Udayavani | Feb 22, 2012
ಶಿರಸಿ: ಮೂರು ವರ್ಷಗಳಿಂದ ಇಲ್ಲಿನ ತೋಟಗಾರಿಗೆ ಇಲಾಖೆ ಆವಾರದಲ್ಲಿ ಫಲ ಪುಷ್ಪ ಜಾತ್ರೆ ನಡೆಯುತ್ತಿದ್ದು, ಈ ಬಾರಿ ಫೆ. 28ರಂದು ಜಿಲ್ಲೆ, ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸಲಿರುವ ಬಗೆ ಬಗೆಯ ಪುಷ್ಪಗಳು ಮೂರು ದಿನಗಳ ಕಾಲ ಸಾರ್ವಜನಿಕರ ಕಣ್ಮನ ಸೆಳೆಯಲಿದೆ.
ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯಕ ಈ ವಿಷಯ ತಿಳಿಸಿ, ಫಲ ಪುಷ್ಪಗಳ ಆಕರ್ಷಣೆ, ತೋಟಗಾರಿಕಾ ಬೆಳೆಗಳ ಪ್ರದರ್ಶನ, ಸ್ಪರ್ಧೆ, ತರಕಾರಿ ಕೆತ್ತನೆ, ಹೂಗಳ ಜೋಡಣೆ, ವಿಚಾರ ಸಂಕಿರಣ ನಡೆಯಲಿವೆ. ಜಿಲ್ಲೆಯ ರೈತರಿಗೆ ಮಾಹಿತಿ ವಿನಿಮಯ ಮಾಡಬೇಕು, ಹೊಸ ಬೆಳೆಗಳ ಕುರಿತು ಆಕರ್ಷಣೆ ಮೂಡಿಸಬೇಕು ಎಂಬ ಕಾರಣಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪೂಣಾ, ಬೆಂಗಳೂರುಗಳಿಂದ ಬಗೆ ಬಗೆಯ ಪುಷ್ಪಗಳು ಬರಲಿವೆ. ಈಗಾಗಲೇ ಸಾಕಷ್ಟು ಬಂದಿವೆ. ಕೆಲವನ್ನು ಜಿಲ್ಲೆಯ ಪುಷ್ಪ ಬೆಳೆಗಾರರು ಬೆಳೆಸಿದ ಹೂವುಗಳು ನಳನಳಿಸಲಿವೆ. ವರ್ಜೀನಾ, ಬಟನ್ ಸೇವಂತಿಗೆ, ಮ್ಯಾರಿಗೋಲ್ಡ, ಕೋಳಿಪುಕ್ಕ, ಬಗೆ ಬಗೆ ಗೊಂಡೆ, ಸಾಲ್ವಿಯ, ಪೆಂಟಾಸ್, ಪೆಟೋನಿಯಂ, ಗುಲಾಬಿ, ಶಂಖ ಪುಷ್ಪಗಳನ್ನು ವೈನಾಗಿ ಅನಾವರಣಗೊಳಿಸಲು ಸಿದ್ಧತೆ ಮಾಡಲಾಗಿದೆ. ಒಂದೇ ಜಾತಿಯ ಹೂವುಗಳಲ್ಲಿ ಅನೇಕ ಬಣ್ಣಗಳಿವೆ. ಸಾಧ್ಯವಾದಷ್ಟು ಬಣ್ಣಗಳನ್ನು ಸಂಗ್ರಹಿಸಲಾಗಿದೆ ಎಂದು ನಾಯಕ ವಿವರಿಸಿದರು.
ಕಳೆದ ವರ್ಷ ಇಡಗುಂಜಿ ಗಣಪತಿ, ಬನವಾಸಿ ನಂದಿ, ಈಶ್ವರನ ಪ್ರತಿಮೆಯನ್ನು ಹೂಗಳಲ್ಲಿ ಸಿಂಗರಿಸಿದಂತೆ ಈ ಬಾರಿ ಯಕ್ಷಗಾನದ ವೇಷಧಾರಿ ಚಿತ್ರಣ ಮೂಡಿ ಬರಲಿದೆ. ಬದನೆ, ಟೊಮೇಟೋಗಳ ತರಕಾರಿ ಮಾದರಿ ಪ್ರಾತ್ಯಕ್ಷಿಕೆ ಮಾಡಲಾಗಿದೆ. ತರಕಾರಿ ಕೆತ್ತನೆ ಹಾಗೂ ಅವುಗಳ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ ಎಂದರು.

ಮೂರು ದಿನಗಳ ಫಲ ಪುಷ್ಪ ಪ್ರದರ್ಶನದಲ್ಲಿ ತರಕಾರಿ, ತೋಟಗಾರಿಕಾ ಬೆಳೆಗಳ ಪ್ರದರ್ಶನದ ನಡೆಯಲಿದೆ. 28ರ ಬೆಳಿಗ್ಗೆ 10:30ಕ್ಕೆ ಪುಷ್ಪ ರಂಗೋಲಿ ಹಾಗೂ ಹೂ ಜೋಡಣೆ ಸ್ಪರ್ಧೆ ಇದೆ. ಫೆ.27ರ ಬೆಳಿಗ್ಗೆ 11ರಿಂದ ಇಕೆಬಾನ ಹೂವಿನ ಜೋಡಣೆ ಕಾರ್ಯಾಗಾರ ಬೆಂಗಳೂರಿನ ತಜ್ಞೆ ಸಂಧ್ಯಾ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸುಮಾರು ನಾಲ್ಕು ಲಕ್ಷ ರೂ. ಮೊತ್ತದಲ್ಲಿ ಪ್ರದರ್ಶನ ನಡೆಯಲಿದೆ. ಫೆ.28ರ ಸಂಜೆ 4:30ಕ್ಕೆ ೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಮೀನುಗಾರಿಕ ಸಚಿವ ಆನಂದ ಆಸ್ನೋಟಿಕರ, ಜಿ.ಪಂ. ಅಧ್ಯಕ್ಷೆ ಸುಮಾ ಲಮಾಣಿ, ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿ.ಎಸ್. ಪಾಟೀಲ, ಸುನೀಲ ಹೆಗಡೆ, ಜೆ.ಡಿ. ನಾಯ್ಕ ಇತರರು ಹಾಜರಿರುವರು ಎಂದು ನಾಯಕ ತಿಳಿಸಿದರು.

ಫೆ.29ರ ಬೆಳಿಗ್ಗೆ 10:30ರಿಂದ ವಿಚಾರ ಸಂಕಿರಣ ಕೂಡ ನಡೆಯಲಿದ್ದು, ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಕುರಿತು ಡಾ| ಲಕೀÒನಾರಾಯಣ ಹೆಗಡೆ, ಮಣ್ಣು ಪರೀಕ್ಷೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಶಂಕರ ಹೆಗಡೆ, ಅಲಂಕಾರಿಕ ಮೀನುಗಾರಿಕೆ ಉದ್ದಿಮೆ ಕುರಿತು ಡಾ| ಇ.ಜಿ. ಜಯರಾಜ, ಮಾ.1ರ ಬೆಳಿಗ್ಗೆ 10:30ಕ್ಕೆ ಮಲೆನಾಡಿನಲ್ಲಿ ಹೈನುಗಾರಿಕೆ ಸಮಸ್ಯೆಗಳು ಪರಿಹಾರದ ಕುರಿತು ಡಾ| ಜಿ.ಎಸ್. ಭಟ್ಟ, ಹಿಪ್ಪು ನೇರಳೆ ಬೇಸಾಯ ಹಾಗೂ ರೇಷ್ಮೆ ಹುಳು ಕುರಿತು ರೇವಣಸ್ವಾಮಿ ಮಾತನಾಡಲಿದ್ದಾರೆ.
ಪ್ರದರ್ಶನದಲ್ಲಿ ಸುಮಾರು 70ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಲಿವೆ. ವಿವಿಧ ಕೃಷಿ ಸಂಬಂಧಿತ ಇಲಾಖೆಗಳ ಮಳಿಗೆಗಳು, ಸ್ವ-ಸಹಾಯ ಸಂಘಗಳು, ವಿವಿಧ ಕೃಷಿ ಯಂತ್ರೋಪಕರಣಗಳು ಪಾಲ್ಗೊಳ್ಳಲಿವೆ. ರೈತರಿಗೆ ಮನರಂಜನೆ ಜೊತೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಆರ್.ನಾಯಕ ತಿಳಿಸಿದರು.

ತೋಟಗಾರಿಕಾ ಅಧಿಕಾರಿಗಳಾದ ರಾಮಚಂದ್ರ ಮಡಿವಾಳ, ಸತೀಶ ಹೆಗಡೆ, ಸುಧಾಕರ ಕೆ.ಎ ಇತರರು ಇದ್ದರು.
ಫಲ-ಪುಷ್ಪ ತನ್ನಿ
ಜಿಲ್ಲೆಯ ತೋಟಗಾರಿಕಾ ಬೆಳೆಗಾರರು, ಪುಷ್ಪ ಬೆಳೆಗಾರರು ತಮ್ಮಲ್ಲಿನ ಆಕರ್ಷಕ ಗ್ಲಡಿಯೋಲಸ್, ಅಂಥೋರಿಯಂ ಸೇರಿದಂತೆ ಇತರ ಪುಷ್ಪ, ಅಡಿಕೆ, ಕಾಳು ಮೆಣಸು ಇತರ ತೋಟಗಾರಿಕಾ ಬೆಳೆಗಳು, ತರಕಾರಿಗಳನ್ನು ಪ್ರದರ್ಶನ ಹಾಗೂ ಸ್ಪರ್ಧೆಗೆ ತರಬಹುದುಗಾಗಿದೆ. ಆಯಾ ತಾಲೂಕಿನ ತೋಟಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಈ ಕುರಿತು ಸಂಪರ್ಕ ಮಾಡಬಹುದಾಗಿದೆ. ಫೆ.27 ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕಡೆ ದಿನವಾಗಿದೆ. ಸಮಾರೋಪ ದಿನದಂದು ಪ್ರಶಸ್ತಿ ಪತ್ರಿಕೆ ಬಹುಮಾನ ವಿತರಣೆ ಮಾಡಲಾಗುತ್ತದೆ.
ಎಚ್.ಆರ್. ನಾಯಕ