ಬೆಂಗಳೂರು:ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನಕ್ಕೆ ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.ನಗರದ ಮುಖ್ಯಮಂತ್ರಿ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಬರ ಪರಿಹಾರಕ್ಕಾಗಿ ಮೊದಲ ಹಂತದಲ್ಲೇ ಸುಮಾರು 2,600ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಅದರಲ್ಲಿ ಇದುವರೆಗೆ 126 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಆದ್ದರಿಂದ ತಕ್ಷಣ ಬರ ಪರಿಹಾರಕ್ಕೆ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ದೆಹಲಿಗೆ ನಿಯೋಗ ಕೊಂಡೊಯ್ಯಲು ಉದ್ದೇಶಿಸಲಾಗಿದೆ ಎಂದು ಎಂದು ಹೇಳಿದರು.ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲಾಗುವುದೇ? ಎಂದು ಕೇಳಿದಾಗ, ಸಮಸ್ಯೆ ಯಾವೊಂದು ಪಕ್ಷಕ್ಕೆ ಸೀಮಿತವಾದದ್ದಲ್ಲ. ರಾಜ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ, ಸರ್ವಪಕ್ಷಗಳೊಂದಿಗೆ ತೆರಳಲಾಗುವುದು ಎಂದರು.