Thursday, May 23, 2013
Last Updated: 9:14:34 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ನಕ್ಸಲರಿಗಾಗಿ ಮುಂದುವರಿದ ಶೋಧ
  • ರವಿವಾರವೂ ನಕ್ಸಲ್‌ ಶೋಧ ಕಾರ್ಯಾಚರಣೆ ಮುಂದುವರಿದಿದೆ.

    • Udayavani | Mar 11, 2012

      ಬೆಳ್ತಂಗಡಿ : ಮಲವಂತಿಗೆ ಗ್ರಾಮದ ಪಶ್ಚಿಮಘಟ್ಟದ ಕುಕ್ಕಾಡಿ ಉದ್ಯಾìರು ಜಲಪಾತದ ಬಳಿ ಶನಿವಾರ ಸಂಜೆ ನಡೆದ ಪೊಲೀಸ್‌ ಮತ್ತು ನಕ್ಸಲರ ಮಧ್ಯದ ಗುಂಡಿನ ಚಕಮಕಿ ಬಳಿಕ ರವಿವಾರವೂ ನಕ್ಸಲ್‌ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಒಬ್ಬ ಎಎನ್‌ಎಫ್‌ ಸಿಬಂದಿಗೆ ಗಾಯವಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪರಾರಿಯಾದ ನಕ್ಸಲರಿಗಾಗಿ ಹುಡುಕಾಟ ನಡೆದಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ರವಿವಾರ ಗುಂಡಿನ ಚಕಮಕಿ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ತನಿಖೆಯ ಕುರಿತು ಮಾರ್ಗದರ್ಶನ ನೀಡಿದ್ದಾರೆ.

      ಮುಚ್ಚಿಡುವುದು ಯಾಕೆ

      ನಕ್ಸಲರಿಂದ ಪತ್ತೆಯಾಗಿದೆ ಎನ್ನಲಾದ ವಸ್ತುಗಳನ್ನು ಪೊಲೀಸರು ಮಾಧ್ಯಮಗಳಿಂದ ಮುಚ್ಚಿಟ್ಟಿದ್ದಾರೆ. ಈ ಹಿಂದಿನ ಶೃಂಗೇರಿ, ಕಾರ್ಕಳ, ಚಿಕ್ಕಮಗಳೂರು ಮೊದಲಾದೆಡೆ ಪೊಲೀಸರು ನಕ್ಸಲರಿಂದ ವಶಪಡಿಸಿಕೊಂಡದ್ದು ಎನ್ನಲಾದ ವಸ್ತುಗಳನ್ನು ಸುದ್ದಿಗೋಷ್ಠಿ ನಡೆಸಿ ತಮ್ಮ ಪ್ರತಿಷ್ಠೆಯ ಕಾರ್ಯಾಚರಣೆಯನ್ನು ಹೇಳಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲ. ಸೊತ್ತುಗಳನ್ನು ಮಾಧ್ಯಮ ಮಂದಿಗೆ ರವಿವಾರ ಸಂಜೆವರೆಗೂ ತೋರಿಸಲೇ ಇಲ್ಲ. ಅಷ್ಟೇ ಅಲ್ಲ ಮಾಧ್ಯಮ ಮಂದಿಯನ್ನು ಎಸ್‌ಪಿ ಸಹಿತ ಪೊಲೀಸ್‌ ಅಧಿಕಾರಿಗಳು ದೂರ ಕಳುಹಿಸುತ್ತಿದ್ದರು.

      ಪ್ರತೀ ಬಾರಿ ಪರಾರಿ ಹೇಗೆ

      ಇದುವರೆಗಿನ ಅನೇಕ ಕಾರ್ಯಾಚರಣೆಯಲ್ಲಿ ಪೊಲೀಸ್‌ ನಕ್ಸಲರ ಜತೆಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸರೇ ಶರಣಾಗುತ್ತಿದ್ದಾರೆ ಯಾಕೆ ಎಂಬ ಪ್ರಶ್ನೆಯೂ ಇದೆ. ಪೊಲೀಸರಿಗೆ ಗಾಯವಾಗುವುದು, ನಕ್ಸಲರಿಗೆ ಸಂಬಂಧಪಟ್ಟದ್ದು ಎನ್ನಲಾದ ಸೊತ್ತುಗಳನ್ನು ವಶಪಡಿಸಿಕೊಳ್ಳವುದು ಎಂಬಲ್ಲಿಗೆ ಪ್ರಕರಣ ಮುಗಿದಿರುತ್ತದೆ. ಅನಂತರದ ಬೆಳವಣಿಗೆ, ತನಿಖೆ ಜನರಿಗೆ ಗೊತ್ತಾಗುವುದಿಲ್ಲ. ಈ ಬಾರಿಯೂ ಹಾಗೆಯೇ ಆಗಿದೆ. ನೂರಕ್ಕಿಂತ ಅಧಿಕ ಮಂದಿ ಇದ್ದ ನಕ್ಸಲ್‌ ನಿಗ್ರಹ ದಳದ ನುರಿತ ತರಬೇತಿ ಪಡೆದ ಸಿಬಂದಿ, ಪುಂಜಾಲಕಟ್ಟೆ, ಬೆಳ್ತಂಗಡಿ, ವೇಣೂರು ಪೊಲೀಸ್‌ ಠಾಣೆಯ ಸಿಬಂದಿ, ಗುಪ್ತಚರ ವಿಭಾಗ ಇಷ್ಟೆಲ್ಲ ಇದ್ದರೂ ಬೆರಳೆಣಿಕೆ ಸಂಖ್ಯೆಯಲ್ಲಿ ಇದ್ದರು ಎನ್ನಲಾದ ನಕ್ಸಲರನ್ನು ಬಂಧಿಸಲು ಸಾಧ್ಯವಾಗಿಲ್ಲ ಯಾಕೆ ?.

      ಅ. 8ರ ರಾತ್ರಿ ಸವಣಾಲು ಸಮೀಪ ನಾವೂರು ಗ್ರಾಮದ ಮಂಜಲ ಕಾಡಿನಲ್ಲಿ ಎಎನ್‌ಎಫ್‌ ಸಿಬಂದಿ ಮಹಾದೇವ ಮಾನೆ ಅವರ ಸಾವಿಗೆ ಕಾರಣವಾದ ಗುಂಡು ಹಾರಾಟದಲ್ಲೂ ಪೊಲೀಸರು ಗುಪ್ತಚರ ಮಾಹಿತಿ ಖಚಿತವಾಗಿ ಇತ್ತು ಎಂದಿದ್ದರು. ಈ ಬಾರಿಯೂ ಗುಪ್ತಚರ ವಿಭಾಗದ ಮಾಹಿತಿ ಇತ್ತು ಎನ್ನುತ್ತಾರೆ. ಇಷ್ಟಿದ್ದರೂ ಪ್ರತೀ ಬಾರಿ ಪರಾರಿ ಆಗುವುದು ಹೇಗೆ. ಪೊಲೀಸರ ವೈಫಲ್ಯವೇ, ಧಾರಾಳತನವೇ, ಅಲ್ಲ ನಕ್ಸಲರು ಅಷ್ಟು ಚಾಣಾಕ್ಷರೇ.

      ಓಡುತ್ತಾ ಹೋಗಿ ಆಸ್ಪತ್ರೆಗೆ ದಾಖಲು!

      ನಕ್ಸಲರ ಜತೆಗಿನ ಗುಂಡಿನ ಚಕಮಕಿಯಲ್ಲಿ ಎಎನ್‌ಎಫ್‌ ಸಿಬಂದಿ ಮೂಲತಃ ಬಾಗಲಕೋಟೆಯ ನಿವಾಸಿ ಸದಾಶಿವ ಚೌಧರಿ (25) ಅವರಿಗೆ ನಿಜವಾಗಿ ಗುಂಡು ತಗುಲಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿದೆ. ಅವರ ಕಿವಿಯ ಮೇಲ್ಭಾಗದಲ್ಲಿ ತಲೆ ಸನಿಹ ನಕ್ಸಲರ ಬಂದೂಕಿನಿಂದ ಹಾರಿದ ಗುಂಡು ಸವರಿಕೊಂಡು ಹೋಗಿದೆ ಎಂದು ಹೇಳಲಾಗುತ್ತಿದೆ. ಗಾಯಾಳು ಅತ್ಯಂತ ಚುರುಕಿನಿಂದ 108 ಅಂಬುಲೆನ್ಸ್‌ನಿಂದ ಇಳಿದು ಓಡುತ್ತಾ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರು! ಹಾಗಾದರೆ ಅವರ ತಲೆ ಸವರಿಕೊಂಡು ಹೋದ ಗುಂಡು ಸ್ಥಳದಲ್ಲಿ ಪತ್ತೆಯಾಗಿಲ್ಲವೇ. ಗಾಯವಾದ ಕಾರಣ ಅವರನ್ನು ಕರೆ ತರಲು 108 ಅಂಬುಲೆನ್ಸ್‌ನು° ಕೊಂಡೊಯ್ಯಲಾಗಿತ್ತು. ಆದರೆ ಕಡಿದಾದ ದಾರಿಯಲ್ಲಿ ತೆರಳಲಾರದೇ ಅವರನ್ನು ಸಹ ಸಿಬಂದಿ ಸಹಾಯದಿಂದಲೇ ಕರೆ ತರಲಾಗಿತ್ತು.

      ನಕ್ಸಲರೇ ಇಲ್ಲ ಎಂಬ ಹೇಳಿಕೆ ಎಷ್ಟು ಸಮಂಜಸ

      ಪಶ್ಚಿಮ ಘಟ್ಟದಲ್ಲಿ ನಕ್ಸಲರ ಸಂಖ್ಯೆ ತೀರಾ ಇಳಿಮುಖವಾಗಿದೆ ಎನ್ನುತ್ತಿದ್ದರು ಈ ಹಿಂದಿನ ಐಜಿ. ರಾಜ್ಯದಲ್ಲಿ ಇರುವುದು 12 ಮಂದಿ ನಕ್ಸಲರು ಮಾತ್ರ ಎನ್ನುತ್ತಿದ್ದರು ಈಗಿನ ಗೃಹ ಸಚಿವರು. ಆದರೆ 400ಕ್ಕಿಂತ ಅಧಿಕ ಮಂದಿ ಎಎನ್‌ಎಫ್‌ ಸಿಬಂದಿ ಕಾರ್ಯಾಚರಿಸುತ್ತಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದ.ಕ., ಉಡುಪಿ ಜಿಲ್ಲೆಯ ಪೊಲೀಸರು ನಕ್ಸಲ್‌ ನಿಗ್ರಹ ಕಾರ್ಯಾಚರಣೆ ನಡೆಸುತ್ತಾರೆ. ಆಗಾಗ ಕಾಡಿನಲ್ಲಿ ನಕ್ಸಲ್‌ ಶೋಧ ಕಾರ್ಯಾಚರಣೆ ನಡೆಯುತ್ತದೆ. ಅಷ್ಟಿದ್ದರೂ ಬೆರಳೆಣಿಕೆಯ ನಕ್ಸಲರನ್ನು ಮಟ್ಟ ಹಾಕಲಾಗಲಿಲ್ಲವೇ. 3 ಮಂದಿ ನಕ್ಸಲರು ಕಾಣ ಸಿಕ್ಕಿದ್ದಾರೆ. 22 ಮಂದಿ ಇರಬಹುದು ಎಂಬ ಶಂಕೆ ಇದೆ. ಇದು ಸತ್ಯವೇ ಆದರೆ ಹಿರಿಯ ಅಧಿಕಾರಿಗಳು, ಜವಾಬ್ದಾರಿಯುತ ಗೃಹ ಸಚಿವರು ಹೇಳಿದ್ದು ಸುಳ್ಳೇ. 25 ಮಂದಿಗೆ ಬೇಕಾದಷ್ಟು ಆಹಾರ ವಸ್ತುಗಳ ದಾಸ್ತಾನು ಇತ್ತೆಂಬ ಹೇಳಿಕೆಯೂ ಅನುಮಾನ ಹುಟ್ಟಿಸುತ್ತದೆ. 25 ಮಂದಿಯ ಆಹಾರ ಸಾಮಾಗ್ರಿಯಾದರೆ ಕೇವಲ ಒಂದು ದಿನಕ್ಕೆ ಬೇಕಾದಷ್ಟು ಮಾತ್ರ ಸಂಗ್ರಹಿಸಿ ಇಡುತ್ತಾರೆಯೇ. ಮೂವರಾದರೆ ಸರಿ 25 ಕೆಜಿ ಅಕ್ಕಿ ಇಟ್ಟುಕೊಂಡರೆ ಕೆಲವು ದಿನಗಳಿಗೆ ಬೇಕಾದಷ್ಟು ಎನ್ನಬಹುದು. ಆದರೆ ಇಲ್ಲಿ ತರಬೇತಿ ನಡೆಯುತ್ತಿತ್ತು ಎಂದಾದರೆ ಅಷ್ಟೇ ಅಕ್ಕಿಯೇ. ಅಷ್ಟು ಮಂದಿಗೆ ಅಡುಗೆ ಮಾಡಲು ಬೇಕಾಗುವ ಪಾತ್ರೆಗಳ ಗಾತ್ರವೂ ದೊಡ್ಡದು ಇರುವುದಿಲ್ಲವೇ. ಅಷ್ಟು ದೊಡ್ಡ ಪಾತ್ರೆ, ಅಕ್ಕಿ, ಸರಂಜಾಮು ಹಿಡಿದು ಅವರೇನು ಕಾಡಿನಲ್ಲಿ ಜಾತ್ರೆಗೆ ಹೋಗುವುದೇ ಎಂಬ ಪ್ರಶ್ನೆಗಳು ನಾಗರಿಕ ವಲಯದಲ್ಲಿದೆ. ಏನೇ ಇದ್ದರೂ ತನಿಖೆ ಸರಿಯಾದ ನಿಟ್ಟಿನಲ್ಲಿ ನಡೆಯಲಿ. ನಕ್ಸಲ್‌ ಮುಕ್ತ ಪ್ರದೇಶವಾಗಲಿ ಎಂಬುದೇ ಎಲ್ಲರ ಹಾರೈಕೆ. ನಕ್ಸಲ್‌ ನೆಪದಲ್ಲಿ ಅಮಾಯಕರು ಬಲಿಯಾಗದಿರಲಿ ಎನ್ನುವುದು ಕಾಳಜಿ.

      ನಕ್ಸಲ್‌ ನಿಗ್ರಹಕ್ಕೆ 5 ಕೋ. ರೂ. ಖರ್ಚು

      ಪಶ್ಚಿಮಘಟ್ಟದ ತಪ್ಪಲಿನಲ್ಲಿ ಇರುವ ನಕ್ಸಲೀಯರ ನಿಗ್ರಹಕ್ಕೆ ಎಂದು ರಾಜ್ಯ ಸರಕಾರ 5 ಕೋ.ರೂ. ವ್ಯಯಿಸಿದೆ. ಇಷ್ಟಲ್ಲದೇ ನಕ್ಸಲ್‌ ಪೀಡಿತ ಪ್ರದೇಶಾಭಿವೃದ್ಧಿ ಎಂದು 10 ಕೋ.ರೂ.ಗೂ ಅಧಿಕ ಖರ್ಚು ಮಾಡಲಾಗಿದೆ.

      ನಕ್ಸಲ್‌ ನಿಗ್ರಹ ಪಡೆಯನ್ನು 2005 ಮೇ 21ರಂದು ಆರಂಭಿಸಲಾಯಿತು. ನಕ್ಸಲರ ಕಾನೂನು ಬಾಹಿರ ಚಟುವಟಿಕೆ ಹತ್ತಿಕ್ಕಲು, ನಕ್ಸಲೀಯರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ನಕ್ಸಲರನ್ನು ಬಂಧಿಸುವುದು ಇದರ ಸ್ಥಾಪನೆಯ ಉದ್ದೇಶ.

      ಕಾರ್ಕಳದಲ್ಲಿ ಕೇಂದ್ರ ಸ್ಥಾನ ಹೊಂದಿರುವ ನಕ್ಸಲ್‌ ನಿಗ್ರಹ ಪಡೆಗೆ 543 ಹುದ್ದೆಗಳು ಮಂಜೂರಾಗಿದ್ದು, 427 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2005ರಿಂದ ಈವರೆಗೆ 10 ಅಧಿಕಾರಿಗಳಿಗೆ 91.38 ಲಕ್ಷ ರೂ. ವೇತನ, 74.78 ಲಕ್ಷ ರೂ. ಇತರ ಭತ್ಯೆ ನೀಡಲಾಗಿದೆ. ಇತರ ಸಿಬಂದಿಗಳ ವೇತನ ಪ್ರತ್ಯೇಕ ಎಂದು ಗೃಹ ಸಚಿವ ಆರ್‌. ಅಶೋಕ್‌ ಅವರು ಶಾಸಕ ಕೆ. ವಸಂತ ಬಂಗೇರರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ್ದಾರೆ.

      ಒಟ್ಟು 1.96 ಕೋ.ರೂ. ವೆಚ್ಚದಲ್ಲಿ 39 ವಾಹನಗಳನ್ನು ಇದಕ್ಕಾಗಿ ಖರೀದಿಸಲಾಗಿದೆ. ಇದರಲ್ಲಿ ಮೈನ್‌ ಪ್ರೊಟೆಕ್ಟರ್‌ ವೆಹಿಕಲ್‌ ಎಂಬ 2 ವಾಹನಗಳೂ ಸೇರಿವೆ. ಇವುಗಳಿಗೆ ತಲಾ 50 ಲಕ್ಷ ರೂ. ನೀಡಿ ಖರೀದಿಸಲಾಗಿದೆ. 2006ರಲ್ಲಿ 23.99 ಲಕ್ಷ ರೂ. ವೆಚ್ಚದಲ್ಲಿ 133 ಆಯುಧಗಳನ್ನು ಖರೀದಿಸಲಾಗಿದ್ದು, 2007ರಲ್ಲಿ 10 ಪ್ರೊಜೆಕ್ಟರ್‌, ಫೈರೋ ಟೆಕ್ನಿಕ್‌ ಖರೀದಿಸಲಾಗಿದೆ. 2008ರಲ್ಲಿ 40 ಎ.ಕೆ. 47 ರೈಫಲ್‌ಗ‌ಳನ್ನು ಖರೀದಿಸಲಾಗಿದೆ. ಇದಕ್ಕೆ 3.19 ಲಕ್ಷ ರೂ. ನೀಡಲಾಗಿದ್ದು, 2011ರಲ್ಲಿ 5.56 ಇನ್‌ಸಾಸ್‌ ರೈಫಲ್‌ಗ‌ಳ ಖರೀದಿ ಮಾಡಲಾಗಿದೆ. ಇದಕ್ಕೆ 2.56 ಲಕ್ಷ ರೂ. ನೀಡಲಾಗಿದೆ. ಒಟ್ಟು 213 ಶಸಾಸ್ತ್ರ ಖರೀದಿಸಲಾಗಿದೆ. ಮೂಲಭೂತ ಸೌಕರ್ಯಗಳಿಗೆ ಎಂದು 41.77 ಲಕ್ಷ ರೂ. ವ್ಯಯಿಸಲಾಗಿದೆ. ಇದಲ್ಲದೇ ನಕ್ಸಲ್‌ ಪೀಡಿತ ಪ್ರದೇಶಾಭಿವೃದ್ಧಿ ಎಂದು ಅನುದಾನ ನೀಡಲಾಗಿದೆ. ಹಾಗಿದ್ದರೂ ನಕ್ಸಲ್‌ ಸಮಸ್ಯೆ ಮುಂದುವರಿದಿದೆ.

      ಫೋಟೊ: ನಕ್ಸಲ್‌ ನಿಗ್ರಹ ಪಡೆಯ ಐಜಿ ಅಲೋಕ್‌ ಕುಮಾರ್‌ ಸಹಿತ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿರುವುದು.

      ಚಿತ್ರ: ಪ್ರಣಮ್ಯ ಜಿ.ಕೆರೆ.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus