ನೇಮಿಚಂದ್ರ | Feb 19, 2012
ಬೆಂಗಳೂರನ್ನು ಬೇರೆ ಯಾವುದಾದರೂ ಊರಾಗಿ ಮಾಡಬೇಕಾದರೆ, ಭೂತಾನಾಗಿ ಮಾಡೋಣ. ಭೂತಾನ್ ಏಷಿಯಾದಲ್ಲಿಯೇ ಅತ್ಯಂತ ಸಂತಸದ ದೇಶ, ಜಗತ್ತಿನ ಅತ್ಯಂತ ಖುಷಿಯ ಎಂಟನೇ ದೇಶ. ಎಲ್ಲ ದೇಶಗಳೂ "ಗ್ರಾಸ್ ನ್ಯಾಷನಲ್ ಪ್ರಾಡಕ್ಟ್' ಅಳೆದರೆ, ಭೂತಾನ ಒಂದೇ ದೇಶ ಇಡೀ ವಿಶ್ವದಲ್ಲಿ "ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್' ಅಳೆಯುವುದು! ತನ್ನ ಜನಗಳು ಸಂತಸದಿಂದ ಇದ್ದಾರೆಯೆ, ಪರಿಸರದೊಡನೆ, ತಮ್ಮ ಸಮುದಾಯದೊಡನೆ ಸಮನ್ವಯದಿಂದ ಇರುವರೆ ಎಂದು ಅಳೆಯುತ್ತದೆ!
ದೇಶದ ಅಸಮಾನ ಅಭಿವೃದ್ಧಿಯ ಪರಿಣಾಮಗಳನ್ನು ನಾವು ಎಲ್ಲೆಲ್ಲಿಯೂ ಕಾಣುತ್ತಿದ್ದೇವೆ. ಕಳೆದೆರಡು ವಾರದ ಲೇಖನಗಳನ್ನು ಓದಿದ ಮಂಗಳೂರಿನ ನಾಗೇಶ್ ಕೊಂಡಜಿ ಅವರು ಇಮೇಲ್ ಕಳುಹಿಸಿದ್ದರು - ""ದೇಶದ ಶೇಕಡಾ 73ರಷ್ಟು ಜನರು ದಿನಕ್ಕೆ 20 ರೂಪಾಯಿಗಿಂತಲೂ ಕಡಿಮೆ ಗಳಿಸುತ್ತಾರೆ. 23 ಕೋಟಿ ಜನರು ಹಸಿವಿನೊಡನೆ ಹೋರಾಡುತ್ತಾರೆ. ಶೇಕಡಾ 50ರಷ್ಟು ಜನರಿಗೆ ಕುಡಿಯುವ ನೀರು ಸಿಗದು.
ಮತ್ತೂಂದೆಡೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ, ನಡುವಿನ ಕಂದರವನ್ನು ಹಿಗ್ಗಿಸುತ್ತಿದ್ದಾರೆ.
ನಾವಿದನ್ನು ಬದಲಿಸಲು ಸಾಧ್ಯವೆ ಮೇಡಂ?' ಅವರು ಹೇಳಿರುವ ಅಂಕಿಅಂಶಗಳಲ್ಲಿ ಒಂದಿಷ್ಟು ವ್ಯತ್ಯಾಸ ಇದ್ದಿರಬಹುದು, ಆದರೆ ಉಳ್ಳವರ ಇಲ್ಲದವರ ನಡುವೆ ಆಕಳಿಸಿ ಬಾಯೆ¤ರೆದಿರುವ ಈ ಕಂದರ ನಮಗೆಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿದೆ.
ಅವರ ಈ ಪ್ರಶ್ನೆ ನನ್ನಲ್ಲಿ ಅನೇಕ ಬಾರಿ ಉದ್ಭವಿಸಿದೆ. ಉತ್ತರ ಹುಡುಕಿ ಅಲೆದದ್ದು, ಓದಿದ್ದು, ಬರೆದದ್ದೂ ಇದೆ. "ಇರುವ ಈ ಸ್ಥಿತಿಯನ್ನು ಬದಲಿಸಲು ನಮಗೆ ನೂರು ಸಾವಿರ ಮಹಾತ್ಮರು ಬೇಕು, ಚರಿತ್ರೆ ನಮಗೆ ಕೊಟ್ಟಿದ್ದು ಒಬ್ಬನನ್ನು ಮಾತ್ರ'. ಆತನನ್ನೂ ಗುಂಡಿಟ್ಟು ಕೊಂದೆವು - ಮನಸ್ಸಿನ ಮೂಲೆಯಿಂದ ಹೊರಟ ಮಾತುಗಳು. ಇವು ನನ್ನ ಸ್ವಂತದ ಮಾತುಗಳಲ್ಲ, ನಾನು ಓದಿದ ಮಾತುಗಳು ಎಂದು ಹೊಳೆಯಲು ತಡವಾಗಲಿಲ್ಲ. ಕಪಾಟಿನಲ್ಲಿ ಪೇರಿಸಿಟ್ಟ ಫೈಲ್‌ಗಳಲ್ಲಿ ಹುಡುಕಾಡಿದೆ, ಇಗೋ ಸಿಕ್ಕಿತು ಭೂತಾನಿನ ಯುವ ದೊರೆ, ರಾಜ ಕೇಸರ್ ನಾಮ್‌ಗ್ಯಾಲ್ ವಾಂಗ್‌ಚುಕ್ ಅವರ ಮಾತುಗಳು - ವಿ ನೀಡ್ ಮಿಲಿಯನ್ ಮಹಾತ್ಮಾಸ್!
ನಮ್ಮ ಭಾರತದ ಈಶಾನ್ಯಕ್ಕಿರುವ ಪುಟ್ಟ ದೇಶ ಭೂತಾನ್.
ಭೂತಾನ್ ಬಗ್ಗೆ ನನಗೆ ಅಷ್ಟೇನೂ ತಿಳಿದಿರಲಿಲ್ಲ. ಕಳೆದ ವರ್ಷ ಕಲಕತ್ತೆಯ ಐ.ಐ.ಎಮ್.ಗೆ ಹೋದ ಸಂದರ್ಭ. ಭೂತಾನಿನ ದೊರೆ ಕಲಕತ್ತೆಯಲ್ಲಿ ಮಾಡಿದ ಭಾಷಣದ ಪ್ರತಿ ದೊರೆತಿತ್ತು. ಓರ್ವ 31 ವಯಸ್ಸಿನ ಜನಪ್ರಿಯ ರಾಜನ ವಿಚಾರಗಳ ಪ್ರಬುದ್ಧತೆ ಅಚ್ಚರಿಗೊಳಿಸಿತು.
ಬೆಂಗಳೂರನ್ನು ಸಿಂಗಾಪುರ ಮಾಡುವ ಮಾತುಗಳನ್ನು ನೀವು ಕೇಳಿದ್ದೀರ. ಬೆಂಗಳೂರನ್ನು ಸಿಂಗಾಪುರ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ಸಿಂಗಾಪುರದಲ್ಲಿ ಶಿಸ್ತು, ಸ್ವತ್ಛತೆ, ಶ್ರೀಮಂತಿಕೆ ಎಲ್ಲವೂ ಇರಬಹುದು. ಖುಷಿ ಇದೆಯೆ, ಸಂತೋಷ ಇದೆಯೆ ನನಗೆ ತಿಳಿಯದು. "ಸೆ¾„ಲ್ ಸಿಂಗಾಪುರ್' ಎಂದು ನಗುವುದನ್ನೂ ಅವರಿಗೆ ನೆನಪಿಸಬೇಕಾದರೆ ಅಲ್ಲಿರುವುದು ಭೌತಿಕ ಐಷಾರಾಮದ ನಡುವೆ ದ್ವೀಪವಾದ ಮನುಷ್ಯರು ಅನಿಸಿತ್ತು.
ಬೆಂಗಳೂರನ್ನು ಬೇರೆ ಯಾವುದಾದರೂ ಊರಾಗಿ ಮಾಡಬೇಕಾದರೆ, ಭೂತಾನಾಗಿ ಮಾಡೋಣ. ಭೂತಾನ್ ಏಷಿಯಾದಲ್ಲಿಯೇ ಅತ್ಯಂತ ಸಂತಸದ ದೇಶ, ಜಗತ್ತಿನ ಅತ್ಯಂತ ಖುಷಿಯ ಎಂಟನೇ ದೇಶ. ಎಲ್ಲ ದೇಶಗಳೂ "ಗ್ರಾಸ್ ನ್ಯಾಷನಲ್ ಪ್ರಾಡಕ್ಟ್' ಅಳೆದರೆ, ಭೂತಾನ ಒಂದೇ ದೇಶ ಇಡೀ ವಿಶ್ವದಲ್ಲಿ "ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್' ಅಳೆಯುವುದು! ತನ್ನ ಜನಗಳು ಸಂತಸದಿಂದ ಇದ್ದಾರೆಯೆ, ಪರಿಸರದೊಡನೆ, ತಮ್ಮ ಸಮುದಾಯದೊಡನೆ ಸಮನ್ವಯದಿಂದ ಇರುವರೆ ಎಂದು ಅಳೆಯುತ್ತದೆ!
ನಾಗೇಶ ಕೊಂಡಜಿ ಅವರ ಪ್ರಶ್ನೆಗೆ ಉತ್ತರವನ್ನು ಈ ಸಂತಸದ ನಾಡಿನ ದೊರೆಯ ಭಾಷಣದಲ್ಲಿ ಕಂಡೆ. ಕಲಕತ್ತೆಯ ವಿಶ್ವವಿದ್ಯಾಲಯಕ್ಕೆ 2010ರಲ್ಲಿ ಬಂದಾಗ ತಮ್ಮ ಪೀಳಿಗೆಯ ಯುವ ಜನರೊಡನೆ ಅವರು ಹಂಚಿಕೊಂಡ ಮಾತುಗಳಿವು:
*
*
ಇಂದು ನಾನಿಲ್ಲಿ ನಿಮ್ಮೊಡನೆ ನನ್ನ ವಿಚಾರಗಳನ್ನು ಅನಿಸಿಕೆಗಳನ್ನು ಅನುಭವಗಳನ್ನು ಹಂಚಿಕೊಳ್ಳಲು ನಿಂತಿದ್ದೇನೆ. ನನ್ನ ಪೀಳಿಗೆಯ ನೀವು, ನನ್ನಂತೆಯೇ ಸವಾಲುಗಳನ್ನು ಮತ್ತು ಅವಕಾಶಗಳನ್ನು ಎದುರಿಸುತ್ತಿದ್ದೀರಿ. ನಿಮ್ಮೊಡನೆ ಒಂದು ಸರಳ ಸಂವಾದಕ್ಕೆ ನಾನಿಲ್ಲಿ ಬಂದಿರುವೆ'.
ನಾನು ಜಗತ್ತು ಏನು ಮಾಡಬೇಕು, ದೇಶಗಳು ಏನು ಮಾಡಬೇಕು, ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಮುಖಂಡರು ಏನು ಮಾಡಬೇಕು ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಅದರ ಬದಲು ನಾವು ಯುವಜನ, ನಾವೇನು ಮಾಡಬಲ್ಲೆವು ಎಂದು ಮಾತಾಡೋಣ. ನಾವು ಹೇಗೆ ಬದುಕಬೇಕು, ನಾವು ಒಬ್ಬೊಬ್ಬರೂ ಇಲ್ಲಿರುವಷ್ಟು ಸಮಯ ಈ ನೆಲದ ಮೇಲೆ ಹೇಗೆ ನಡೆಯುತ್ತೇವೆ, ಎಂತಹ ಹೆಜ್ಜೆ ಗುರುತನ್ನು ಮೂಡಿಸಿ ಹೋಗುತ್ತೇವೆ, ನಮ್ಮ ಹುಟ್ಟಿಲ್ಲದ ಮಕ್ಕಳಿಗೆ ಎಂತಹ ಭೂಮಿಯನ್ನು ಬಿಟ್ಟು ಬೀಳ್ಕೊಡುತ್ತಿದ್ದೇವೆ ಎಂದು ಮಾತನಾಡೋಣ.
ಮೊದಲಿಗೆ ನಾವು ಹುಟ್ಟಿದ ಭೂಮಿ ಎಂತಹುದು ಎಂದು ನೋಡೋಣ. ಇಲ್ಲಿ ಓದಿ ಡಿಗ್ರಿ ಪಡೆದು ಹೊರಗೆ ನೀವು ಪ್ರವೇಶಿಸುತ್ತಿರುವ ಜಗತ್ತು ಎಂತಹುದು? ಅದು ಸುಂದರವಾಗಿಲ್ಲ ಎಂದು ನಾನು ನಿಮಗೆ ಎಚ್ಚರಿಸಬೇಕಿದೆೆ.
ನಾನು ಉಲ್ಲೇಖೀಸಲಿರುವ ಅಂಕಿಅಂಶಗಳು ನಿಮಗೆ ಎಲ್ಲೆಡೆಯಲ್ಲೂ ಸಿಗುತ್ತವೆ. ಇಂಟರ್ನೆಟ್‌ಗೆ ಹೋಗಿ, ಕ್ಷಣ ಕಣ್ಣು ಹಾಯಿಸಿ. ನಾನಿಲ್ಲಿ ಓದಿ ಹೇಳಲು ಇಂದು ಸಾಧ್ಯವಿಲ್ಲದಷ್ಟು ಮಾಹಿತಿಯನ್ನು ನೀವಲ್ಲಿ ಪಡೆಯುತ್ತೀರ.
ಮೊದಲಿಗೆ ನಮ್ಮ ಪರಿಸರದ ಬಗ್ಗೆ ಮಾತಾಡೋಣ:
ಈ ಅಂಕಿ ಅಂಶಗಳನ್ನು ಕೇಳಿದರೆ, ಗಾಬರಿ ಬೀಳುತ್ತೀರಿ. ನಾವು ಎಷ್ಟು ಎಚ್ಚರವಿಲ್ಲದೆ ಬದುಕಿದ್ದೇವೆ, ಮುಂದಾಲೋಚನೆ ಇಲ್ಲದೆ ಬದುಕುತ್ತಿದ್ದೇವೆ ಹಾಗೂ ಅಜಾಗರೂಕರಾಗಿ ಮುಂದುವರೆಯುತ್ತಿದ್ದೇವೆ ಎಂದು ಅವು ತಿಳಿಸುತ್ತವೆ. ಇರುವುದೊಂದೇ ಭೂಮಿಯನ್ನು ದುರ್ಲಾಭದ ಬೆನ್ಹತ್ತಿ ಬಿಟ್ಟುಕೊಟ್ಟಿದ್ದೇವೆ.
ಜಾಗತಿಕ ತಾಪಮಾನ 3.5 ಡಿಗ್ರಿ ಸೆಂಟಿಗ್ರೇಡ್ ಹೆಚ್ಚಿದರೂ ಭೂಮಿಯ ಮೇಲಿನ ಶೇಕಡ 70ರಷ್ಟು ವಿವಿಧ ಜೀವಜಂತುಗಳು ನಿರ್ನಾಮವಾಗುತ್ತವೆ.
ಪ್ರತಿಕ್ಷಣ, ಒಂದು ಫುಟ್‌ಬಾಲ್ ಮೈದಾನದಷ್ಟು ಅರಣ್ಯ ಕಣ್ಮರೆಯಾಗುತ್ತಿದೆ.
ನೀರ್ಗಲ್ಲ ನದಿಗಳು ಗ್ಲಾಸಿಯರ್ಸ್ - ಹಿಮ್ಮೆಟ್ಟುತ್ತಿವೆ.
ಪರಿಸರದತ್ತ ನಮ್ಮ ಅಗೌರವದ ನೇರ ಪರಿಣಾಮವಾಗಿ ಅನೇಕ ಪ್ರಕೃತಿ ವಿಕೋಪಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿವೆ, ಹೆಚ್ಚು ತೀವ್ರವಾಗಿ ಪ್ರಳಯಾಂತಕವಾಗಿವೆ. ನಾವು ಪಡೆದ ಜಗತ್ತನ್ನು ಮತ್ತಷ್ಟು ಹಾಳು ಮಾಡಿ ನಾವಿಂದು ನಮ್ಮ ಮಕ್ಕಳ ಕೈಗಿಡುತ್ತಿದ್ದೇವೆ.
ಈಗ ಬಡತನದ ಬಗ್ಗೆ ಮಾತನಾಡೋಣ:
ಚರಿತ್ರೆಯಲ್ಲಿ ಹಿಂದೆಂದೂ ಕಾಣದಷ್ಟು ಭೌತಿಕ ಬೆಳವಣಿಗೆಯನ್ನು, ಐಹಿಕ ಭೋಗಗಳನ್ನು, ಪ್ರಾಪಂಚಿಕ ಅಭಿವೃದ್ಧಿಯನ್ನು ನಾವಿಂದು ಕಂಡಿದ್ದೇವೆ. ಆದರೆ ಇದೇ ಜಗತ್ತಿನಲ್ಲಿ, ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟು ಜನ ಕಡುಬಡವರು, ಅವರು ಜಾಗತಿಕ ಆದಾಯದ ಶೇಕಡಾ 5ರಷ್ಟು ಮಾತ್ರ ಪಡೆದಿದ್ದಾರೆ. ಶೇಕಡ 20ರಷ್ಟು ಶ್ರೀಮಂತರು ಜಾಗತಿಕ ಆದಾಯದ ಶೇಕಡಾ 75ರ ಒಡೆತನವನ್ನು ಗಬಳಿಸಿದ್ದಾರೆ.
ಜಗತ್ತಿನ 100 ಕೋಟಿಗೂ ಹೆಚ್ಚು ಜನ ದಿನವೊಂದಕ್ಕೆ ಒಂದು ಡಾಲರಿಗೂ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ.
ಪ್ರತಿದಿನ 24,000 ಮಕ್ಕಳು ಬಡತನದಿಂದ ಸಾಯುತ್ತಿದ್ದಾರೆ.
ಜಗತ್ತಿನ ಅರ್ಧ ಜನಸಂಖ್ಯೆ ಪಟ್ಟಣಗಳಲ್ಲಿ ಬದುಕುತ್ತದೆ, ಅವರಲ್ಲಿ 100 ಕೋಟಿ ಜನ ಕೊಳಚೆ ಪ್ರದೇಶದಲ್ಲಿ ಸೆರೆಯಾಗಿದ್ದಾರೆ.
ಬಡರಾಷ್ಟ್ರಗಳಲ್ಲಿ ಭ್ರಷ್ಟಾಚಾರದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಪ್ರಗತಿಶೀಲ ದೇಶಗಳಲ್ಲಿ ಲಂಚ ಸರ್ವಾಂತರ್ಯಾಮಿಯಾಗಿದೆ, ವರ್ಷಕ್ಕೆ 20ರಿಂದ 40 ಬಿಲಿಯನ್ ಡಾಲರ್ ಮುಟ್ಟಿದೆ - ಯೋಚಿಸಿ ಈ ಹಣ ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿಯ ಅವಕಾಶಗಳಿಗಾಗಿ ಬಡವರ ಬಳಕೆಗೆ ಒದಗಿ ಬರುವಂತಿದ್ದರೆ?
ಬಡತನ ಬಡವರಿಗೆ ಕಟು ಪರಿಶ್ರಮವನ್ನು , ನೋವು, ನಷ್ಟ, ದುಃಖ, ಸೋಲನ್ನು, ಹೇಳಲಾರದ ಸಂಕಟವನ್ನು ತರುತ್ತದೆ. ಶ್ರೀಮಂತರು ಮತ್ತು ಸಿರಿವಂತ ದೇಶಗಳು, ಇಂತಹ ಈ ಅಸಮತೆ ವೈದೃಶ್ಯ ಜಾಗತಿಕ ಘರ್ಷಣೆಗೆ, ಅಭದ್ರತೆಗೆ, ವೈಷಮ್ಯಕ್ಕೆ, ಅಸಾಮರಸ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸಬೇಕು.
ಆರೋಗ್ಯದ ವಿಷಯವೇನು?
ಜಗತ್ತಿನ ಒಂದು ನೂರು ಕೋಟಿ ಜನಕ್ಕೆ ಆರೋಗ್ಯ ರಕ್ಷಣೆಯ ಮೂಲಭೂತ ಸೌಕರ್ಯಗಳು ಕೂಡಾ ತಲುಪುವುದಿಲ್ಲ.
ಐದು ವರ್ಷಕ್ಕಿಂತ ಕೆಳಗಿನ ಒಂದು ಕೋಟಿಗೂ ಹೆಚ್ಚು ಮಕ್ಕಳು ಪ್ರತಿ ವರ್ಷ ಅಪೌಷ್ಟಿಕತೆಯಿಂದ, ತಡೆಗಟ್ಟಬಲ್ಲ ರೋಗಗಳಿಂದ ತೀರಿಕೊಳ್ಳುತ್ತವೆ.
ಇವೆೆಲ್ಲವೂ ಅಗಾಧ ವೈಜಾnನಿಕ ಸಾಧನೆಯನ್ನು ಮಾಡಿದ ಹೆಮ್ಮೆಯಲ್ಲಿ ಬೀಗುವ ಜಗತ್ತಿನಲ್ಲಿ ನಡೆಯುತ್ತಿದೆ. ನಾವು ಮನುಷ್ಯನನ್ನು ಚಂದ್ರನಧಿಲ್ಲಿ ಕಳುಹಿಸಬಲ್ಲೆವು, ಆದರೆ, ಅತ್ಯಗತ್ಯ ಇರುವವರಿಗೆ ಅತ್ಯವಶ್ಯಕ ಔಷಧಿಗಳನ್ನು ತಲುಪಿಸಲು ಮಾರ್ಗ ಅರಿಯೆವು.
ಜಗತ್ತು ಮಿಲಿಟರಿಗೆ ಮೀಸಲಿಡುವ ಹಣವನ್ನು ನೋಡಿದಾಗ, ವಿಶ್ವದ ಭವಿಷ್ಯ ಊಹಿಸಲಾರದಾಗಿದೆ, ಮತ್ತಷ್ಟು ಅಪಾಯಕಾರಿಯಾಗಿದೆ. 2009ರಲ್ಲಿ ವಿಶ್ವ ಮಿಲಿಟರಿಗಾಗಿ ವೆಚ್ಚ ಮಾಡಿದ್ದು 1. 5 ಟ್ರಿಲಿಯನ್ ಡಾಲರ್. (ಅಂದರೆ ಹತ್ತು ಲಕ್ಷದ, ಹತ್ತು ಲಕ್ಷದ, ಹತ್ತು ಲಕ್ಷ). ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಗೆ 225 ಡಾಲರ್ ಹಂಚುವಷ್ಟು ! ಜಾಗತಿಕ ಎಕಾನಮಿಯನ್ನು ಹೇಗೆ ರೂಪಿಸಬೇಕೆಂದು ಶ್ರೀಮಂತ ರಾಷ್ಟ್ರಗಳು ನಿರ್ಧರಿಸುತ್ತವೆ, ಬಡ ರಾಷ್ಟ್ರಗಳ ಕ್ಷೀಣ ದನಿಯನ್ನು ಅಲ್ಲಿ ಕೇಳಿಸಿಕೊಳ್ಳುವವರಿಲ್ಲ. ಇವೆಲ್ಲದರಿಂದ, ತೀವ್ರ ಅಸಮಾನ ಮತ್ತು ಅಸಮಾಧಾನದ ಜಗತ್ತಿಗೆ ಬುನಾದಿ ಹಾಕಿದ್ದೇವೆ - ಸಂಪನ್ಮೂಲಗಳಿಗಾಗಿ, ಜೀವನೋಪಾಯಕ್ಕಾಗಿ ಭವಿಷ್ಯದ ಘರ್ಷಣೆಗೆ ಬುನಾದಿ ಹಾಕುತ್ತಿದ್ದೇವೆ. ಮುಂದುವರೆಯಲಿರುವ ಕಲಹಕ್ಕೆ, ಕಾದಾಟಕ್ಕೆ, ಆತಂಕವಾದ, ಅಭದ್ರತೆಗೆ. ಜಾಗತಿಕ ಅಸ್ಥಿರತೆಗೆ ಬುನಾದಿ ಇದು.
ಒಟ್ಟೈಸಿ, ಸರಳವಾಗಿ ಹೇಳುವುದಾದರೆ, ಮಾನವ ಜೀವನದ ಮಹತ್ತರದ ಸಾಧನೆಗಳು, ವಿಜ್ಞಾನ ತಂತ್ರಜಾnನದ ಅನ್ವೇಷಣೆ, ಮಹಾನ್ ತಣ್ತೀಜಾnನಿಗಳ ಚಿಂತನೆ, ಕಾರ್ಖಾನೆಗಳು ಉದ್ಯಮಗಳು, ಜಗತ್ತಿಗೆ ಅಗಾಧ ಲಾಭವನ್ನು ತಂದಿವೆ. ಇಂದು ನಾವು ನಮ್ಮ ಪೂರ್ವಜರು ಬದುಕುತ್ತಿದ್ದ ಬದುಕಿಗಿಂತ ಬಲು ಭಿನ್ನವಾದ ಜೀವನವನ್ನು ನಡೆಸುತ್ತಿದ್ದೇವೆ. ಹೀಗಿದ್ದೂ ನಾವು ಹೊಚ್ಚ ಹೊಸದಾದ ಮತ್ತು ಹೆಚ್ಚಿನ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಏಕೆ? ಕಾರಣ, ಯಾವ ಅಭಿವೃದ್ಧಿ ಅಸಮಾನತೆಯನ್ನು, ಅನ್ಯಾಯವನ್ನು, ಪರಿಸರ ನಾಶವನ್ನು, ಅಗಾಧ ಕೊಳ್ಳುಬಾಕತನವನ್ನು ಕಂಡೂ ಕಾಣದಂತೆ ಮುಖ ತಿರುಗಿಸುತ್ತದೆಯೋ ಅದು ಕಟ್ಟ ಕಡೆಯಲ್ಲಿ ತನ್ನದೇ ಭಾರವನ್ನು ತಾಳಲಾರದೆ ಕುಸಿಯುತ್ತದೆ. ಜನರೆದುರು ಪರಿಹರಿಸಲಾರದಷ್ಟು ಹೆಚ್ಚು ಹೆಚ್ಚಿನ ಸಮಸ್ಯೆಗಳನ್ನು ಎಸೆಯುತ್ತದೆ.
ಪರಿಸ್ಥಿತಿ ಹೀಗಿರುವಾಗ, ನಮ್ಮ ಪೀಳಿಗೆ ಈ ಬೃಹತ್ ಸವಾಲುಗಳನ್ನು ಎದುರಿಸುವಾಗ, ನಾವೇನು ಮಾಡಬೇಕು? ಮೊಟ್ಟ ಮೊದಲಿಗೆ ಇಂದಿನ ಜಾಗತಿಕ ಸಮಸ್ಯೆಗೆ "ನಾವೇ ಕಾರಣ' ಎಂಬುದನ್ನು ಅಂಗೀಕರಿಸಬೇಕು.
ಪ್ರತಿ ಪೀಳಿಗೆಯೂ ತನ್ನ ಕಾಲದ ಬೃಹತ್ ಸವಾಲುಗಳನ್ನು ಎದುರಿಸಿದೆ. ಪ್ರತಿ ಪೀಳಿಗೆಯೂ ತೀರಾ ತಡವಾಗಿ ಕೊನೆಯಲ್ಲಿ ಕಂಡುಕೊಂಡಿದೆ - ನಾವು ಮಾನವೀಯ ಮೌಲ್ಯಗಳನ್ನು ಮರೆತಾಗ, ನಮ್ಮ ಮನಃಸಾಕ್ಷಿಯನ್ನು, ಆತ್ಮಸಾಕ್ಷಿಯನ್ನು ಬದಿಗಿಟ್ಟಾಗ, ಅಂತರಾತ್ಮದ ದನಿಗೆ ಕಿವಿಗೊಡದಿದ್ದಾಗ, ಅತ್ಯಂತ ಕತ್ತಲ ದಿನಗಳನ್ನು ಎದುರಿಸುತ್ತೇವೆ.
ನಮ್ಮ ಪಾತ್ರವೇನು?
ನಾವೇನು ಮಾಡಬೇಕೆಂದು, ನಾವು ಕಾಲೇಜು ವಿಶ್ವವಿದ್ಯಾಲಯದಲ್ಲಿರುವಾಗ ಯೋಚಿಸುತ್ತೇವೆಯೆ? ಇಲ್ಲ, ಈ ಜಗತ್ತನ್ನು ಬದಲಿಸುವುದು ಜಾಗತಿಕ ಮುಖಂಡರ ಕೆಲಸ ಎಂದು ಕೊಳ್ಳುತ್ತೇವೆ. ತೊಂದರೆ ಇರುವುದು ಇಲ್ಲಿಯೇ. ಯಾರೋ ಬಂದು ನಮ್ಮನ್ನು ಈ ವಿಪತ್ತಿನಿಂದ ಪಾರು ಮಾಡಿ ಕಾಪಾಡುತ್ತಾರೆಂದು ಕಾಯುತ್ತೇವೆ. ಜಗತ್ತೇಕೆ ಉದ್ಧಾರಕ ಹುಟ್ಟಿ ಬರಲೆಂದು ಕಾಯಬೇಕು?
ನಾವು ಬದುಕುತ್ತಿರುವ ಪರಿಸರವೇ ಹಾಗಿದೆ, ಸದಾ ನಾವು ವಿಶ್ವವಿದ್ಯಾಲಯದಲ್ಲಿ ಬಳಸುವ ಪದಗಳು - ಪೈಪೋಟಿ, ಭವಿಷ್ಯ, ಕೆಲಸ, ಆದಾಯ, ಬಂಡವಾಳ ಮುಂತಾದುವು. ಈ ಪದಗಳಲ್ಲಿ ತಪ್ಪಿಲ್ಲ - ಆದರೆ ಮೆಲ್ಲನೆ ನಾವು ಈ ಪದಗಳ ಯಜಮಾನರಾಗುವ ಬದಲು ಗುಲಾಮರಾಗುತ್ತಿದ್ದೇವೆ. ಯಶಸ್ಸನ್ನು ನಾವು ಹಣ ಮತ್ತು ಅಧಿಕಾರದಲ್ಲಿ ಅಳೆಯುತ್ತಿದ್ದೇವೆ. ನಾವು ಕಷ್ಟ ಪಟ್ಟರೆ ನಮಗೇನು ಸಿಗುತ್ತದೆ ಎಂದು ಗೊತ್ತು - ಒಳ್ಳೆಯ ಡಿಗ್ರಿ, ಒಳ್ಳೆಯ ಕೆಲಸ, ಒಳ್ಳೆಯ ಕಾರು, ಮನೆ ಮತ್ತು ಎಲ್ಲರ ಮೆಚ್ಚುಗೆ, ಶ್ಲಾಘನೆ. ನಾವು ಪ್ರಾಮಾಣಿಕರಾದರೆ, ನ್ಯಾಯವಂತರಾದರೆ, ಹೃದಯವಂತರಾದರೆ, ದಯೆ, ಕರುಣೆ, ಅನುಕಂಪ, ಸಹಾನುಭೂತಿಯಿಂದ ವರ್ತಿಸಿದರೆ ನಮಗೇನು ಸಿಗುತ್ತದೆ ಎಂದು ಗೊತ್ತಿಲ್ಲ. ಕಾರಣ ಇವುಗಳಿಂದ ಸಿಗುವ ಲಾಭಗಳು ತಟ್ಟನೆ ಕಣ್ಣಿಗೆ ಕಾಣುವುದಿಲ್ಲ, ಸುಲಭವಾಗಿ ಕೂಡುವುದಿಲ್ಲ.
ನನ್ನ ಪೀಳಿಗೆ, ನಾವೆಲ್ಲಿಂದಲೇ ಬಂದಿರಲಿ, ನಾವು ವಿಶ್ವವಿದ್ಯಾಲಯದಲ್ಲಿ ಏನೇ ಓದಿರಲಿ ನಾವು ಹುಟ್ಟಿರುವ ಜಗತ್ತು, ನೈತಿಕವಾಗಿ ಸರಿ ಅಲ್ಲದಷ್ಟು ಭೌತಿಕ ಪ್ರತಿಫಲವನ್ನು ಹಿಂಬಾಲಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ಸಹೋದರರ ಒಳಿತಿಗಿಂತ, ಇಡೀ ಸಮುದಾಯದ ಒಳಿತಿಗಿಂತ, ನನ್ನೊಬ್ಬನ ಉದ್ಧಾರಕ್ಕೆ ಬೇಕಾದ ಹಾದಿಯನ್ನು ಹಿಡಿಯುತ್ತೇವೆ.
ನಾವು ಈ ಹಾದಿಯನ್ನು ಹಿಡಿದರೆ ಅದೆಷ್ಟೇ ವೈಜಾnನಿಕ ಹಾಗೂ ಭೌತಿಕ ಅಭಿವೃದ್ಧಿಯನ್ನು ತಂದರೂ ಜೀವಮಾನದ ಉದ್ದಕ್ಕೂ ಜಗತ್ತಿನ ಸಮಸ್ಯೆಗಳು ಮುಂದುವರೆಯುತ್ತವೆ ಮಾತ್ರವಲ್ಲ ಮತ್ತಷ್ಟು ಹೆಚ್ಚುತ್ತವೆ.
ಆದರೆ ಅದೆಷ್ಟು ಅದ್ಭುತವಿರುತ್ತದೆ ಯೋಚಿಸಿ - ಇಂದು ನಾವು ನಿರ್ಧರಿಸಿದರೆ ನಾವು ಒಬ್ಬೊಬ್ಬರೂ ಈ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆಂದು ಪಣ ತೊಟ್ಟರೆ, ಈ ಜಗತ್ತನ್ನು ನಮ್ಮ ಮಕ್ಕಳಿಗೆ ಮತ್ತು ದೀನರಿಗೆ ಒಳಿತಿನ ತಾಣವಾಗಿ ಮಾಡುತ್ತೇವೆಂದು ನಿರ್ಧರಿಸಿದರೆ. ನಾವು ಯೋಚಿಸುವ ವರ್ತಿಸುವ ರೀತಿಯಲ್ಲಿ ಬದಲಾವಣೆ ತಂದರೆ. ಇರುವುದಕ್ಕಿಂತ ಬೇರೆಯೇ ಆದ ರೀತಿಯಲ್ಲಿ ಮಾಡಬಲ್ಲ ನಮಗಿರುವ ಈ ಅವಕಾಶವನ್ನು ನಾವು ಬಳಸಿಕೊಂಡರೆ. ಯಾವ ವಿಶ್ವ ಮುಖಂಡನೋ, ಉದ್ಧಾರಕನೋ ಹುಟ್ಟಿ ಬರಲೆಂದು ಕಾಯದೆ ನಾವು ಇಂದು ಕಾರ್ಯಪರರಾದರೆ. ಸರಳವಾದ ಮಾನವೀಯ ಮೌಲ್ಯಗಳ ಅಗಾಧ ಶಕ್ತಿಯಲ್ಲಿ ನಾವು ನಂಬಿಕೆ ಇಟ್ಟರೆ ಆಗ ನಾವು ಆ ಪೀಳಿಗೆಯಾಗುತ್ತೇವೆ, ಪರಿವರ್ತನೆಯ ಹರಿಕಾರರಾದ ಪೀಳಿಗೆ, ಬದಲಾವಣೆಯನ್ನು ತಂದ ಪೀಳಿಗೆ, ಆತ್ಮಸಾಕ್ಷಿಯ ಸಾರಥ್ಯದಲ್ಲಿ ನಡೆದ ಪೀಳಿಗೆ ಜಗತ್ತು ಬಹು ಕಾಲದಿಂದ ಕಾಯುತ್ತಿದ್ದ ಪೀಳಿಗೆ ನಾವಾಗುತ್ತೇವೆ.
ನಮ್ಮಲ್ಲಿ ಇಂದು ಪ್ರಕೃತಿಯ ಪ್ರಳಯದೊಡನೆ ಕಾದಾಡಲು, ಓಝೋನಿನ ರಂಧ್ರವನ್ನು ಮುಚ್ಚಲು, ಜಗತ್ತಿನ ಬಡತನವನ್ನು ನಿರ್ನಾಮ ಮಾಡುವಷ್ಟು ಹಣ ಮತ್ತು ಕೌಶಲ ಇಲ್ಲದಿರಬಹುದು. ಆದರೆ, ನಾವು ಬದಲಿಸಬಹುದಾದ ಒಂದು ವಿಷಯವಿದೆ. ನಮ್ಮನ್ನು ನಾವು ಬದಲಿಸಬಲ್ಲೆವು. ಅದು ಬಹಳ ಮುಖ್ಯವಾದದ್ದು. ಜಾಗತಿಕ ಸಮಸ್ಯೆಗಳಿಗೆ ಪರಿಹಾರವನ್ನು ಶೋಧಿಸುವ ಆರಂಭ ಬಿಂದು ಒನ್ಸ್ ಸೆಲ್ಫ್ - ನನ್ನೊಳಗಿನ ನಾನು. ಗಾಂಧೀಜಿ ಹೇಳಿದ್ದರು, ಇತರರಲ್ಲಿ ನೀ ಕಾಣ ಬಯಸುವ ಪರಿವರ್ತನೆ ನೀನಾಗು (ಬಿ ದ ಛೇಂಜ್ ಯು ವಾಂಟ್ ಟು ಸೀ ಇನ್ ಅದರ್ಸ್).
ನೀವು ಸಣ್ಣವರೆಂದು, ಅಸಂಗತರೆಂದು, ಏಕಾಂಗಿಯೆಂದು ಅಂದುಕೊಳ್ಳಬೇಡಿ. ಬಹಳಷ್ಟು ಬಾರಿ ನಾಯಕತ್ವ ಎಂಬುದನ್ನು ಓರ್ವ ಮಹಾನ್ ವ್ಯಕ್ತಿ ಸ್ಫೂರ್ತಿದಾಯಕ ಪ್ರವಚನವನ್ನು ನೀಡಿ, ಇಡೀ ಸಮುದಾಯವನ್ನು ಶಿಖರದೆತ್ತರಕ್ಕೆ ಕರೆದೊಯ್ಯುವುದೆಂದು ತಿಳಿಯಲಾಗುತ್ತದೆ. ಇಂತಹ ನಾಯಕರನ್ನು ನಾನು ಸಂತೋಷದಿಂದ ಸ್ವೀಕರಿಸುತ್ತಿದ್ದೆ, ಅಂತಹ ಮುಖಂಡರು ಹೆಚ್ಚು ಹೆಚ್ಚು ಸಂಭವಿಸಿದ್ದರೆ ! ಹೆಚ್ಚು ಎಂದರೆ ಎಂದರೆ ಎಷ್ಟು? ಪ್ರತಿದಿನ ಮಹಾನ್ ಮುಖಂಡರು ಮಿಲಿಯಗಟ್ಟಲೆ ಜನತೆಯನ್ನು ವಿಶ್ವದ ಎಲ್ಲ ಭಾಗದಲ್ಲಿಯೂ ಮುನ್ನೆಡೆಸಿ ನಮ್ಮ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಂತಿದ್ದರೆ ನನಗೆ ಖುಷಿಯಾಗುತ್ತಿತ್ತು. ನಮಗಿಂದು ನೂರು ಸಾವಿರ ಮಹಾತ್ಮರು ಬೇಕಿದ್ದಾರೆ, ಆದರೆ ಚರಿತ್ರೆ ನಮಗೆ ಕೊಟ್ಟದ್ದು ಒಬ್ಬನನ್ನು ಮಾತ್ರ.
ಹಾಗೆಂದೇ ನಾವು ಕೋಟಿಗಟ್ಟಲೆ ಹಣವನ್ನು ಪಡೆದಿಲ್ಲದಿದ್ದರೂ, ಜಗತ್ತನ್ನು ಆಳುತ್ತಿಲ್ಲದಿದ್ದರೂ - ನಾವು ಖಚಿತವಾಗಿ ಮಾಡಬಲ್ಲ ಕೆಲಸವೆಂದರೆ, ಒಮ್ಮೆಗೆ ಒಬ್ಬ ವ್ಯಕ್ತಿಯ ಬದುಕನ್ನು ಸ್ಪರ್ಶಿಸುವುದು.
ಇದು ಅಸಮಾನ್ಯವಲ್ಲ, ಅಸಾಧ್ಯವಲ್ಲ - ಸಮಾನತೆಯ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆಯಾಗುತ್ತದೆ. ನಿಮ್ಮಲ್ಲಿ ಆ ಶಕ್ತಿ ಇದೆ, ಯಾರನ್ನಾದರೂ ನಿಮ್ಮ ಕರುಣೆಯಿಂದ ಮರುಕದಿಂದ ಸ್ನೇಹದಿಂದ ಸಹಾನುಭೂತಿಯಿಂದ ಪ್ರೀತಿಯಿಂದ ಸ್ಪರ್ಶಿಸುವ ಶಕ್ತಿ. ನಾನು ಕರುಣೆ, ಮರುಕ, ಸಹಾನುಭೂತಿ, ಸ್ನೇಹ ಎಂದೆಲ್ಲ ಮಾತನಾಡುವಾಗ, ನನ್ನ ಮಾತುಗಳು ತೀರಾ ಮುಗ್ಧವಾಗಿ ಕೇಳಬಹುದು. ಆದರೆ, ಸತ್ಯವೆಂದರೆ ನಾನು ಹೇಳುತ್ತಿರುವ ಮಾತುಗಳಲ್ಲಿ ನನಗೆ ನಂಬಿಕೆ ಇದೆ. ನಾನು ಹೇಳುತ್ತಿರುವುದು ಏನೆಂದರೆ, ಈ ಜಾಗತಿಕ ಗ್ರಾಮದಲ್ಲಿ ಪ್ರತಿ ದಿನವೂ ನಾವು ಮಹಾಯುದ್ಧಗಳನ್ನು ಹೋರಾಡುತ್ತಿಲ್ಲ, ಮಿಲಿಟರಿ ದಿಗ್ವಿಜಯಗಳನ್ನು ಗಳಿಸುತ್ತಿಲ್ಲ - ಪ್ರತಿ ದಿನವೂ ನಾವು ಸರಳವಾದ ಮಾನವೀಯ ಅಸಡ್ಡೆ ಅಲಕ್ಷ್ಯ,
ಕೈಲಾಗುವುದನ್ನೂ ಮಾಡದ ಅಕರ್ಮಣ್ಯತೆ, ನಿರ್ದಯತೆ, ಅಸಮಾನತೆಯ ಪರಿಣಾಮಗಳೊಡನೆ ಹೋರಾಡುತ್ತಿದ್ದೇವೆ. ನಮಗಿಂದು ಸೆಲ್ಫ್ ಲೀಡರ್‌ಶಿಪ್ ಬೇಕಿದೆ, ಸ್ವಯಂ ಮುನ್ನಡೆಯುವ ನಾಯಕತ್ವ ಬೇಕಿದೆ.
ನಮ್ಮ ಅಂತರಂಗದ ಈ ಮುಖಂಡತ್ವದ ಮೂಲಕ ನಾವು ಒಳ್ಳೆಯ ಮನುಷ್ಯರಾಗುವುದು, ಒಳ್ಳೆಯ ಜಗತ್ತಾಗಿ ಹೇಗೆ ಪರಿವರ್ತಿತವಾಗುತ್ತದೆ ಎಂದು ಕೇಳುತ್ತೀರಲ್ಲವೆ?
ನಾವು ವಿಜ್ಞಾನಿಗಳು ಎಂದಿಟ್ಟುಕೊಳ್ಳಿ, ನಾವು ಒಳ್ಳೆಯ ಮಾನವರಾದರೆ, ನಾವು ಸಮಾಜಕ್ಕೆ ಅಗತ್ಯವಿರುವ, ಸಹಾಯಕವಾದ ಅನ್ವೇಷಣೆಗಳನ್ನು ಮಾಡುತ್ತೇವೆ. ಒಳ್ಳೆಯ ವೈದ್ಯರಾಗಿದ್ದಲ್ಲಿ, ಒಳ್ಳೆಯ ಮನುಷ್ಯರಾದರೆ ರೋಗಗಳನ್ನು ನಿವಾರಿಸುವತ್ತ ದುಡಿಯುತ್ತೇವೆ. ಕಛೇರಿ, ಕಾರ್ಖಾನೆ, ಉದ್ದಿಮೆಗಳ ಮುಖ್ಯಸ್ಥರಾದರೆ, ಭ್ರಷ್ಟಾಚಾರವಿಲ್ಲದೆ ನಿಯತ್ತಿನ ಉದ್ಯಮವನ್ನು ನಡೆಸುತ್ತೇವೆ. ದೇಶದ ಮುಖಂಡರಾದರೆ, ನಮ್ಮ ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ದುಡಿಯುತ್ತೇವೆ, ನಮ್ಮ ಮುಂದಿನ ಪೀಳಿಗೆಯ ಒಳಿತನ್ನು ಯೋಚಿಸುತ್ತೇವೆ.
ಚರಿತ್ರೆಯುದ್ದಕ್ಕೂ ನಮ್ಮ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಬೇಕಾದ ವಿಜಾnನ, ತಂತ್ರಜ್ಞಾನ, ಸಂಪನ್ಮೂಲಗಳು ಇದ್ದೇ ಇದ್ದವು. ಆದರೆ ಇತಿಹಾಸದ ಕತ್ತಲೆಯ ತಿರುವುಗಳಲ್ಲಿ ಈ ಎಲ್ಲ ಸಂಪನ್ಮೂಲಗಳನ್ನು ಉದಾತ್ತ ಉಪಯೋಗದ ದಿಕ್ಕಿನತ್ತ ತೊಡಗಿಸಬೇಕಾದ ಆತ್ಮಪ್ರಜ್ಞೆ ಇಲ್ಲದಾಗಿತ್ತು. ದಿನಕ್ಕೆ 24,000 ಮಕ್ಕಳು ಬಡತನದಿಂದ ಸಾಯುತ್ತಿರುವಾಗ ನಾವು 1.5 ಟ್ರಿಲಿಯನ್ ಡಾಲರ್ ಅನ್ನು ಅಸ್ತ್ರ ಶಸ್ತ್ರಗಳಿಗೆ ವೆಚ್ಚ ಮಾಡುತ್ತಿದ್ದೇವೆ. ಇಂದು ನಾವು ಕುಳಿತಲ್ಲಿಂದ, ಮತ್ತೂಂದು ಖಂಡದಲ್ಲಿರುವ ಗುರಿಯ ಮೇಲೆ ಕ್ಷಿಪಣಿಯೊಂದನ್ನು ಒಂದು ಗುಂಡಿ ಒತ್ತಿ ನಿರ್ದೇಶಿಸಬಲ್ಲೆವು, ಆದರೆ ಅರ್ಧ ಮಾನವ ಜನಾಂಗಕ್ಕೆ ಸುರಕ್ಷಿತವಾದ ಕುಡಿಯುವ ನೀರನ್ನು ತಲುಪಿಸಲಾರೆವು. ನಮ್ಮಲ್ಲಿ ಸದಾ ಸಂಪನ್ಮೂಲಗಳಿವೆ, ಆದರೆ ಸತತ ಕರುಣೆ, ಆತ್ಮಸಾಕ್ಷಿ, ಬದ್ಧತೆ ಇಲ್ಲದಾಗಿದೆ.
ಸಮಸ್ಯೆಗಳಿಗೆ ಪರಿಹಾರಗಳು ಕೇವಲ ವಿಜಾnನ, ತಂತ್ರಜಾnನ, ರಾಜಕೀಯದಿಂದ ದೊರೆಯುವುದಿಲ್ಲ. ಪರಿಹಾರಗಳು ನಮ್ಮಿಂದ ಬರಲಿವೆ - ಸಮಾಜದ, ಸಮುದಾಯದ, ದೇಶದ, ವಿಶ್ವದ ಪ್ರಜೆಯಾಗಿ ಒಗ್ಗೂಡಿ ಪರಿಭಾವಿಸುವ ನಮ್ಮಿಂದ.
ಮೌಲ್ಯಗಳು ಮಾನವ ಜನಾಂಗದ ಭವಿಷ್ಯವನ್ನು ನಿರ್ಧರಿಸುತ್ತವೆ:
ಮೌಲ್ಯಗಳು ನಮ್ಮ ವ್ಯಕ್ತಿತ್ವದ ಬೇರುಗಳು. ಬೇರುಗಳನ್ನು ಪೋಷಿಸದಿದ್ದರೆ, ಅದರಿಂದ ಹೊರ ಚಿಮ್ಮುವ ವ್ಯಕ್ತಿತ್ವ ಎಷ್ಟೇ ಹಣವನ್ನು ಒಟ್ಟೈಸಲಿ, ಅಧಿಕಾರವನ್ನು ಗಳಿಸಲಿ ಪ್ರಸಿದ್ಧಿಯನ್ನು ಬಾಚಿಕೊಳ್ಳಲಿ, ಅದರಿಂದ ತನಗೇ ಆಗಲಿ, ಉಳಿದವರಿಗಾಗಲಿ, ಈ ಭೂಮಿಗಾಗಲಿ ಕಿಂಚಿತ್ತೂ ಉಪಯೋಗವಿಲ್ಲ.
ದಯೆ, ಕರುಣೆ, ಪ್ರಾಮಾಣಿಕತೆ, ನ್ಯಾಯಬದ್ಧತೆ - ಈ ಮಾನವೀಯ ಮೌಲ್ಯಗಳಿಲ್ಲದೆ ಕುರುಡಾದ ಸಮಾಜ ಎಷ್ಟೇ ಭೌತಿಕ ಪ್ರಗತಿಯನ್ನು ಸಾಧಿಸಿದರೂ ಸಾವಿರ ಸಮಸ್ಯೆಗಳ ಸಿಕ್ಕಿನಿಂದ ಹೊರ ಬಾರದು. ಯಶಸ್ಸು, ಪ್ರಗತಿಯ ನಿರ್ವಚನವನ್ನು ಬದಲಿಸಬೇಕಿದೆ. ಯಾವುದು ಅಭಿವೃದ್ಧಿಯೆಂದು ಪುನರ್ ಯೋಚಿಸಿಬೇಕಿದೆ. ಅಭಿವೃದ್ಧಿಯನ್ನು ಬೆನ್ಹತ್ತುವ ಬಗೆಯಲ್ಲಿ ಬದಲಾವಣೆ ಬೇಕಿದೆ, ಸಾಮಾಜಿಕ ಕ್ರಾಂತಿಯಾಗಬೇಕಿದೆ. ಎಲ್ಲರನ್ನು ಒಳಗೊಂಡ "ಇನ್‌ಕ್ಲೂಸಿವ್ ಗ್ರೋತ್', ಯಾರನ್ನೂ ಶೋಷಿಸದೆ ಅಂಚಿಗೆ ತಳ್ಳದೆ, ತಾಳಿ ಉಳಿಯಬಲ್ಲ "ಸಸ್ಟೇನೆಬಲ್ ಗ್ರೋತ್' ಅನ್ನು ನಾವು ಕಂಡುಕೊಳ್ಳಬೇಕಿದೆ. ಅದು ಮಾನವೀಯ ಮೌಲ್ಯಗಳ ಆಧಾರಿತ ಪ್ರಗತಿಯಿಂದ ಮಾತ್ರ ಸಾಧ್ಯವಿದೆ. ಯಾರೊಬ್ಬರನ್ನೂ ಹಿಂದೆ ಬಿಡದ, ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಪಯಣ ಮಾತ್ರ ಶಾಂತಿಯನ್ನು ಸಂತಸವನ್ನು ತರಬಲ್ಲದು.
*
*
ಕಲಕತ್ತೆಯ ಐ.ಐ.ಎಮ್.ನಲ್ಲಿ, ಹಕ್ಕಿಗಳ ಚಿಲಿಪಿಲಿಯ ಏಕಾಂತದ ಆ ಸಂಜೆ, ಸರೋವರದ ಬಗಲಿನ ಗ್ರಂಥಾಲಯದಲ್ಲಿ ಕುಳಿತು, ಭೂತಾನಿನ ಈ ಕಿರಿಯ ವಯಸ್ಸಿನ ದೊರೆಯ ಸರಳ ಮಾತುಗಳ ಮಹತ್ತರ ಪರಿಣಾಮಗಳನ್ನು ಓದುತ್ತಿದ್ದಂತೆ, ನಮ್ಮೆಲ್ಲ ಸಮಸ್ಯೆಗಳಿಗೆ ಮನುಷ್ಯ ತನ್ನ "ನೈತಿಕ ದಿಕ್ಸೂಚಿ'ಯನ್ನು ಮರೆತಿರುವುದೇ ಕಾರಣ ಅನಿಸಿತ್ತು. ನಮ್ಮಿಂದ ಬದಲಾವಣೆ ಆರಂಭವಾಗಲಿ. ಗಾಂಧಿಯ ಅವೇ ಸತ್ಯ, ಪ್ರಾಮಾಣಿಕತೆ, ಮಾನವೀಯತೆಯ ಮಾರ್ಗದಲ್ಲಿ, ಎಲ್ಲ ಧರ್ಮಗಳೂ ಬೋಧಿಸಿದ ಅತಿ ಪುರಾತನ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಹಾತ್ಮರ ಹುಟ್ಟಿಗೆ ಕಾಯದೆ, ಅಂತರಂಗದ ಬೆಳಕಿನಲ್ಲಿ ನಾವು ಮುನ್ನಡೆಯಬಲ್ಲೆವು.
ನಾವು ಸಮಸ್ಯೆಯ ಭಾಗವಾಗದೆ ಪರಿಹಾರದ ಭಾಗವಾಗಲು ಸಾಧ್ಯವಿದೆ.