Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸುಬ್ರಹ್ಮಣ್ಯ ನಂ.1
    • ಕರ್ನಾಟಕದ ನಂಬರ್‌ ಒನ್‌ ಶ್ರೀಮಂತ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ

      • Udayavani | Feb 22, 2012

        ಬೆಂಗಳೂರು: ಕರ್ನಾಟಕದ ನಂಬರ್‌ ಒನ್‌ ಶ್ರೀಮಂತ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ !

        ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ಒಟ್ಟು 34,217 ದೇವಸ್ಥಾನಗಳಿವೆ. ಅವುಗಳಲ್ಲಿ ಆದಾಯ ಗಳಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ. ಅಂದರೆ, ಈ ದೇವಸ್ಥಾನದ ವಾರ್ಷಿಕ ಆದಾಯ 44.8225 ಕೋಟಿ ರೂ.

        ಬೇರೆ ಮುಜರಾಯಿ ದೇವಸ್ಥಾನಗಳಿಗೆ ಹೋಲಿಸಿದರೆ ಕುಕ್ಕೆಗೆ ಬರುವ ಭಕ್ತರ ಸಂಖ್ಯೆಯೂ ಅತ್ಯಧಿಕ. 'ದೇವಸ್ಥಾನಕ್ಕೆ ಪ್ರತಿದಿನ ಅಂದಾಜು 2ರಿಂದ 5 ಸಾವಿರ ಭಕ್ತರು ದರ್ಶನಕ್ಕೆ ಬರುತ್ತಾರೆ. ಇಲ್ಲಿ ಸೇವೆ ಮತ್ತು ಹುಂಡಿ ರೂಪದಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತಿದೆ. ತಿಂಗಳಿಗೆ ಅಂದಾಜು 50ರಿಂದ 60 ಲಕ್ಷ ರೂ. ಕಾಣಿಕೆ ಬರುತ್ತದೆ' ಎಂದು ಕುಕ್ಕೆ ದೇವಳದ ನಿರ್ವಹಣಾಧಿಕಾರಿ ಎಚ್‌.ಎಂ. ಕಾಳಿ ತಿಳಿಸಿದ್ದಾರೆ.

        ಇನ್ನು ರಾಜ್ಯದ 2ನೇ ಶ್ರೀಮಂತ ಪುಣ್ಯಕ್ಷೇತ್ರ ಕೊಳ್ಳೆಗಾಲದ ಮಲೆ ಮಹದೇಶ್ವರ ಸ್ವಾಮಿ. ಈ ಕ್ಷೇತ್ರದ ಆದಾಯ 26.5021 ಕೋಟಿ ರೂ. ಶ್ರೀಮಂತಿಕೆಯಲ್ಲಿ 3ನೇ ಸ್ಥಾನದಲ್ಲಿರುವ ಮುಜರಾಯಿ ದೇವಸ್ಥಾನ ಕುಂದಾಪುರದ ಶ್ರೀ ಕೊಲ್ಲೂರು ಮೂಕಾಂಬಿಕೆ. ಈ ದೇವಳದ ವಾರ್ಷಿಕ ಆದಾಯ 17.4844 ಕೋಟಿ ರೂ. ಇನ್ನೂ ಸಂಪತ್ತು ಗಳಿಕೆಯಲ್ಲಿ 4ನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಈ ತೀರ್ಥಕ್ಷೇತ್ರದ ಆದಾಯ 10.07,89 ಕೋಟಿ ರೂ.

        ಶ್ರೀಮಂತ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯವಿದೆ. ಇದರ ಒಟ್ಟು ಸಂಪಾದನೆ 10.0874 ಕೋಟಿ ರೂ. ಹಾಗೆಯೇ 6ನೇ ಶ್ರೀಮಂತ ದೇವಳ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ. ಈ ಪುಣ್ಯಕ್ಷೇತ್ರದ ಆದಾಯ 9.8060 ಕೋಟಿ ರೂ. ಆ ಬಳಿಕ 7ನೇ ಕೋಟಾಧಿಪತಿ ಕ್ಷೇತ್ರ ಸವದತ್ತಿಯ ಯಲ್ಲಮ್ಮನಗುಡ್ಡ ಶ್ರೀ ರೇಣುಕ ಯಲ್ಲಮ್ಮ ದೇವಸ್ಥಾನ. ಈ ದೇವಸ್ಥಾನ ಸಂಪಾದನೆ 7.89,80 ಕೋಟಿ ರೂ.

        ನಂತರದ ಸ್ಥಾನದಲ್ಲಿ ಉಡುಪಿ ಮಂದರ್ತಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ. ಇದರ ಆದಾಯ 3.8170 ಕೋಟಿ ರೂ. ಇನ್ನು 3.73,39 ಕೋಟಿ ರೂ. ಆದಾಯದೊಂದಿಗೆ ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನ 9ನೇ ಸ್ಥಾನದಲ್ಲಿದೆ. ಕೊನೆಯದಾಗಿ ಕೊಪ್ಪಳದ ಶ್ರೀ ಹುಲಿಗಮ್ಮ ದೇವಸ್ಥಾನ 1.76,87 ಕೋಟಿ ಸಂಪಾದನೆಯೊಂದಿಗೆ 10ನೇ ಸ್ಥಾನದಲ್ಲಿದೆ.

        ಈ ಬಗ್ಗೆ 'ಉದಯವಾಣಿ'ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆ ಆಯುಕ್ತ ಬಿ.ಎನ್‌. ಕೃಷ್ಣಯ್ಯ 'ರಾಜ್ಯದಲ್ಲಿ ಒಟ್ಟು 34 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿವೆ. ಆದಾಯ ಗಳಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ. ಆಯಾ ದೇವಸ್ಥಾನಗಳ ಆದಾಯ ಗಳಿಕೆ ಮೇಲೆ ಅವುಗಳನ್ನು ವರ್ಗೀಕರಿಸಲಾಗಿವೆ' ಎಂದು ಹೇಳಿದ್ದಾರೆ.

        '25 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಆದಾಯವಿರುವ ದೇವಸ್ಥಾನಗಳನ್ನು 'ಎ' ಪಟ್ಟಿಗೆ ಸೇರಿಸಿದ್ದು, ಅಂತಹ 110 ದೇವಸ್ಥಾನಗಳಿವೆ. ಹಾಗೆಯೇ 5ರಿಂದ 25 ಲಕ್ಷ ರೂ. ಆದಾಯ ಗಳಿಕೆ ಪುಣ್ಯಕ್ಷೇತ್ರಗಳನ್ನು 'ಬಿ'ಪಟ್ಟಿಗೆ ಸೇರಿಸಿದ್ದು, ಅಂತಹ 175 ದೇವಸ್ಥಾನಗಳಿಗೆ. 5 ಲಕ್ಷಕ್ಕಿಂತ ಕಡಿಮೆ ಆದಾಯ ಬರುವ ದೇವಸ್ಥಾನಗಳನ್ನು 'ಸಿ' ವಿಭಾಗಕ್ಕೆ ಸೇರಿಸಿದ್ದು, ಅವು ಒಟ್ಟು 33,932 ದೇವಸ್ಥಾನಗಳಿಗೆ' ಎಂದು ಆಯುಕ್ತರು ತಿಳಿಸಿದ್ದಾರೆ.


        ಟಾಪ್‌ 10ರಲ್ಲಿ ಕರಾವಳಿ 4 ಪುಣ್ಯಕ್ಷೇತ್ರ

        ರಾಜ್ಯದ 10 ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಕರಾವಳಿ ಭಾಗದ ಒಟ್ಟು 4 ದೇವಸ್ಥಾನಗಳಿವೆ. ಅಂದರೆ ಧಾರ್ಮಿಕವಾಗಿ ಅತಿಹೆಚ್ಚು ಆದಾಯ ಬರುವ ದೇವಸ್ಥಾನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿವೆ. ಇನ್ನು ಖಾಸಗಿ ಒಡೆತನದಲ್ಲಿರುವ ದೇವಸ್ಥಾನಗಳಿಗೆ ಹೋಲಿಸಿದರೂ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೂಡ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು. ಹೀಗಾಗಿ, ಕರ್ನಾಟಕದಲ್ಲಿ ಅತಿಹೆಚ್ಚು ಭಕ್ತಾದಿಗಳು ಈ ಎರಡು ಜಿಲ್ಲೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

        10 ಶ್ರೀಮಂತ ದೇವಸ್ಥಾನ

        ದೇವಳ(ಕೋಟಿಗಳಲ್ಲಿ) ಆದಾಯ ಖರ್ಚು

        ಕುಕ್ಕೆ ಶ್ರೀ ಸುಬ್ರಹ್ಮಣ್ಯ 44.8225 ರೂ. 19.2321 ರೂ.

        ಕೊಳ್ಳೆಗಾಲ ಮಲೆ ಮಹದೇಶ್ವರ 26.5021 ರೂ. 15.6149 ರೂ.

        ಶ್ರೀ ಕೊಲ್ಲೂರು ಮೂಕಾಂಬಿಕೆ 17.4844 ರೂ. 15.0509 ರೂ.

        ಕಟೀಲು ಶ್ರೀ ದುರ್ಗಾ ಪರಮೇಶ್ವರಿ 10.0789 ರೂ. 8.2889 ರೂ.

        ಶ್ರೀ ಚಾಮುಂಡೇಶ್ವರಿ 10.0874 ರೂ. 5.5926 ರೂ.

        ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ 9.8060 ರೂ. 6.8887 ರೂ.

        ಯಲ್ಲಮ್ಮನಗುಡ್ಡ ಶ್ರೀ ರೇಣುಕಯಲ್ಲಮ್ಮ 7.8980 ರೂ. 6.2169 ರೂ.

        ಮಂದರ್ತಿ ಶ್ರೀ ದುರ್ಗಾ ಪರಮೇಶ್ವರಿ 3.8170 ರೂ. 3.4355 ರೂ.

        ಬೆಂಗಳೂರಿನ ಶ್ರೀ ಬನಶಂಕರಿ 3.73,39 ರೂ. 3.0687 ರೂ.

        ಶ್ರೀ ಹುಲಿಗಮ್ಮ 3.5478 ರೂ. 1.76,87 ರೂ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus