Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಕ್ಷದಲ್ಲಿ ಯಡಿಯೂರಪ್ಪ ಸಂಖ್ಯಾಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜು
    • ಬಿಜೆಪಿ ಸಂಸದರು ಮತ್ತು ಶಾಸಕರನ್ನು ಒಳಗೊಂಡ ಸಭೆ

      • Udayavani | Feb 22, 2012

        ಬೆಂಗಳೂರು: ಸ್ಥಾನಮಾನವಿಲ್ಲದೆ ಪಕ್ಷದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂಬ ಗಟ್ಟಿ ನಿಲವಿಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಗುರುವಾರ ಕರೆದಿರುವ ಪಕ್ಷದ ಶಾಸಕರು ಹಾಗೂ ಸಂಸದರ ಮಹತ್ವದ ಸಭೆ ಯಡಿಯೂರಪ್ಪ ಮತ್ತು ಆಡಳಿತಾರೂಢ ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ.

        ಜತೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಅವರ ಪೈಕಿ ಯಾರ ಸ್ಥಾನಕ್ಕೆ ಚ್ಯುತಿ ಬರಲಿದೆ ಎಂಬುದರ ಬಗ್ಗೆಯೂ ಸ್ಪಷ್ಟ ಮುನ್ಸೂಚನೆ ದೊರಕುವ ಸಂಭವವಿದೆ.
        ಆದರೆ, ಸದ್ಯದ ಮಾಹಿತಿ ಅನುಸಾರ ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದರೂ ಯಡಿಯೂರಪ್ಪ ಅವರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡುವುದಂತೂ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು, ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

        ಈ ನಡುವೆ ಸಂಘ ಪರಿವಾರದ ಮುಖಂಡರೂ ಯಡಿಯೂರಪ್ಪ ಅವರ ಚಟುವಟಿಕೆಗಳಿಂದ ಬೇಸತ್ತಿದ್ದು, ಬುಧವಾರ ತಮ್ಮನ್ನು ಕಾಣಲು ಬಂದಿದ್ದ ಯಡಿಯೂರಪ್ಪ ಅವರಿಗೆ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಮಾಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸಂಘ ಪರಿವಾರದ ಮುಖಂಡರು ಯಾವುದೇ ಮುಲಾಜಿಲ್ಲದೆ ಹೇಳಿದ್ದಾರೆ ಎಂದು ಗೊತ್ತಾಗಿದೆ.

        ಅಲ್ಲದೆ, ಯಾವುದೇ ಕಾರಣಕ್ಕೂ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಸರಿಯಲ್ಲ. ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಹೀಗಾಗಿ ವಿನಾಕಾರಣ ಸದಾನಂದಗೌಡರನ್ನು ಕೆಳಗಿಳಿಸುವ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸುವುದು ತಪ್ಪು ಎಂಬ ಮಾತುಗಳನ್ನು ನಿಷ್ಠುರವಾಗಿ ಹೇಳಿಕಳುಹಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

        ಗುರುವಾರ ಬೆಳಗ್ಗೆ 11.30ಕ್ಕೆ ನನ್ನ ಮನೆಯಲ್ಲಿ ನಡೆಯುವ ಸಭೆಗೆ ಆಗಮಿಸುವಂತೆ ಪಕ್ಷದ ಎಲ್ಲ ಸಚಿವರು, ಶಾಸಕರು ಹಾಗೂ ಸಂಸದರಿಗೆ ನಾನೇ ಖುದ್ದಾಗಿ ಆಹ್ವಾನಿಸಿದ್ದೇನೆ. ಪಕ್ಷ ಸಂಘಟನೆ ದೃಷ್ಟಿಯಿಂದ ಗಡ್ಕರಿ ಮುಂದೆ ಮಂಡಿಸಬೇಕಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು -ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

        -ಯಡ್ಡಿ ಯತ್ನ; ಗಡ್ಕರಿ ಕಾರ್ಯಕ್ರಮ ಬದಲಾವಣೆ-

        ಯಡಿಯೂರಪ್ಪ ಅವರು ನಡೆಸುತ್ತಿರುವ ಚಟುವಟಿಕೆಗಳಿಂದ ಬೆದರಿದ ಬಿಜೆಪಿ ಹೈಕಮಾಂಡ್‌ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಅವರ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿದೆ.

        ಈ ಮೊದಲು ಗಡ್ಕರಿ ಅವರು ಗುರುವಾರ ರಾತ್ರಿ ನಗರಕ್ಕೆ ಆಗಮಿಸಿ ಶನಿವಾರದವರೆಗೆ ವಾಸ್ತವ್ಯ ಹೂಡುವ ಉದ್ದೇಶವಿತ್ತು. ಆದರೆ, ಯಡಿಯೂರಪ್ಪ ಅವರು ಸ್ಥಾನಮಾನಕ್ಕಾಗಿ ನಡೆಸುತ್ತಿರುವ ಸಂಖ್ಯಾಬಲದ ಪ್ರದರ್ಶನದಿಂದಾಗಿ ಗುರುವಾರ ರಾತ್ರಿ ಬರುವ ಗಡ್ಕರಿ ಅವರು ಶುಕ್ರವಾರ ಮಧ್ಯಾಹ್ನದ ವೇಳೆಗೆ ನಿರ್ಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

        ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಬಿಜೆಪಿ ಸಂಸದರು ಮತ್ತು ಶಾಸಕರನ್ನು ಒಳಗೊಂಡ ಚಿಂತನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವ ಉದ್ದೇಶವನ್ನು ಗಡ್ಕರಿ ಹೊಂದಿದ್ದರು. ಆದರೆ, ಇದೀಗ ಶುಕ್ರವಾರ ಚಿಂತನಾ ಸಭೆಯ ಉದ್ಘಾಟನೆ ನೆರವೇರಿಸಿದ ನಂತರ ವಾಪಸಾಗಲಿದ್ದಾರೆ ಎನ್ನಲಾಗಿದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus