Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • 60 ಲಕ್ಷ ರೂ. ಸೊತ್ತು ವಶ
  • ಲಾರಿ ಕಳವು ಮತ್ತು ಮಾರಾಟ : ಆರೋಪಿಗಳ ಸೆರೆ
  • ಲಾರಿ ಕಳವು ಮತ್ತು ಮಾರಾಟ : ಆರೋಪಿಗಳ ಸೆರೆ - ವಿಡಿಯೋ

    • Udayavani | Feb 22, 2012


      ಮಂಗಳೂರು: ಲಾರಿ, ಟಿಪ್ಪರ್‌ ಮತ್ತು ಇತರ ವಾಹನಗಳನ್ನು ಕಳವು ಮಾಡಿ ಅವುಗಳ ಬಿಡಿ ಭಾಗಗಳನ್ನು ವಿಂಗಡಿಸಿ ಬಳಿಕ ಅವುಗಳನ್ನು ಜೋಡಿಸಿ ಹೊಸ ವಾಹನವನ್ನು ತಯಾರಿಸಿ ಅದಕ್ಕೆ ಹಳೆಯ ವಾಹನದ ನೋಂದಣಿ ಸಂಖ್ಯೆಯನ್ನು ನೀಡಿ ಹೊಸ ವಾಹನವೆಂದು ನಂಬಿಸಿ ಮಾರಾಟ ಮಾಡಿ ಹಣ ಮಾಡುವ ದಂಧೆಯ ಜಾಲವನ್ನು ಬೇಧಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

      ಈ ಸಂಬಂಧ ಇಬ್ಬರನ್ನು ಬಂಧಿಸಿ 60,00,000 ರೂ., ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

      ಕುಲಶೇಖರದ ಕೋಟಿ ಮುರದ ನವೀನ್‌ ನೊರೋನ್ಹಾ (36) ಮತ್ತು ಕಕ್ಕೆಬೆಟ್ಟುವಿನ ಧನಂಜಯ (25) ಬಂಧಿತ ಆರೋಪಿಗಳು. 4 ಟಿಪ್ಪರ್‌ ಲಾರಿಗಳು, 1 ಲಾರಿಯ ಟಾಪ್‌, 1 ಟಿಪ್ಪರ್‌ ಲಾರಿಯ ಬಾಡಿ, 6 ಹೊಸ ಟೈರುಗಳು, 1 ಹಳೆ ಟೈರು, 3 ಡಿಸ್ಕ್ಗಳು, 4 ಜಾಕಿಗಳು, 1 ಬುಲೆಟ್‌ ಬೈಕ್‌, ಐದುವರೆ ಟನ್‌ ಕಬ್ಬಿಣದ ಸರಳುಗಳು, ಕಳವು ಮಾಡಿದ ಸೊತ್ತುಗಳನ್ನು ಸಾಗಿಸಲು ಮತ್ತು ಕಳವು ಮಾಡಲು ಬೆಂಗಾವಲಾಗಿ ಹೋಗಲು ಉಪಯೋಗಿಸುತ್ತಿದ್ದ 1 ಲಾರಿ, 2 ಸ್ವಿಫ್ಟ್ ಡಿಸೈರ್‌ ಕಾರು, 1 ಮ್ಯಾಟಿಸ್‌ ಕಾರು, 1 ಕೈನೆಟಿಕ್‌ ಬೈಕ್‌- ಇವು ಆರೋಪಿಗಳ ಬಳಿಯಿಂದ ವಶ ಪಡಿಸಿಕೊಂಡ ಸೊತ್ತುಗಳು.

      ಇವೆಲ್ಲವೂ ಬಜಪೆ, ಪಣಂಬೂರು, ಮೂಲ್ಕಿ, ಕಾವೂರು, ಮೂಡಬಿದಿರೆ, ಸುರತ್ಕಲ್‌ ಮತ್ತು ಇತರ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿದ ವಾಹನಗಳಾಗಿವೆ.


      58 ಲಾರಿ ಕಳವು; 13 ಪತ್ತೆ

      ಈಗ 13 ವಾಹನಗಳು ಮಾತ್ರ ಪತ್ತೆಯಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ವರ್ಷದಿಂದೀಚೆಗೆ ಸುಮಾರು 58 ಲಾರಿಗಳು ಕಳವಾಗಿದ್ದು, ಈ ಎಲ್ಲಾ ಕಳವು ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿರಬಹುದೇ ಎಂಬ ಗುಮಾನಿ ಇದೆ. ಅಲ್ಲದೆ ಈ ದಂಧೆಯಲ್ಲಿ ಇವರ ಜತೆಗೆ ಇನ್ನೂ ಸುಮಾರು 5-6 ಮಂದಿ ಸಹಿತ ದೊಡ್ಡ ಜಾಲವೇ ಇರಬಹುದು ಎಂಬ ಸಂಶಯವಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿಸಿಪಿಗಳಾದ ಎಂ. ಮುತ್ತೂರಾಯ ಮತ್ತು ಡಿ. ಧರ್ಮಯ್ಯ ಅವರು ಉಪಸ್ಥಿತರಿದ್ದರು.


      ಹೀಗೆ ಮಾಡುತ್ತಿದ್ದರು ...

      ಆರೋಪಿಗಳು ಲಾರಿ/ಟಿಪ್ಪರ್‌ಗಳನ್ನು ಕಳವು ಮಾಡಿ ತಂದು ಕೂಡಲೇ ಅವುಗಳ ಬಿಡಿ ಭಾಗಗಳನ್ನು ಕಳಚುತ್ತಿದ್ದರು. ಬಳಿಕ ಎಲ್ಲವುಗಳನ್ನು ಸೇರಿಸಿ ಪುನಃ ಜೋಡಿಸಿ ಪೈಂಟ್‌ ಬಳಿದು ಹೊಸ ವಾಹನವೊಂದನ್ನು ತಯಾರಿ ಮಾಡುತ್ತಿದ್ದರು. ಕೇವಲ ನಾಲ್ಕು ದಿನಗಳಲ್ಲಿ ಒಂದು ಹೊಸ ಲಾರಿ ತಯಾರಾಗುತ್ತಿತ್ತು. ಹಳೆಯ ವಾಹನದ ನೋಂದಣಿ ನಂಬ್ರವನ್ನು ನಮೂದಿಸಿ ಬಳಿಕ ಅದನ್ನು ಮಾರಾಟ ಮಾಡುತ್ತಿದ್ದರು.

      ಹೀಗೆ ತಯಾರಾದ ವಾಹನವನ್ನು ಅಂತಿಮವಾಗಿ ಮಾರಾಟ ಮಾಡುವ ವ್ಯಕ್ತಿಯ ಮಾಹಿತಿ ಲಭಿಸಿದ್ದು, ಆತನನ್ನು ಮತ್ತು ಈ ಜಾಲದ ಇತರರನ್ನು ಶೀಘ್ರದಲ್ಲಿಯೇ ಬಂಧಿಸುವ ಆಶಾವಾದ ಹೊಂದಲಾಗಿದೆ ಎಂದು ಸೀಮಂತ್‌ ಕುಮಾರ್‌ ಸಿಂಗ್‌ ವಿವರಿಸಿದರು.

      ಆರೋಪಿಗಳು ಮನೆ ಪಕ್ಕದಲ್ಲಿಯೇ ವಾಹನಗಳ ಭಾಗಗಳನ್ನು ಕಳಚುವ ಮತ್ತು ಜೋಡಿಸುವ ಕೆಲಸ ನಿರ್ವಹಿಸುತ್ತಿದ್ದು, ಇದರಿಂದಾಗಿ ಯಾರಿಗೂ ಸಂಶಯ ಬರುತ್ತಿರಲಿಲ್ಲ. ಪೊಲೀಸರು ಖಚಿತ ಮಾಹಿತಿ ಮೇರೆಗೆ ಬುಧವಾರ ದಾಳಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬೇಧಿಸಿದರು.

      ಪಣಂಬೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ವೆಲೆಂಟೈನ್‌ ಡಿ'ಸೋಜಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕೀರ್ತಿ ಕುಮಾರ್‌, ಎಎಸ್‌ಐಗಳಾದ ಕೊರಗಪ್ಪ, ಶಿವಪ್ರಕಾಶ್‌, ಸೀತಾರಾಮ ಗೌಡ, ಸಿಬಂದಿ ದೇವು ಶೆಟ್ಟಿ, ಜನಾರ್ದನ ಗೌಡ, ಬಾಲಕೃಷ್ಣ ರೈ, ವಿನಯ ಕುಮಾರ್‌, ಅಬ್ದುಲ್‌ ಜಬ್ಟಾರ್‌, ಉದಯ ಕುಮಾರ್‌, ಸುಜನ್‌ ಶೆಟ್ಟಿ, ಚಂದ್ರಹಾಸ ಆಳ್ವ, ಸತೀಶ್‌, ರಾಮಣ್ಣ, ರಾಜೇಶ್‌, ಹರೀಶ್‌ ಭಾಗವಹಿಸಿದ್ದರು.


      ನಗದು ಬಹುಮಾನ

      ಕಾರ್ಯಾಚರಣೆ ನಡೆಸಿದ ಪೊಲೀಸ್‌ ತಂಡಕ್ಕೆ ಅಯುಕ್ತರು ತಮ್ಮ ಕಚೇರಿ ವತಿಯಿಂದ 20,000 ರೂ. ಬಹುಮಾನವನ್ನು ಘೋಷಿಸಿದ್ದು, ಅದನ್ನು ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ವಿತರಿಸಿದರು. ಇನ್ನೂ 20,000 ರೂ.ಗಳನ್ನು ಡಿಜಿಪಿ ಅವರಿಂದ ಮಂಜೂರು ಮಾಡಿಸಿಕೊಡುವುದಾಗಿ ಅವರು ತಿಳಿಸಿದರು.

      ಆರೋಪಿಗಳಿಂದ ವಶಪಡಿಸಿಕೊಂಡಿರುವ ಕಬ್ಬಿಣದ ಸರಳುಗಳನ್ನು ಕದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ಇತ್ತೀಚೆಗೆ ಕಳವು ಮಾಡಿದ್ದಾಗಿರುತ್ತದೆ. ಈ ಪ್ರಕರಣದಲ್ಲಿ ಕಬ್ಬಿಣದ ಸರಳುಗಳನ್ನು ಹೊತ್ತ ಲಾರಿ ಮಾಲಕರ ಅಂಗಡಿ ಎದುರು ನಿಲ್ಲಿಸಿದ್ದು, ಮರುದಿನ ಲಾರಿ ಸಮೇತ ಕಳವಾಗಿತ್ತು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus