Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಉಡುಪಿಯಲ್ಲಿ ಮೂಡಲಿದೆ ಗ್ರಾಫಿಕ್‌ ಕಲಾಕೃತಿ ಚಿತ್ತಾರ...
    • ಯುವಕಲಾವಿದೆ ಬೆಂಗಳೂರಿನ ಶೃತಿ ಸಿ.ವಿ. ಅವರು ಚಿತ್ರಕಲೆಯ ಮೂಲಕ ''''ಗ್ರಾಫಿಕ್‌ ಕಲಾಕೃತಿ'' ರಚಿಸಿದ್ದಾರೆ.

      • * ಚೇತನ್‌ ಪಡುಬಿದ್ರಿ | Feb 22, 2012

        ಉಡುಪಿ: 'ಗ್ರಾಫಿಕ್‌' ಎಂದ ಕೂಡಲೇ ನಮಗೆ ಥಟ್ಟನೆ ನೆನಪಾಗೋದು ಕಂಪ್ಯೂಟರ್‌ ನಿರ್ಮಿತ ಚಿತ್ರಗಳು. ಆದರೆ ಇಲ್ಲಿ ಹಾಗಲ್ಲ. ಯುವಕಲಾವಿದೆ ಬೆಂಗಳೂರಿನ ಶೃತಿ ಸಿ.ವಿ. ಅವರು ಚಿತ್ರಕಲೆಯ ಮೂಲಕ 'ಗ್ರಾಫಿಕ್‌ ಕಲಾಕೃತಿ' ರಚಿಸಿದ್ದಾರೆ.

        ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಕಾರದಲ್ಲಿ ಫೆ. 23ರಿಂದ 27ರ ವರೆಗೆ ಬೆಳಗ್ಗೆ 9.30ರಿಂದ ಸಂಜೆ 5ರ ವರೆಗೆ ಉಡುಪಿಯ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಶೃತಿಯವರು ರಚಿಸಿರುವ 20 ಗ್ರಾಫಿಕ್‌ ಕಲಾಕೃತಿಯ ಏಕವ್ಯಕ್ತಿ ಕಲಾ ಪ್ರದರ್ಶನವು ನಡೆಯಲಿದೆ.

        ರಚಿಸುವ ವಿಧಾನ ಹೀಗಿದೆ:

        ಈ ಚಿತ್ರಕಲೆಯನ್ನು ಮೆಟಲ್‌ ಶೀಟ್‌ಗಳ ಮೇಲೆ ರಚಿಸಿ ಆಮೇಲೆ ಪ್ರಿಂಟಿಂಗ್‌ ಪೇಪರ್‌ ಮೇಲೆ ಅಚ್ಚು ಹಾಕಲಾಗುತ್ತದೆ. ಚಿತ್ರರೂಪಕ್ಕೆ ತಕ್ಕಂತೆ ಯೋಜನೆ ಹಾಕಿಕೊಂಡು ತಾಮ್ರ ಇಲ್ಲವೇ ಹಿತ್ತಾಳೆ ಶೀಟುಗಳ ಆಕ್ವಾ ಪೌಡರ್‌ ಹಾಕಿ ಅದರ ಮೇಲೆ ಆಸಿಡ್‌ ದ್ರವ ಹಾಕಲಾಗುತ್ತದೆ. ಆಮೇಲೆ ತಳಗಡೆಯಿಂದ ಬಿಸಿ ಮಾಡಲಾಗುತ್ತದೆ. (ಇದನ್ನು ಅಕ್ವಾಟಿಂಟ್‌ ಮಾಧ್ಯಮವೆಂದು ಕರೆಯಲಾಗುತ್ತದೆ.) ಬಳಿಕ ಶೀಟನ್ನು ರಾಸಾಯನಿಕ ಬಳಸಿ ತೊಳೆದು, ಆಫ್ಸೆಟ್‌ ಇಲ್ಲವೇ ಲೆಟರ್‌ ಪ್ರಸ್‌ಗೆ ಬಳಸುವ ಕಲರ್‌ ಇಂಕ್‌ ಹಾಕಬೇಕು. ಆನಂತರ ಚಿತ್ರಕ್ಕೆ ಬಣ್ಣ ನೀಡಲಾಗುತ್ತದೆ. ಕೊನೆಯಲ್ಲಿ ಮೆಟಲ್‌ ಶೀಟಿನಿಂದ ಬಿಳಿ ಹಾಳೆಗೆ ಅಚ್ಚು ಹಾಕಿದಾಗ 'ಗ್ರಾಫಿಕ್‌' ಚಿತ್ರಕಲೆ ಹಾಳೆಯಲ್ಲಿ ನಿರ್ಮಾಣಗೊಳ್ಳುತ್ತದೆ.

        ಈ ರೀತಿಯಾಗಿ ಗ್ರಾಫಿಕ್‌ ಚಿತ್ರಕಲೆಗೆ 'ಆಕ್ವಾಟಿಂಟ್‌' ಒಂದು ಮಾಧ್ಯಮವಾದರೆ 'ಡ್ರೈ ಪಾಯಿಂಟ್‌' ಇನ್ನೊಂದು ಮಾಧ್ಯಮ. ಇದರಲ್ಲಿ ಶೀಟನ್ನು ಬಳಸಿಕೊಂಡು ನೀಡಲ್‌, ಟೂಲ್ಸ್‌ಗಳ ಮುಖಾಂತರ ಗ್ರಾಫಿಕ್‌ ಚಿತ್ರ ರಚಿಸಲಾಗುತ್ತದೆ.

        ವಿಭಿನ್ನ ಕಲೆ 'ಗ್ರಾಫಿಕ್‌' ಚಿತ್ರಕಲೆ:

        ಆಧುನಿಕ ತಾಂತ್ರಿಕತೆಗೆ ಚಿತ್ರಕಲೆಗಳು, ಚಿತ್ರಕಾರರು ನಲುಗಿ ಹೋಗಿದ್ದಾರೆ. ಆದರೂ ಚಿತ್ರಕಲೆ ಶ್ರೀಮಂತವಾಗಿಯೇ ಇದೆ. ಇತರೇ ಕಲೆಗಳಿಗಿಂತ ಈ 'ಗ್ರಾಫಿಕ್‌' ಕಲೆಯ ಬಗ್ಗೆ ವಿವರಿಸೋದೇ ಕಷ್ಟ. ಇದೊಂದು ಕಠಿನವಾದ ವಿಭಿನ್ನ ಐತಿಹಾಸಿಕ ಕಲೆ. ಇತರೇ ಕಲೆಗಳ ಅಬ್ಬರದಿಂದ ತೆರೆಮರೆಯಲ್ಲಿ ಇದೆಯಷ್ಟೆ. ಗ್ರಾಫಿಕ್‌ ಚಿತ್ರಕಲೆಗೆ ಐತಿಹಾಸಿಕ ಹಿನ್ನೆಲೆ ಇದೆ. ವಿದೇಶದಲ್ಲಿ ಈ ಕಲೆ ಬಹಳ ಪ್ರಸಿದ್ಧಿ ಪಡೆದಿತ್ತು ಎಂದು ಕಲಾಕಾರರು ಅಭಿವ್ಯಕ್ತಪಡಿಸುತ್ತಾರೆ. ದಕ್ಷಿಣ ಜರ್ಮನಿಯ ಕಲಾಕಾರರಾದ ರೆಮ್ರಾಂಟ್‌, ಆಲ್ಬರ್ಟ್‌ ಡ್ನೂರ್‌, ಅಲೆಕ್ಸ್‌ ಕಾಟ್ಜ್ ಮೊದಲಾದವರು ಈ ಕಲೆಗೆ ಹೆಚ್ಚು ಮಹತ್ವ ನೀಡಿ ಬೆಳೆಸಿದ್ದರು ಎಂದು ಇತಿಹಾಸ ಹೇಳುತ್ತದೆ.

        ಬೆಂಗಳೂರಿನಲ್ಲಿ ಈ ಕಲೆಯ ಕಲಾಕಾರರು ಹೆಚ್ಚಾಗಿದ್ದಾರೆ. ಕರಾವಳಿಯಲ್ಲಿ ಈ ಚಿತ್ರಕಲೆಯ ಕಲಾಕಾರರು ಕಡಿಮೆ. ಗ್ರಾಫಿಕ್‌ನ ಒಂದು ಚಿತ್ರ ರಚಿಸಲು ಗರಿಷ್ಠ ತಿಂಗಳು ಕಳೆದರೂ ಅಚ್ಚರಿಯಿಲ್ಲ. ಸಮಯದೊಂದಿಗೆ ತಾಳ್ಮೆ, ಸಹನೆ ಇದ್ದರೆ ಮಾತ್ರ ಈ ಕಲೆ ರಚಿಸಲು ಸಾಧ್ಯ. 'ಗ್ರಾಫಿಕ್‌' ಕಲಾಪ್ರಿಯರು ವಿರಳವಾದರೂ ಬೇಡಿಕೆ ಕುಂದಿಲ್ಲ ಎನ್ನುತ್ತಾರೆ ಕಲಾವಿದೆ ಶೃತಿ.

        ಶೃತಿ ರಚಿಸಿದ ಚಿತ್ರಕಲೆ ಹೀಗಿದೆ...

        ಇಲ್ಲಿ ಎಲ್ಲವೂ ನೈಜತೆ ಪ್ರತಿಬಿಂಬಿಸೋ ಚಿತ್ರಗಳು. ತನ್ನ ಮನೆಯ ಬಾಗಿಲು, ಗೋಡೆ, ಕಿಟಕಿ, ಪರದೆ, ಕಪಾಟು, ಮೆಟ್ಟಿಲು, ಕೋಣೆ, ಕಂಪ್ಯೂಟರ್‌, ಬಟ್ಟೆಬರೆ ಮುಂತಾದ ವಸ್ತುಗಳನ್ನು ಮನದಲ್ಲಿಟಟುಕೊಂಡು ಅದರ ಚಿತ್ರಗಳನ್ನೇ ರಚಿಸಿದ್ದಾರೆ ಶೃತಿಯವರು. ಇವರು ರಚಿಸಿದ 20 ಚಿತ್ರಕಲೆಯೂ ಅವರ ಮನೆಯ ಚಿತ್ರಣದ ಸಂಪೂರ್ಣ ವಾಸ್ತವತೆಯನ್ನು (ಮನೆತನ, ಬಾಲ್ಯದ ನೆನಪು, ಕನಸು ಇತ್ಯಾದಿ...) ತೆರೆದಿಟ್ಟಿದೆ.

        ಕಲಾವಿದೆಯ ಬಗ್ಗೆ:

        ಬೆಂಗಳೂರಿನ ಉದ್ಯಮಿ ಶ್ರೀನಿವಾಸ ನಗರದ ವೆಂಕಟೇಶ್‌-ಶ್ರೀದೇವಿ ದಂಪತಿಯ ಪುತ್ರಿಯಾಗಿರುವ ಶೃತಿ ಸಿ.ವಿ. ಅವರು ಬೆಂಗಳೂರಿನ ಕಲಾಮಂದಿರ ಶಾಲೆಯಲ್ಲಿ 5 ವರ್ಷ ಕಲಾ ಡಿಪ್ಲೋಮಾ ತರಬೇತಿ ಪಡೆದು ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಲವು ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಕೂಡಾ ಪಡೆದಿರುವ ಇವರು ಬೆಂಗಳೂರಿನಲ್ಲಿ ಪ್ರಿಂಟ್‌ಮೇಕಿಂಗ್‌ ಮತ್ತು ಚಿತ್ರಕಲಾ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ನಡೆಸುತ್ತಿದ್ದಾರೆ. ಇವರ ಚಿತ್ರಗಳನ್ನು ಕಂಡು ಕಲಾವಿದ, ಕಲಾ ವಿಮರ್ಶಕ ಚಿ.ಸು. ಕೃಷ್ಣ ಸೆಟ್ಟಿ ಅವರು ಶೃತಿ ರಚಿಸಿದ ಚಿತ್ರವಿರುವ ಪರಿಚಯ ಪುಸ್ತಕದಲ್ಲಿ 'ಸ್ತ್ರೀಮನದ ಒಳಾಂಗಣದೊಳಗೆ' ಎನ್ನುವ ಮುನ್ನುಡಿ ಬರೆದಿದ್ದಾರೆ.


        ಚಿತ್ರಕಲಾ ಮಾಧ್ಯಮದಲ್ಲಿ ಒಂದು ಭಾಗವಾಗಿರುವ 'ಗ್ರಾಫಿಕ್‌ ಚಿತ್ರಕಲೆ'ಯು ಕರಾವಳಿಯಲ್ಲಿ ಅಷ್ಟೊಂದು ಪ್ರಭಾವ ಬೀರಿಲ್ಲ. ಪ್ರಸಿದ್ಧಿ ಪಡೆದಿಲ್ಲ. ಕೆಲವೊಂದು ಕಲಾವಿದರಿಗೆ ಬಿಟ್ಟರೆ ಹೆಚ್ಚಿನವರಿಗೆ ಈ ಕಲೆಯ ಬಗ್ಗೆ ತಿಳಿದಿಲ್ಲ. ವಿದ್ಯಾರ್ಥಿಗಳ ಆಸಕ್ತಿಯ ಮೇಲೆ ಚಿತ್ರಕಲಾ ಶಾಲೆಗಳಲ್ಲಿ ಈ ಬಗ್ಗೆ ಕಲಿಸಲಾಗುತ್ತಿದೆ. ಈ ಕಲೆಯು ವಿಸ್ತೃತಗೊಂಡಿರದ ಕಾರಣ ಕರಾವಳಿಯಲ್ಲಿ ಪ್ರಚಲಿತದಲ್ಲಿಲ್ಲ. ಆದರೂ ಈ ಕಲೆಯ ಅಭಿರುಚಿ ಇರೋರು ಇಲ್ಲೂ ಇದ್ದಾರೆ. ಇದರ ಬೆಳವಣಿಗೆಗೆ ವಿಶೇಷ ವೇದಿಕೆ ಬೇಕಿದೆ ಎನ್ನುತ್ತಾರೆ ಕಲಾವಿದ ಪಿ.ಎನ್‌. ಆಚಾರ್ಯ ಮಣಿಪಾಲ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus