ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ) ಕಳೆದ ಒಂದು ವಾರದಿಂದ ಅನೇಕಾನೇಕ ಅನಪೇಕ್ಷಿತ ಘಟನೆಗಳು ಸಂಭವಿಸುತ್ತಿವೆ. ಬಹುತೇಕ ಘಟನೆಗಳು ಕೊಲೆ, ಸುಲಿಗೆ, ಹಲ್ಲೆ, ದರೋಡೆ, ಆತ್ಮಹತ್ಯೆ, ನಾಪತ್ತೆ ಇತ್ಯಾದಿ ಕ್ರಿಮಿನಲ್ ಘಟನೆಗಳೇ ಆಗಿರುವುದು ಅತ್ಯಂತ ಆತಂಕಕಾರೀ ಸಂಗತಿಯಾಗಿದೆ.
ನಿರ್ದಿಷ್ಟ ಪ್ರಸಂಗಗಳ ವಿವರಣೆ ಈ ವಿಶ್ಲೇಷಣೆಯ ಆಶಯವಲ್ಲ. ಆದರೆ, ಜಿಲ್ಲೆಯ ಇತಿಹಾಸದಲ್ಲೇ ಈ ಸ್ವರೂಪದ ಘಟನಾವಳಿ ಈ ಹಿಂದೆಂದೂ ಸಂಭವಿಸಿಲ್ಲ ಅನ್ನುವುದು ಮೂಲ ಕಾಳಜಿ.

ಮನೆಮಂದಿಯನ್ನೇ ನಿಷ್ಕರುಣಿಯಾಗಿ ಕಗ್ಗೊಲೆ, ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ, ಪತ್ನಿಯನ್ನು ಕೊಲೆಗೈದು ಮಗುವನ್ನು ಜಖಂಗೊಳಿಸಿ ಪರಾರಿ, ಹಫ್ತಾ ವಸೂಲಿಗೆ ಬೆದರಿಕೆ, ಪಾನಮುಕ್ತರಾಗಿ ಸಹವರ್ತಿಯ ಕೊಲೆ, ಮಧ್ಯರಾತ್ರಿಯಲ್ಲಿ ದೋಣಿ"ವಿಹಾರ'ದ ದುರಂತ, ಜಾಲಿರೈಡ್‌ನ ಅಪಘಾತ, ಗುಂಪುಘರ್ಷಣೆ, ಬ್ಲಾÂಕ್‌ವೆುàಲ್, ನಗನಾಣ್ಯ ದರೋಡೆ, ನಗನಗದು ದುಪ್ಪಟ್ಟು ಮಾಡುವ ಆಮಿಷ ಒಡ್ಡಿ ಸೊತ್ತು ಸಹಿತ ಪರಾರಿ.. ಒಂದೇ, ಎರಡೇ.. ಸತತ ದುರ್ಘಟನೆಗಳ ಸರಣಿ.

ಒಂದು ಪ್ರಸಂಗ ಎಷ್ಟೊಂದು ವಿಪರ್ಯಾಸಕರ ಆಗಿತ್ತೆಂದರೆ, ಕೊಲೆಯಾದ ಮಹಿಳೆ ಎರಡನೆಯ ವಿವಾಹವಾದ ವ್ಯಕ್ತಿಯ ವಿಳಾಸ ಕೂಡಾ ಆ ಕುಟುಂಬಕ್ಕೆ ತಿಳಿದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಆ ವ್ಯಕ್ತಿಯ ಶರೀರವನ್ನು ಕೂಡಾ ಒಯ್ಯುವವರಿಲ್ಲ.
ಏನಿದು ಪರಿಸ್ಥಿತಿ ? ಶಾಂತಿಯುತ ಸಹಬಾಳ್ವೆಗೆ, ಕೌಟುಂಬಿಕ ಚೌಕಟ್ಟಿನ ವಿಶಿಷ್ಠ ಪರಂಪರೆಗೆ ಪ್ರಸಿದ್ಧವಾದ ಕರಾವಳಿ ಜಿಲ್ಲೆಗಳಲ್ಲಿ ಏಕೆ ಈ ರೀತಿಯ ದುರ್ಘಟನೆಗಳು ಸಂಭವಿಸುತ್ತಿವೆ ? ಮಾನವ ನಿರ್ಮಿತ ಅಪರಾಧಗಳ ಜತೆಯಲ್ಲಿ ಸ್ಫೋಟದಿಂದ ಮರಣದಂತಹ ಆಘಾತಗಳು ಕೂಡಾ ಸಂಭವಿಸುತ್ತಿವೆ. ಜಿಲ್ಲೆ ಈ ಹಿಂದೆಂದೂ ಕಂಡರಿಯದ , ಕೇಳದ ರೀತಿಯ ಪ್ರಸಂಗಗಳು ವರದಿಯಾಗುತ್ತಿವೆ.

ಎಲ್ಲಕ್ಕೂ ಮುಖ್ಯ ಕಾರಣ, ಹಿನ್ನೆಲೆಗಳ ಬಗ್ಗೆ ಅರಿವು ಹೊಂದದಿರುವುದೇ ಆಗಿದೆ. ಓರ್ವ ವ್ಯಕ್ತಿಯ ಹಿನ್ನೆಲೆ ತಿಳಿಯದೇ ಆತನನ್ನು ವಿವಾಹವಾಗುತ್ತಾರೆ; ಆ ರೀತಿಯಲ್ಲಿ ಆ ವ್ಯಕ್ತಿ ಡಜನ್ ಸಮೀಪ ವಿವಾಹವಾಗುತ್ತಾನೆ ಅಂದರೆ ಬುದ್ಧಿವಂತರ ಜಿಲ್ಲೆ ಎಂಬ ಈ ಪ್ರದೇಶದಲ್ಲಿ ನಡೆಯುತ್ತಿದೆಯಾದರೂ ಏನು ? ಇಂತಹಾ ಅಸಹಾಯಕತೆ, ಇಂತಹಾ ಸಂದಿಗ್ಧ, ಇಂತಹಾ ಪರಿಸ್ಥಿತಿ ಈ ಪ್ರದೇಶಕ್ಕೆ ಬಂದಿತಾದರೂ ಹೇಗೆ ?
ಮಾಧ್ಯಮಗಳು ಸಾಕಷ್ಟು ಮುನ್ನೆಚ್ಚರಿಕೆ ನೀಡುವ ಕೆಲಸ ಮಾಡುತ್ತಿವೆ. ಆದರೂ, ಚಿನ್ನಾಭರಣಗಳ ದರೋಡೆ ನಡೆಯುತ್ತಿದೆ. ನಡೆದುಕೊಂಡು ಹೋಗುವವರ ಆಭರಣಗಳ ದರೋಡೆಯಾಗುತ್ತಿದೆ. "ನಿಮ್ಮ ಆಭರಣ ಕೊಡಿ. ಇಂತಹದೇ ಆಭರಣ ಮಾಡಿಸಬೇಕಾಗಿದೆ' ಎಂದು ಹೇಳುವವರ ಕೈಗೆ ನಿರಾಯಾಸವಾಗಿ ತಮ್ಮ ಆಭರಣ ಒಪ್ಪಿಸುವವರಿದ್ದಾರೆ. ನಗನಗದು ಮನೆಯಲ್ಲೇ ಇರಿಸಿ, ಮನೆಗೆ ಬೀಗಹಾಕಿ ವಿವಿಧ ಕಾರ್ಯಕ್ರಮಗಳಿಗೆ ತೆರಳುವವರಿದ್ದಾರೆ. ನೀರುಬೇಕು ಎಂದು ಬರುವ ಅಪರಿಚಿತರಿಗೆ ಬಾಗಿಲು ತೆರೆದು ನೀರು ಕೊಟ್ಟು ದರೋಡೆಯ "ನೀರು' ಕುಡಿಯುವ ಸುಶಿಕ್ಷಿತರಿದ್ದಾರೆ. ಅರ್ಧಕ್ರಯಕ್ಕೆ ವಸ್ತು ಎಂದು ಮೋಸ ಹೋಗುವವರಿದ್ದಾರೆ. ಹತ್ತು ರೂಪಾಯಿ ಕೆಳಗೆ ಬಿತ್ತು ಎಂದು ಯಾರೋ ಹೇಳಿದರೆ ಅದನ್ನು ಹೆಕ್ಕಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರಿದ್ದಾರೆ. ಇದೆಲ್ಲವೂ ಈ ಜಿಲ್ಲೆಗಳಲ್ಲಿ ಸತತವಾಗಿ ನಡೆಯುತ್ತಿದೆ. ಜನತೆ ಏಕೆ ಇಷ್ಟೊಂದು ಸುಲಭವಾಗಿ ಮೋಸ ಹೋಗುತ್ತಿದ್ದಾರೆ ? ಇದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಇನ್ನು, ಮಧ್ಯವರ್ತಿಗಳ ಜಾಲಕ್ಕೆ ಸಿಲುಕಿ ಸಂಕಷ್ಟಕ್ಕೆ ಈಡಾದವರದ್ದು ಪ್ರತ್ಯೇಕ ಅಧ್ಯಾಯವೇ ಆಗಿದೆ.

ರೈಲು ಮುಂತಾದ ಸಂಚಾರ ಸಂದರ್ಭದಲ್ಲಿ ಕೂಡಾ ಬೇರೆಯವರಿಂದ ಅಮಲು ಬರಿಸುವ ಬಿಸ್ಕತ್-ಪಾನೀಯ ಸೇವಿಸಿ ತಮ್ಮ ಅಮೂಲ್ಯ ಸಂಪತ್ತನ್ನು ಕಳೆದುಕೊಂಡವರ ಪಟ್ಟಿ ಇನ್ನಷ್ಟು ದೊಡ್ಡದಿದೆ. ಇಂತಹಾ ನಿದರ್ಶನಗಳ ಬಗ್ಗೆ ತಿಳಿದು ಕೂಡಾ "ತಿನ್ನುವ' ಆಮಿಷಕ್ಕೆ ಬಲಿಯಾದವರದ್ದು ದೊಡ್ಡ ಕತೆ.
ಈಗ, ಈ ಬಗ್ಗೆ ಜನಜಾಗೃತಿಯಾಗಬೇಕಿದೆ. ವಿವಿಧ ಸ್ವಯಂಸೇವಾ ಸಂಘಟನೆಗಳು ಈ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯ ಅಭಿಯಾನ ನಡೆಸುವುದು ಅಪೇಕ್ಷಣೀಯ. ಸರಕಾರೇತರ ಸಂಘಟನೆಗಳು ಕೂಡಾ ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದಾಗಿದೆ. ವಿವಿಧ ಇಲಾಖೆಗಳು ಕೂಡಾ ತಮ್ಮ ಅಧಿಕೃತ ಕಾರ್ಯಕ್ರಮಗಳ ಜತೆಗೆ ಈ ಜಾಗೃತಿಯ ವಿಚಾರಕ್ಕೂ ಆದ್ಯತೆ ನೀಡಿದರೆ ಇಂತಹಾ ದುರ್ಘಟನೆಗಳಿಂದ ಕರಾವಳಿ ಜಿಲ್ಲೆಗಳ ಜನತೆ ಪಾರಾಗಲು ಸಾಧ್ಯವಿದೆ. ಪೊಲೀಸರು ಈ ನಿಟ್ಟಿನಲ್ಲಿ ನಿರ್ಣಾಯಕ ಹೊಣೆಗಾರಿಕೆ ವಹಿಸುವುದು ಅಪೇಕ್ಷಣೀಯವಾಗಿದೆ.
ಚಿತ್ರ: ಸತೀಶ್ ಇರಾ