ಸುರತ್ಕಲ್‌ನ ಚಿರಂತನ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ಮೂರು ದಿನಗಳ ಸಾಂಸ್ಕೃತಿಕ ಹಬ್ಬ ನಡೆಯಿತು. ಪ್ರಥಮ ದಿನದಂದು ನಡೆದ ಯಕ್ಷಗಾನ ತಾಳಮದ್ದಳೆ ಉತ್ತರನ ಪೌರುಷವನ್ನು ಯುಗಾದಿ ಸಂಸ್ಕೃತಿ ಸಮಿತಿ, ಲ್ಯಾಂಡ್‌ಲಿಂಕ್ಸ್, ಕೊಂಚಾಡಿ, ಮಂಗಳೂರು ಇದರ ಸದಸ್ಯರು ಪ್ರಸ್ತುತಪಡಿಸಿದರು. ಉತ್ತರನಾಗಿ ನಾರಾಯಣ ಕಂಜರ್ಪಣೆ, ಬೃಹನ್ನಳೆಯಾಗಿ ನಾರಾಯಣ ಯಾಜಿ, ಗೋಪಾಲಕ ನಾಗಿ ರವಿ ಅಲೆವೂರಾಯ, ಉತ್ತರೆಯಾಗಿ ಜಗದೀಶ ಬಲ್ಲಾಳ್; ಭಾಗವತರಾಗಿ ಪುರುಷೋತ್ತಮ ಭಟ್ ಹಾಗೂ ಮುರಾರಿ ಕಡಂಬಳಿತ್ತಾಯ ಮತ್ತು ಮಧು ಸೂದನ ಅಲೆವೂರಾಯ ಇವರು ಚೆಂಡೆ -ಮದ್ದಳೆಗಳಲ್ಲಿ ಸಹಕರಿಸಿದರು.
ಎರಡನೆಯ ದಿನದಂದು ಉಡುಪಿಯ ಪ್ರೊ| ಶಂಕರ್ ಅವರ ಷಷ್ಟಬ್ದ ಸಮಾಜ ಸೇವಾ ಯೋಜನೆ "ಅಕ್ಷಯ ವಸಂತ' - ಮಾಹಿತಿ ಜಾಗೃತಿ ಕಾರ್ಯಕ್ರಮ ನಡೆಯಿತು. ಜಾದೂವಿನ ಧನಾತ್ಮಕ ಹಾಗೂ ಋಣಾತ್ಮಕ ಉಪಯೋಗಗಳು ಹಾಗೂ ದುರುಪಯೋಗಗಳ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು. ಸಮಾಜದಲ್ಲಿರುವ ಅನೇಕ ತೊಡಕುಗಳ ಬಗೆಗಿನ ಜಾಗೃತಿಯನ್ನೂ ಮೂಡಿಸಿದರು. ತಾವೇ ನಡೆಸುವ ಆಶ್ರಮ ವಾದುದರಿಂದ ಆಶ್ರಮವಾಸಿಗಳ ಮನೋರಂಜನೆಗಾಗಿ ಕೊನೆಗೆ ಒಂದೆರಡು ಮನೋರಂಜನಾ ಜಾದೂ ಐಟಮ್‌ಗಳನ್ನೂ ಪ್ರೊ| ಶಂಕರ್ ಹಾಗೂ ಜ್ಯೂನಿಯರ್ ಶಂಕರ್ ಮತ್ತು ತಂಡದವರು ತೋರಿಸಿದರು.
ಮೂರನೆಯ ದಿನದ ಕಾರ್ಯಕ್ರಮದ ಆರಂಭ ದಲ್ಲಿ ಡಾ| ಶ್ರೀನಿವಾಸ್, ಬೆಂಗಳೂರು ಇವರು "ನ್ಯಾಚುರೋಪತಿ ಅರಿವು' ಎಂಬ ಉಪನ್ಯಾಸವನ್ನು ನಡೆಸಿಕೊಟ್ಟರು. ತದನಂತರ ಬೆಂಗಳೂರಿನ ಖ್ಯಾತ ಹಿಂದೂಸ್ಥಾನಿ ಕಲಾವಿದೆ, ವಿ| ವೇದಾ ಗೋಪಾಲಸ್ವಾಮಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ಬೆಂಗಳೂರಿನ ಮಧುಸೂದನ್ ಭಟ್ ಹಾರ್ಮೋನಿಯಂನಲ್ಲೂ ಭಾರವಿ ದೇರಾಜೆ ತಬ್ಲಾದಲ್ಲೂ ಸಹಕಾರ ನೀಡಿದರು. ವೇದಾ ಗೋಪಾಲಸ್ವಾಮಿಯವರ ಶಿಷ್ಯೆ ಹಾಗೂ ಚಿರಂತನದ ಓರ್ವ ಟ್ರಸ್ಟಿಯೂ ಆಗಿರುವ ಸೌಮ್ಯಾಲಕ್ಷ್ಮೀ ಭಟ್ ಸಹಗಾಯನದಲ್ಲಿ ಸಹಕರಿಸಿದರು.
ಸುಮಾರು 30 ನಿಮಿಷಗಳ ಕಾಲ ನಡೆದ ನಿವೇದಿತಾ ಶ್ರೀನಿವಾಸ್ ಇವರ ಕಥಕ್ ನೃತ್ಯದೊಂದಿಗೆ ಸಾಂಸ್ಕೃತಿಕ ಹಬ್ಬ ಕೊನೆಗೊಂಡಿತು.