Udayavani | Feb 22, 2012
ಸವದತ್ತಿ: ಬಿಜೆಪಿ ಸಚಿವರು ಸದನದಲ್ಲಿ ಕರ್ತವ್ಯ ಮರೆತು ಅಶ್ಲೀಲ ಚಿತ್ರ ನೋಡಿದ ಘಟನೆ ಅಸಂಬದ್ಧವಾಗಿದ್ದು, ಇವರ ವರ್ತನೆಯಿಂದ ಉಳಿದ ಶಾಸಕರಿಗೆ ಸಂಕೋಚವಾಗುತ್ತಿದೆ ಎಂದು ಮಾಜಿ ಶಾಸಕ ಆರ್.ವಿ.ಪಾಟೀಲ ಹೇಳಿದರು.
ರಾಜ್ಯದಲ್ಲಿನ ಬಿಜೆಪಿ ಸರಕಾರದ ವೈಫಲ್ಯ ಖಂಡಿಸಿ ಅಶ್ಲೀಲ ಚಿತ್ರ ವೀಕ್ಷಿಸಿದ ಶಾಸಕರನ್ನು ಸರಕಾರವು ಕೂಡಲೆ ವಜಾಗೊಳಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರಕಾರವು ಅಭಿವೃದ್ಧಿ ಕಡೆಗೆ ಚಿಂತನೆ ನಡೆಸದೆ ಒಂದಿಲ್ಲೊಂದು ಹಗರಣಗಳನ್ನೇ ಸೃಷ್ಟಿಸುತ್ತ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದೆ ಎಂದು ಆಪಾದಿಸಿದರು. ನೇತƒತ್ವ ವಹಿಸಿದ್ದ ಮಾಜಿ ಶಾಸಕ ಸುಭಾಸ ಕೌಜಲಗಿ ಮಾತನಾಡಿ, ಸಾಮಾಜಿಕ ಹಿತಚಿಂತನೆಯನ್ನು ಬಿಟ್ಟು ಬಿಜೆಪಿ ಸರಕಾರವು ಸ್ವಯಂ ಹಿತಕ್ಕಾಗಿ ರಾಜ್ಯದ ಜನರನ್ನು ಬಲಿ ತೆಗೆದುಕೊಂಡಿದೆ ಎಂದರು.
ಕೆಪಿಸಿಸಿ ಸದಸ್ಯ ಅಶೋಕ ಹಾದಿಮನಿ ಮಾತನಾಡಿ, ರಾಜ್ಯದಲ್ಲಿ ಆವರಿಸಿದ ಬರಗಾಲ ಸಮಸ್ಯೆಗೆ ಸ್ಪಂದಿಸದೆ ಪ್ರತಿಷ್ಠೆಯ ರಾಜಕಾರಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಖಂಡನೀಯ ಎಂದರು.
ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಚನಗೌಡ ದ್ಯಾಮನಗೌಡರ ಹಾಗೂ ಜಿ.ಪಂ ಮಾಜಿ ಸದಸ್ಯ ರಾಮನಗೌಡ ತಿಪರಾಶಿ ಬಿಜೆಪಿ ಸರಕಾರದ ದುರಾಡಳಿತವನ್ನು ಖಂಡಿಸಿದರು.
ರಾಜ್ಯ ಸರಕಾರದ ಆಡಳಿತ ವೈಫಲ್ಯ ಖಂಡಿಸಿ ವಿಧಾನ ಸಭಾಧ್ಯಕ್ಷರಿಗೆ ಬರೆದ ಮನವಿಯನ್ನು ತಹಸೀಲ್ದಾರ ಶಾರದಾ ಸಿ.ಕೆಯವರಿಗೆ ನೀಡಲಾಯಿತು.
ಯರಗಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಯಲಿಗಾರ, ಸವದತ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾರಾಜಗೌಡ ಪಾಟೀಲ, ಕಲ್ಲಪ್ಪ ಪೂಜಾರ, ಪಂಚಪ್ಪ ಮಲ್ಲಾಡ, ತಾ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಗುಡದೂರ, ರಾಜೇಶ ಆಂಗಡಿ, ಸುರೇಶ ನಡನಳ್ಳಿ, ನಿಂಗರಡ್ಡಿ ವೆಂಕರಡ್ಡಿ, ಬಾಬಣ್ಣ ಬಾಳಿ ಉಪಸ್ಥಿತರಿದ್ದರು.