ವಿಟ್ಲ : ರಾಷ್ಟ್ರೀಯ ಹೆದ್ದಾರಿ 48ರ ಮಾಣಿ ಸಮೀಪದ ಬುಡೋಳಿ ಸೇತುವೆ ಬಳಿಯಲ್ಲಿ ಬುಧವಾರ ಪೆಯಿಂಟ್ ಲಾರಿ ಪಲ್ಟಿಯಾಗಿ ಸುತ್ತಲೂ ಬಣ್ಣಗಳ ಕಲರವವುಂಟಾಯಿತು. ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಅಲ್ಪಸ್ವಲ್ಪ ಗಾಯ ಉಂಟಾಗಿ ಅಪಾಯದಿಂದ ಪಾರಾಗಿದ್ದಾರೆ.ನೇರೋಲ್ಯಾಕ್ ಕಂಪೆನಿಯ ವಿವಿಧ ಬಣ್ಣಗಳ ಪೆಯಿಂಟನ್ನು ವಿವಿಧ ಆಕಾರದ ಬಕೆಟ್‌ಗಳಲ್ಲಿ ಹೇರಿಕೊಂಡು ಉಪ್ಪಿನಂಗಡಿ ಕಡೆಯಿಂದ ಬೆಳಿಗ್ಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎದುರುಗಡೆಯಿಂದ ಬಂದ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿರಬೇಕು ಎಂದು ಊಹಿಸಲಾಗಿದೆ. ಬುಡೋಳಿ ಸೇತುವೆಯ ತಡೆಗೋಡೆಗೆ ಢಿಕ್ಕಿಯಾಗಿ ಪಕ್ಕದಲ್ಲೇ ಇದ್ದ ಅಂಗಡಿಯ ಮುಂಭಾಗದಲ್ಲಿ ಲಾರಿ ಧೊಪ್ಪನೆ ಬಿದ್ದುಬಿಟ್ಟಿದ್ದು ಪೈಂಟು ಸೋರಿ ಹೋಗಿ ಚರಂಡಿಯಲ್ಲಿ ಪ್ರವಾಹದಂತೆ ಹರಿದುಹೋಯಿತು. ಸುತ್ತಮುತ್ತಲ ಜನರು ಚೆಲ್ಲಿ ಹೋದ ಪೈಂಟನ್ನು ಸಂಗ್ರಹಿಸಿ ಮನೆಗೆ ಒಯ್ಯುತ್ತಿದ್ದರು.ಅತ್ಯಂತ ಅಪಾಯಕಾರಿ ಈ ಬುಡೋಳಿ ಸೇತುವೆವಿಟ್ಲ : ಮಾಣಿ ಸಮೀಪದ ಬುಡೋಳಿ ಸೇತುವೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ಸತತ ಅಪಘಾತವಾಗುತ್ತಿರುವುದೇ ಇದಕ್ಕೆ ಸಾಕ್ಷಿ! ಕಳೆದ ಒಂದು ತಿಂಗಳಲ್ಲಿ ಇಲ್ಲಿ ಮೂರು ಭಯಾನಕ ಅಪಘಾತಗಳು ಸಂಭವಿಸಿದ್ದು ಇಲಾಖೆ ತತ್‌ಕ್ಷಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜೀವಹಾನಿ ಸಂಭವಿಸುವ ಸಾಧ್ಯತೆಯಿದೆ.ಮಾಣಿಯಿಂದ ಉಪ್ಪಿನಂಗಡಿ ಕಡೆಗೆ ಒಂದು ಕಿಮೀ ದೂರದಲ್ಲಿ ಈ ಸೇತುವೆಯಿದೆ. ಸೇತುವೆ ಹತ್ತಿರ ತಲುಪುವವರೆಗೂ ಈ ಸೇತುವೆ ಅಪಾಯಕಾರಿಯೆಂದೆನಿಸುವುದಿಲ್ಲ. ಆದರೆ ಸೇತುವೆ ದಾಟಿದ ಕ್ಷಣದಲ್ಲೇ ಬಲಕ್ಕೆ ತಿರುವು ಇದೆ. ಆಗ ಚಾಲಕರ ನಿಯಂತ್ರಣ ತಪ್ಪುತ್ತದೆ. ಅದೇ ರೀತಿ ಉಪ್ಪಿನಂಗಡಿಯಿಂದ ಮಾಣಿ ಕಡೆಗೆ ಬರುವ ಸಂದರ್ಭದಲ್ಲೂ ಸೇತುವೆ ಗೋಚರಿಸುವುದಿಲ್ಲ. ಗಂಟೆಗೆ ನೂರಾರು ವಾಹನಗಳು ಸಂಚರಿಸುತ್ತಿರುವ ಈ ಜಾಗದಲ್ಲಿರುವ ಸೇತುವೆ ಅಗಲ ಕಿರಿದಾಗಿದೆ. ತೀರಾ ಅವೈಜ್ಞಾನಿಕವಾಗಿ ಈ ಸೇತುವೆ ನಿರ್ಮಿಸಲಾಗಿದೆ.ಸೇತುವೆಯ ಒಂದು ಭಾಗದ ತಡೆಗೋಡೆ ಸಂಪೂರ್ಣ ನಾಶವಾಗಿದೆ. ಸೇತುವೆಯ ಒಂದು ಭಾಗಕ್ಕೆ ಬಿದಿರು ಕಂಬ, ಅಡಿಕೆ ಮರದ ಸಲಾಕೆಗಳಿಂದ ರಕ್ಷಣೆ ನೀಡಲಾಗಿದೆ. ಕೆಂಪು ಬಟ್ಟೆಯನ್ನು ಕಟ್ಟಿ ಅಪಾಯದ ಚಿಹ್ನೆಯನ್ನು ಸೂಚಿಸಲಾಗಿದೆ. ಇದಾವುದನ್ನೂ ಇಲಾಖೆ ಮಾಡಿಲ್ಲ. ಸುತ್ತಮುತ್ತಲ ಜನರು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಈ ಕಾರ್ಯ ಮಾಡಿದ್ದಾರೆ.ಇಲಾಖೆ ಕಳೆದ ಏಳೆಂಟು ವರ್ಷಗಳಿಂದ ಸೇತುವೆ ತಡೆಗೋಡೆಯನ್ನು ಕಟ್ಟಿಕೊಂಡು ಬಂದಿದೆ. ಅದಕ್ಕೆ ಮತ್ತೆ ಮತ್ತೆ ವಾಹನಗಳು ಢಿಕ್ಕಿಯಾಗಿ ತೋಡಿಗೆ ಬೀಳುತ್ತಿತ್ತು. ಎರಡು ವರ್ಷಗಳಿಂದ ಅದರ ಬಗ್ಗೆ ತೀವ್ರ ನಿರ್ಲಕ್ಷé ವಹಿಸಲಾಗಿದೆ. ಪ್ರಸ್ತುತ ಈ ಸೇತುವೆಯ ದಿಕ್ಕನ್ನು° ಅಪಾಯರಹಿತವಾಗಿ ನಿರ್ಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.ಪಕ್ಕದಲ್ಲೇ ಇರುವ ಅಂಗಡಿ ಮಾಲಕ ಅಶೋಕ್ ಪೈ ಅವರು ದಿನಬೆಳಗಾದರೆ ಇದೇ ಅವಸ್ಥೆ. ಬುಡೋಳಿ ಸೇತುವೆ ಸಮಸ್ಯೆಯನ್ನು ಪರಿಹರಿಸಲೇಬೇಕು. ಇಲ್ಲದಿದ್ದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇಲಾಖೆ ಈ ಬಗ್ಗೆ ತತ್‌ಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ತಿಂಗಳಲ್ಲಿ ಸಂಭವಿಸಿದ ಮೂರು ಅಪಘಾತಗಳು :ಇಲ್ಲಿ ಒಂದೇ ತಿಂಗಳಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ಮಾಝಾ ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿಯಾಗಿ ಸುತ್ತಮುತ್ತಲ ಮಂದಿ ಮಾಝಾ ಕುಡಿದು ಮಜಾ ಅನುಭವಿಸಿದ್ದರು. ಆಗಲೂ ಯಾರೂ ಗಾಯಗೊಂಡಿರಲಿಲ್ಲ. ಮತ್ತೆ ಖಾಸಗಿ ಬಸ್ ಸೇತುವೆ ತಡೆಗೋಡೆಯಲ್ಲಿ ನೇತಾಡಿತ್ತು. ಕೆಳಗೆ ಉರುಳದೇ ಇದ್ದುದರಿಂದ 30 ಮಂದಿ ಅಪಾಯದಿಂದ ಪಾರಾಗಿದ್ದರು. ಇದೀಗ ಮೂರನೆಯದು. ಸಣ್ಣ ಪುಟ್ಟ ಅಪಘಾತಗಳು ಇಲ್ಲಿ ಲೆಕ್ಕವಿಲ್ಲದಷ್ಟು ನಡೆಯುತ್ತವೆ ಎಂದು ಸ್ಥಳೀಯರು ವಿವರಿಸುತ್ತಾರೆ.