ಸರ್ಕಾರದ ಅಧಿಕೃತ ಆದೇಶಬೆಂಗಳೂರು:ರಾಜ್ಯದ 1950 ಖಾಸಗಿ ಶಾಲೆಗಳನ್ನು ಅನುದಾನ ವ್ಯಾಪ್ತಿಗೆ ಒಳಪಡಿಸುವ ಕುರಿತ ಅಧಿಕೃತ ಆದೇಶವನ್ನು ರಾಜ್ಯ ಸರ್ಕಾರ ಬುಧವಾರ ಹೊರಡಿಸಿದೆ.1991-95 ರ ಅವಧಿಯಲ್ಲಿ ಪ್ರಾರಂಭಗೊಂಡಿದ್ದ ಅನುದಾನ ರಹಿತ 1950 ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ತರಲು ಹಣಕಾಸು ಇಲಾಖೆ ಒಪ್ಪಿಗೆ ದೊರೆತಿದ್ದು, ಬುಧವಾರ ಅಧಿಕೃತ ಆದೇಶ ಹೊರಬಿದ್ದಿದೆ.1950 ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ತರಬೇಕು. ಇದರಿಂದ ಅಲ್ಲಿ ಕೆಲಸ ಮಾಡುವ 12 ಸಾವಿರ ಶಿಕ್ಷಕ ಸಮುದಾಯಕ್ಕೆ ಅನುಕೂಲವಾಗಲಿದೆ ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಜತೆ ಚರ್ಚಿಸಿ ಅನುದಾನ ವ್ಯಾಪ್ತಿಗೆ ತರುವ ನಿರ್ಧಾರ ಕೈಗೊಳ್ಳಲಾಗಿತ್ತು. ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಉದಯವಾಣಿಗೆ ತಿಳಿಸಿದರು.ಸರ್ಕಾರದ ಆದೇಶ ಹೊರಡಿರುವುದರಿಂದ ನಾಳೆಯಿಂದಲೇ ಅನುದಾನ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಹೇಳಿದರು.1950 ಶಾಲೆಗಳು ಅನುದಾನದ ವ್ಯಾಪ್ತಿಗೆ ಬರುವುದರಿಂದ ವಾರ್ಷಿಕ 200 ಕೋಟಿ ರೂ. ಸರ್ಕಾರಕ್ಕೆ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು. ಈ ಹಿಂದೆ 1991 ರವರೆಗೂ ಸ್ಥಾಪನೆಗೊಂಡಿದ್ದ 1000 ಶಾಲೆಗಳಿಗೆ ಸರ್ಕಾರ ಅನುದಾನ ನೀಡಲಾಗುತ್ತಿತ್ತು. 1991 ರಿಂದ 1995 ರ ಅವಧಿಯಲ್ಲಿ ಶಿಕ್ಷಣ ಇಲಾಖೆ ನಿಯಮಾವಳಿಗಳ ಪ್ರಕಾರ ಪ್ರಾರಂಭಗೊಂಡ ಖಾಸಗಿ ಶಾಲೆಗಳಿಗೂ ನೀಡಬೇಕು ಎಂಬ ಬೇಡಿಕೆ ಇತ್ತು. ರಾಜ್ಯ ಸರ್ಕಾರವು ಬಜೆಟ್‌ನಲ್ಲಿಯೂ ಈ ಬಗ್ಗೆ ಭರವಸೆ ನೀಡಿತ್ತು.