Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ
    • ಉತ್ತರಕ್ಕಾಗಿ ಉಪವಾಸ: ರಾಮುಲು
      • Udayavani | Feb 22, 2012

        ಗದುಗಿನಲ್ಲಿ ಮಾ. 13ರಿಂದ 48 ಗಂಟೆ ಕಾಲ ನಿರಂತರ ಉಪವಾಸ

        ನಂಜುಂಡಪ್ಪ ವರದಿ ಜಾರಿಗೆ ಆಗ್ರಹ

        ರಾಯಚೂರ, ಮೈಸೂರ, ಮಂಗಳೂರ, ಬೀದರ, ಶಿವಮೊಗ್ಗದಲ್ಲೂ ಉಪವಾಸ

        ಗದಗ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿ ಜಾರಿಗೆ ಆಗ್ರಹಿಸಿ ಗದುಗಿನಲ್ಲಿ ಮಾ. 13 ಮತ್ತು 14ರಂದು 48 ಗಂಟೆಗಳ ಕಾಲ ಸರ್ಕಾರದ 'ಉತ್ತರ'ಕ್ಕಾಗಿ ಉಪವಾಸ ಸತ್ಯಾಗ್ರಹ' ಹಮ್ಮಿಕೊಳ್ಳುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

        ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ವರೆಗೆ ಆಡಳಿತ ನಡೆಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತರ ಕರ್ನಾಟಕದ ವಿಚಾರದಲ್ಲಿ ಮಲತಾಯಿಯಂತೆ ನಡೆದುಕೊಂಡಿವೆ. ಇದರಿಂದ ಉತ್ತರ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಉತ್ತರ ಮತ್ತು ದಕ್ಷಿಣ ಕರ್ನಾಟಕ ಎನ್ನುವ ತಾರತಮ್ಯ ಕೊನೆಯಾಗುತ್ತದೆ ಎಂದು ಭಾವಿಸಿದ್ದೆ. ಆದರೆ, ಅದು ಈ ಸರ್ಕಾರದಿಂದಲೂ ಸಾಧ್ಯವಿಲ್ಲ. ಆದ್ದರಿಂದ 'ಉತ್ತರಕ್ಕಾಗಿ ಉಪವಾಸ ಸತ್ಯಾಗ್ರಹ' ಹಮ್ಮಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು.

        ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿ ಜಾರಿ ಹಾಗೂ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿಗೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಗದುಗಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದಿಂದ ಉತ್ತರ ಕೇಳುತ್ತೇವೆ. ಸತ್ಯಾಗ್ರಹದಲ್ಲಿ ನಾಡಿನ ಮಠಾಧೀಶರು, ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. 48 ಗಂಟೆಯ ಉಪವಾಸದ ಜೊತೆಗೆ ಬೃಹತ್‌ ಸಾರ್ವಜನಿಕ ಸಮಾವೇಶ ನಡೆಸಲಾಗುವುದು. ನಮ್ಮ ಬೇಡಿಕೆಗೆ ಸರ್ಕಾರದಿಂದ ಸೂಕ್ತ ಉತ್ತರ ಸಿಗದಿದ್ದಲ್ಲಿ ಹೋರಾಟಕ್ಕೆ ತೀವ್ರ ಸ್ವರೂಪ ನೀಡುವುದಾಗಿ ಅವರು ಘೋಷಿಸಿದರು.

        ಜನಹಿತದ ಉದ್ದೇಶದಿಂದ ಹಮ್ಮಿಕೊಂಡ ಈ ಉಪವಾಸ ಸತ್ಯಾಗ್ರಹ ರಾಜ್ಯ ರಾಜಕೀಯದಲ್ಲಿ ಹೊಸ ದಿಕ್ಸೂಚಿಯಾಗಲಿದೆ. ಈ ವರೆಗೆ ಜನರಿಗೆ ಕೇವಲ ಸುಳ್ಳು ಭರವಸೆಗಳನ್ನು ಕೊಟ್ಟು ಅವರಿಂದ ಮತ ಪಡೆದು ಅಧಿಕಾರ ಪಡೆದುಕೊಳ್ಳುತ್ತಿದ್ದ ಪಕ್ಷಗಳಿಗೆ ಇನ್ನು ಮುಂದೆ ಹೀಗಾಗಲು ಸಾಧ್ಯವಿಲ್ಲ ಎನ್ನುವ ಸಂದೇಶ ರವಾನೆಯಾಗಲಿದೆ. ಇಂಥ ಐತಿಹಾಸಿಕ ಹೋರಾಟವನ್ನು ತಾವು ಪುಣ್ಯಕ್ಷೇತ್ರವೆಂದು ಭಾವಿಸಿರುವ ಗದುಗಿನಿಂದಲೇ ಆರಂಭಿಸುತ್ತಿದ್ದೇನೆ. ಇದರಲ್ಲಿ ನೂರಕ್ಕೆ ನೂರರಷ್ಟು ಯಶಸ್ಸು ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

        ಗದಗನಲ್ಲಿ ನಡೆಯುವ ಉಪವಾಸ ಸತ್ಯಾಗ್ರಹ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಮಾತ್ರ ಸೀಮಿತಗೊಂಡಿರಲಿದ್ದು, ರಾಜ್ಯದ ಸಮಸ್ಯೆಗಳನ್ನು ಇಟ್ಟುಕೊಂಡು ಇತರೆಡೆಯೂ ಉಪವಾಸ ಸತ್ಯಾಗ್ರಹ ಹಾಗೂ ಸಮಾವೇಶಗಳನ್ನು ನಡೆಸಲಾಗುತ್ತದೆ. ಗದಗದಿಂದ ಆರಂಭಗೊಳ್ಳುವ ಉಪವಾಸ ಸತ್ಯಾಗ್ರಹವನ್ನು ನಂತರದಲ್ಲಿ ರಾಯಚೂರು, ಮೈಸೂರು, ಮಂಗಳೂರು, ಬೀದರ, ಶಿವಮೊಗ್ಗದಲ್ಲೂ ಹಂತ ಹಂತವಾಗಿ ನಡೆಯಲಿದೆ. ಆಯಾ ಭಾಗದ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಅಲ್ಲಲ್ಲಿ ಹೋರಾಟ ಆರಂಭಿಸಲಾಗುತ್ತದೆ ಎಂದು ಶ್ರೀರಾಮುಲು ತಿಳಿಸಿದರು.

        ನಂಜುಂಡಪ್ಪ ವರದಿ ಸಂಪೂರ್ಣ ಜಾರಿಗೆ ಬಂದಲ್ಲಿ ಉತ್ತರ ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ, ವಿದ್ಯುತ್‌ ಯೋಜನೆಗಳು, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳೆಲ್ಲ ಪರಿಹಾರವಾಗಲಿವೆ. ಜನರಿಗೆ ಅಗತ್ಯವಾದ ಮೂಲ ಸೌಲಭ್ಯಗಳು ದೊರೆಯಲಿವೆ. ಆದರೆ, ಇಚ್ಛಾಶಕ್ತಿ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಇದರಿಂದ ಉತ್ತರ ಕರ್ನಾಟಕದ ಜನತೆಯ ಯಾತನೆ ಮುಂದುವರಿದಿದೆ. ಅವರು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಲಾಗದೇ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದೇನೆ ವಿನಃ ಬೇರೆ ಯಾವುದೇ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.
        ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ವೈ.ಎನ್‌. ಗೌಡರ, ಸಣ್ಣವೀರಪ್ಪ ಹಳ್ಳೆಪ್ಪನವರ, ವಿಜಯಕುಮಾರ ಗಡ್ಡಿ, ಮಾಜಿ ಶಾಸಕ ಎಸ್‌.ಎನ್‌. ಪಾಟೀಲ ಇತರರು ಉಪಸ್ಥಿತರಿದ್ದರು.

        ಮಾಹಿತಿ ತಿಳಿಯದೇ ಪಕ್ಕದವರಿಗೆ ಕಿವಿ ಕೊಟ್ಟ ರಾಮುಲು

        ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಮಾಧ್ಯಮದವರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ಮಾಹಿತಿ ಇಲ್ಲದೇ ನುಣುಚಿಕೊಳ್ಳಲು ಯತ್ನಿಸುತ್ತಿದ್ದರು. ಪ್ರಶ್ನೆಗೆ ಉತ್ತರ ತಿಳಿಯದೇ ಪಕ್ಕದಲ್ಲಿ ಕುಳಿತಿದ್ದ ಕುರಿ ಮತ್ತು ಉಣ್ಣೆ ನಿಗದ ಮಾಜಿ ಅಧ್ಯಕ್ಷ ವೈ.ಎನ್‌. ಗೌಡರ ಅವರತ್ತ ಕಿವಿಕೊಡುತ್ತಿದ್ದರು. ಗೌಡರ ಅವರು ಕಿವಿಯಲ್ಲಿ ಪಿಸುಗುಟ್ಟಿದ್ದನ್ನು ಮತ್ತೆ ಮಾಧ್ಯಮದವರಿಗೆ ಹೇಳುತ್ತಿದ್ದರು. ಇಷ್ಟು ದಿನ ಇಲ್ಲದ ಉತ್ತರ ಕರ್ನಾಟಕದ ಪ್ರೀತಿ ಒಮ್ಮೆಲೇ ಬಂದಿದ್ದೇಕೆ ಎನ್ನುವ ಪ್ರಶ್ನೆಗೂ ಸಮರ್ಪಕ ಉತ್ತರ ಕೊಡದ ರಾಮುಲು, ಇಲ್ಲಿನ ಸಮಸ್ಯೆಗಳನ್ನು ಸರಕಾರ ಇಂದು ನಾಳೆ ಪರಿಹರಿಸಬಹುದೆಂದು ಕಾದೆ. ಸಾಧ್ಯವಿಲ್ಲವೆಂದು ತಿಳಿದು ಬಿಜೆಪಿಯಿಂದ ಹೊರಬಂದೆ. ಈಗ ಉಪವಾಸ ಮಾಡಲು ಮುಂದಾಗಿದ್ದೇನೆ. ಅದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದರು.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus