ಜನತೆಗೆ ಆಗಿರುವ ನಷ್ಟವನ್ನು ತುಂಬುವ ಬಗೆಯ ಬಗ್ಗೆ ಆಲೋಚಿಸುವ ಅಗತ್ಯವಿದೆತಿಪಟೂರು: ಬಿಜೆಪಿ ಒಳಜಗಳದ ಅಂತಿಮ ಫಲಿತಾಂಶ ಏನೆಂಬುದರ ಬಗ್ಗೆ ಚಿಂತಿಸುವುದಕ್ಕಿಂತ ಸರ್ಕಾರದಿಂದ ರಾಜ್ಯ ಹಾಗೂ ಜನತೆಗೆ ಆಗಿರುವ ನಷ್ಟವನ್ನು ತುಂಬುವ ಬಗೆಯ ಬಗ್ಗೆ ಆಲೋಚಿಸುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ತಾಲೂಕಿನ ರಂಗಾಪುರ ಜಿ.ಪಂ. ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ತಡಸೂರು ಗುರುಮೂರ್ತಿ ಪರ ಪ್ರಚಾರ ಕೈಗೊಳ್ಳಲು ಬುಧವಾರ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಒಂದು ವೇಳೆ ಪಕ್ಷದ ಒಳ ಜಗಳದದಿಂದ ಬಿಜೆಪಿ ಒಡೆದರೂ, ಯಾವುದೇ ಬಣ ಸರ್ಕಾರ ರಚಿಸಲು ಜೆಡಿಎಸ್ ಬೆಂಬಲ ನೀಡುವುದಿಲ್ಲ. ಚುನಾವಣೆ ಎದುರಿಸಲು ಜೆಡಿಎಸ್ ಪಕ್ಷ ಸಿದ್ಧವಾಗಿದೆ ಎಂದರು.ಯಡಿಯೂರಪ್ಪನವರ ಹಠಕ್ಕೆ ಮಣಿದು ಬಿಜೆಪಿ ಬಣಗಳೆಲ್ಲ ಒಂದಾಗಿ ಯಡಿಯೂರಪ್ಪನವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಿದರೆ? ರಾಜ್ಯ ಸರ್ಕಾರದ ಅನಿಶ್ಚಿತತೆ ಕೊನೆಗೊಳ್ಳ ಬಹುದೇನೋ? ಆದರೆ ಬಿಜೆಪಿ ಹಿತಕ್ಕಿಂತಲೂ ರಾಜ್ಯದ ಹಿತ ಮುಖ್ಯವಾಗಿರುವುದರಿಂದ ಚುನಾವಣೆ ಎದುರಿಸುವುದೇ ರಾಜ್ಯಕ್ಕೆ ಕ್ಷೇಮ ಎಂದರು.ಮುಖ್ಯಮಂತ್ರಿ ಸದಾನಂದಗೌಡ ಜೆಡಿಎಸ್ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ. ನಮ್ಮ ಪಕ್ಷದ ಯಾವುದೇ ಶಾಸಕರು ಮುಖ್ಯಮಂತ್ರಿ ಜತೆ ಸಂಪರ್ಕ ಇಟ್ಟುಕೊಂಡಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯದ ಹಿತದೃಷ್ಟಿಯಿಂದ ನೀಡಿದ ಯಾವವೊಂದು ಸಲಹೆಗೂ ಮುಖ್ಯಮಂತ್ರಿ ಮನ್ನಣೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಈ ಪಕ್ಷದ ಅಧಿಕಾರಸ್ತರೆಲ್ಲ ಜನತೆಯ ಯೋಗಕ್ಷೇಮ ಕಡೆಗಣಿಸಿ, ಕೇವಲ ಲೂಟಿ ಹೊಡೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ, ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ರಾಜ್ಯ ನಲುಗಿ ಹೋಗಿದೆ, ಜನತೆ ತತ್ತರಿಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.ಜನತೆ ಬರದ ಸಮಸ್ಯೆಯಲ್ಲಿ ತೊಳಲಾಡುತ್ತಿದ್ದರೂ ಅವುಗಳ ಬಗ್ಗೆ ಗಮನ ಹರಿಸದ ಸರ್ಕಾರ ಆತಂರಿಕ ಜಗಳದಲ್ಲಿ ಮುಳುಗಿದೆ. ಬರಪೀಡಿತ ತಾಲ್ಲೂಕಗಳ ಪರಿಸ್ಥಿತಿ ಗಂಭೀರವಾಗಿದೆ. ಗ್ರಾಮೀಣ ಬದುಕು ದುಸ್ತರವಾಗಿದೆ. ಕುಡಿವ ನೀರು, ಮೇವಿಗೆ ಹಾಹಾಕಾರವೆದ್ದಿದೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ ಸರ್ಕಾರ ತಕ್ಷಣ ಅಧಿಕಾರ ಬಿಟ್ಟು ಕೆಳಗಿಳಿಯುವುದೇ ಕ್ಷೇಮ ಎಂದರು.