Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಲೋಕಸಭೆ ಉಪ ಚುನಾವಣೆ ಬಿಸಿ ಆರಂಭ
    • ಮಹತ್ವಕ್ಕಿಂತ ಇಲ್ಲಿ ಪ್ರತಿಷ್ಠೆ ಹೆಚ್ಚು
      • Udayavani | Feb 22, 2012

         ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಶಾಸಕ ಸ್ಥಾನಗಳು ಮತ್ತು ಬಹುಪಾಲು ಸ್ಥಳೀಯ ಸಂಸ್ಥೆಗಳು ಬಿಜೆಪಿ ಹಿಡಿತದಲ್ಲಿವೆ. ಹಾಗಾಗಿ ಅದರ ಮೇಲೆ ನಿರೀಕ್ಷೆ ಹೆಚ್ಚು. ಎದುರಾಳಿ ಕಾಂಗ್ರೆಸ್‌ ದುರ್ಬಲವೇನೂ ಅಲ್ಲ. ಅದರಲ್ಲೂ ಜಯಪ್ರಕಾಶ್‌ ಹೆಗ್ಡೆ ಅಭ್ಯರ್ಥಿ ಆಗಿರು ವುದರಿಂದ ಅದರ ಮೇಲೂ ನಿರೀಕ್ಷೆಯಿದೆ.

        ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಭಾರತೀಯ ಜನತಾ ಪಾರ್ಟಿ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ತುರುಸುಗೊಂಡಿವೆ. ಅದು ನಿರೀಕ್ಷಿತ. ಮಾರ್ಚ್‌ 18ರ ಬಿರುಬಿಸಿಲಿನಲ್ಲಿ ಮತದಾನ ಮುಗಿಯುವವರೆಗೂ ಚುನಾವಣೆಯ ಕಾವು ಹೀಗೇ ಇರುತ್ತದೆ.

        ಮುಖ್ಯಮಂತ್ರಿ ಸದಾನಂದಗೌಡ ತೆರವುಗೊಳಿಸಿದ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂಬ ಕಾರಣ ಬಿಟ್ಟರೆ ಬೇರಾವ ರೀತಿಯಲ್ಲೂ ಇದನ್ನು ತೀರಾ ಮಹತ್ವದ ಚುನಾವಣೆಯೆಂದು ಪರಿಗಣಿಸಬೇಕಿಲ್ಲ. ಈ ಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೂ, ಯಾವ ಪಕ್ಷ ಸೋತರೂ ಕೇಂದ್ರ ಸರ್ಕಾರದಲ್ಲಿ ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ. ಒಂದರ್ಥದಲ್ಲಿ ಜನರಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಇದು ಅನವಶ್ಯಕ ಚುನಾವಣೆ. ಆದರೆ, ಯಾರು ಆರಿಸಿ ಬರುತ್ತಾರೆಂಬುದರಲ್ಲಿ ಜನರ ಹಿತವೇ ಅಡಗಿರುವುದರಿಂದ ರಾಜಕೀಯ ಪಕ್ಷಕ್ಕಿಂತ ಇಲ್ಲಿ ಜನರ ನಿರೀಕ್ಷೆ ಹೆಚ್ಚೆನ್ನಬಹುದು. ಈ ಎಲ್ಲವನ್ನೂ ಮೀರಿ ಇದೊಂದು ಪ್ರತಿಷ್ಠೆಯ ಕಣವಂತೂ ಹೌದು. ಬಿಜೆಪಿಗೆ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯಾದರೆ, ಕಾಂಗ್ರೆಸ್ಸಿಗೆ ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು ಕಸಿದುಕೊಳ್ಳುವುದು ಪ್ರತಿಷ್ಠೆ.

        ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಸ್ಪರ್ಧಿಸಲಿರುವ ಬ್ರಹ್ಮಾವರದ ಜಯಪ್ರಕಾಶ್‌ ಹೆಗ್ಡೆ ಹಾಗೂ ಕಾರ್ಕಳದ ಸುನೀಲ್‌ ಕುಮಾರ್‌ ಇಬ್ಬರೂ ಸಮರ್ಥ ಅಭ್ಯರ್ಥಿಗಳೇ. ಮೊದಲನೆಯವರು ಜನತಾ ಪರಿವಾರದಿಂದ ಬಂದವರು, ಎರಡನೆಯವರು ಸಂಘ ಪರಿವಾರದಿಂದ ಬಂದವರು. ಇಬ್ಬರೂ ಹೋರಾಟದ ಹಿನ್ನೆಲೆಯವರು. ಇಬ್ಬರಿಗೂ ಒಳ್ಳೆಯ ಹೆಸರಿದೆ, ಜಿಲ್ಲೆಯ ಜನರ ನಾಡಿಮಿಡಿತ ಗೊತ್ತಿದೆ. ಮತ್ತು ಇಬ್ಬರಿಗೂ ತಮ್ಮ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಹಾಗಾಗಿ ಬಿರುಸಿನ ಸ್ಪರ್ಧೆ ನಿರೀಕ್ಷಿಸಬಹುದು. (ಇಬ್ಬರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತವರು ಕೂಡ!)

        ಇಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಹೆಚ್ಚುಕಮ್ಮಿ ಎಲ್ಲ ಉಪ ಚುನಾವಣೆಗಳಲ್ಲೂ ಆ ಪಕ್ಷ ಕಡೇ ಕ್ಷಣದಲ್ಲಿ ನಿರ್ಧಾರ ಕೈಗೊಂಡಿದೆ. ಬೇರೆ ಪಕ್ಷಗಳ ರಣತಂತ್ರ ಗಮನಿಸಿ ತನ್ನದನ್ನು ಕೈಗೊಳ್ಳುವ ತಂತ್ರವಿದು. ಈ ಬಾರಿ ವಿರೋಧಿ ಪಕ್ಷಗಳೆರಡೂ ಅಭ್ಯರ್ಥಿ ಪ್ರಕಟಿಸಿರುವುದರಿಂದ ಜೆಡಿಎಸ್‌ಗೆ ಬಹಳ ಸಮಸ್ಯೆಯೇನೂ ಇಲ್ಲ. ಸೂಕ್ತ ಅಭ್ಯರ್ಥಿ ಹುಡುಕುವುದೇ ಅದಕ್ಕಿರುವ ಏಕೈಕ ಸಮಸ್ಯೆ. ಆದರೆ, ಸ್ಪರ್ಧೆ ಹಾಗೂ ಅಭ್ಯರ್ಥಿ ಆಯ್ಕೆ ಎರಡರ ವಿಚಾರದಲ್ಲೂ ದೇವೇಗೌಡ ಹಾಗೂ ಕುಮಾರಸ್ವಾಮಿ ನಡುವೆ ಗೊಂದಲಗಳಿದ್ದಂತಿದೆ. ಅದೇನೂ ದೊಡ್ಡದಲ್ಲ.

        ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಏಳು ಬಿಜೆಪಿ ಕೈಲಿವೆ. ಬಹುಪಾಲು ಸ್ಥಳೀಯ ಸಂಸ್ಥೆಗಳೂ ಬಿಜೆಪಿ ಹಿಡಿತದಲ್ಲೇ ಇವೆ. ಸಂಘ ಪರಿವಾರಕ್ಕೆ ಗಟ್ಟಿ ನೆಲೆಯಿರುವ ಕ್ಷೇತ್ರವಿದು. ಹಾಗಾಗಿ ಬಿಜೆಪಿಯ ಮೇಲೆ ನಿರೀಕ್ಷೆ ಹೆಚ್ಚಿದೆ. ಆದರೆ, ಎದುರಾಳಿ ಕಾಂಗ್ರೆಸ್‌ ದುರ್ಬಲವೇನೂ ಅಲ್ಲ. ಅದರಲ್ಲೂ ಜಯಪ್ರಕಾಶ್‌ ಹೆಗ್ಡೆ ಅಭ್ಯರ್ಥಿಯಾಗಿರುವುದರಿಂದ ಅದರ ಮೇಲೂ ನಿರೀಕ್ಷೆಯಿದೆ.

        1978ರಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿ, ಗೆದ್ದು, ಪ್ರಧಾನಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದ ಕ್ಷೇತ್ರವಿದು. ಉತ್ತರ ಪ್ರದೇಶದ  ರಾಯ್‌ಬರೇಲಿಯಲ್ಲಿ ಸೋತು, ಪ್ರಧಾನಿಯಾಗಿ, ಆರು ತಿಂಗಳೊಳಗೆ ಸಂಸತ್ತಿಗೆ ಆಯ್ಕೆಯಾಗಬೇಕಾದ ಶಾಸ್ತ್ರ ಈಡೇರಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಚಿಕ್ಕಮಗಳೂರು ಕ್ಷೇತ್ರವನ್ನು. ಹಾಗಾಗಿ ಉಪ ಚುನಾವಣೆಯ "ಶ್ರೀಮಂತ' ಇತಿಹಾಸ ಈ ಕ್ಷೇತ್ರಕ್ಕಿದೆ. ಈ ಬಾರಿ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಇಲ್ಲಿಗೆ ಬಂದು ಸ್ಪರ್ಧಿಸುತ್ತಾರೆಂಬ ವದಂತಿಯಿತ್ತು. ಕಾಂಗ್ರೆಸಿಗರು ಪ್ರಯತ್ನಿಸಿದರೆ ಅವರು ಹಾಗೂ ಅವರ ಅಣ್ಣ ರಾಹುಲ್‌ ಗಾಂಧಿಯನ್ನು ಪ್ರಚಾರಕ್ಕೆ ಕರೆತರಬಹುದು.

        ಕಳೆದ ಮೂರು ವರ್ಷದಲ್ಲಿ ಉಪ ಚುನಾವಣೆಗಳ ಮೇಲೆ ಉಪ ಚುನಾವಣೆಗಳನ್ನು ನೋಡಿ, ಪತ್ರಿಕೆಗಳಲ್ಲಿ ಅವುಗಳ ಬಗ್ಗೆ ಓದಿ, ಆ ಚುನಾವಣೆಗಳು ಹೇಗೆ ನಡೆಯುತ್ತವೆಯೆಂಬುದನ್ನು ಹತ್ತಿರದಿಂದ ಗಮನಿಸಿ ಜನರಿಗೆ ಸಾಕಾಗಿದೆ. ಅಂತಹ ಚುನಾವಣೆಗಳ ಬಗ್ಗೆ ಈಗ ಅವರಲ್ಲಿ ಉತ್ಸಾಹವೇನೂ ಉಳಿದಿಲ್ಲ. ಆದರೆ, ರಾಜಕೀಯ ಪಕ್ಷಗಳಿಗೆ ಎಲ್ಲಾ ಚುನಾವಣೆಯಲ್ಲೂ ಪೂರ್ತಿ ಧಮ್‌ ಹಾಕಿ ಸೆಣಸುವುದು ಅನಿವಾರ್ಯ. ಅದನ್ನವು ಮಾಡುತ್ತವೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus