Udayavani | Feb 22, 2012
ಉಡುಪಿ: ಅಪರೂಪಕ್ಕೆ ಕಾಣಸಿಗುವ ಬುಧ ಗ್ರಹ (Mercury) ಫೆ. 23ರಂದು ಸಂಜೆ ಆಕಾಶದಲ್ಲಿ ಗೋಚರಿಸಲಿದೆ. ಈ ದಿನ ಗ್ರಹಗಳ ಪಥಸಂಚಲನವೋ ಎನ್ನುವಂತೆ ಪಶ್ಚಿಮ ದಿಗಂತಕ್ಕೆ ಸಮೀಪ 22 ಡಿಗ್ರಿ ಎತ್ತರದಲ್ಲಿ ಬುಧ, 40 ಡಿಗ್ರಿ ಎತ್ತರದಲ್ಲಿ ಶುಕ್ರ, 60 ಡಿಗ್ರಿ ಎತ್ತರದಲ್ಲಿ ಗುರು ಹಾಗೂ ಪೂರ್ವ ಆಕಾಶದಲ್ಲಿ ಮಂಗಳ ಗ್ರಹಗಳು ಕಾಣಿಸಲಿವೆ.
ಬುಧಗ್ರಹವನ್ನು ಗುರುತಿಸುವುದು ಬಲು ಕಷ್ಟ. ಆದರೆ ಗುರುವಾರದಂದು ಬಿದಿಗೆ ಚಂದ್ರನ ಪಕ್ಕದಲ್ಲಿ ಬುಧ ಗ್ರಹವಿರುತ್ತದೆ. ಹಾಗಾಗಿ ಆ ದಿನ ಸೂರ್ಯಾಸ್ತವಾಗಿ ಅರ್ಧಗಂಟೆಯ ಅನಂತರ ಗುರುತಿಸುವುದು ಸುಲಭ.
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಪೂರ್ಣಪ್ರಜ್ಞ ಕಾಲೇಜು ಉಡುಪಿ ಇವರು ಮಲ್ಪೆ ಸಮುದ್ರ ತೀರದಲ್ಲಿ ಫೆ. 23ರಂದು ಸಂಜೆ 6ರಿಂದ 7.30ರ ತನಕ ಬುಧಗ್ರಹವನ್ನು ಗುರುತಿಸಲು ಅನುಕೂಲವಾಗುವಂತೆ ಆಕಾಶ ವೀಕ್ಷಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಡಾ| ಎ.ಪಿ. ಭಟ್ಟ ಅವರಿಂದ ಆಕಾಶ ವೀಕ್ಷಣೆ ಹಾಗೂ ಹೆಬ್ರಿ ಸರಕಾರಿ ಜೂನಿಯರ್ ಕಾಲೇಜಿನ ಅಧ್ಯಾಪಕ ಕೆ. ಕಿಶೋರ್ ಹಂದೆ ಅವರಿಂದ ದೂರದರ್ಶಕದಿಂದ ಗ್ರಹಗಳ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ. 25ರಂದು ಶುಕ್ರನ ಪಕ್ಕ ಚಂದ್ರ 3 ಡಿಗ್ರಿ ಸಮೀಪ ಹಣತೆಗೆ ದೀಪಹಚ್ಚಿದಂತೆ ಕಾಣಿಸಲಿದೆ.
ಈ ತಿಂಗಳ ಆಕಾಶದಲ್ಲಿ ಗ್ರಹಗಳೊಂದಿಗೆ ತುಂಬಾ ಸುಂದರವಾಗಿ ನೆತ್ತಿಯ ಮೇಲೆ ಕಾಣಿಸುವುದು ಮಹಾವ್ಯಾಧ ಮತ್ತು ಮಹಾಶ್ವಾನ ನಕ್ಷತ್ರ ಪುಂಜ. ಬೇಟೆಗಾರನ ಚಿತ್ರದಂತೆ ಹೋಲುವ ಈ ನಕ್ಷತ್ರ ಪುಂಜದಲ್ಲಿ ಕೆಂಪುದೈತ್ಯ ಆದ್ರಾì ನಕ್ಷತ್ರ (Betelguese), ಬಿಳಿದೈತ್ಯ ನಕ್ಷತ್ರ ರಾಜನ್ಯ (Regal) ಹಾಗೇ ಆತನ ಖಡ್ಗದಲ್ಲಿರುವ ಓರಿಯನ್ ನೆಬ್ಯುಲಾ ಅತೀ ಮುಖ್ಯವಾದವು. ಮಹಾಶ್ವಾನದ ಕಣ್ಣು ಲುಬ್ದಕ ನಕ್ಷತ್ರ (Series). ಅದೊಂದು ನೀಲ ನಕ್ಷತ್ರ.
ಆದ್ರಾì ನಕ್ಷತ್ರ ಸುಮಾರು 350 ಜ್ಯೋತಿರ್ವರ್ಷ, ರಾಜನ್ಯ 750 ಜ್ಯೋತಿರ್ವರ್ಷ, ಓರಿಯನ್ ನೆಬ್ಯುಲಾ 1,600 ಜ್ಯೋತಿರ್ವರ್ಷ, ಹಾಗೂ ಲುಬ್ದಕ 8.6 ಜ್ಯೋತಿರ್ವರ್ಷ ದೂರದಲ್ಲಿದ್ದರೆ, ಸೂರ್ಯನಿಂದ ನಮ್ಮ ಗ್ರಹಗಳಾದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ, ಗುರು 70 ಕೋಟಿ ಮಂಗಳ 24 ಕೋಟಿ ಮತ್ತು ಭೂಮಿ 15 ಕೋಟಿ ಕಿ.ಮೀ. ದೂರದಲ್ಲಿವೆ ಎಂದು ಡಾ| ಎ.ಪಿ. ಭಟ್ಟ ವಿವರಿಸಿದ್ದಾರೆ.
ಪೇಜಾವರ ಶ್ರೀಗಳಿಂದ ಚಾಲನೆ
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಟೆಲಿಸ್ಕೋಪ್ ಮೂಲಕ ಆಕಾಶ ವೀಕ್ಷಣೆ ನಡೆಸಿ ಸಾರ್ವಜನಿಕ ವೀಕ್ಷಣಾ ಕಾರ್ಯಕ್ರಮಕ್ಕೆ ಸಂಜೆ 6.30ಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೌರಾಯುಕ್ತ ಎಂ. ಗೋಕುಲ್‌ದಾಸ್ ನಾಯಕ್, ಡಾ| ಜಿ.ಎಸ್. ಚಂದ್ರಶೇಖರ್, ಕಾಲೇಜು ಪ್ರಾಂಶುಪಾಲ ಕೆ. ಸದಾಶಿವ ರಾವ್ ಪಾಲ್ಗೊಳ್ಳಲಿದ್ದಾರೆ. ಮಲ್ಪೆಯ ಜ್ಞಾನಜ್ಯೋತಿ ಭಜನಾ ಮಂದಿರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪಾಂಡುರಂಗ ಮಲ್ಪೆ, ರಾಧಾಕೃಷ್ಣ ಅವರು ಕೂಡಾ ಉಪಸ್ಥಿತರಿರುವರು ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಡಾ| ಎ.ಪಿ. ಭಟ್ಟ ತಿಳಿಸಿದ್ದಾರೆ.