Saturday, May 25, 2013
Last Updated: 4:59:55 PM IST
  • ನಾನೆಲ್ಲಿರುವೆ:
  • ಮುಖಪುಟ ಮನೋರಂಜನೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೇವೀ ಮಹಾತೆ ಪ್ರಸಂಗದ ಆಟ
      • ಕೆ. ಸದಾಶಿವ | Mar 09, 2012

        ಯಕ್ಷಗಾನ ರಂಗದಲ್ಲಿ ಅದರಲ್ಲೂ ತೆಂಕುತಿಟ್ಟು ಯಕ್ಷಗಾನದಲ್ಲಿ "ದೇವೀಮಹಾತೆ' ಪ್ರಸಂಗವು ಅತ್ಯಧಿಕ ಪ್ರದರ್ಶನಗಳನ್ನು ಕಾಣುತ್ತಿರುವ ಪ್ರಸಂಗ. ಹಾಗೆಂದ ಮಾತ್ರಕ್ಕೆ  ಇದೊಂದು ಉತ್ತಮ ಪ್ರಸಂಗವೆಂದು ಹೇಳಲಾಗದು. ಈ ಪ್ರಸಂಗವು ಹೆಚ್ಚು ಪ್ರದರ್ಶನಗಳನ್ನು ಕಾಣುವುದಕ್ಕೆ ಕೆಲವು ಕಾರಣಗಳಿವೆ. ಅವುಗಳನ್ನು ವಿವೇಚಿಸುವ ಮೊದಲು ಪ್ರಸಂಗದೊಳಗೆ ಏನಿದೆ ಎಂಬುದನ್ನು ಗಮನಿಸೋಣ.

        ಇಡೀ ಪ್ರಸಂಗವನ್ನು ಅವಲೋಕಿಸಿದಾಗ ಪ್ರಸಂಗಕ್ಕೊಂದು ಗಟ್ಟಿಯಾದ ಆಶಯವಿರುವಂತೆ ಕಾಣುವುದಿಲ್ಲ. ಮೊದಲ ಭಾಗದಲ್ಲಿ ಬರುವ ಬ್ರಹ್ಮ, ವಿಷ್ಣು, ಶಿವ ಸಂವಾದವು ಪುರಾಣದಲ್ಲಿರಬಹು ದಾದ ಕತೆಯಾದರೂ, ಪ್ರಸಂಗದಲ್ಲಿ ಅದು ತೀರಾ ಹಗುರವಾಗಿ ನಿರೂಪಿಸಲ್ಪಟ್ಟಿದೆ. ದೇವಿ ಸೃಷ್ಟಿಸಿದ ತ್ರಿಮೂರ್ತಿಗಳಲ್ಲಿ ಈರ್ವರು ತಾನು ಮೇಲು ತಾನು ಮೇಲೆಂದು ವಾದಿಸುವುದು; ಯಾರು ಮೇಲೆಂಬುದನ್ನು ಪರೀಕ್ಷಿಸಲು ಒಬ್ಬರಿನ್ನೊಬ್ಬರ ಹೊಟ್ಟೆ ಸೇರಿ ಶೋಧಿಸುವುದು; ಒಬ್ಬನ ಹೊಟ್ಟೆಯಲ್ಲಿ ಚಿನ್ನ, ಮತ್ತೂಬ್ಬನ ಹೊಟ್ಟೆಯಲ್ಲಿ ಬ್ರಹ್ಮಾಂಡವೇ ಇರುವುದು; ಉದರ ಪ್ರವೇಶಿಸಿದವರು ಹೊರಬಾರದಂತೆ ದೇಹದ್ವಾರಗಳನ್ನು ಬಂಧಿಸುವುದು- ಇತ್ಯಾದಿ ದೃಶ್ಯಗಳು ದೇವರ ಮಟ್ಟದಲ್ಲಿ ನಡೆಯತಕ್ಕ ವ್ಯವಹಾರಗಳೇ ಎಂದೆನಿಸುತ್ತದೆ. ಅದರಲ್ಲೂ ಈಗಿನ ದಿನಗಳಲ್ಲಿ ಈ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ಸಂವಾದ ಬೆಳೆಸುವ ರೀತಿಯನ್ನು, ಕೊಡುವ ಉದಾಹರಣೆಗಳನ್ನು ನೋಡುವಾಗ ಇದೆಲ್ಲೋ ಬೀದಿ ಬದಿಯಲ್ಲಿ ನಡೆಯುವ ಚರ್ಚೆಯಂತೆ ಕಾಣುತ್ತದೆ. ಮಾತನಾಡುತ್ತಿರುವುದು ದೇವರ ಪಾತ್ರಗಳು ಎಂಬ ಪ್ರಜ್ಞೆಯೇ ಇಲ್ಲದಂಥ ಭಾಷೆ ಮತ್ತು ಪದಪ್ರಯೋಗ. ಪಾತ್ರಗಳಿಗೂ ಸಂದರ್ಭಗಳಿಗೂ ಬಹಳ ಹಾನಿಯನ್ನುಂಟು ಮಾಡುವಂತಿದೆ.

        ಪ್ರಸಂಗದ ಮುಂದಿನ ಭಾಗದಲ್ಲಿ ಒಬ್ಬರ ಅನಂತರ ಮತ್ತೂಬ್ಬರು ಎಂಬಂತೆ ರಂಗಸ್ಥಳ ಪ್ರವೇಶಿಸುವುದು, ರಾಕ್ಷಸರು ಅವರ ಆರ್ಭಟ, ಹಾರಾಟ,ಹೋರಾಟಗಳಿಂದ ರಂಗಸ್ಥಳ ಹುಡಿ ಹಾರುತ್ತದೆ. ಚೆಂಡೆಯ ಪೆಟ್ಟು , ಪುಂಡುವೇಷಗಳ ಗಿರ್ಕಿ, ರಾಕ್ಷಸ ವೇಷಗಳ ಅಟ್ಟಹಾಸ, ರಾಳ, ದೊಂದಿ ಬೆಂಕಿಗಳ ಅಬ್ಬರ, ಕುಂಬಳಕಾಯಿ ಕಡಿಯುವಿಕೆ ಮುಂತಾದವುಗಳಿಂದ ಪ್ರೇಕ್ಷಕರಿಗೆ ಹೊತ್ತು ಹೋದುದೇ ತಿಳಿಯುವುದಿಲ್ಲ. ಎಷ್ಟೇ ರಾಕ್ಷಸರು ಬಂದರೂ ಅವರೆಲ್ಲಾ ದೇವಿಯಿಂದ ಹತರಾಗುತ್ತಾರೆಂಬುದು ಮಾತ್ರ ಗೊತ್ತಾಗುತ್ತದೆ. ಅದು ಸಾಕಾಗುತ್ತದೆ. ಇನ್ನು ಬ್ಯಾಂಡು, ವಾದ್ಯ, ಸುಡುಮದ್ದುಗಳು ಇದ್ದರಂತೂ ಕೇಳುವುದೇ ಬೇಡ.

        ದುಷ್ಟ ರಾಕ್ಷಸರಿಂದ ಕಷ್ಟ ಬಂದಾಗ, ದೇವಿ ಬಂದು ರಕ್ಷಿಸುತ್ತಾಳೆ ಎಂಬುದಷ್ಟೇ ಈ ಪ್ರಸಂಗದ ಸಾರಾಂಶ. ಮನಸ್ಸನ್ನು ತಟ್ಟುವ ಹೃದಯವನ್ನು ಅರಳಿಸುವ ರಸಭಾವಗಳು ಈ ಪ್ರಸಂಗದಲ್ಲಿ ಇಲ್ಲ. ಮಾಲಿನಿ, ಮಹಿಷಾಸುರ, ಶುಂಭ, ನಿಶುಂಭ, ದೇವಿ, ಚಂಡ-ಮುಂಡ, ಧೂಮ್ರಾಕ್ಷ, ರಕ್ತಬೀಜರಂತಹ ಪಾತ್ರಗಳು ರಂಗಸ್ಥಳದಲ್ಲಿ ವಿಜೃಂಭಿಸುವುದೇ ಈ ಪ್ರಸಂಗದ ಹೆಚ್ಚುಗಾರಿಕೆ. ಯಕ್ಷಗಾನ ಕಲೆಗೆ ಕೊಡುಗೆ ನೀಡುವಂಥ ಸೃಜನಶೀಲತೆಗೆ ಅವಕಾಶವಿರುವಂಥ ಸನ್ನಿವೇಶಗಳು ಈ ಪ್ರಸಂಗದಲ್ಲಿ  ಕಡಿಮೆ. ಆದರೂ ಕೆಲವರಲ್ಲಿ ಈ ಪ್ರಸಂಗದ ಬಗ್ಗೆ ಅತಿ ಅಭಿಮಾನಗಳಿವೆ. "ದೇವೀ ಮಹಾತೆ¾ಯನ್ನು ಎಷ್ಟು ಸಲ ನೋಡಿದರೂ ಅದು ಬೇಡಾಂತ ಆಗುವುದಿಲ್ಲ; ಒಂದೊಂದು ದಿನವೂ ಅದು ಒಂದೊಂದು ರೀತಿ ಇರುತ್ತದೆ' ಎಂಬುದು ಇವರ ಅಂಬೋಣ! ಈ ಮಾತಿನಲ್ಲಿ ಸತ್ಯಾಂಶ ಕಡಿಮೆ.

        ದೇವೀ ಮಹಾತೆ ಪ್ರಸಂಗವು ಹೆಚ್ಚು ಪ್ರಯೋಗಗಳನ್ನು ಕಾಣಲು ಕಾರಣ, ಪ್ರಧಾನವಾಗಿ ದೇವರ ಮೇಲಿನ ಭಕ್ತಿ. ಈ ಪ್ರಸಂಗವನ್ನು ಆಡಿಸಿದವರೂ ನೋಡಿದವರೂ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಅದು. ಸೇವೆ ಆಟ, ಅಥವಾ ಹರಕೆ ಆಟ ಎಂದು ಪ್ರದರ್ಶಿಸುವ ಈ ಪ್ರಸಂಗದ ಜನಪ್ರಿಯತೆಗೆ ಜನರಲ್ಲಿರುವ ದೈವಭಕ್ತಿಯೇ ಮುಖ್ಯ ಕಾರಣ.

        ಈ ಪ್ರಸಂಗದ ಜನಪ್ರಿಯತೆಗೆ ಇನ್ನೊಂದು ಪ್ರಧಾನ ಕಾರಣವಿದೆ. ಅದೇನೆಂದರೆ ಈ ಪ್ರಸಂಗ ಪ್ರದರ್ಶನಗೊಳ್ಳುವಾಗ ಒಂದು ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತದೆ. ಜಾತ್ರೆಯ ಸ್ವರೂಪ ಯಾವಾಗಲೂ ಒಂದೇ ಇದ್ದರೂ ಜನ ಅದರಲ್ಲಿ ಉತ್ಸಾಹದಿಂದಲೇ ಹೇಗೆ ಭಾಗವಹಿಸು ತ್ತಾರೋ, ದೇವೀ ಮಹಾತೆ ಆಟಕ್ಕೂ ಹಾಗೆಯೇ ಜನ ಬರುತ್ತಾರೆ. ರಾತ್ರಿಯಿಂದ ಬೆಳಗ್ಗಿನವರೆಗೆ ಸಮಯ ಕಳೆಯಲು ತಕ್ಕುದಾದ ವಿನ್ಯಾಸವನ್ನು ಈ ಪ್ರಸಂಗ ಹೊಂದಿದೆ, ಜಾತ್ರೆಯ ಕೆಲವು ಲಕ್ಷಣಗಳನ್ನು ಈ ಪ್ರಸಂಗದ ಆಟದಲ್ಲಿ ಆಳವಡಿಸಲಾಗಿದೆ.

        ಮಹಿಷಾಸುರನ ಪ್ರವೇಶವನ್ನೇ ನೋಡಿ. ಆಟ ನಡೆಯುವ ಬಯಲಿನಿಂದಲೂ ಹೊರಗೆ ಕೆಲವೊಮ್ಮೆ ಮೈಲು ದೂರದಿಂದ ಮಹಿಷಾಸುರನ ಮೆರವಣಿಗೆ ಹೊರಡುತ್ತದೆ. ಬೆಂಕಿ ಸೂಟೆಗಳು, ಸುಡುಮದ್ದು , ಬ್ಯಾಂಡ್‌, ಕೊಂಬು ಇತ್ಯಾದಿ ಅಂಶಗಳು ಒಂದು ಜಾತ್ರೆಯ ವಾತಾವರಣವನ್ನು ನಿರ್ಮಿಸುತ್ತವೆ. ಮಹಿಷಾಸುರನೂ ಅಷ್ಟೇ, ರಂಗಸ್ಥಳ ಪ್ರವೇಶಿಸುವ ಮೊದಲು ಸಭೆಯ ಸುತ್ತ ಮುತ್ತ ದೊಂದಿ ಹಿಡಿದು ಓಡುವ, ಕೆಲವೊಮ್ಮೆ ನಿಲ್ಲುವ, ರಾಳಹಾಕಿ ಬೆಂಕಿ ಎಬ್ಬಿಸುವ ಒಟ್ಟು ಪ್ರಕ್ರಿಯೆ ನೋಡುವ ಮಂದಿಗೆ ಒಂದು ವಿಶೇಷ ಆಕರ್ಷಣೆ. ಇದರೊಂದಿಗೆ ಮಹಿಷಾಸುರ ಕಟ್ಟಿಕೊಂಡ ಕೊಂಬು, ಮುಖವರ್ಣಿಕೆಗಳು ಕೂಡ ಆಕರ್ಷಕವೇ. ಮಹಿಷಾಸುರ ಮಾತ್ರವಲ್ಲ ಈ ಪ್ರಸಂಗದಲ್ಲಿ ಬರುವ ಮಧು- ಕೈಟಭ, ಚಂಡಮುಂಡ, ಕಾಳಿ, ರಕ್ತೇಶ್ವರಿ ಮುಂತಾದ ಪಾತ್ರಗಳು ಕೂಡ ದೊಂದಿ ರಾಳಗಳೊಂದಿಗೆ ಸಭೆಯೊಳಗೂ ಹೋಗಿ ಬರುತ್ತವೆ. ಸಭೆಯ ನಡುವೆ ಇನ್ನೂ ಕೆಲವು ಪಾತ್ರಗಳು ಓಡುತ್ತವೆ. ಒಟ್ಟಿನಲ್ಲಿ ಆಟ ಒಂದು ಜಾತ್ರೆಯ ಅನುಭವವನ್ನು ಕೊಡುತ್ತದೆ.

        ಇತ್ತೀಚೆಗೆ ಈ ಪ್ರಸಂಗದ ಗುಣಮಟ್ಟವನ್ನು ಎತ್ತರಿಸಲು ಮೂರು ದಿನಗಳ ಒಂದು ಕಮ್ಮಟ ಬಜ್ಪೆಯಲ್ಲಿ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಒಂದು ಮಹತ್ವಪೂರ್ಣ ಕಾರ್ಯಕ್ರಮ ಅದು. ಕಮ್ಮಟದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅವುಗಳ ಪ್ರಯೋಗ ಕಮ್ಮಟದಲ್ಲಿ ನಡೆಯಿತು. ಆದರೆ ಮೇಳಗಳಲ್ಲಿ ಅವುಗಳ ಬಳಕೆ ಏನೇನೂ ಆಗಿಲ್ಲ ಎಂಬಂಥ ಪರಿಸ್ಥಿತಿ ಇದೆ. ಮಧು ಕೈಟಭರ ಕಿರೀಟಧಾರಣೆ, ಸುಗ್ರೀವ ಮತ್ತು ರಕ್ತೇಶ್ವರಿಯ ವೇಷವಿನ್ಯಾಸ- ಇವುಗಳನ್ನು ಬಿಟ್ಟರೆ ಉಳಿದ ನಿರ್ಣಯಗಳೆಲ್ಲಾ ಬಜ್ಪೆಯಲ್ಲೇ ಉಳಿದಿವೆ. ಬ್ರಹ್ಮ, ವಿಷ್ಣು, ಈಶ್ವರರ ಸಂವಾದದಲ್ಲಿ ಲವಲೇಶವೂ ಪರಿವರ್ತನೆಯಾಗಿಲ್ಲ. ರಾಕ್ಷಸ ಪುರೋಹಿತ ಮುಂಡಾಸು ಕಟ್ಟಿದ ಊರಿನ ಭಟ್ಟನಾಗಿದ್ದಾನೆ.

        ಸೃಜನಶೀಲತೆಗೆ ಅವಕಾಶಗಳು ಕಡಿಮೆ ಇರುವುದರಿಂದಲೂ ಕೆಲವು ಕಲಾವಿದರ ಮಿತಿ ಗಳ ಕಾರಣದಿಂದಲೂ, ಈ ಪ್ರಸಂಗದ ಕೆಲವು ಪಾತ್ರಗಳು ಇತ್ತೀಚೆಗೆ ಸೊರಗತೊಡಗಿವೆ. ಉದಾಹರಣೆಗಾಗಿ ಮಧುಕೈಟಭರ ಪಾತ್ರಗಳು ಹಾಸ್ಯದ ಹಾದಿ ಹಿಡಿದು ದಾರಿತಪ್ಪಿವೆ. ಜನರಿಗೆ ರಂಜನೆಯಾಗುತ್ತದೆಂದು ಭಾವಿಸಿ, ಈ ಪಾತ್ರಗಳು ರಂಗಸ್ಥಳದಲ್ಲಿ ಏನೇನೋ ಮಾಡುತ್ತವೆ,  ಏನೇನೋ ಮಾತನಾಡುತ್ತವೆ. ಇತರ ಕೆಲವು ಪಾತ್ರಗಳು ಕೂಡ ಚಾಲು ಕುಣಿತಗಳು, ಚಲನೆಯಲ್ಲಿ ಚಮತ್ಕಾರಗಳು ಔಚಿತ್ಯ ಪ್ರಜ್ಞೆ ಮರೆತು ಪ್ರವೇಶಗೊಂಡಿವೆ.

         ಹರಕೆ ಆಟವನ್ನು  ಒಂದು ಪ್ರತಿಷ್ಠೆಗಾಗಿ ಆಡಿಸುವವರಿಗೆ ಹರಕೆ ಆಟದ ಮೂಲಕ ಆಡಂಬರ ಮಾಡಬಯಸುವವರಿಗೆ ಈ ಪ್ರಸಂಗ ಹೇಳಿ ಮಾಡಿಸಿದಂತಿದೆ. ಬ್ಯಾಂಡ್‌, ಕೊಂಬು, ಸುಡು ಮದ್ದು, ದೊಂದಿ, ಬೆಂಕಿ, ಅಲಂಕಾರ, ಊಟ, ಉಪಾಹಾರಗಳ ಮೂಲಕ ಹಲವು ಲಕ್ಷಗಳನ್ನು ವ್ಯಯಿಸಿ ಮಾಡಿ ಕೃತಾರ್ಥರಾಗುವವರಿಗೆ ಈ ಪ್ರಸಂಗ ಮುಕ್ತ ಅವಕಾಶವನ್ನು ನೀಡುತ್ತದೆ.

        ಯಕ್ಷಗಾನದ ಹಾಡು ಹಿಮ್ಮೇಳಗಳಿಗೆ ಹೊಂದಿಕೊಳ್ಳದ ಬ್ಯಾಂಡ್‌, ಯಕ್ಷಗಾನದ ದೃಶ್ಯಗಳನ್ನು ಮಸುಕುಗೊಳಿಸುವ ಅಲಂಕಾರ ಮತ್ತು ಬೆಳಕುಗಳು, ಕಲೆಯನ್ನು ಆಸ್ವಾದಿಸಲು ಅಡ್ಡಿ ಮಾಡುವ ಸುಡುಮದ್ದು ಇವೆಲ್ಲಾ ಹರಕೆ ಆಟಗಳಿಗೆ ಶಾಪವಾಗಿವೆ. ಸುಡುಮದ್ದಿನ ಹಾವಳಿಯನ್ನು ನಿತ್ಯವೂ ಎದುರಿಸುವ ಕಲಾವಿದರ ಪಾಡಂತೂ ಶೋಚನೀಯ. ಕಲಾವಿದರಾದರೋ ಮುಂದೊಂದು ದಿನ ತಮ್ಮ ಆರೋಗ್ಯವನ್ನು ಕೆಡಿಸಬಹುದಾದ ಈ ಸುಡುಮದ್ದಿನ ಬೆಳಕು ಹೊಗೆ ಇತ್ಯಾದಿಗಳ ಪ್ರಯೋಗವನ್ನು  ಪ್ರತಿಭಟಿಸುವುದೂ ಇಲ್ಲ. ಆಟ ಆಡಿಸುವವರ ಮನಸ್ಸನ್ನು ನೋಯಿಸುವುದು ಬೇಡವೆಂಬ ಭಾವನೆಯಿಂದ ಅವರದನ್ನು ಸಹಿಸುತ್ತಿರಬಹುದು.

        ಇಷ್ಟೆಲ್ಲವನ್ನು ಹೇಳಿದರೂ ದೇವೀ ಮಹಾತೆ ಪ್ರದರ್ಶನಗಳು ಎಂದಿನಂತೆಯೇ ಜಾತ್ರೆಯ ರೂಪದಲ್ಲೇ ಮುಂದಕ್ಕೂ ಪ್ರದರ್ಶನಗೊಳ್ಳುತ್ತವೆ. ನಮ್ಮ ದೇಶದ ರಾಜಕಾರಣಿಗಳ ಅಪ್ರಾಮಾಣಿ ಕತೆ ಯನ್ನು ನಾವು ಸಹಿಸುವಂತೆ, ಸಮಾಜದಲ್ಲಿ ನೆಲೆಗೊಂಡಿರುವ ವ್ಯಾಪಕ ಭ್ರಷ್ಟಾಚಾರವನ್ನು ಸಹಿಸುವಂತೆ, ಮಾತೃಭಾಷಾ ಮಾಧ್ಯಮವನ್ನು ಕಡೆಗಣಿಸಿ, ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಜೋತುಬೀಳುವುದನ್ನು ನಾವು ಸಹಿಸಿಕೊಂಡು ಬರುವಂತೆ ಇದನ್ನೂ ಸಹಿಸಬೇಕಾಗಿದೆ...


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus