Udayavani | Mar 24, 2012
ಬೆಂಗಳೂರು: ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಸಿಗುವುದು ಬಹುತೇಕ ಅನುಮಾನವಾಗಿದ್ದು, ಬೇರೊಂದು ಸ್ಥಾನಮಾನ ನೀಡುವ ಬಗ್ಗೆ ಲೆಕ್ಕಾಚಾರಗಳು ನಡೆದಿವೆ.
ಅಂತಿಮವಾಗಿ ಮುಖ್ಯಮಂತ್ರಿಯಿರಲಿ. ಬೇರೆ ಯಾವುದೇ ಸ್ಥಾನಮಾನ ನೀಡದೆ ಇರುವ ಸಾಧ್ಯತೆಯೂ ಇದ್ದು, ಯಡಿಯೂರಪ್ಪ ಅವರು ಪಕ್ಷ ತ್ಯಜಿಸಿದರೆ ಏನಾಗಬಹುದು ಎಂಬ ದಿಕ್ಕಿನಲ್ಲಿ ಪಕ್ಷದ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರು ಇತ್ತೀಚಿನ ನಡವಳಿಕೆಗಳ ಬಗ್ಗೆ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಅಂದರೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯ ಪ್ರಚಾರದಿಂದ ದೂರ ಉಳಿದದ್ದು, ರೆಸಾರ್ಟ್ ರಾಜಕಾರಣ, ಸದನದಲ್ಲಿ ನಡೆದ ಡಾ.ವಿ.ಎಸ್.ಆಚಾರ್ಯ ಅವರ ಶ್ರದ್ಧಾಂಜಲಿಗೆ ಗೈರು ಮತ್ತು ರಾಜ್ಯಸಭಾ ಚುನಾವಣೆಗೆ ತಮ್ಮ ಬೆಂಬಲಿಗರೊಬ್ಬರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಪ್ರಯತ್ನಗಳು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿವೆ.
ಅಲ್ಲದೆ, ಯಡಿಯೂರಪ್ಪ ಅವರಿಗೆ ಕಳೆದ ಮೂರೂವರೆ ವರ್ಷಗಳಿಂದ ಪರಮಾಪ್ತರೂ ಆಗಿರುವ ಮತ್ತು ಈ ನಡೆಯ ಬಗ್ಗೆ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾದ ಇಬ್ಬರು 'ಪ್ರಭಾವಿ' ಸಚಿವರ ವಿರುದ್ಧ ವರಿಷ್ಠರು ಆಕ್ರೋಶ ಹೊರಹಾಕಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಇಬ್ಬರು ಸಚಿವರ ವಿರುದ್ಧ ಅಗತ್ಯ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪಕ್ಷದ ವರಿಷ್ಠ ನಾಯಕರಾದ ಲಾಲ್‌ಕೃಷ್ಣ ಆಡ್ವಾಣಿ ಅವರೊಬ್ಬರೇ ಅಲ್ಲದೆ ಹೈಕಮಾಂಡ್‌ನ ಅನೇಕ ನಾಯಕರು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ಸ್ಪಷ್ಟವಾದ ವಿರೋಧ ವ್ಯಕ್ತಪಡಿಸಿರುವುದು ಯಡಿಯೂರಪ್ಪ ಅವರಿಗೆ ಬಲವಾದ ಹಿನ್ನೆಡೆ ಉಂಟು ಮಾಡಿದೆ.
ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ರಾಜ್ಯದ ಹಿರಿಯ ಉಸ್ತುವಾರಿ ಅರುಣ್ ಜೇಟಿÉ ಅವರಿಬ್ಬರು ಮಾತ್ರ ತಮ್ಮ ಬಗ್ಗೆ ತುಸು ಮೃದು ಧೋರಣೆ ತಳೆದಿರುವುದರಿಂದ ಯಡಿಯೂರಪ್ಪ ಅವರು ಇನ್ನೂ ಸ್ವಲ್ಪ ಆಶಾಭಾವನೆ ಹೊಂದಿದ್ದಾರೆ. ಹಾಗಂತ ಅವರಿಬ್ಬರು ಕೂಡ ಮುಖ್ಯಮಂತ್ರಿ ಹುದ್ದೆ ನೀಡಲು ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳದೇ ಇರುವುದಕ್ಕೆ ಬೇರೆ ರಾಜಕೀಯ ಕಾರಣಗಳಿವೆ ಹೊರತು ಯಡಿಯೂರಪ್ಪ ಅವರ ಬಗೆಗಿನ ಪ್ರೀತಿಯಿಂದಲ್ಲ.
ಕಳೆದ ಮೂರುವರೆ ವರ್ಷಗಳಿಂದ ಅದರಲ್ಲೂ ಒಂದು ತಿಂಗಳಿಂದ ಯಡಿಯೂರಪ್ಪ ಅವರು ನಡೆದುಕೊಂಡ ರೀತಿಯನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡಿರುವ ವರಿಷ್ಠರು ಕೇವಲ ಸರ್ಕಾರ ಉಳಿಸಿಕೊಳ್ಳಲು ಅಥವಾ ಮುಂದಿನ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಮಾನ ನೀಡಬೇಕೆ ಎಂಬ ಪ್ರಶ್ನೆಯನ್ನು ವರಿಷ್ಠರು ಪ್ರಸ್ತಾಪಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಗುರುವಾರ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು ಭೇಟಿ ಮಾಡಿದ್ದು ಕೇವಲ ಗಡ್ಕರಿ-ಜೇಟಿÉ ಅವರನ್ನು ಮಾತ್ರ. ಆಡ್ವಾಣಿ ಅವರನ್ನು ಕಂಡಿದ್ದು ಕೇವಲ ನೆಪ ಅಷ್ಟೇ ಹೊರತು ಅದು ಫಲ ನೀಡಿಲ್ಲ.
ಆದರೆ, ಮುಖ್ಯಮಂತ್ರಿ ಸದಾನಂದಗೌಡ-ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ನೇತೃತ್ವದ ತಂಡ ಆಡ್ವಾಣಿ, ಗಡ್ಕರಿ, ಜೇಟಿÉ, ರಾಜನಾಥ್ ಸಿಂಗ್, ಮುರಳಿ ಮನೋಹರ್ ಜೋಷಿ, ವೆಂಕಯ್ಯನಾಯ್ಡು, ಸುಷ್ಮಾ ಸ್ವರಾಜ್, ರಾಮಲಾಲ್ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದು ಯಶಸ್ಸು ನೀಡುವ ಸಾಧ್ಯತೆಗಳು ಗೋಚರಿಸಿವೆ.
ಸದಾನಂದಗೌಡ-ಈಶ್ವರಪ್ಪ ಅವರು ಭೇಟಿ ಮಾಡಿದ ನಾಯಕರೆಲ್ಲರೂ ಯಡಿಯೂರಪ್ಪ ಮತ್ತವರ ಬೆಂಬಲಿಗರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಅವರಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.
ಇದರ ಪರಿಣಾಮವೇ ಗಡ್ಕರಿ ಮತ್ತು ಜೇಟಿÉ ಅವರು ಯಡಿಯೂರಪ್ಪ ಅವರಿಗೆ ಅವಸರಪಡದೆ ತಾಳ್ಮೆ ವಹಿಸುವಂತೆ ಸಲಹೆ ನೀಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸ್ಥಾನಮಾನ ನೀಡುತ್ತೇವೆ ಎಂಬ ಹಾರಿಕೆಯ ಭರವಸೆ ನೀಡಿ ದೆಹಲಿಯಿಂದ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಪ್ಲೀಸ್ ಡೋಂಟ್ ವೇಸ್ಟ್ ಮೈ ಟೈಮ್'
ತಮ್ಮ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ವರಿಷ್ಠ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರಿಗೆ ಸಂಪೂರ್ಣ ನಿರಾಸೆ ಉಂಟಾಗಿದೆ.
ಆಡ್ವಾಣಿ ಅವರು ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸುವುದಕ್ಕೆ ಹಿಂದೇಟು ಹಾಕಿದ್ದು, 'ಪ್ಲೀಸ್ ಡೋಂಟ್ ವೇಸ್ಟ್ ಮೈ ಟೈಮ್' (ದಯವಿಟ್ಟು ನನ್ನ ಸಮಯ ವ್ಯಯ ಮಾಡಬೇಡಿ) ಎಂದು ನೇರವಾಗಿ ಹೇಳಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಯಡಿಯೂರಪ್ಪ ಅವರು ಆಡ್ವಾಣಿ ಅವರನ್ನು ಭೇಟಿ ಮಾಡಿದ್ದು ಕೇವಲ 10 ನಿಮಿಷಗಳ ಕಾಲ. ಯಡಿಯೂರಪ್ಪ ಅವರು ಆಡ್ವಾಣಿ ಅವರ ಮನೆಯೊಳಗೆ ನಗುಮೊಗದಿಂದಲೇ ಹೋಗಿ ಹೂಗುತ್ಛ ನೀಡಿ ಮಾತುಕತೆ ಆರಂಭಿಸಿದರು. ಆದರೆ, ಅದಕ್ಕೆ ಅವಕಾಶವನ್ನೇ ನೀಡದ ಆಡ್ವಾಣಿ ಆಡಿದ ಒಂದೆರಡು ಖಡಕ್ ಮಾತುಗಳನ್ನು ಕೇಳಿಸಿಕೊಂಡು ಬೇಸರದಿಂದಲೇ ವಾಪಸಾದರು.
ಅಧಿವೇಶನ ನಂತರ ಮತ್ತೆ ಯಡ್ಡಿ ಯತ್ನ
ಪ್ರಸಕ್ತ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಯಡಿಯೂರಪ್ಪ ಪಾಳೆಯ ಸ್ಥಾನಮಾನಕ್ಕಾಗಿ ಮತ್ತೆ ಪ್ರಯತ್ನ ಆರಂಭಿಸಲಿದೆ.
ಗುರುವಾರದ ದೆಹಲಿ ಭೇಟಿ ನಂತರ ಬರಿಗೈಲಿ ವಾಪಸಾಗಿರುವ ಯಡಿಯೂರಪ್ಪ ಅವರಿಗೆ ಬಜೆಟ್‌ಗೆ ಸದನದ ಅನುಮೋದನೆ ಪಡೆದುಕೊಳ್ಳಲು ಸಹಕಾರ ನೀಡುವಂತೆ ವರಿಷ್ಠರು ಸಲಹೆ ನೀಡಿದ್ದಾರೆ. ಅಧಿವೇಶನ ಮುಗಿದ ನಂತರ ಮತ್ತೆ ನಿಮ್ಮೊಂದಿಗೆ ಮಾತನಾಡುತ್ತೇವೆ ಎಂದೂ ಹೇಳಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನ ನಂತರ ಮತ್ತೂಮ್ಮೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಲ್ಲದೆ, ಸೋಮವಾರದ ನಂತರ ತಮ್ಮ ಬೆಂಬಲಿಗ ಸಚಿವರು, ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸುವ ನಿರೀಕ್ಷೆಯಿದೆ.