Udayavani | Apr 18, 2012
ಬೆಂಗಳೂರು: 'ಮೂಗು ಮುರಿದರೂ ಪರಾÌಗಿಲ್ಲ, ಚಿಂತಿಸಬೇಡಿ. ಇಂಥ ಸಿಕ್ಸರ್‌ಗಳನ್ನು ಸಿಡಿಸುತ್ತಲೇ ಇರಿ. ಮುಂದಿನೆಲ್ಲ ಪಂದ್ಯಗಳಲ್ಲೂ ನಿಮಗೆ ಒಳ್ಳೆಯದಾಗಲಿ...' ಹೀಗೆಂದು ಕ್ರಿಸ್ ಗೇಲ್ ಅವರಿಗೆ ನೋವಿನ ನಡುವೆಯೂ ಹಾರೈಸಿದ್ದು ತಿಯಾ ಭಾಟಿಯ. ಆಕೆ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನ್ನೊಂದರ ಹರೆಯದ ಬಾಲಕಿ. ಅಂದಹಾಗೆ ಆಕೆ ಆಸ್ಪತ್ರೆ ಸೇರಲು ಕಾರಣ, ಗೇಲ್ ಬಾರಿಸಿದ ಸಿಕ್ಸರ್!
ಹೌದು, ರಾಹುಲ್ ಶರ್ಮ ಎಸೆದ ಆ ಓವರ್ ವೇಳೆ ಅಕ್ಷರಶಃ ಸುಂಟರಗಾಳಿಯಾಗಿದ್ದ ಗೇಲ್ ಸತತ 5 ಸಿಕ್ಸರ್ ಎತ್ತಿ ಮೆರೆದಿದ್ದರು. ಇದರಲ್ಲಿ ಕೊನೆಯ ಸಿಕ್ಸರ್ ವೇಳೆ ಚೆಂಡು, ಪಂದ್ಯವನ್ನು ಆನಂದಿಸುತ್ತಿದ್ದ ತಿಯಾ ಭಾಟಿಯಾಳ ಮೂಗಿಗೆ ಬಲವಾಗಿ ಅಪ್ಪಳಿಸಿತ್ತು. ಆಸ್ಪತ್ರೆಗೆ ಹೋಗಿ ಆಕೆಯ ಯೋಗಕ್ಷೇಮ ವಿಚಾರಿಸಿ ಬಂದ ಬಳಿಕ ಗೇಲ್ ಇದನ್ನು ತಿಳಿಸಿದರು.
'ನಾನು ಈಗಷ್ಟೇ ಲಿಟ್ಲ ತಿಯಾಳನ್ನು ಭೇಟಿಯಾಗಿ ಬಂದೆ. ನಾನು ಬಾರಿಸಿದ ಚೆಂಡಿನಿಂದ ಆಕೆಗೆ ಈ ಸ್ಥಿತಿ ಬಂದೊದಗಿದೆ. ನಿಜಕ್ಕೂ ಇದೊಂದು ದುಃಖದ ಸಂಗತಿ. ನನ್ನನ್ನು ಕಂಡ ಕೂಡಲೇ ಆಕೆ, ತನಗೇನೂ ಬೇಸರವಾಗಿಲ್ಲ ಎಂದು ಪ್ರತಿಕ್ರಿಯಿಸಿದಳು. ಬ್ರೇವ್ ಲೇಡಿ! ಆಕೆಯ ಈ ಮಾತು ನೇರವಾಗಿ ನನ್ನ ಹೃದಯಕ್ಕೆ ಮುಟ್ಟಿತು. ಆಕೆ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಆಕೆಯ ಕುಟುಂಬದವರಲ್ಲೂ ಕ್ಷಮೆ ಕೇಳಿದೆ. ಇದೊಂದು ದುರದೃಷ್ಟಕರ ಘಟನೆ. ಆ ನೋವಿನಲ್ಲೂ ಆಕೆ ತಮಾಷೆ ಮಾಡಿದಳು-ಈ ಘಟನೆಯ ಬಗ್ಗೆ ಚಿಂತಿಸಬೇಡಿ, ಸಿಕ್ಸರ್‌ಗಳನ್ನು ಬಾರಿಸುತ್ತಲೇ ಇರಿ ಎನ್ನುತ್ತ, ಮುಂದಿನೆಲ್ಲ ಪಂದ್ಯಗಳಲ್ಲೂ ನಿಮಗೆ ಯಶಸ್ಸು ಲಭಿಸಲು ಎಂದು ಆಕೆ ಹಾರೈಸಿದಳು...' ಎಂಬುದಾಗಿ ಗೇಲ್ ಹೇಳಿದರು.
ಈ ಘಟನೆಗೆ ಸಾಕ್ಷಿಯಾಗಿದ್ದ ಮತ್ತೋರ್ವ ವೀಕ್ಷಕಿ ನಿಶಾ ಆ ಸಂದರ್ಭವನ್ನು ವಿವರಿಸಿದ್ದು ಹೀಗೆ-'ನಾವೆಲ್ಲ ಪಂದ್ಯವನ್ನು ಆನಂದಿಸುತ್ತಿದ್ದೆವು. ಕ್ರಿಸ್ ಗೇಲ್ ಹಾಗೂ ಅವರ ಸಿಕ್ಸರ್ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ಆದರೆ ಇದೊಂದು ಕೇವಲ ಆಕಸ್ಮಿಕ. ಚೆಂಡು ಆ ಹುಡುಗಿಗೆ ರಭಸದಿಂದಲೇ ಬಡಿಯಿತು. ಆಕೆ ಗಟ್ಟಿಯಾಗಿ ಚೀರಿದಳು. ಮೂಗಿನಿಂದ ರಕ್ತಸ್ರಾವ ಆಗತೊಡಗಿತು. ಕೂಡಲೇ ನನ್ನ ಸ್ನೇಹಿತರೊಬ್ಬರು ಆಕೆಯನ್ನು ಎತ್ತಿ ಸಂಭಾಳಿಸಿದರು...'
ತಿಯಾ ಚೇತರಿಕೆ...
ಮಲ್ಯ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ| ಕಾಂಚನ್ ಸನ್ಯಾಲ್ ಪ್ರಕಾರ ತಿಯಾ ಭಾಟಿಯಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಕೆಯೀಗ ಚೇತರಿಸಿಕೊಳ್ಳುತ್ತಿದ್ದಾಳೆ.
'ಆಕೆಯ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಮೂಗಿನ ಮೂಳೆ ಮುರಿದಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಕೆ ಉತ್ತಮವಾಗಿ ಸ್ಪಂದಿಸಿದ್ದಾಳೆ; ಚೇತರಿಕೆ ಕಾಣುತ್ತಿದ್ದಾಳೆ. ಯಾವುದೇ ತೊಂದರೆ ಇಲ್ಲ...' ಎಂದು ಡಾ| ಕಾಂಚನ್ ಹೇಳಿದರು.
ಗೇಲ್ ಹೀಗೆಯೇ ಸಿಡಿಯಲಿ, ಅವರಿಂದ ಸಿಕ್ಸರ್‌ಗಳೂ ಸಿಡಿಯಲಿ. ಇದರಿಂದ ಎದುರಾಳಿ ತಂಡ ಅಪಾಯಕ್ಕೆ ಸಿಲುಕಲಿ, ಪರಾÌಗಿಲ್ಲ. ಆದರೆ ವೀಕ್ಷಕರಿಗೆ ಅಪಾಯ ತಂದೊಡ್ಡದಿರಲಿ... ಇದು ಆರ್‌ಸಿಬಿ ಅಭಿಮಾನಿಗಳ ಹಾರೈಕೆ!