Sunday, May 26, 2013
Last Updated: 8:00:22 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಗೇಲ್‌ ಗೇಲ್‌ ಗೇಲಣ್ಣ...!
  • 8 ಸಿಕ್ಸರ್‌ ಸಿಡಿಸಿದ ''''ಜಮೈಕನ್‌ ದೈತ್ಯ'' ಗೇಲ್‌

    • Udayavani | Apr 18, 2012

      ಬೆಂಗಳೂರು: ಕ್ರಿಸ್‌ ಗೇಲ್‌ ಈ ಸರಣಿಯಲ್ಲಿ ಎರಡನೇ ಸಲ ಸಿಡಿದರು. ಮೊದಲ ಸಲ ಸಿಡಿದಾಗ ಅವರಿಗೆ ಪಂದ್ಯವನ್ನು ಗೆಲ್ಲಿಸಿಕೊಡಲಾಗಲಿಲ್ಲ. ಅದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಚೆನ್ನೈ ಮುಖಾಮುಖೀಯಾಗಿತ್ತು. ಆದರೆ ಮಂಗಳವಾರ ರಾತ್ರಿ ಗೇಲ್‌ ಸಿಡಿತಕ್ಕೆ ಗೆಲುವು ಕೈ ಹಿಡಿಯದೆ ಉಳಿಯಲಿಲ್ಲ. ಅವರು ನೀಳಕಾಯದ ಲೆಗ್‌ಸ್ಪಿನ್ನರ್‌ ರಾಹುಲ್‌ ಶರ್ಮ ಅವರ ಒಂದೇ ಓವರಿನಲ್ಲಿ ಬಾರಿಸಿದ ಸತತ 5 ಸಿಕ್ಸರ್‌ಗಳೇ ಈ ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಎಂಬುದರಲ್ಲಿ ಅನುಮಾನವಿಲ್ಲ.

      ಪುಣೆ ದೊಡ್ಡ ಮೊತ್ತವನ್ನೇ ಪೇರಿಸಿತ್ತು (6ಕ್ಕೆ 182). ಜವಾಬು ನೀಡಿದ ಆರ್‌ಸಿಬಿ 10ನೇ ಓವರ್‌ ಮುಕ್ತಾಯಕ್ಕೆ 2 ವಿಕೆಟಿಗೆ ಕೇವಲ 63 ರನ್‌ ಗಳಿಸಿ ಸಂಕಟದಲ್ಲಿತ್ತು. 12ನೇ ಓವರ್‌ ಕೊನೆಯಲ್ಲಿ ಆತಿಥೇಯರ ಸ್ಕೋರ್‌ 3ಕ್ಕೆ 76. ಗೇಲ್‌ ಕ್ರೀಸ್‌ನಲ್ಲಿ ಇದ್ದುದರಿಂದ ಏನೋ ನಂಬಿಕೆ.

      ರಾಹುಲ್‌ ಶರ್ಮ ಪಾಲಾದ 13ನೇ ಓವರ್‌ನಲ್ಲಿ ಇದು ನಿಜವಾಯಿತು. ಮೊದಲ ಎಸೆತ ಎದುರಿಸಿದ ಸೌರಭ್‌ ತಿವಾರಿ ಸಿಂಗಲ್‌ ತೆಗೆದು ಗೇಲ್‌ಗೆ ಜಾಗ ಮಾಡಿಕೊಟ್ಟರು. ಅವರು 'ಸಿಕ್ಸರ್‌ ಸುನಾಮಿ'ಯಾಗಿ ಮಾರ್ಪಟ್ಟರು. 2ನೇ ಎಸೆತ ಲಾಂಗ್‌ ಆಫ್ ಬೌಂಡರಿ ಮೂಲಕ, 3ನೇ ಎಸೆತ ಡೀಪ್‌ ಮಿಡ್‌ ವಿಕೆಟ್‌ ಮೂಲಕ, 4ನೇ ಎಸೆತ ಬೌಲರ್‌ ತಲೆ ಮೇಲಿಂದ ರಾಕೆಟ್‌ ವೇಗದಲ್ಲಿ ಧಾವಿಸಿತು.

      ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಗೇಲ್‌ಗೆ ಅಷ್ಟಾದರೂ ತೃಪ್ತಿ ಇಲ್ಲ. 5ನೇ ಎಸೆತ ಲಾಂಗ್‌ ಆನ್‌ ಮೂಲಕ ಹಾದು ಹೋದರೆ, ಕೊನೆಯ ಎಸೆತ ಡೀಪ್‌ ಸ್ಕ್ವೇರ್‌ ಲೆಗ್‌ ಮಾರ್ಗವಾಗಿ ಸಿಡಿದು ಪ್ರೇಕ್ಷಕರೊಬ್ಬರಿಗೆ ಹೋಗಿ ಅಪ್ಪಳಿಸಿತು. ಅದೃಷ್ಟ, ಅವರಿಗೇನೂ ಆಗಲಿಲ್ಲ. ಈ ಓವರ್‌ನಲ್ಲಿ ಇನ್ನೂ ಕೆಲವು ಎಸೆತಗಳಿದ್ದರೆ ಅವುಗಳಿಗೂ ಗೇಲ್‌ ಸಿಕ್ಸರ್‌ ರುಚಿ ತೋರಿಸುತ್ತಿದ್ದುದು ಖಂಡಿತ. ಏಕೆಂದರೆ, ಗೇಲ್‌ ಟಾಪ್‌ ಗೇರ್‌ನಲ್ಲಿದ್ದರು!
      ಪಾಪ, ರಾಹುಲ್‌ ಶರ್ಮ... ಇದಕ್ಕೂ ಹಿಂದಿನ ಓವರಿನಲ್ಲಿ 5 ಸಿಂಗಲ್ಸ್‌ ನೀಡಿದ್ದ ಅವರು ಇಲ್ಲಿ ಅಷ್ಟೇ ಸಂಖ್ಯೆಯ ಸಿಕ್ಸರ್‌ ನೀಡುತ್ತಾರೆಂದು ಯಾರು ತಾನೆ ಭಾವಿಸಿದ್ದರು?!

      ಈ ಗೆಲುವು ಸ್ಫೂರ್ತಿ ತುಂಬಲಿದೆ: ಗೇಲ್‌
       ಪುಣೆ ವಿರುದ್ಧ ಸಾಧಿಸಿದ 6 ವಿಕೆಟ್‌ ಅಂತರದ 'ಲಾಸ್ಟ್‌ ಬಾಲ್‌ ಗೆಲುವು' ಬೆಂಗಳೂರ್‌ ತಂಡದ ಮುಂದಿನ ಪಂದ್ಯಗಳಿಗೆ ಖಂಡಿತ ಸ್ಫೂರ್ತಿ ನೀಡಲಿದೆ; ತಂಡಕ್ಕೆ ಪ್ರಚೋದನೆ ಲಭಿಸಲಿದೆ ಎಂದು ಭಾವಿಸುವುದಾಗಿ ಕ್ರಿಸ್‌ ಗೇಲ್‌ ಆಶಿಸಿದ್ದಾರೆ.

      5ನೇ ಐಪಿಎಲ್‌ನ 5 ಪಂದ್ಯಗಳಲ್ಲಿ ಆರ್‌ಸಿಬಿ ಸಾಧಿಸಿದ ಕೇವಲ ಎರಡನೇ ಗೆಲುವು ಇದಾಗಿದೆ. ಮೊದಲ ಪಂದ್ಯವನ್ನು ಗೆದ್ದ ಬಳಿಕ ವೆಟರಿ ಪಡೆ ಹ್ಯಾಟ್ರಿಕ್‌ ಸೋಲಿನಿಂತ ತತ್ತರಿಸಿತ್ತು.

      'ಈ ಜಯ ನಮ್ಮ ತಂಡಕ್ಕೆ ಉತ್ತೇಜನ ನೀಡುವ ಭರವಸೆ ಇದೆ. ಆರಂಭದಲ್ಲಿ ನಾನು ಸಾಕಷ್ಟು ಒತ್ತಡಕ್ಕೊಳಗಾಗಿದ್ದೆ. ದಿಂಡ ಮತ್ತು ನೆಹ್ರ ಉತ್ತಮ ಲೈನ್‌ ಹೊಂದಿದ್ದರು. ಸಹಜವಾಗಿಯೇ ನಾನು ಚಡಪಡಿಸಿದೆ. ಆದರೆ ರಾಹುಲ್‌ ಶರ್ಮ ಅವರ ಆ ಒಂದು ಬಿಗ್‌ ಓವರ್‌ನಿಂದ ನಾವು ಪಂದ್ಯಕ್ಕೆ ಮರಳುವಂತಾಯಿತು...' ಎಂದು 8 ಸಿಕ್ಸರ್‌ ಸಿಡಿಸಿದ 'ಜಮೈಕನ್‌ ದೈತ್ಯ' ಗೇಲ್‌ ಹೇಳಿದರು.

      ಈ ಮುಖಾಮುಖೀಯಲ್ಲಿ ಗೇಲ್‌ ಕೇವಲ 48 ಎಸೆತಗಳಿಂದ 81 ರನ್‌ ಸಿಡಿಸಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ಸಲ್ಲಿಸಿದ್ದರು. ಸಿಡಿಸಿದ್ದು 4 ಬೌಂಡರಿ ಹಾಗೂ 8 ಸಿಕ್ಸರ್‌. ಇದರಲ್ಲಿ 5 ಸಿಕ್ಸರ್‌ ರಾಹುಲ್‌ ಶರ್ಮ ಅವರ ಒಂದೇ ಓವರಿನಲ್ಲಿ ಸತತವಾಗಿ ಸಿಡಿಯಲ್ಪಟ್ಟಿತ್ತು.

      ಈ ಸತತ ಸಿಕ್ಸರ್‌ಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೇಲ್‌, 'ನಿಜಕ್ಕೂ ಬೇಸರವಾಗಿದೆ. ಏಕೆಂದರೆ ಇದರಲ್ಲೊಂದು ಸಿಕ್ಸರ್‌ ನಮ್ಮ ತಂಡದ ಬೆಂಬಲಕ್ಕೆ ನಿಂತಿದ್ದ ಬಾಲಕಿಯೊಬ್ಬಳ ಮೂಗಿಗೆ ಪೆಟ್ಟು ಮಾಡಿತು...' ಎಂದರು.

      ಉಳಿಸಿಕೊಳ್ಳಬಹುದಿತ್ತು:
      ಗಂಗೂಲಿ'ನಾವು 183 ರನ್‌ ಗುರಿ ನಿಗದಿಪಡಿಸಿದೆವು. ಖಂಡಿತ ಈ ಮೊತ್ತವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಕೊನೆಯ ಓವರ್‌ ಬಹಳ ದುಬಾರಿಯಾಗಿ ಪರಿಣಮಿಸಿತು. ಶಾರ್ಟ್‌ ಫೈನ್‌ ಲೆಗ್‌ ಮೂಲಕ ಡಿ'ವಿಲಿಯರ್ ಬಾರಿಸಿದ ಸ್ಕೂಪ್‌ ಶಾಟ್‌ ಅದ್ಭುತವಾಗಿತ್ತು. ನಾವು ನಿಜಕ್ಕೂ ಚೆನ್ನಾಗಿ ಆಡಿದೆವು. ಆದರೂ ಇಂಥ ಸಂಗತಿಗಳು ಸಂಭವಿಸುತ್ತವೆ. ತಿರುಗಿ ಬೀಳುವ ನಂಬಿಕೆ ನಮ್ಮದು...' ಎಂದು ಪ್ರತಿಕ್ರಿಯಿಸಿದವರು ಪುಣೆ ವಾರಿಯರ್ ನಾಯಕ ಸೌರವ್‌ ಗಂಗೂಲಿ.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus