Udayavani | Feb 22, 2012
ಕಾಪು: ಸುಂದರ ಮತ್ತು ಸ್ವತ್ಛ ಆಡಳಿತ ನೀಡುವುದಾಗಿ ಜನತೆಗೆ ವಾಗ್ಧಾನ ನೀಡಿ ಅಧಿಕಾರದ ಗದ್ದುಗೆಗೇರಿರುವ ಬಿಜೆಪಿ ಸರಕಾರವು ಪಕ್ಷದೊಳಗಿನ ನಾಯಕರ ಕಿತ್ತಾಟ ಮತ್ತು ತಿಕ್ಕಾಟದ ಕಾರಣದಿಂದಾಗಿ ಮುಂದಿನ ಲೋಕಸಭಾ ಉಪ ಚುನಾವಣೆಗೆ ಮುನ್ನವೇ ಪತನಗೊಂಡರೂ ಅಚ್ಚರಿಯೇನಿಲ್ಲ ಎಂದು ಮಾಜಿ ಸಚಿವ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಕಾಪು ಬ್ಲಾಕ್ ಕಾಂಗ್ರೆಸ್‌ನ ನೇತೃತ್ವದಲ್ಲಿ ಕಾಪು ಬಿಲ್ಲವರ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಮತ್ತು ಲೋಕಸಭಾ ಉಪ ಚುನಾವಣೆಯ ಪ್ರಥಮ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ಸಿಗುವ ಮೊದಲು ಅಭಿವೃದ್ಧಿಯ ಮಂತ್ರ ಪಠಿಸಿದ ಬಿಜೆಪಿಗರು ಅಧಿಕಾರ ಸಿಕ್ಕಿದೊಡನೆ ಹಗರಣಗಳ ಸರಮಾಲೆಯ ಮೂಲಕ ಜೈಲಿಗೆ ಹೋಗುವುದನ್ನೇ ತಮ್ಮ ಧ್ಯೇಯ ಎಂದು ತಿಳಿದುಕೊಂಡಿದ್ದಾರೆ. ಪಡಿತರ ಚೀಟಿಯಲ್ಲಿನ ಗೊಂದಲ, ವಿದ್ಯುತ್ ಕ್ಷಾಮ, ರೇವ್ ಪಾರ್ಟಿ ಮತ್ತು ಬ್ಲೂ ಫಿಲ್ಮ್ ಪ್ರಕರಣಗಳು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಅಸ್ತ್ರಗಳಾಗಿವೆ ಎಂದರು.
ದಿಕ್ಸೂಚಿ: ಸಾಲ್ಯಾನ್
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವಸಂತ ವಿ. ಸಾಲ್ಯಾನ್ ಅವರು ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಎರಡೂವರೆ ಸಾವಿರ ಹೆಚ್ಚುವರಿ ಮತಗಳು ದೊರಕಿದ್ದವು. ಬಳಿಕ ನಡೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಏಳೂವರೆ ಸಾವಿರ ಮತಗಳು ಹೆಚ್ಚುವರಿಯಾಗಿ ಬಂದಿದ್ದವು. ಮುಂದಿನ ವಿಧಾನ ಸಭಾ ಚುನಾವಣೆಗೆ ಈ ಉಪ ಚುನಾವಣೆಯ ಫಲಿತಾಂಶವೇ ದಿಕ್ಸೂಚಿಯಾಗಿರುವುದರಿಂದ ನಮ್ಮ ಅಭ್ಯರ್ಥಿಯ ಗೆಲುವಿನ ಮತಗಳೆಲ್ಲವೂ ಕಾಪು ಕ್ಷೇತ್ರದಿಂದಲೇ ದೊರಕುವಂತಾಗ ಬೇಕು ಎಂದರು.
ಜಿ.ಪಂ. ಸದಸ್ಯೆ ಐಡಾ ಗಿಬ್ಬ ಡಿ'ಸೋಜಾ, ಕಾಂಗ್ರೆಸ್‌ನ ಜಿಲ್ಲಾ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಸರಸು ಡಿ. ಬಂಗೇರ, ಕೆ. ಜಯರಾಮ ಶೆಟ್ಟಿ, ಲೀನಾ ಮಥಾಯಿಸ್, ತೇಜ್‌ಪಾಲ್, ಅಲ್ಪಸಂಖ್ಯಾಕ ವಿಭಾಗದ ಜಿಲ್ಲಾಧ್ಯಕ್ಷ ಎಂ.ಪಿ. ಮೊದಿನಬ್ಬ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಕಾಪು ಬ್ಲಾಕ್‌ನ ಮುಖಂಡರಾದ ರುಗಳಾದ ವೈ. ಸುಕುಮಾರ್, ವಿನಯ ಬಲ್ಲಾಳ್, ರಾಜೇಶ್ ರಾವ್ ಪಾಂಗಾಳ, ಸುಶೀಲ್ ಬೋಳಾರ್, ಭಾಸ್ಕರ್ ಪಡುಬಿದ್ರಿ, ಗೀತಾ ವಾಗ್ಲೆ, ಯುವ ಕಾಂಗ್ರೆಸ್‌ನ ಮುಖಂಡರಾದ ನವೀನ್ ಎನ್. ಶೆಟ್ಟಿ, ಸುನೀಲ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಗಂಗಾಧರ ಸುವರ್ಣ ಸ್ವಾಗತಿಸಿ, ಪ್ರಸ್ತಾವನೆಗೈದರು. ಯುವಕ ಕಾಂಗ್ರೆಸ್‌ನ ಕಾಪು ಬ್ಲಾಕ್ ಅಧ್ಯಕ್ಷ ಅಬ್ದುಲ್ ಅಜೀಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.