ಎಂ. ಎಚ್. ಪ್ರಸಾದ್ ಕುಮಾರ್, ಮೊಗೆಬೆಟ್ಟು | Apr 13, 2012
ಪುರುಷ ಪ್ರಧಾನವಾದ ಯಕ್ಷಗಾನ ಪ್ರಾತ್ಯಕ್ಷಿಕೆಗಳು ವಿರಳವಾದರೂ ಹೊಸತೇನಲ್ಲ. ಆದರೆ ಯುವತಿಯರೇ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡು ನಡೆಯುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅಪೂರ್ವವೆನಿಸುತ್ತವೆ. ಜತೆಗೆ ಯಕ್ಷಗಾನ ರಂಗಭೂಮಿಯಲ್ಲಿ ಪ್ರಗತಿ - ಪುರೋಗತಿಯ ಹೊಸ ಬೆಳಕು ಮೂಡಿದಂತಾಗುತ್ತದೆ. ಅಂತಹ ಸಾರ್ಥಕ ಪ್ರಯೋಗವೊಂದು ಇತ್ತೀಚೆಗೆ ಬಸೂರಿನ ಶಾರದಾ ಕಾಲೇಜಿನಲ್ಲಿ ಸಂಪನ್ನಗೊಂಡಿತು.
ಉಡುಪಿ ಯಕ್ಷಗಾನ ಕೇಂದ್ರ ದಲ್ಲಿ ಶಾಲಾ - ಕಾಲೇಜು ವಿದ್ಯಾ ಭ್ಯಾಸದ ಬಿಡುವಿನ ವೇಳೆಯಲ್ಲಿ, ರಜಾದಿನಗಳಲ್ಲಿ ಯಕ್ಷಗಾನ ವಿದ್ಯಾರ್ಜನೆ ಮಾಡಿದ ಯುವ ಲಲನೆಯರಿಂದ ನಿರೂಪಿಸಲ್ಪಟ್ಟ ಬಡಗುತಿಟ್ಟು ಯಕ್ಷಗಾನ ಪ್ರಾತ್ಯಕ್ಷಿಕೆ ಯನ್ನು ಕೇಂದ್ರದ ಪ್ರಾಚಾರ್ಯ, ಗುರು ಬನ್ನಂಜೆ ಸಂಜೀವ ಸುವರ್ಣರು ನಿರ್ದೇಶಿಸಿ ದ್ದರು. ತನ್ನ ಕಲಾ ಗರಡಿಯಲ್ಲಿ ಪಳಗಿದ ಆರು ಮಂದಿ ಶಿಷ್ಯೆಯರನ್ನು ಸುವರ್ಣರು ಈ ಪ್ರಾತ್ಯಕ್ಷಿಕಾ ಪ್ರಯೋಗಕ್ಕೆ ಅಣಿಗೊಳಿಸಿ ಯಶಸ್ವೀ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕೇಂದ್ರದ ಮಹಿಳಾ ಯಕ್ಷಗಾನ ತಂಡದಲ್ಲಿ ವಿವಿಧ ಯಕ್ಷ ಪ್ರಸಂಗಗಳಲ್ಲಿ ಪಾತ್ರಧಾರಿಗಳಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾದ ಈ ತರುಣಿಯರು ಸಾಂಪ್ರ ದಾಯಿಕ ಶೈಲೀಕೃತ ನೃತ್ಯ, ಅಭಿನಯ, ರಂಗ ನಡೆ, ಒಡ್ಡೋಲಗ ಕ್ರಮಗಳಿಂದ ಸಕಲರ ಗಮನ ಸೆಳೆಯುವಲ್ಲಿ ಗೆಲುವು ಕಂಡರು.
ಸಾಮಾನ್ಯವಾಗಿ ಎಲ್ಲಾ ಬಗೆಯ ನೃತ್ಯ ಬಂಧವನ್ನು ಹೊಂದಿದ ದೀರ್ಘಕಾಲೀನ ವಾದ "ಪಾಂಡವರ ಒಡ್ಡೋಲಗ'ವನ್ನು ದಣಿವಿಲ್ಲದೆ ಕುಣಿದು ತೋರಿದರು. ಆರು ಮಂದಿಯೂ ಪರಂಪರೆಯ ಶ್ರೀಕೃಷ್ಣ ಒಡ್ಡೋಲಗವನ್ನು ರಮ್ಯಾಕರ್ಷಕವಾಗಿ ನಿರೂಪಿಸಿದರು. ಪೀಠಿಕಾ ಸ್ತ್ರೀವೇಷ ನರ್ತನ, ಕಿರಾತರ ಓಲಗ, ಕರ್ಕಿ ಶೈಲಿಯ ಶ್ರೀಕೃಷ್ಣನ ಪ್ರವೇಶ ನೃತ್ಯ, ಪದ್ಯಾನುಗುಣ ಹಾಗೂ ಪಾತ್ರಾನುಸಾರವಾದ ಕುಣಿತ ಕ್ರಮಗಳನ್ನು ವಿವರಣಾ ಪೂರ್ಣವಾಗಿ ದರ್ಶಿಸಿ, ಸಾರ್ಥಕ ಶಿಕ್ಷಣದ ಸತ#ಲಗಳನ್ನು ಜಾಹೀರುಗೊಳಿಸಿದರು.
ಸತೀಶ ಕೆದ್ಲಾಯ (ಭಾಗವತಿಕೆ), ದೇವದಾಸ ರಾವ್ (ಮದ್ದಳೆ), ಕೃಷ್ಣಮೂರ್ತಿ ಭಟ್ (ಚಂಡೆ) ಹಿಮ್ಮೇಳದ ಸೂತ್ರಧಾರಕ ಶಕ್ತಿಗಳಾಗಿ ಪ್ರಾತ್ಯಕ್ಷಿಕೆಯ ಪಾತ್ರಧಾರಿಗಳನ್ನು ನೇರ್ಪುಗೊಳಿಸಿದರು.
ಯಕ್ಷಗಾನ ಕೇಂದ್ರದ ಕಲಾವಿದ ರಾದ ಉಮೇಶ್ ಪೂಜಾರಿ, ಪ್ರತೀಶ್ ಕುಮಾರ್, ಗಣೇಶ್ ನಾಯ್ಕ, ಮಿಥುನ್, ಕಾರ್ತಿಕ್ ಕರ್ಗಲ್ಲು ಪ್ರಾತ್ಯಕ್ಷಿಕೆಗೆ ಪೂರಕವಾಗಿ ಸಹಕರಿಸಿದರು.
ಕು| ವಲ್ಲರಿ, ಶ್ರೀಜನ್ಯಾ, ಶ್ರೀಲತಾ, ಆದ್ಯತಾ, ಶ್ವೇತಾರಾಣಿ, ಶ್ರಾವ್ಯಾ ಎಂಬೀ ಪ್ರತಿಭಾನ್ವಿತ ಯುವ ಯಕ್ಷಾಂಗನೆಯರು ಈ ಪ್ರಾತ್ಯಕ್ಷಿಕೆಯಲ್ಲಿ ಉತ್ಸಾಹಿಗಳಾಗಿ ಪಾಲ್ಗೊಂಡು, "ಗಂಡುಕಲೆ' ಎಂಬುದು "ಧೀಮಂತಿಕೆ'ಯ ಅರ್ಥಕ್ಕೆ ಹೆಚ್ಚು ಆಪ್ತವಾಗಿಸಿದರು.