Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಯಡಿಯೂರಪ್ಪ ಒಂದು ರೀತಿ ಒಲಿದರೆ ನಾರಿ ಮುನಿದರೆ ಮಾರಿ
    • ಸಿಎಂ ಯಾರ ಮಾತೂ ಕೇಳಲ್ಲ, ಹೀಗಾಗಿ ಗೊಂದಲ!
    • ನೇರಾನೇರ : ಖಡಕ್‌ ಪ್ರಶ್ನೆಗೆ... ಖಡಕ್‌ ಉತ್ತರ
      • ವಿಜಯ್‌ ಮಲಗಿಹಾಳ | Feb 22, 2012

        ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದರೆ ಸಮಸ್ಯೆ ಮುಗಿಯುವುದೇ?
        ಹೌದು. ಯಡಿಯೂರಪ್ಪ ಅವರಿಗೆ ಸ್ಥಾನಮಾನ ಕೊಟ್ಟರೆ ಎಲ್ಲವೂ ಬಗೆಹರಿಯುತ್ತದೆ. ಒಬ್ಬ ನಾಯಕನಿಗೆ ಅನ್ಯಾಯವಾದಾಗ, ನೋವಾದಾಗ ಅದನ್ನು ಸರಿಪಡಿಸುವುದು ಪಕ್ಷದ ಹಿರಿಯ ನಾಯಕರ ಕರ್ತವ್ಯ. ಯಡಿಯೂರಪ್ಪ ಅವರಿಗೆ ಯಾವುದಾದರೊಂದು ಉತ್ತಮ ಸ್ಥಾನ ಸಿಗಬೇಕು ಎಂಬುದು ಎಲ್ಲ ಶಾಸಕರ ಅಭಿಪ್ರಾಯ.

        ರಾಜ್ಯ ಬಿಜೆಪಿಯಲ್ಲಿ ಈಗ ಗೊಂದಲ ತಾರಕಕ್ಕೇರಿದ್ದು, ಯಾವುದೇ ಕ್ಷಣದಲ್ಲೂ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಯಡಿಯೂರಪ್ಪ ಸ್ಥಾನಮಾನಕ್ಕಾಗಿ ಪ್ರಯತ್ನ ನಡೆಸಿದ್ದರೆ, ಅವರ ವಿರೋಧಿಗಳು ಯಡಿಯೂರಪ್ಪ ಸಾಮರ್ಥ್ಯ ಕುಗ್ಗಿಸುವ ತಂತ್ರ ರೂಪಿಸುತ್ತಿದ್ದಾರೆ. ಇದನ್ನು ಅರಿತ ಯಡಿಯೂರಪ್ಪ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಾಗಿ ಗುರುವಾರ ಪಕ್ಷದ ಮುಖಂಡರ ಸಭೆಯನ್ನು ಕರೆದಿದ್ದಾರೆ. ಈ ಸಭೆಯ ನಂತರ ಪಕ್ಷದ ಹೈಕಮಾಂಡ್‌ಗೆ ಸ್ಥಾನಮಾನ ಸಂಬಂಧ ಒತ್ತಡ ಹೇರಲು ನಿರ್ಧರಿಸಲಾಗಿದೆ. ಒಂದು ವೇಳೆ ಮಣಿಯದಿದ್ದರೆ ಪಕ್ಷ ತ್ಯಜಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದಾರೆ. ಈ ಸನ್ನಿವೇಶದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಯಡಿಯೂರಪ್ಪ  ಪಾಳೆ ಯದಲ್ಲಿ ಗುರುತಿಸಿಕೊಂಡಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಅವರೊಂದಿಗೆ "ನೇರಾನೇರ' ಮಾತಿಗಿಳಿದಾಗ...

        l ಯಡಿಯೂರಪ್ಪ ಅವರಿಗೆ ಯಾಕೆ ಸ್ಥಾನಮಾನ?

         ಚುನಾವಣೆಗೆ ಇನ್ನೂ ಒಂದು ವರ್ಷ ಉಳಿದಿದೆ. ಚುನಾವಣೆಯೆಂಬ ಯುದ್ಧಕ್ಕೆ ಹೋಗಲು ಸಮರ್ಥ ಸೇನಾಧಿಪತಿ ಬೇಕಾಗುತ್ತದೆ. ಸಮರ್ಥ ಸೇನಾಧಿಪತಿ ಇಲ್ಲದಿದ್ದರೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಯಡಿಯೂರಪ್ಪ ಅವರಿಗೆ ಸೇನಾಧಿಪತ್ಯದ ಪಟ್ಟ ಕಟ್ಟಬೇಕು ಎಂಬ ಅಭಿಪ್ರಾಯ ಶಾಸಕರಲ್ಲಿದೆ. ಅದು ಮುಖ್ಯಮಂತ್ರಿ ಹುದ್ದೆಯಾಗಿರಬಹುದು ಅಥವಾ ರಾಜ್ಯಾಧ್ಯಕ್ಷ ಸ್ಥಾನವಾಗಿರಬಹುದು. ಈ ಅಭಿಪ್ರಾಯದ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲ ಉದ್ಭವಿಸಿದೆ. ನಮ್ಮ ಕೇಂದ್ರ ನಾಯಕರು ಇದನ್ನು ಶೀಘ್ರದಲ್ಲೇ ಸರಿಪಡಿಸುತ್ತಾರೆ ಎಂಬ ನಂಬಿಕೆಯಿದೆ.

        l ಅಂದ್ರೆ ಈಗಿರುವ ಸೇನಾಧಿಪತಿಗಳು ಸಮರ್ಥರಲ್ಲವೇ?

         ಈಗಿರುವ ಸೇನಾಧಿಪತಿಗಳು ಒಳ್ಳೆಯ ನಾಯಕರೇ. ಚುನಾವಣೆಯಲ್ಲಿ ಯುದ್ಧ ಮಾಡಬೇಕಾದರೆ ಮತಗಳನ್ನು ಕ್ರೋಢೀಕರಿಸುವಂಥವರು ಬೇಕಾಗುತ್ತದೆ. ಯಾಕೆ ಕಾಂಗ್ರೆಸ್‌ ಪಕ್ಷದಲ್ಲಿ ನೆಹರು ಕುಟುಂಬದವರಿಗೆ ಮಣೆ ಹಾಕಲಾಗುತ್ತಿದೆ ಹೇಳಿ. ಅವರಿಗೆ ಮತದಾರರನ್ನು ಸೆಳೆಯುವ ಸಾಮರ್ಥ್ಯವಿದೆ ಎಂಬ ಕಾರಣಕ್ಕಾಗಿ. ಅದೇ ರೀತಿ ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಯಡಿಯೂರಪ್ಪ ಬೇಕಾಗಿದೆ.

        l ಈಶ್ವರಪ್ಪರ ಬಗ್ಗೆ ಶಾಸಕರಲ್ಲಿ ಅಸಮಾಧಾನವಿದೆಯಂತೆ?

         ಈಶ್ವರಪ್ಪ ಅವರ ಮನಸ್ಸು ಒಳ್ಳೆಯದಿರಬಹುದು. ಆದರೆ, ಅವರ ಭಾವನೆಗಳು, ಹೇಳಿಕೆಗಳು ಕೆಲವು ಶಾಸಕರಿಗೆ ಬೇಸರ ತರಿಸಿರಬಹುದು. ಅಸಮಾಧಾನ ಉಂಟು ಮಾಡಿರಬಹುದು. ಈ ಬಗ್ಗೆ ಶಾಸಕರು ಮಾತನಾಡುವುದನ್ನು ನಾನೂ ಕೇಳಿದ್ದೇನೆ.

        l ಯಡಿಯೂರಪ್ಪ ಅವರ ಹಗರಣಗಳಿಂದ ಪಕ್ಷ ಮತ್ತು ಸರ್ಕಾರದ ಇಮೇಜ್‌ಗೆ ಧಕ್ಕೆ ಆಗಿಲ್ಲವೇ?

         ಈ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಅದರ ಬಗ್ಗೆ ನ್ಯಾಯಾಲಯಗಳು ಅಂತಿಮ ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದಾಗ ಆತ ಅಪರಾಧಿಯಾಗುತ್ತಾನೆ. ಆರೋಪಕ್ಕೂ ಮತ್ತು ಅಪರಾಧಕ್ಕೂ ವ್ಯತ್ಯಾಸವಿದೆ. ಆರೋಪಗಳು ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿವೆ. ಒಬ್ಬ ಬಲಶಾಲಿಯಾದ ನಾಯಕನಿಗೆ ಮಸಿ ಬಳಿಯುವ ಯತ್ನ, ಆತನ ಇಮೇಜ್‌ಗೆ ಧಕ್ಕೆ ತರುವ ಯತ್ನವನ್ನು ಇತರ ಪಕ್ಷಗಳು ಮಾಡುತ್ತಲೇ ಇರುತ್ತವೆ. ಇದು ಹೊಸದೇನಲ್ಲ.

        l ದೇವೇಗೌಡರ ಮಾತು ಕೇಳಿ ಸಿಎಂ ಸರ್ಕಾರ ನಡೆಸುತ್ತಿದ್ದಾರಂತೆ?

         ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾದ ಮೇಲೆ ಅವರು ಕೇವಲ ಬಿಜೆಪಿಗಷ್ಟೇ ಸೀಮಿತವಾಗುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ, ಹಾಗೂ ಈ ನಾಡಿನ ಆರು ಕೋಟಿ ಜನರಿಗೆ ಮುಖ್ಯಮಂತ್ರಿ ಯಾಗಿರುತ್ತಾರೆ. ಆದರೆ, ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಕೇಳಿ ಅಧಿಕಾರಿಗಳನ್ನು  ವರ್ಗಾವಣೆ ಮಾಡುವುದು, ಅವರನ್ನು ಕೇಳಿ ನೇಮಕ ಮಾಡುವುದನ್ನು ಮಾಡಬಾರದು. ಸದಾನಂದಗೌಡರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದರ್ಥವಲ್ಲ. ಅವರು ಆ ರೀತಿ ನಡೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ಅವರಿಗೆ ಯಾವುದು ಸರಿ ಎನಿಸುತ್ತದೆಯೊ ಅದನ್ನು ಮಾಡಿದ್ದಾರೆ ಹೊರತು ದೇವೇಗೌಡ-ಕುಮಾರಸ್ವಾಮಿ ಅವರನ್ನು ಕೇಳಿ ಮಾಡಿದ್ದಾರೆ ಎನಿಸುವುದಿಲ್ಲ.

        l ದೇವೇಗೌಡರ ಸಲಹೆಯಂತೆ ಚಂದ್ರಶೇಖರಯ್ಯರನ್ನು ನೇಮಿಸಲಾಗಿದೆ ಎನ್ನಲಾಗುತ್ತಿದೆಯಲ್ಲಾ?

         ಉಪಲೋಕಾಯುಕ್ತ ನೇಮಕ ಗೊಂದಲವಾಗಿರುವುದಂತೂ ನಿಜ. ಆದರೆ, ಅದು ಏನಾಗಿದೆ ಎಂಬುದರ ವಿವರಗಳು ನನಗೆ ಗೊತ್ತಿಲ್ಲ. ಪಕ್ಷದ ಕೋರ್‌ ಕಮಿಟಿಯಲ್ಲಿ ಚರ್ಚೆಯಾಗಿಲ್ಲ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಒಂದು ಸಂವಿಧಾನಿಕ ಹುದ್ದೆಗೆ ನೇಮಕ ಮಾಡಬೇಕಾದರೆ ಆ ವ್ಯಕ್ತಿಯ ಚಾರಿರ್ತ್ಯ ಮತ್ತು ಪ್ರಾಮಾಣಿಕತೆ ನೋಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ದೇವೇಗೌಡರನ್ನು ಕೇಳಿ ನೇಮಕ ಮಾಡುವ ಷ್ಟು ದಡ್ಡರಲ್ಲ  ಸದಾನಂದಗೌಡರು ಎಂಬುದು ನನ್ನ ನಂಬಿಕೆ.

        l ತಮ್ಮನ್ನು ಸ್ವಪಕ್ಷೀಯರೇ ತುಳಿಯುತ್ತಿದ್ದಾರೆ ಎಂದು ಯಡಿಯೂರಪ್ಪ ಆಪಾದಿಸಿದ್ದಾರಲ್ಲ?

         ಸಿದ್ದರಾಮಯ್ಯ ಯಾಕೆ ಜೆಡಿಎಸ್‌ನಿಂದ ಹೊರಬಂದರು. ಜೀವರಾಜ್‌ ಆಳ್ವ ಯಾಕೆ ಬಿಜೆಪಿಗೆ ಸೇರಿದ್ದರು. ಇಬ್ರಾಹಿಂ ಯಾಕೆ ಜನತಾ ಪರಿವಾರದಿಂದ ಹೊರಬಂದರು. ಒಂದು ರಾಜಕೀಯ ಪಕ್ಷ ಎಂದ ಮೇಲೆ ಇದೆಲ್ಲ ಇರುತ್ತದೆ. ಇದನ್ನೆಲ್ಲ ಮೆಟ್ಟಿ ನಿಲ್ಲುವವನೇ ನಾಯಕ ಎನಿಸಿಕೊಳ್ಳುತ್ತಾನೆ. ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಬದಲಾವಣೆಗಳನ್ನು ಮಾಡಿಕೊಂಡು ಆಡಳಿತ ನಡೆಸುತ್ತಾರೆ ಎಂಬ ನಿರೀಕ್ಷೆಯಿದೆ.

        l ಸಿಎಂ ಆಡಳಿತ ವೈಖರಿ ಸಮಾಧಾನ ತಂದಿದೆಯೇ?

         ಸದಾನಂದಗೌಡರು ಯಾರಿಗೂ ಸೊಪ್ಪು ಹಾಕುವುದಿಲ್ಲ. ಯಾರ ಮಾತನ್ನೂ ಕೇಳಿಕೊಂಡು ಆಡಳಿತ ನಡೆಸುವುದಿಲ್ಲ. ತಮಗೆ ಸರಿ ಎನಿಸಿದ ರೀತಿಯಲ್ಲಿ ಆಡಳಿತ ನೀಡುತ್ತಾರೆ. ಯಾರ ಒತ್ತಡಕ್ಕೂ ಮಣೆ ಹಾಕುವುದಿಲ್ಲ. ಇದರಿಂದಲೇ ಕೆಲವು ಗೊಂದಲಗಳು ಸೃಷ್ಟಿಯಾಗುತ್ತವೆ ಎಂಬುದು ನನ್ನ ಭಾವನೆ. ಸಂಖ್ಯಾಬಲ ಇಟ್ಟುಕೊಂಡು ಉತ್ತಮ ಆಡಳಿತ ನೀಡಿದರೆ ಒಳ್ಳೆಯದು.

        l ಬಲ ಪ್ರದರ್ಶನಕ್ಕೆ ಬಿಎಸ್‌ವೈ ಮುಂದಾಗಿದ್ದಾರಲ್ಲಾ?

         ರಾಜಕೀಯವೇ ಹಾಗೆ. ಅಧಿಕಾರ ನಿರ್ಧಾರವಾಗುವುದು ಸಂಖ್ಯಾಬಲದ ಆಧಾರದ ಮೇಲೆಯೇ. ಯಡಿಯೂರಪ್ಪ ಅವರಿಗೆ ಶಕ್ತಿ ಇಲ್ಲ ಎಂದಿದ್ದರೆ ಅವರ ಬಳಿ ಯಾರೂ ಹೋಗುತ್ತಿರಲಿಲ್ಲ. ಅವರ ಫೋಟೋ ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುತ್ತಿದ್ದೇವೆ.
        l
         ಯಡಿಯೂರಪ್ಪಗೆ ಯಾವ ಹುದ್ದೆ ಸಿಗಬೇಕು?

         ಇದು ಪಕ್ಷಕ್ಕೆ ಬಿಟ್ಟ ವಿಚಾರ. ವೈಯಕ್ತಿಕವಾಗಿ ನನ್ನ ಅನಿಸಿಕೆ ಏನೇ ಇರಬಹುದು. ಆದರೆ, ನಾನು ಹೇಳಿದ್ದು ನಡೆಯುವುದಿಲ್ಲ. ಮುಂದಿನ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲ ಶಾಸಕರದ್ದು.

        l ವರಿಷ್ಠರು ವಿಳಂಬ ತಂತ್ರ ಅನುಸರಿಸುತ್ತಿಲ್ಲವೇ?

         ಪಾಲಿಟಿಕ್ಸ್‌ ನಡೆಯುವುದೇ ಹೀಗೆ. ಒಂದೇ ದಿನ ಎಲ್ಲವೂ ದಕ್ಕುವುದಿಲ್ಲ. ವಿಳಂಬವಾಗುವುದು ಸಾಮಾನ್ಯ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕಾಗುತ್ತದೆ.ರಾಜಕೀಯದಲ್ಲಿ ಹೋರಾಟ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆಯಬೇಕು. ಇದಕ್ಕಾಗಿಯೇ ಯಡಿಯೂರಪ್ಪ ಅವರು ಈಗ ಹೋರಾಟವನ್ನೇ ಆರಂಭಿಸಿದ್ದಾರೆ.

        l ವೀರಶೈವ ಸಮುದಾಯವನ್ನು ಒಡೆಯುವ ಪ್ರಯತ್ನ ಬಿಜೆಪಿಯಲ್ಲಿ ನಡೆಯುತ್ತಿದೆಯೇ?

         ಸಿದ್ದಗಂಗಾ ಮಠ ವೀರಶೈವ ಸಮುದಾಯಕ್ಕೆ ಆರಾಧ್ಯ ದೈವವಿದ್ದಂತೆ. ಆದರೆ, ಆ ಕ್ಷೇತ್ರದಲ್ಲಿ ಕೋಟಿಲಿಂಗ ಪ್ರತಿಷ್ಠಾಪನೆ ಶಂಕುಸ್ಥಾಪನೆಯಲ್ಲಿ ಯಡಿಯೂರಪ್ಪ ಅವರನ್ನು ಯಾಕೆ ಕೈಬಿಟ್ಟರೊ ಗೊತ್ತಿಲ್ಲ. ನಾನು ಕೂಡ ಆ ಕ್ಷೇತ್ರದ ಶಾಸಕ. ಅಲ್ಲಿನ ಸ್ಥಳೀಯ ಸಂಸದರನ್ನೂ ಸೇರಿಸಿಕೊಂಡಿಲ್ಲ. ಇದು ಯಾಕೆ ಎಂಬುದು ನನಗೆ ಗೊತ್ತಿಲ್ಲ. ಗೋಕಾಕ್‌ನಲ್ಲಿ ಸಚಿವ ಜಾರಕಿಹೊಳಿ ಲಿಂಗಾಯತ ಪಂಚಮಸಾಲಿ ಸಮುದಾಯದ ಸಮಾವೇಶ ಮಾಡಿದ್ದಾರೆ. ಜಾರಕಿಹೊಳಿಗೂ ಲಿಂಗಾಯತರಿಗೂ ಏನು ಸಂಬಂಧ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಎರಡೂ ಕಾರ್ಯಕ್ರಮಗಳು ಗೋಕುಲಾಷ್ಠಮಿಗೂ ಇಮಾಂಸಾಬಿಗೂ ಏನು ಸಂಬಂಧ ಎಂಬಂತೆ ನಡೆದಿವೆ. ಈ ವಿಷಯಕ್ಕಾಗಿ ಯಡಿಯೂರಪ್ಪ ಅವರಿಗೆ ಬೇಸರ ತರಿಸಿದೆ. ನೋವು ಉಂಟು ಮಾಡಿದೆ.

        l ವರಿಷ್ಠರು ಯಡಿಯೂರಪ್ಪಗೆ ಯಾವುದೇ ಸ್ಥಾನಮಾನ ಕೊಡುವುದಿಲ್ಲ ಎಂದರೆ ಮುಂದೇನು?

         ಕೊಡುವುದಿಲ್ಲ ಎನ್ನುವುದಕ್ಕಿಂತ ಕೊಡಲೇಬೇಕು ಎಂಬುದು ಎಲ್ಲ ಶಾಸಕರ ಅಭಿಪ್ರಾಯ. ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಒಕ್ಕೊರಲಿನ ಅಭಿಪ್ರಾಯ.

        l ಯಡಿಯೂರಪ್ಪ ಇಲ್ಲದೆ ಮುಂದಿನ ಚುನಾವಣೆ ಎದುರಿಸುವುದು ಬಿಜೆಪಿಗೆ ಸಾಧ್ಯವಿಲ್ಲವೇ?

         ಕಷ್ಟ. ಯಡಿಯೂರಪ್ಪ ಇಲ್ಲದೆ ಮುಂದಿನ ಚುನಾವಣೆ ಎದುರಿಸುವುದು ಕಷ್ಟ ಎಂಬುದು ಜಗದೀಶ್‌ ಶೆಟ್ಟರ್‌ ಅವರಿಗೂ ಗೊತ್ತಿದೆ. ಆರ್‌.ಅಶೋಕ್‌ ಅವರಿಗೂ ಗೊತ್ತಿದೆ. ಹಾಗೆಯೇ ಶಾಸಕರಿಗೆಲ್ಲವೂ ಗೊತ್ತಿದೆ.

        l ಒಂದು ವೇಳೆ ಯಾವುದೇ ಸ್ಥಾನಮಾನ ಸಿಗದಿದ್ದರೆ ಯಡಿಯೂರಪ್ಪ ಪಕ್ಷ ತ್ಯಜಿಸುತ್ತಾರೆಯೇ?

         ಇಲ್ಲ. ಯಾವ ಕಾರಣಕ್ಕೂ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಯಾರು ಅವರಿಗೆ ತೊಂದರೆ ಕೊಡುತ್ತಿದ್ದಾರೆಯೊ ಅವರನ್ನು ಯಡಿಯೂರಪ್ಪ ಹೊರಹಾಕುತ್ತಾರೆ. ಅವರು ಒಂದು ರೀತಿಯಲ್ಲಿ ಒಲಿದರೆ ನಾರಿ ಮುನಿದರೆ ಮಾರಿ ಎಂಬಂತೆ. ಅವರು ಪಕ್ಷ ತ್ಯಜಿಸಲೂ ನಾವು ಬಿಡುವುದಿಲ್ಲ. ಅದಕ್ಕಾಗಿ ಹೋರಾಟ ಮಾಡುತ್ತೇವೆ. ಯಾರೂ ಚಿನ್ನದ ತಟ್ಟೆಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಅಥವಾ ರಾಜ್ಯಾಧ್ಯಕ್ಷ ಸ್ಥಾನ ಕೊಡುವುದಿಲ್ಲ. ಅದನ್ನು ಹೋರಾಟದ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.

        lನಿಮ್ಮ ನಾಯಕರಿಗೆ ಮನವಿ ಏನು?

         ರಾಜಕೀಯ ವ್ಯವಸ್ಥೆ ಈ ರೀತಿ ಇದೆ ಎಂದು ನಾನಂದುಕೊಂಡಿರಲಿಲ್ಲ. ಕಳೆದ ಮೂರುವರೆ ವರ್ಷಗಳಲ್ಲಿನ ಗೊಂದಲಗಳಿಂದ ನನಗೆ ಬೇಸರವಾಗಿದೆ. ನೋವು ಉಂಟಾಗಿದೆ. ಇದಕ್ಕಾಗಿ ಒಗ್ಗಟ್ಟಿನಿಂದ ಸಾಗುವಂತೆ ನಮ್ಮ ನಾಯಕರಿಗೆ ಮನವಿ ಮಾಡುತ್ತೇನೆ. ನಾಯಕರೆಲ್ಲರೂ ಕಿತ್ತಾಡದೆ ಒಗ್ಗಟ್ಟಿನಿಂದ ಮುಂದೆ ನಡೆಯಬೇಕು ಎನ್ನುವುದು ಶಾಸಕರ ಅಭಿಪ್ರಾಯ. ಇಲ್ಲದಿದ್ದರೆ ಸರ್ಕಾರದ ಸಾಧನೆಗಳಾವವೂ ಹೆಚ್ಚು ಬೆಳಕಿಗೆ ಬಂದಿಲ್ಲ. ಇನ್ನು ಮುಂದಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಜತೆಯಾಗಿ ಹೆಜ್ಜೆ ಹಾಕಬೇಕು. ಮುಂದಿನ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus