ಡಾ. ಮೀರಾ | Apr 20, 2012
ಸುಂದರ ಮುಸ್ಸಂಜೆಯಲ್ಲಿ ಹೆಂಗಸರ ಹರಟೆ ಸಾಗಿತ್ತು. ""ನಿನ್ನೆ ಬರಲೇ ಇಲ್ಲ... ಎಲ್ಲಿ ಹೋಗಿದ್ರೀ ಗಂಗಾ...'
""ಏನು ಹೇಳಿÉ ಸುಮಾ... ಇದೆಯಲ್ಲಾ ನಮ್ಮ ಮಗಳ ತಿಂಗಳ ಪ್ರೋಗ್ರಾಂ... ಮುಟ್ಟಾದರೆ ಹೊಟ್ಟೆನೋವು... ವಾಂತಿ ತಲೆ ತಿರುಗುವುದು...! ಆಸ್ಪತ್ರೆಗೆ ಹೋಗಿ ಎರಡು ಬಾಟಿÉ ಗ್ಲೂಕೋಸ್, ಇಂಜೆಕ್ಷನ್ ಹಾಕಿಸಿ ಕರೆದುಕೊಂಡು ಬಂದಿದ್ದು...'
"ನಮ್ಮ ಮಗಳ ಕತೆಯೇ ಬೇರೆ...! ತಿಂಗಳು ತಿಂಗಳು ಮುಟ್ಟು ಬರುವುದೇ ಇಲ್ಲ. ಮಾತ್ರೆ ತಗೊಂಡ್ರೆ ಮಾತ್ರ ಹೊರಗಾಗ್ತಾಳೆ. ಮತ್ತೆ ದಿನಗಟ್ಟಲೆ ಮೈಯಿಂದ ಹೋಗುತ್ತೆ... ನಿಲ್ಲಬೇಕಾದ್ರೇ ಪುನಃ ಮಾತ್ರೆ ಕುಡೀಬೇಕು. ಒಟ್ಟಾರೆ ತಲೆನೋವು! ಮೂರು ತಿಂಗಳು 21 ದಿನದ ಹಾರ್ಮೋನು ಮಾತ್ರೆ ಡಾಕುó ಕೊಟ್ಟರು. ಕುಡೀವಾಗ ಕರೆಕ್ಟಾಗಿ ಆದಳು... ಮತ್ತೆ ಈಗ ಅದೇ ಕತೆ. ಆಗದೇ ಮೂರು ತಿಂಗಳಾಯಿತು. ಪರೀಕ್ಷೆ ಮುಗಿದ ಮೇಲೆ ಡಾಕ್ಟ್ರ ಹತ್ತಿರ ಹೋಗುವಾ ಅಂತ ಹೇಳ್ತಾ ಇದ್ದಾಳೆ. ಬರೀ ಸಿಡುಕು... ಸಿಟ್ಟು ಮೂಗಿನ ತುದಿ ಮೇಲೆ... ಸುಸ್ತು ಸುಸ್ತು ಅಂತ ಮಲಗ್ತಾಳೆ'.

""ಹೌದು ಗಂಗಾ... ಈಗಿನ ಹುಡುಗಿಯರಿಗೆ ಮುಟ್ಟಿನದ್ದು ಒಂದಿಲ್ಲೊಂದು ಸಮಸ್ಯೆ ಇದ್ದದ್ದೇ... ನಮಗೆಲ್ಲಾ ಹೀಗಿರಲಿಲ್ಲಪ್ಪಾ... ಮುಟ್ಟಾದ್ದೇ ಗೊತ್ತಾಗ್ತಿರಲಿಲ್ಲ... ಪ್ರತಿ ಇಪ್ಪತ್ತೆಂಟು ದಿನಕ್ಕೆ ಚಕ್ ಅಂತ ಆಗ್ತಿತ್ತು... ಚಕ್ ಅಂತ ನಿಲ್ತಿತ್ತು...' ಇವರೆಲ್ಲಾ ಹದಿನಾಲ್ಕರಿಂದ ಹದಿನೆಂಟರ ಹರೆಯದ ಸ್ಕೂಲ್, ಕಾಲೇಜಿಗೆ ಹೋಗುವ ಹೆಮ್ಮಕ್ಕಳ ಅಮ್ಮಂದಿರು.
ಈಗಿನ ಯುವ ಜನಾಂಗದ ಆಹಾರ ಕ್ರಮವೇ ಸರಿಯಾಗಿಲ್ಲ. ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಸ್ಕೂಲಿಗೆ ಓಡುವುದು, ಅಲ್ಲಿ ಕರಿದ ವಸ್ತು ತಿನ್ನುವುದು, ತರಕಾರಿ ಹಾಲು ಮೈಲುದೂರ, ಕೋಳಿ ಮಾಂಸ ಇರದಿದ್ದರೆ ಊಟ ಗಂಟಲಲ್ಲಿ ಇಳಿಯದು. ಶಾರೀರಿಕ ವ್ಯಾಯಾಮ ಇಲ್ಲ... ಈ ಪರಿಯ ಜೀವನ ಕ್ರಮದಿಂದಾಗಿ ಮತ್ತು ಅತಿಯಾದ ಓದಿನ ಮಾನಸಿಕ ಒತ್ತಡದಿಂದಾಗಿ, ಹಾರ್ಮೋನುಗಳಲ್ಲಿ ಏರುಪೇರಾಗಿ ಒಂದಿಲ್ಲೊಂದು ಮುಟ್ಟಿನ ತೊಂದರೆ ಬಾಧಿಸುತ್ತಿರುತ್ತದೆ. ಇವುಗಳಲ್ಲಿ ಮುಖ್ಯವಾದದ್ದು ಮುಟ್ಟನ ಹೊಟ್ಟೆನೋವು. ಬೆನ್ನಿನಿಂದ ಶುರುವಾಗಿ ಕಿಬ್ಬೊಟ್ಟೆ , ಕಾಲಿನವರೆಗೂ ಹರಡುವ ನೋವು! ಕೆಲವರಲ್ಲಿ ವಾಂತಿ, ಅತಿ ಮಲಪ್ರವೃತ್ತಿ, ತಲೆನೋವು ಕೂಡಾ ಇರುತ್ತದೆ. ಕೆಲವರಿಗೆ ಮುಟ್ಟಾಗಲು ಒಂದು ವಾರ ಇರುವಾಗಲೇ ಮೊಲೆಗಳಲ್ಲಿ ನೋವು, ಕಾಲು ಸೆಳೆತ, ತಲೆಭಾರ ಇದ್ದು, ಮುಟ್ಟಿನ ರಕ್ತಸ್ರಾವ ಶುರುವಾದ ಕೂಡಲೇ ಈ ನೋವುಗಳು ಮಾಯವಾಗುತ್ತವೆ. ಇನ್ನು ಕೆಲವರಿಗೆ ಮುಟ್ಟಿನ ಮೊದಲ ದಿನ ನೋವಿದ್ದು, ಗಂಟಾಗಿ ರಕ್ತಸ್ರಾವವಾಗುತ್ತದೆ.
ಮುಟ್ಟಿನ ನೋವಿನಿಂದ ಬಳಲುವವರು ಅತಿಯಾದ ಖಾರದ ಆಹಾರ, ಕರಿದ ವಸ್ತು, ಕೆಸು, ಬಟಾಟೆ, ಸಿಹಿಕುಂಬಳ, ಬದನೆಕಾಯಿ, ಕೋಳಿ ಮಾಂಸ, ಮೊಟ್ಟೆ ಮತ್ತು ಉಪ್ಪಿನಕಾಯಿಯನ್ನು ಸೇವಿಸಬಾರದು. ರಾಗಿ, ಹೆಸರುಕಾಳು, ಹೆಸರುಬೇಳೆ, ಹಾಲು, ಮೊಸರು, ಕುಂಬಳಕಾಯಿ, ಪಪ್ಪಾಯಿ ಹಣ್ಣು , ನುಗ್ಗೆನೊಪ್ಪು , ಪಡುವಲಕಾಯಿ, ಹಾಗಲಕಾಯಿ, ಮುಳ್ಳುಸೌತೆ, ಸೂರಣಗೆಡ್ಡೆ ಹೆಚ್ಚಾಗಿ ಸೇವಿಸಬೇಕು. ಕಾಫಿ, ಚಹಾದ ಬದಲು ಕೊತ್ತಂಬರಿ, ಜೀರಿಗೆ, ಮೆಂತೆಯ ಕಷಾಯ ಮಾಡಿ ಹಾಲಿನೊಂದಿಗೆ ಕುಡಿಯಬೇಕು. ಲಘುವಾದ ವ್ಯಾಯಾಮ ಮತ್ತು ನಡೆಯುವುದರಿಂದ ಮುಟ್ಟಿನ ನೋವು ಕಡಿಮೆ ಮಾಡಬಹುದು. ಮುಟ್ಟಾಗುವ ಐದು ದಿನ ಮೊದಲು ಒಂದು ಲೋಟ (200 ಮಿ. ಲೀ.) ಎಳನೀರಿಗೆ ಅರ್ಧ ಚಾ ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಸೇರಿಸಿ ಬರೀ ಹೊಟ್ಟೆಯಲ್ಲಿ ಕುಡಿಯಬೇಕು. ಮುಟ್ಟಾದ ಕೂಡಲೇ ಒಂದು ಲೋಟ ಬಿಸಿನೀರಿಗೆ ಒಂದು ಚಿಟಿಕೆ ಇಂಗು, ಅರ್ಧ ಚಾ ಚಮಚ ತುಪ್ಪ ಸೇರಿಸಿ ಕುಡಿಯುವುದರಿಂದ ಬೆನ್ನು , ಕಿಬ್ಬೊಟ್ಟೆ ನೋವು ಕಡಿಮೆಯಾಗುತ್ತದೆ. ಒಂದು ತೊಲ ಮದರಂಗಿ ರಸ, ಅರ್ಧ ಲೋಟ ಹಾಲಿನೊಂದಿಗೆ ಕುಡಿಯುವುದರಿಂದ ರಕ್ತಸ್ರಾವ ಸರಿ ಹೋಗಿ ನೋವು ನಿಲ್ಲುತ್ತದೆ.
ತಿಂಗಳು ತಿಂಗಳು ಮುಟ್ಟಾಗದಿರುವುದು ಕೂಡಾ ಇಂದಿನ ದಿನಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಸಾಧಾರಣವಾಗಿ 25 ದಿನದಿಂದ 35 ದಿನದೊಳಗೆ ಮುಟ್ಟಾಗಬೇಕು. ಹಾರ್ಮೋನು ತೊಂದರೆಯಿಂದ ಅತಿಯಾದ ತೂಕದವರು ಥೈರಾಯ್ಡ ತೊಂದರೆ ಅಥವಾ ರಕ್ತಹೀನತೆಯಿದ್ದಾಗ ಮುಟ್ಟು ತಡವಾಗುತ್ತದೆ. ಮುಟ್ಟು ತಡವಾಗಿ ಆಗುವುದರಿಂದ ಶರೀರದ ತೂಕ ಹೆಚ್ಚುತ್ತದೆ. ಖನ್ನತೆ, ಸಿಟ್ಟು ಮೊದಲಾದ ಮಾನಸಿಕ ತೊಂದರೆಗಳೂ ಬರಬಹುದು. ಥೈರಾಯ್ಡ ತೊಂದರೆಯಿದ್ದರೆ ವೈದ್ಯರ ಸಲಹೆಗನುಸಾರವಾಗಿ ಔಷಧಿ ಸೇವಿಸಬೇಕು. ರಕ್ತಹೀನತೆಯಿಂದ ಬಳಲುವವರು ಸೊಪ್ಪು , ತರಕಾರಿ, ಖರ್ಜೂರ, ಒಣದ್ರಾಕ್ಷಿ , ಸಪೋಟ, ಬೀಟ್ರೂಟ್, ಕ್ಯಾರೆಟ್ ಸೇವಿಸಬೇಕು. ಎಳ್ಳಿನ ಷರಬತ್ತು, ಎಳ್ಳುಂಡೆ ತಿನ್ನುವುದರಿಂದ ರಕ್ತ ಹೆಚ್ಚುವುದಲ್ಲದೆ ಹಾರ್ಮೋನ್‌ನ ಏರುಪೇರು ಸರಿಯಾಗುತ್ತದೆ. ಸರಿಯಾಗಿ ಮುಟ್ಟಾಗದಿದ್ದರೆ ಒಂದು ಚಮಚ ಎಳ್ಳು , ಒಂದು ಚಮಚ ಮೆಂತೆ ಮತ್ತು 20 ಎಲೆ ಕರಿಬೇವು ಅರೆದು ವಾಲೆಬೆಲ್ಲದೊಂದಿಗೆ ಉಂಡೆಮಾಡಿ ಖಾಲಿಹೊಟ್ಟೆಯಲ್ಲಿ ಏಳು ದಿನ ಸೇವಿಸಬೇಕು. ನೋಳಿಸರ ಮತ್ತು ಹತ್ತಿಗಿಡದ ಬೇರಿನ ಕಷಾಯ ಸೇವಿಸುವುದರಿಂದಲೂ ಮುಟ್ಟಾಗುತ್ತದೆ. ಮುಟ್ಟಿನ ತೊಂದರೆಯಿಂದ ಬಳಲುವವರು ರಕ್ತಪರೀಕ್ಷೆ , ಸ್ಕ್ಯಾನಿಂಗ್ ಮುಂತಾದವುಗಳನ್ನು ಮಾಡುವುದರಿಂದ ರೋಗದ ನಿರ್ದಿಷ್ಟ ಕಾರಣ ತಿಳಿದು ಚಿಕಿತ್ಸೆಗೆ ಅನುಕೂಲವಾಗುತ್ತದೆ.
ಕೆಲವು ಸ್ತ್ರೀಯರಲ್ಲಿ ಅಧಿಕ ರಕ್ತಸ್ರಾವವಾಗುವುದು ಕೂಡಾ ಕಂಡುಬರುತ್ತದೆ. ಅಧಿಕ ರಕ್ತಸ್ರಾವವೆಂದರೆ ತಿಂಗಳಿಗೊಮ್ಮೆ ಆಗುವ ಮುಟ್ಟಿನ ದಿನದಲ್ಲಿ ಹೆಚ್ಚಾದ ರಕ್ತಸ್ರಾವವಾಗುವುದು, ಅಥವಾ ಒಂದು ಬಾರಿ ರಕ್ತಸ್ರಾವ ಶುರುವಾದರೆ 10-15 ದಿನಗಳವರೆಗೆ ಮುಂದುವರಿಯುವುದು. ಇದಕ್ಕೆ ಕಾರಣ ಗರ್ಭಾಶಯದ ಗಡ್ಡೆಗಳು, ಹಾರ್ಮೋನ್‌ನ ಏರುಪೇರು, ಅತಿಯಾದ ಖಾರ, ಉಷ್ಣದ ಆಹಾರ ಪದಾರ್ಥ. ಅತಿಯಾದ ಕೋಳಿ ಮಾಂಸ ಇತ್ಯಾದಿ. ಈ ಸ್ಥಿತಿಯಲ್ಲಿ ನಾಚಿಕೆ ಮುಳ್ಳಿನ ಕಷಾಯವು ತುಂಬಾ ಉಪಯುಕ್ತ. ಬೆಳಗ್ಗಿನ ಹೊತ್ತು ನಾಚಿಕೆ ಮುಳ್ಳನ್ನು ಬೇರು ಸಮೇತ ಕಿತ್ತು ಶುದ್ಧಗೊಳಿಸಿ ನೆರಳಲ್ಲಿ ಒಗಿಸಿಕೊಳ್ಳಬೇಕು. 10 ಗ್ರಾಂ ನಾಚಿಕೆ ಮುಳ್ಳಿನ ತುಂಡಿಗೆ 2 ಲೋಟ (300 ಮಿ.ಲೀ.) ನೀರು ಸೇರಿಸಿ 10 ನಿಮಿಷ ಕುದಿಸಿ ನಂತರ ತಣಿಯಲು ಬಿಡಬೇಕು. ತಣಿದ ಕಷಾಯವನ್ನು ಗಾಳಿಸಿ, ಹಾಲು ಅಥವಾ ಬೆಲ್ಲ ಸೇರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಈ ಕಷಾಯಕ್ಕೆ ಅತ್ತಿ ಮರದ ಕೆತ್ತೆ, ಒಂದು ಇಂಚಿನಷ್ಟು ಉದ್ದದ್ದು ಸೇರಿಸಿ ಕುದಿಸಬಹುದು. 7 ದಾಳಿಂಬ ಚಿಗುರು ಮತ್ತು 7 ಅಕ್ಕಿಕಾಳು ಅರೆದು ಪೇಸ್ಟ್ ಮಾಡಿ ದಿನಕ್ಕೆರಡು ಬಾರಿ ತಿನ್ನಬೇಕು. ನೆಲ್ಲಿಕಾಯಿ ರಸವನ್ನು 30 ಮಿ. ಲೀ. ನಷ್ಟು ಕಲ್ಲು ಸಕ್ಕರೆಯೊಂದಿಗೆ ಸೇವಿಸುವುದರಿಂದಲೂ ಅಧಿಕ ರಕ್ತಸ್ರಾವವನ್ನು ತಡೆಯಬಹುದು. ಯಾವತ್ತೂ ಮುಟ್ಟಿನ ಅಧಿಕಸ್ರಾವವನ್ನು ನಿರ್ಲಕ್ಷ್ಯ ಮಾಡಬಾರದು. ಇಲ್ಲದಿದ್ದರೆ ರಕ್ತಹೀನತೆ ಹೆಚ್ಚಿ ಬೇರೆ ಬೇರೆ ರೋಗ ಬರಬಹುದು.
ಸ್ತ್ರೀಜನನಾಂಗದ ಮೂಲಕ ನೀರಿನಂತೆ ಅಥವಾ ಸಿಂಬಳದಂತೆ ಮಾಸಿಕಸ್ರಾವ ನಡುವಿನ ಕಾಲದಲ್ಲಿ ಸ್ರಾವವಾಗುವುದು... ಎಲ್ಲ ವಯಸ್ಸಿನ ಹೆಂಗಸರನ್ನು ಕಾಡುವ ತೊಂದರೆ. ಮುಟ್ಟು ಆರಂಭವಾಗುವ ಮೊದಲಲ್ಲೂ ಮಲಬದ್ಧತೆಯ ಕಾರಣದಿಂದ ಬಿಳಿ ಅಥವಾ ಹಳದಿ ಬಣ್ಣದ ನೀರಿನಂತಹ ಸ್ರಾವ ಇರಬಹುದು. ನಂತರದ ವಯಸ್ಸಲ್ಲಿ ಜನನಾಂಗದ ಸೋಂಕು, ರಕ್ತಹೀನತೆ, ಉಪ್ಪಿನಕಾಯಿ ಮುಂತಾದ ಅತಿ ಉಷ್ಣದ ಆಹಾರ ಸೇವಿಸುವುದರಿಂದ ಮಲಬದ್ಧತೆಯಿಂದ ಬಿಳಿಮುಟ್ಟು ಅಥವಾ ಬಿಳಿ ಸೆರಗು ರೋಗ ಬರುತ್ತದೆ. ಹೆಚ್ಚಿನ ಹುಡುಗಿಯರು ಸ್ವಭಾವಸಹಜ ನಾಚಿಕೆಯಿಂದ, ಹೇಳಲೂ ಆಗದೆ ಅನುಭವಿಸಲೂ ಆಗದೆ ಒಣಗುತ್ತ ಹೋಗುತ್ತಾರೆ. ಇವರಲ್ಲಿ ಕೆಳಬೆನ್ನು ನೋವು, ಹೊಟ್ಟೆನೋವು, ಕಾಲು ಸೆಳೆತ, ಸುಸ್ತು ಕಂಡುಬರುತ್ತದೆ. ಶಾಲೆಗೆ, ಆಫೀಸಿಗೆ ಹೋಗುವವರು ಮುಟ್ಟಿನ ಬಟ್ಟೆಯನ್ನು ಆಗಾಗ ಬದಲಿಸುತ್ತಿರಬೇಕು. ಜನನಾಂಗವನ್ನು ಸ್ವತ್ಛವಾಗಿರಿಸಿಕೊಳ್ಳಬೇಕು. ಸೊಪ್ಪು , ತರಕಾರಿ, ಮಜ್ಜಿಗೆ, ಮೊಳಕೆ ಬಂದ ಹೆಸರುಕಾಳು ಸೇವಿಸುತ್ತಾ ಮಲಬದ್ಧತೆ ಕಾಡದಂತೆ ನೋಡಿಕೊಳ್ಳಬೇಕು. ಈ ರೋಗದಲ್ಲಿ ಶತಾವರಿ, ನೋಳಿಸರ, ಅಶೋಕ ಮರದ ಕೆತ್ತೆಯನ್ನು ಕಷಾಯ ಮಾಡಿ 25-30 ಮಿ.ಲೀ. ದಿನಕ್ಕೆರಡು ಬಾರಿ ಕುಡಿಯಬಹುದು. ಅತ್ತಿ ಮರದ ಕೆತ್ತೆ ಮತ್ತು ಅತ್ತಿ ಹಣ್ಣು ತಿನ್ನುವುದರಿಂದ ಹಾರ್ಮೋನುಗಳ ಏರುಪೇರು ಸರಿಯಾಗುತ್ತದೆ. ನಾಲ್ಕೈದು ನೆಲ್ಲಿಕಾಯಿಯನ್ನು ಒಂದು ಲೋಟ ಅಕ್ಕಿ ತೊಳೆದ ನೀರಿನೊಂದಿಗೆ (ಎರಡನೇ ಬಾರಿಯದ್ದು) ಸೇವಿಸಬೇಕು.
ಮುಟ್ಟು ನಿಲ್ಲುವ ಸಮಯದಲ್ಲಿ ಇನ್ನೊಂದು ರೀತಿಯ ರಗಳೆ! ಸಾಧಾರಣವಾಗಿ 40ರಿಂದ 55 ವರ್ಷದೊಳಗೆ ಮುಟ್ಟು ನಿಲ್ಲಬಹುದು. ಮುಟ್ಟು ನಿಲ್ಲುವ ಕಾಲದಲ್ಲಿ ಕೆಲವು ಸ್ತ್ರೀಯರಿಗೆ ಮಾಸಿಕ ಸ್ರಾವ ಕಡಿಮೆಯಾಗುತ್ತಾ, ಎರಡು ಮೂರು ತಿಂಗಳಿಗೊಮ್ಮೆ ಆಗುತ್ತದೆ. ಆರು ತಿಂಗಳವರೆಗೆ ಆಗದಿದ್ದರೆ ಮುಟ್ಟು ನಿಂತಿದೆ ಎಂದರ್ಥ. ಇನ್ನು ಕೆಲವರಲ್ಲಿ ಈ ಸಮಯದಲ್ಲಿ ಅಧಿಕಸ್ರಾವವಾಗುವುದೂ ಇದೆ. ತಿಂಗಳಲ್ಲಿ ಎರಡು ಬಾರಿ, 10 ದಿನಕ್ಕೊಮ್ಮೆ ರಕ್ತಸ್ರಾವವಾಗುತ್ತಿರುತ್ತದೆ. ಇದು ಕೂಡಾ "ಮೆನೋಪಾಸ್' ಲಕ್ಷಣವಾದರೂ, ಅತಿಯಾದ ರಕ್ತಸ್ರಾವದಿಂದ ರಕ್ತಹೀನತೆಯುಂಟಾಗುವುದರಿಂದ ನಿರ್ಲಕ್ಷ್ಯ ಮಾಡುವಂತಿಲ್ಲ. ಮೆನೋಪಾಸ್ ಸಮಯದಲ್ಲಿ ಹೆಂಗಸರಿಗೆ ಕೆಲವೊಮ್ಮೆ ಅತಿಯಾಗಿ ಮೈಬಿಸಿಯೇರಿ ಬೆವರುವುದು, ಒಮ್ಮೆಗೇ ಚಳಿಯಾಗುವುದು, ಕಿವಿಯಲ್ಲಿ ಬಿಸಿಗಾಳಿ, ಎದೆ ಉರಿ, ಹೊಟ್ಟೆಯುಬ್ಬರ ಮೊದಲಾದ ತೊಂದರೆಗಳೂ ಇರುತ್ತವೆ. ಸ್ವಲ್ಪ ಆಹಾರ ಸೇವಿಸಿದರೂ ಹೊಟ್ಟೆ ತೊಡೆ ಕೈಗಳಲ್ಲಿ ಕೊಬ್ಬು ಶೇಖರವಾಗುತ್ತದೆ. ಮಾನಸಿಕವಾಗಿ ಖನ್ನತೆ, ದುಃಖ, ನಿದ್ದೆಯಿಲ್ಲದಿರುವುದು ಮುಂತಾದ ತೊಂದರೆಗಳೂ ಬಾಧಿಸುತ್ತವೆ. ಜನನಾಂಗ ಮಾರ್ಗದಲ್ಲಿ ಸೋಂಕುಗಳೂ ಜಾಸ್ತಿ. ಹಾರ್ಮೋನುಗಳ ಏರುಪೇರಿನಿಂದಾಗಿ ಶರೀರದಲ್ಲಿ ಸುಣ್ಣದ ಅಂಶ ಕಡಿಮೆಯಾಗಿ ಮೊಳಕಾಲು ಗಂಟು ಸವೆತ, ಕಾಲಿನ ಹಿಮ್ಮಡಿ ನೋವು, ಬೆನ್ನುನೋವೂ ಕಾಡುತ್ತದೆ. ಒಂದು ವೀಳ್ಯದೆಲೆಗೆ ಸ್ವಲ್ಪ ಸುಣ್ಣ ಹಚ್ಚಿ ಒಂದು ತುಂಡು ಅಡಿಕೆಯೊಂದಿಗೆ ಸೇವಿಸುವುದರಿಂದ ಹಾರ್ಮೋನುಗಳು ಸರಿಯಾಗುವುದಲ್ಲದೆ, ಕ್ಯಾಲ್ಸಿಯಂ ಕೂಡಾ ಸಿಗುತ್ತದೆ. ಆದರೆ, ಹೊಗೆಸೊಪ್ಪನ್ನು ಸೇವಿಸಲೇಕೂಡದು.
ತಿಂಗಳು ನಿಲ್ಲುವ ಸಮಯದಲ್ಲಿ ಅತಿಯಾದ ಖಾರ, ಉಪ್ಪು , ಹುಳಿ ಆಹಾರ ಸಾಮಗ್ರಿಗಳು, ಕರಿದ ವಸ್ತು ಸೇವಿಸಕೂಡದು. ಚೆನ್ನಾಗಿ ನೀರು ಕುಡಿಯಬೇಕು. ಬಾರ್ಲಿ ನೀರು ಕುಡಿಯುವುದು ಒಳ್ಳೆಯದು. ರಾತ್ರಿಯ ಆಹಾರ ಲಘುವಾಗಿದ್ದು, ಬೇಗ ಸೇವಿಸಬೇಕು. ಹಸಿರುಸೊಪ್ಪು , ತರಕಾರಿ, ಹಣ್ಣು , ಮಜ್ಜಿಗೆ ಸೇವಿಸಬಹುದು. ವೈದ್ಯರ ಸಲಹೆಗನುಸಾರ ಕ್ಯಾಲ್ಸಿಯಂ ಮಾತ್ರೆ ಕುಡಿಯಬೇಕು. ಒಂದು ದೊಡ್ಡ ಚಮಚ (1 ಮಿ.ಲೀ.) ಕರಿಬೇವಿನ ರಸಕ್ಕೆ 5 ಮಿ.ಲೀ. ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ರಕ್ತಹೀನತೆ ನಿವಾರಣೆಯಾಗುವುದಲ್ಲದೆ, ಶರೀರದ ತೂಕ ಕೂಡಾ ಕಡಿಮೆಯಾಗುತ್ತದೆ. ಗಂಟುನೋವು, ಸೊಂಟನೋವಿಗೆ ಎಣ್ಣೆಸ್ನಾನ ಒಳ್ಳೆಯದು. ಮಾನಸಿಕ ತೊಂದರೆಗಳಿಗೆ ಯೋಗ ಪ್ರಾಣಾಯಾಮ ಕಲಿತು ಅಭ್ಯಾಸ ಮಾಡಬಹುದು. "ಮೆನೋಪಾಸ್'ನ್ನು ರೋಗ ಎಂದು ಪರಿಗಣಿಸದೆ ಸ್ತ್ರೀಜೀವನದ ಒಂದು ಹಂತವೆಂದು ಪರಿಗಣಿಸಬೇಕು.