ಡಾ. ಕೆ. ಉಲ್ಲಾಸ ಕಾರಂತ | Feb 12, 2012
ಭಾರತ ಬಡ ರಾಷ್ಟ್ರವಾಗಿದ್ದ ವರ್ಷಗಳಲ್ಲಿ ನಮ್ಮ ಮೀಸಲು ಅರಣ್ಯಗಳ ರಕ್ಷಣಾ ಕಾರ್ಯವನ್ನು ನಿಭಾಯಿಸಲು ನಾವು ಸಮರ್ಥರಾಗಿದ್ದೆವು. ಈಗ ನಮ್ಮ ರಾಷ್ಟ್ರದ ಆರ್ಥಿಕ ಪ್ರಗತಿಯ ಪ್ರಮಾಣ ಶೇ.8-9ರಷ್ಟಿದೆ; ಆದರೆ, ನಮ್ಮ ಅಭಯಾರಣ್ಯಗಳನ್ನು , ರಾಷ್ಟ್ರೀಯ ಉದ್ಯಾನವನಗಳನ್ನು ರಕ್ಷಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ !
ಮಂಗಳೂರಿನಿಂದ 50 ಕಿ. ಮೀ. ದೂರದ ಪುತ್ತೂರಿನಲ್ಲಿ ಜನಿಸಿದ ನಾನು 1950ರ ದಶಕದಲ್ಲಿ ಬಾಲ್ಯ ಕಳೆದವನು; ಬೆಳವಣಿಗೆಯ ದಿನಗಳಲ್ಲಿ ವನ್ಯಜೀವಿಗಳ ಹಾಗೂ ಪ್ರಕೃತಿಯ ಬಗ್ಗೆ ಭಾವನಾತ್ಮಕ ಆಸಕ್ತಿಯನ್ನೂ ಬೆಳೆಸಿಕೊಂಡವನು. ಶಾಲಾ ದಿನಗಳಲ್ಲೆ ಪರಿಸರ ವ್ಯವಸ್ಥೆಯನ್ನು ಸಾಧ್ಯವಿದ್ದಷ್ಟು ತ್ವರಿತಗತಿಯಲ್ಲಿ ಹೇಗೆ ನಾಶಪಡಿಸಲಾಗುತ್ತಿತ್ತೆಂಬುದನ್ನೂ ಕಂಡವನು. ಮರಗಳನ್ನು ಕಡಿದುರುಳಿಸುವುದಿರಬಹುದು, ಪ್ರಾಣಿಗಳನ್ನು ಬೇಟೆಯಾಡುವುದಿರಬಹುದು, ಹಾಗೆ ಕೊಂದ ಹುಲಿ, ಚಿರತೆಗಳನ್ನು ಊರ ರಸ್ತೆಗಳಲ್ಲಿ ಮೆರವಣಿಗೆ ಮಾಡುವುದಿರಬಹುದು - ಎಲ್ಲವೂ ನನ್ನ ಪಾಲಿಗೆ ದುಃಖದ ಸಂಗತಿಗಳಾಗಿದ್ದವು.
ಹುಲಿಗಳ ಜತೆಗಿನ ನನ್ನ ಗಾಢಾನುರಕ್ತಿ ಆರಂಭಗೊಂಡದ್ದು ನಾನಿನ್ನೂ ಮಗುವಿದ್ದಾಗಲೇ. ನನ್ನ ತಂದೆ ಡಾ | ಶಿವರಾಮ ಕಾರಂತರು ಜಿಮ್ ಕಾರ್ಬೆಟ್‌ನ ಪುಸ್ತಕಗಳನ್ನು ಓದಿ ಹೇಳುತ್ತಿದ್ದುದು ನೆನಪಿದೆ. ಆದರೆ ವ್ಯಾಘ್ರ ವಿಜ್ಞಾನದತ್ತ ನಿಜವಾಗಿ ನನ್ನ ಲಕ್ಷ್ಯ ಸೆಳೆದವರು ಹುಲಿ ಸಂತತಿ ಕುರಿತು ಅಧ್ಯಯನ ನಡೆಸಿದ ಮೊತ್ತಮೊದಲ ವಿಜ್ಞಾನಿ ಡಾ | ಜಾರ್ಜ್ ಶಾಲರ್. 1965ರಲ್ಲಿ ಲೈಫ್ ಪತ್ರಿಕೆಯಲ್ಲಿ ಪ್ರಕಟವಾದ ಅವರ ಲೇಖನವನ್ನು ಓದಿ ನನ್ನಲ್ಲೇ ಹೀಗೆ ಹೇಳಿಕೊಂಡೆ - "ನಾನು ಮಾಡಲೇಬೇಕಾದದ್ದು ಇದೇ'. ವರ್ಷಗಳ ಬಳಿಕ ಡಾ | ಶಾಲರ್ ಅವರನ್ನು ಹುಲಿಗಳ ಜಾಡಿನ ಶೋಧ ಕಾರ್ಯಕ್ಕೆಂದು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದೆ. ನನ್ನ ಪಾಲಿಗೆ ಸದಾ ನೆನಪಿನಲ್ಲುಳಿಯುವ ಅರಣ್ಯಾಭಿಯಾನ ಇದು.
ನಾನು ಕಾಲೇಜಿಗೆ ಸೇರಿದ್ದು 1970ರ ದಶಕದಲ್ಲಿ. ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ರಾಷ್ಟ್ರೀಯ ಉದ್ಯಾನವನಗಳ/ಅಭಯಾರಣ್ಯಗಳ ಸ್ಥಾಪನೆ ಕುರಿತ ಕೆಲಸ ನಡೆಯುತ್ತಿದ್ದ ಕಾಲ ಅದು. 1967ರಲ್ಲಿ ನಾಗರಹೊಳೆಗೆ ಹೋಗಿ ಅಭಯಾರಣ್ಯ ನಿರ್ಮಾಣದ ಪ್ರಥಮ ಹಂತದ ಕೆಲಸಗಳನ್ನು ಹತ್ತಿರದಿಂದ ಕಂಡೆ. ಈ ಸಂದರ್ಭದಲ್ಲಿ ನನಗೆ ಹಲವು ಸಂಗತಿಗಳನ್ನು ಕಲಿಸಿದ ಇಬ್ಬರು ವ್ಯಕ್ತಿಗಳನ್ನು ತುಂಬ ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತಿದ್ದೇನೆ. ಒಬ್ಬರು ನಾಗರಹೊಳೆಯ ಪ್ರಥಮ ಗೇಮ್ ರೇಂಜರ್ ಕೆ. ಪಿ. ಅಚ್ಚಯ್ಯ. ಇನ್ನೊಬ್ಬರು ಫಾರೆಸ್ಟರ್ ಕೆ. ಎಂ. ಚಿನ್ನಪ್ಪ . ಒಬ್ಬ ಗುರುವಾಗಿ ನನ್ನನ್ನು ತಮ್ಮ ತೆಕ್ಕೆಯೊಳಕ್ಕೆ ಸೇರಿಸಿಕೊಂಡವರು ಅಚ್ಚಯ್ಯ. ರಾಜ್ಯ ಅರಣ್ಯ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ಫಾರೆಸ್ಟರ್ ಆಗಿದ್ದುಕೊಂಡೂ ತಮ್ಮ ಕಾರ್ಯವ್ಯಾಪ್ತಿಯೊಳಗಿನ ಹುಲ್ಲುಗಾವಲನ್ನು ಧೀರ ಕಟ್ಟಾಳುವಿನಂತೆ ರಕ್ಷಿಸುತ್ತಿದ್ದವರು ಚಿಣ್ಣಪ್ಪ. ನಿಜಕ್ಕೂ ಕರ್ನಾಟಕದ ವ್ಯಾಪ್ತಿಯಲ್ಲಿ ನನ್ನ ಇಷ್ಟದ ಜಾಗಗಳೆಂದರೆ ಬಂಡೀಪುರ, ಭದ್ರಾ, ನಾಗರಹೊಳೆ ಅರಣ್ಯ ಪ್ರದೇಶಗಳು. ವ್ಯಾಘ್ರ ಸಂಶೋಧನೆಗೆ ಸಂಬಂಧಿಸಿದ ಹಲವು ಸೂಕ್ಷ್ಮಗಳು, ಪ್ರಯೋಗ ಪರಿಣತಿಗಳನ್ನು ನಾನು ಕಲಿತದ್ದು , ಬೆಳೆಸಿಕೊಂಡದ್ದು , ಸುದೀರ್ಘ ಕಾಲ ಸಂಶೋಧನ ನಿರತನಾದದ್ದು ಇವೇ ಅಭಯಾರಣ್ಯಗಳಲ್ಲಿ. ನನ್ನ ಪಾಲಿಗೆ ಊರು ಮನೆಗೆ ಹೋಗುವುದೆಂದರೆ ಪುತ್ತೂರಿಗಾಗಲಿ, ಮಂಗಳೂರಿಗಾಗಲಿ, ಈಗ ನಾನು ನೆಲೆಸಿರುವ ಬೆಂಗಳೂರಿಗಾಗಲಿ ಹೋಗುವುದಲ್ಲ. ನನ್ನ ಊರು ಮನೆ ಎಂದರೆ ನಾಗರಹೊಳೆ.
ಅಭಯಾರಣ್ಯ ಸ್ಥಾಪನೆಯ ಪ್ರಯತ್ನಗಳು ದೃಢರೂಪ ಪಡೆದು ವನ್ಯಜೀವಿ ನೆಲೆದಾಣಗಳ ಪ್ರಕ್ರಿಯೆ ಪೂರ್ಣಗೊಂಡಂತೆ, ನಾನು ಕ್ಷೇತ್ರಾಧ್ಯಯನ ಹಾಗೂ ಹುಲಿ ಜಾಡು ಸಂಶೋಧನೆ ಹಾಗೂ ಅವುಗಳ ಜೀವರಕ್ಷಣೆಗೆ ಸಂಬಂಧಿಸಿದ ವಿವಿಧ ಪ್ರಯೋಗಗಳಲ್ಲಿ ಗಂಭೀರವಾಗಿ ತೊಡಗಿಕೊಂಡೆ. 1980ರ ಪೂರ್ವಾರ್ಧದಲ್ಲಿ ನನ್ನ ಈ ಹವ್ಯಾಸ, ಪೂರ್ಣಪ್ರಮಾಣದ ವೃತ್ತಿಯಾಗಿ ಮಾರ್ಪಟ್ಟಿತು. ವನ್ಯಜೀವಿಗಳಿಗೆ ಸಂಬಂಧಿಸಿದ ಜೀವವಿಜ್ಞಾನಿಯಾಗಿ ಸಿದ್ಧಗೊಳ್ಳಲು ಫ್ಲೋರಿಡಾ ವಿಶ್ವವಿದ್ಯಾನಿಲಯಕ್ಕೆ ಸೇರಿ ಮರುಅಧ್ಯಯನ ಕೈಗೊಂಡದ್ದೂ ಆಯಿತು.
ಮುಂದಿನ 20 ವರ್ಷಗಳ ಅವಧಿಯಲ್ಲಿ ಭಾರತೀಯ ಅರಣ್ಯದ ಮಹಾರಾಜನಾದ ಹುಲಿರಾಯನ ಜತೆ ಅತ್ಯಂತ ನಿಕಟ ಹಾಗೂ ಅದ್ಭುತ ಮುಖಾಮುಖೀಗಳನ್ನು ಸಾಧಿಸಿದ್ದೇನೆ. ಆದರೆ, ವೈಶಾಲ್ಯದ ದೃಷ್ಟಿಯಿಂದ ನೋಡಿದರೆ ಬಹುತೇಕ ಕಿಷ್ಕಿಂಧೆಯನ್ನು ಹೋಲುವ ಭಾರತೀಯ ಉಪಖಂಡದಲ್ಲಿ ವ್ಯಾಘ್ರ ಸಂರಕ್ಷಣೆ
ಪ್ರದೇಶ ಅಥವಾ ಅಭಯಾರಣ್ಯ ಯೋಜನೆ ನಿಜಕ್ಕೂ ಕಷ್ಟಸಾಧ್ಯವೆಂದೇ ಹೇಳಬೇಕು.
ಅಭಯಾರಣ್ಯಗಳನ್ನು ನಿರ್ಮಿಸಬೇಕಾದದ್ದು ಉದ್ದೇಶಿತ ವನ್ಯಜೀವಿಯ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು. ಹುಲಿಯಂಥ ಹಿಂಸಾಹಾರಿ ಪ್ರಾಣಿಯ ಮಟ್ಟಿಗೆ ಹೇಳಬೇಕೆಂದರೆ, ಅದಕ್ಕೆ ಮಾನವ ಬಳಕೆಯಿಂದ ಮುಕ್ತವಾದ ವಿಶಾಲವಾದ ಅರಣ್ಯ ಪ್ರದೇಶದ ಅಗತ್ಯವಿದೆ. ಪ್ರಥಮ 25 ವರ್ಷಗಳ ವ್ಯಾಘ್ರ ಯೋಜನೆ (ಪ್ರಾಜೆಕ್ಟ್ ಟೈಗರ್)ಯ ಪ್ರಕ್ರಿಯೆ ಹುಲಿಗಳ ಮೂಲಭೂತ ಅಗತ್ಯಗಳ ಪೂರೈಕೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಮೀಸಲಾಗಿತ್ತು. ಕಾರಣ, ಸಮಗ್ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ತತ್ಸಂಬಂಧಿ ಚಳವಳಿಯ ಉದ್ದೇಶವೇ ಅದಾಗಿತ್ತು. ಆದರೂ ಕೈಗೊಳ್ಳಲಾದ ಕ್ರಮಗಳು ಅನುಷ್ಠಾನ-ಆಧಾರಿತವಾಗಿದ್ದು, ವ್ಯಾಘ್ರಗಳ ನಿಗಾವಣೆ ಕಾರ್ಯ ಹಾಗೂ ವ್ಯಾಘ್ರ-ಜೀವಶಾಸ್ತ್ರದ ಅರ್ಥೈಸುವಿಕೆಯ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ದೃಷ್ಟಿಕೋನವೆಂಬುದು ತೀರಾ ಅಲ್ಪವಾಗಿತ್ತು. ಅರಣ್ಯ ಸಿಬಂದಿಗಳು, "ತರಬೇತಿ ಪಡೆದ ವಿಜ್ಞಾನಿ'ಗಳಾಗಿರಲಿಲ್ಲ ; ಇಂಥ ಟೀಕೆಯನ್ನು ಮೆಚ್ಚದಿದ್ದರೂ ಅವರೆಲ್ಲ ಹುಲಿಗಳ ಸಂರಕ್ಷಣೆಯ ಯೋಜನೆಗೆ ಸಂಬಂಧಿಸಿದ ಯಾವತ್ತೂ ಕಾರ್ಯಗಳನ್ನು ಚೆನ್ನಾಗಿಯೇ ನಿರ್ವಹಿಸಿದರು.
1990ರ ದಶಕದ ಉತ್ತರಾರ್ಧದಿಂದ ಪೂರ್ವರೂಪಿತ ಕಾರ್ಯ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಕ್ರಾಂತಿಕಾರಿ ಬೀಸೊಂದು ಕಾಣಿಸಿಕೊಂಡಿತು. ಯೋಜನೆಯ ವ್ಯವಸ್ಥಾಪಕರು ಈ ನೈಸರ್ಗಿಕ ಪ್ರಯೋಗಾಲಯಗಳ ಸಂರಕ್ಷಕರಾಗಿ ಕಾರ್ಯನಿರ್ವಹಿಸುವ ಬದಲಿಗೆ ಬಹೂದ್ದೇಶಿತ ಕಾರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನದತ್ತ ಮುಖಮಾಡಿದರು. ಇದ್ದಕ್ಕಿದ್ದಂತೆ ಅರಣ್ಯ ಇಲಾಖೆ ಬಾಹ್ಯಸಾಮಾಜಿಕ, ಆರ್ಥಿಕ ಸಮಸ್ಯೆಗಳ ನಿಭಾವಣೆಯ ಕಾರ್ಯವನ್ನು ಕೈಗೆತ್ತಿಕೊಂಡರು. ಹೀಗೆ, ಅಧಿಕೃತ ವ್ಯಾಘ್ರ ಸಂರಕ್ಷಣಾ ಯೋಜನೆ "ರಕ್ಷಣೆ"ಯಿಂದ ದೂರ ಸರಿದು ಭಾರೀ ಮೊತ್ತವನ್ನೊಳಗೊಂಡ ಗ್ರಾಮಾಂತರ ಅಭಿವೃದ್ಧಿ ಕಾರ್ಯಕ್ರಮವಾಗಿ ವೇಷಾಂತರಗೊಂಡಿತು. ಈ ನಡುವೆ ನಮ್ಮ ಮೀಸಲು ಅರಣ್ಯಗಳ ರಕ್ಷಣಾ ಕಾರ್ಯ ಕುಸಿತ ಕಾಣುತ್ತಾ ಬಂದಿದೆ.
ಇದು ನಿಜಕ್ಕೂ ದು:ಖದ ಸಂಗತಿ. ಕಾರಣ, ಭಾರತ ಬಡ ರಾಷ್ಟ್ರವಾಗಿದ್ದ ವರ್ಷಗಳಲ್ಲಿ ನಮ್ಮ ಮೀಸಲು ಅರಣ್ಯಗಳ ರಕ್ಷಣಾ ಕಾರ್ಯವನ್ನು ನಿಭಾಯಿಸಲು ನಾವು ಸಮರ್ಥರಾಗಿದ್ದೆವು. ಈಗ ನಮ್ಮ ರಾಷ್ಟ್ರದ ಆರ್ಥಿಕ ಪ್ರಗತಿಯ ಪ್ರಮಾಣ ಶೇ. 8-9ರಷ್ಟಿದೆ ; ಆದರೆ ನಮ್ಮ ಅಭಯಾರಣ್ಯಗಳನ್ನು , ರಾಷ್ಟ್ರೀಯ ಉದ್ಯಾನವನಗಳನ್ನು ರಕ್ಷಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ! ಹುಲಿಗಳು ನೆಲೆಸಿರುವ ರಕ್ಷಿತಾರಣ್ಯ ಪ್ರದೇಶಗಳ ಪ್ರಮಾಣ, ಒಟ್ಟು ಭೂಪ್ರದೇಶದ ಪೈಕಿ ಕೇವಲ ಶೇ.3ಕ್ಕಿಂತಲೂ ಕಡಿಮೆ. ಉಳಿದ ಶೇ. 97 ಭೂ ಪ್ರದೇಶದಲ್ಲಿದ್ದೂ ನಾವು ಮಾನವ ಸಮಸ್ಯೆಯೊಂದನ್ನು ಪರಿಹರಿಸುವಲ್ಲಿ ವಿಫಲವಾದೆವು ಎಂದಾದರೆ , ಇಲ್ಲಿರುವ ಕೇವಲ ಶೇ. 3ರಷ್ಟು ಭೂಮಿಯನ್ನು ನಾಶಪಡಿಸುವ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ?
ಆದರೆ, ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಹುಲಿ ಸಂತತಿಯ ರಕ್ಷಣೆಗೆ ಸಂಬಂಧಿಸಿದಂತೆ, ಉಜ್ವಲ ಭವಿಷ್ಯವಿದೆಯೆಂದೇ ಹೇಳಬೇಕು. ನಮ್ಮಲ್ಲಿ ಬಂಡೀಪುರ, ನಾಗರಹೊಳೆ, ಅಂಶಿ- ದಾಂಡೇಲಿ, ಕುದುರೆಮುಖ, ಭದ್ರಾ ವನ್ಯಜೀವಿ ಅಭಯಾರಣ್ಯಗಳಂಥ ವಿಶಾಲ ರಕ್ಷಿತಾರಣ್ಯ ಪ್ರದೇಶಗಳಿವೆ. ಇವು ಹುಲಿಗಳ ಸ್ವಾಭಾವಿಕ ನೆಲಸು ಪ್ರದೇಶಗಳೂ ಹೌದು.ಕರ್ನಾಟಕದಲ್ಲೊಂದು ಪ್ರಜ್ಞಾವಂತ ನಾಗರಿಕ ಸಮುದಾಯವಿದೆ ; ಸಮೃದ್ಧ ಆರ್ಥಿಕ ವ್ಯವಸ್ಥೆಯೂ ಇದೆ. ಬಹುಬಾಳಿಕೆಯ ತ್ರಾಣವುಳ್ಳ ಸಂರಕ್ಷಣಾ ಯೋಜನೆಗಳಿಗೆ ಸಂಬಂಧಿಸಿದಂತೆ ಇವೆರಡೂ ಅತ್ಯಗತ್ಯವೇ ಆಗಿವೆ. ನಮಗಿಂದು ಬೇಕಾಗಿರುವುದೆಂದರೆ, ವೈಜ್ಞಾನಿಕ ದೃಷ್ಟಿಕೋನ ಹಾಗೂ ಸ್ಪಂದನಶೀಲ ಖಾಸಗಿ- ಸಾರ್ವಜನಿಕ ಸಹಯೋಗದ ಮೂಲಕ ಇಂಥ ರಕ್ಷಿತ ಪ್ರದೇಶಗಳನ್ನೂ ಕೆಡಿಸದೆ ಉಳಿಸಿಕೊಳ್ಳುವ ಬದ್ಧತೆ - ಇವೆರಡರಿಂದಲೂ ಪರಿಪೋಷಿತವಾದ ಮುಂಗಾಣೆR!
ಅಭಿವೃದ್ಧಿ, ರಸ್ತೆ ಇತ್ಯಾದಿ ಸೌಲಭ್ಯಗಳೆಲ್ಲ ಬೇಕು, ನಿಜ. ಆದರೆ ಪ್ರಮುಖ ವನ್ಯಜೀವಿ ಪ್ರದೇಶಗಳು ಒಂದು ರಾಜ್ಯದ , ಒಂದು ದೇಶದ ಸಂಪತ್ತು ಎಂಬ ಅರಿವು ನಮಗಿರಲೇ ಬೇಕು. ನಮ್ಮಲ್ಲಿ ವಿಚಾರವಾದಿಗಳು , ಪ್ರಜ್ಞಾವಂತ ನಾಗರಿಕರು ಡಾಲರ್‌ಗಳ ಹಾಗೂ ಐಟಿ-ಬಿಟಿ ಬಗ್ಗೆ ಮುನ್ನೋಟಗಳಿರುವ ಕೋಟ್ಯಧಿಪತಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ , ನಮ್ಮ ರಾಡಾರ್‌ಗಳ ಪರದೆಯ ಮೇಲೆ ನಮ್ಮದೇ ಹಿತ್ತಲಲ್ಲಿರುವ ಜೀವವೈವಿಧ್ಯ ರಾರಾಜಿಸುವ ದಿನಗಳು ಇನ್ನೂ ಬಂದಿಲ್ಲ. ಬಸವನಗುಡಿಯಲ್ಲೊಂದು ಮರವನ್ನು ಕಡಿದುರುಳಿಸಿದರೆ, ಕಬ್ಬನ್‌ಪಾರ್ಕಿನಲ್ಲಿ ಮಾರ್ಪಾಟು ತರುವ ಪ್ರಸ್ತಾವವೊಂದು ಕಿವಿಗೆ ಬಿದ್ದರೆ ಹಾಹಾಕಾರ ಎಬ್ಬಿಸುವ ನಾವು ಗಣಿಗಾರಿಕೆಯ ಬಗ್ಗೆ , ನಾಟಾ ಅವ್ಯವಹಾರದ ಬಗ್ಗೆ ಕುರುಡರಾಗಿದ್ದೇವೆ; ಅಥವಾ ನಮ್ಮ ವನ್ಯಜೀವಿ ಅಭಯಾರಣ್ಯಗಳಲ್ಲಿನ ಸಿಬಂದಿಗಳ ಕೊರತೆಯಾಗಲಿ, ಅಲ್ಲಿನ ಕಳಪೆ ವ್ಯವಸ್ಥಾಪನವಾಗಲಿ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಇದು ನಮ್ಮ ಗ್ರಹಿಕೆಯ ವೈಫಲ್ಯ. ಇದೊಂದು ದುರಂತ. ಕಾಣೆಯಾಗುತ್ತ ಬರುತ್ತಿರುವ ನೈಸರ್ಗಿಕ ಉದ್ಯಾನಗಳನ್ನು ದೀರ್ಘಕಾಲ ರಕ್ಷಿಸಿಡಬೇಕಾದ ಸಂಪತ್ತೆಂದು ನಾವಿನ್ನೂ ಗುರುತಿಸಿಯೇ ಇಲ್ಲ. ನಮ್ಮ ನೈಸರ್ಗಿಕ ಬಳುವಳಿ ಬೇಲೂರು- ಹಳೇಬೀಡು, ಲಾಲ್‌ಬಾಗ್ ಅಥವಾ ವಿಧಾನ ಸೌಧಗಳಿಗಿಂತಲೂ ಹೆಚ್ಚು ಪ್ರಾಮುಖ್ಯವಾದದ್ದು. ಇಂಥ ಕಟ್ಟಡಗಳನ್ನು ಕುಟ್ಟಿ ಪುಡಿಮಾಡಿದರೂ, ಮತ್ತೆ ಒಂದು ನೀಲನಕಾಶೆ ಇರಿಸಿಕೊಂಡು ಎಂದು ಬೇಕಿದ್ದರೂ ಕಟ್ಟಿಕೊಳ್ಳಬಹುದು. ಆದರೆ, ಒಮ್ಮೆ ನಾಗರಹೊಳೆ, ಭದ್ರಾ ಅಥವಾ ಕುದುರೆಮುಖದಂತಹ ಪರಿಸರ ವ್ಯವಸ್ಥೆಯನ್ನು , ಇವುಗಳಲ್ಲಿ ಒಂದೊಂದಕ್ಕೂ ಪ್ರತ್ಯೇಕವಾಗಿ ಇರುವ ವಿಶಿಷ್ಟ ಪಾರಿಸರಿಕ ಲಕ್ಷಣವನ್ನು ನಾಶ ಪಡಿಸಿದರೆ , ಇಂಥ ಜೀವಂತ ವ್ಯವಸ್ಥೆ ಎಂದೆಂದಿಗೂ ನಾಶಹೊಂದಿತೆಂದೇ ಅರ್ಥ. ಇವುಗಳ ನೀಲಿನಕ್ಷೆ ನಮ್ಮ ಬಳಿ ಇಲ್ಲ.
ಇವುಗಳನ್ನು ಸಮಗ್ರರೂಪದಲ್ಲಿ ಮರುಸ್ಥಾಪಿಸಬೇಕೆಂದರೆ ಅಂಥ ಯಾವ ಮಾರ್ಗವೂ ನಮ್ಮ ಮುಂದೆ ಇಲ್ಲ.
(ಇಂಗ್ಲಿಷ್ ಮೂಲ ಲೇಖನ Jungle Trails, Tiger Talesದ ಸಂಗ್ರಹಾನುವಾದ: ಜೇಕೆ)