮಾವಿನಕುಳಿ, ಶ್ರೀನಿವಾಸ ದೇಶಪಾಂಡೆ, ಕಾಸರಗೋಡು ಚಿನ್ನಾ , ರವೀಂದ್ರ ಶೆಟ್ಟಿ , ರೇಷ್ಮಾ ಜಿ. ಉಳ್ಳಾಲ ಹೀಗೆ ಬೆಳೆಯುತ್ತದೆ ಪಟ್ಟಿ . ಈಗಿರುವುದು ಸಾಲದೆಂದು ಮತ್ತೂ ಸಂಘಟನೆ ಹುಟ್ಟುಹಾಕುತ್ತಿರುತ್ತಾರೆ.

        ಇತ್ತೀಚೆಗೆ "ದಾಸಜನ' ಅಂಥ ಒಂದು ಸಂಸ್ಥೆ ಕಟ್ಟಿದರು. ಏನಪ್ಪಾ ವಿವರಣೆ ಅಂದರೆ ದಾಮೋದರ ಶೆಟ್ಟಿ , ಸತ್ಯನಾರಾಯಣ, ಜವಳಿ ಮತ್ತು ನರಸಿಂಹಮೂರ್ತಿ ಎಂಬ ನಾಲ್ಕು ಜನ ಮಿತ್ರರ ಆರಂಭದ ಅಕ್ಷರಗಳ ಸಂಸ್ಥೆ . ನಾನೂ ಸೇರಿಕೊಳ್ತೀನಿ ಅಂತ ಸಿ.ಎನ್‌. ರಾಮಚಂದ್ರನ್‌ ದಾಸ ಜನರನ್ನು ಸೇರಿದ ಮೇಲೆ ಅದು "ದಾಸಜನರಾ' ಆಗಿ ಅಷ್ಟಕ್ಕೂ ನಿಲ್ಲದೆ ವಿವೇಕ ರೈಗಳೂ ಈ ಗುಂಪು ಸೇರಿ ಅದು ಈಗ "ದಾಸಜನರಾರೈ' ಆಗಿದೆ ! ಇವೆಲ್ಲ ಪುಟ್ಟ ಊರಿನ ಪುಳಕಗಳು. ಆರೇ ಜನರಿಗೊಂದು ಸಂಘ - ಜಗತ್ತಿನಲ್ಲೇ ಮೊದಲನೆಯದಿರಬೇಕು !

        ನಾದಾ ವೃತ್ತಿಯಿಂದ ಇದೀಗ ನಿವೃತ್ತರಾಗಿದ್ದಾರೆ. ಆದರೆ ಅವರ ಚಡಪಡಿಕೆಗಳಿಗೆ ನಿವೃತ್ತಿ ಇರುವಂತೆ ಕಾಣುವುದಿಲ್ಲ. ಅನೇಕ ಬಗೆಯ ನಾದಗಳನ್ನು ಅವರು ಮೊಳಗಿಸುತ್ತಿರಲಿ. ವೇಣುನಾದ, ಘಂಟಾನಾದ, ಕಹಳಾನಾದ, ಶಂಖ ನಾದ, ಮೇಘ ನಾದ, ಭೇರೀನಾದ, ಓಂಕಾರ ನಾದ, ಪ್ರಣವ ನಾದ, ಚಿನಿ ಚಿನೀ ನಾದ, ಶಿಂಗೀ ನಾದ, ತಂತೀ ನಾದ, ತಾಳ ನಾದ, ಸುಸ್ವರ ನಾದ, ಗರ್ಜನಾ ನಾದ, ಕಿಂಕಿಣೀ ನಾದ... ಹೀಗೆ ಏನೇನೋ ಇವೆಯಂತೆ, ನಾದ ಪರಂಪರೆಯಲ್ಲಿ.

        ನಮ್ಮ ಪ್ರೀತಿಯ ನಾದಾರು ಈ ಯಾವುದಾದರೊಂದನ್ನು ಸದಾ ಕೋರಸ್‌ನಲ್ಲಿ ನುಡಿಸುತ್ತಿರಲಿ. ಅವರ ಚಡಪಡಿಕೆ ಚಿರಾಯುವಾಗಿರಲಿ. ಅವರ ಅವಿಶ್ರಾಂತ ಅವಿರತವಾಗಿರಲಿ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus