Udayavani | Apr 24, 2012
ಕ್ಯಾರಟ್ ಅಂದರೇನು?
ಚಿನ್ನಕ್ಕೆ ನಾನಾ ಮುಖ. ಹಾಗೆಯೇ ನಾನಾ ವಿಧಗಳಿವೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ. ಹಾಗೆಯೇ ಹೊಳೆಯುವುದೆಲ್ಲಾ ಚಿನ್ನವಲ್ಲ. ಚಿನ್ನದ ಆಭರಣಗಳನ್ನು ಮುಂದಿಟ್ಟರೆ ಇದು ಚಿನ್ನ, ಅದು ಚಿನ್ನ ಅಲ್ಲ. ಇದು ನಕಲಿ, ಅದು ಅಸಲಿ ಅಂತ ಹೇಳ್ಳೋಕೆ ಸಾಧ್ಯವೇ ಇಲ್ಲ. ಕಣ್ಣಿಂದ ಚಿನ್ನದ ಯೋಗ್ಯತೆಯನ್ನು ಅಳೆಯಲು ಆಗುವುದೂ ಇಲ್ಲ. ಚಿನ್ನದಲ್ಲಿ ಮೇಲ್ನೋಟಕ್ಕೆ ಕಾಣುವುದು ಅಪರಂಜಿ ಹಾಗೂ ಒಡವೆ ಚಿನ್ನ ಅಂಥ ಎರಡು ವಿಧ. ಈ ಎರಡೂ ಪದರದ ಕೆಳಗೆ ನಾನಾ ವಿಧಗಳಿವೆ. ಚಿನ್ನದ ಯೋಗ್ಯತೆಗಳನ್ನು ತಿಳಿಸಲು ಕ್ಯಾರಟ್ ಎನ್ನುವ ಪದ ಬಳಸುತ್ತಾರೆ. ಚಿನ್ನದಲ್ಲಿ ಇರುವುದು 24 ಕ್ಯಾರಟ್. ಇದು 5ರಿಂದ ಶುರುವಾಗಿ 24ಕಕ್ಕೆ ಕೊನೆ ಗೊಳ್ಳುತ್ತದೆ. 24 ಕ್ಯಾರಟ್ಟೇ ಕೊನೆ. ಇದಕ್ಕಿಂತ ಹೆಚ್ಚಿನ ಕ್ಯಾರಟ್‌ಗಳು ಇಲ್ಲ. ಇದನ್ನೇ ಅಪರಂಜಿ ಎನ್ನುವುದು. ಚಿನ್ನದಲ್ಲಿ ಅತ್ಯುತ್ತಮವಾದ ಚಿನ್ನ ಇದು. ಶೇ.999ರಷ್ಟು ಚಿನ್ನದ ಅಂಶ ಇದರಲ್ಲಿರುತ್ತದೆ. ಈ ಗಟ್ಟಿಯನ್ನು ಬಳಸಿಕೊಂಡು ಚಿನ್ನದ ಒಡವೆಗಳನ್ನು ಮಾಡುತ್ತಾರೆ. ಇಷ್ಟು ಪರಿಶುದ್ಧವಾಗಿದ್ದರೂ ಇದಕ್ಕೆ ತಾಮ್ರದ ಅಂಶವನ್ನು ಸೇರಿಸದೆ ಏನೂ ಮಾಡುವಂತಿಲ್ಲ. 24 ಕ್ಯಾರಟ್ ಒಡವೆಗಳಿಗೆ ತಾಮ್ರದ ಅಂಶ ಕಡಿಮೆ ಇರುತ್ತದೆ. ಆದ್ದರಿಂದ ಬಾಳಿಕೆ ಬರುವುದು ಕಡಿಮೆ ಎನ್ನುವುದು ಚಿನ್ನದ ಕೆಲಸ ಮಾಡುವವರ ಆಂಬೋಣ.
ಗಟ್ಟಿ ಚಿನ್ನ ಯಾವುದು?
ನಿಮಗೆ ಚಿನ್ನದ ಬಗ್ಗೆ ಗೊತ್ತಿದ್ದರೆ 916 ಎನ್ನುವುದನ್ನೂ ಪದೇ, ಪದೇ ಕೇಳಿರುತ್ತೀರಿ. ಏನಿದು 916 ಅಂತೀರಾ? ಹೌದು, ಇದು ಅಂಕಿ ಸಂಖ್ಯೆಗಳ ಆಟ. 916 ಅನ್ನೋದು ಟಚ್. 1000ದರಲ್ಲಿ 916ಟಚ್ ಬಂಗಾರ, ಉಳಿದದ್ದು ತಾಮ್ರ ಅಂಥ ಇದರ ಒಳ ಅರ್ಥ. ಇದೇ ರೀತಿ 958 ಟಚ್ ಇದ್ದರೆ 23ಕ್ಯಾರಟ್ ಅಂಥ. 916= 22ಕ್ಯಾರಟ್. 875=21ಕ್ಯಾರಟ್. 750=ಟಚ್ ಇದ್ದರೆ 18 ಕ್ಯಾರಟ್ ಹೀಗೆ 9ಕ್ಯಾರಟ್‌ತನಕ ಬಂಗಾರ ಇದೆ. ಬಂಗಾರದ ಅಂಶ ಇಳಿದಂತೆ ಈ ಟಚ್ ಇಳಿಯುತ್ತಾ ಹೋಗುತ್ತದೆ. ಟಚ್ ಇಳಿದಂತೆ ಬೆಲೆಯೂ ಬೀಳುತ್ತಾ ಹೋಗುತ್ತದೆ. 8ಕ್ಯಾರಟ್ ಬಂಗಾರವನ್ನು ವಿದೇಶದಲ್ಲಿ ಹೆಚ್ಚಾಗಿ ಬಳಸುತ್ತಾರೆ ಅನ್ನೋ ಮಾತೂ ಇದೆ. ನಮ್ಮಲ್ಲಿ ಹೆಚ್ಚಾಗಿ 22ಕ್ಯಾರಟ್ (916ಟಚ್) ಬಂಗಾರವನ್ನೇ ಒಡವೆಗಳಿಗೆ ಬಳಸುವುದು. 916+ ಇರುವುದೆಲ್ಲಾ ಅಪರಂಜಿಯೇ..
ಕೆಡಿಎಂ ಅಂದರೆ ಏನು?
ಬಹುಶಃ ಚಿನ್ನ ಕೊಳ್ಳೋರ ಬಾಯಲ್ಲಿ ಈ ಕೆಡಿಎಂ ಅನ್ನೋ ಪದ ಸಾವಿರಾರು ಸಲ ನಲಿದಾಡಿರುತ್ತದೆ. ಯಾವುದೇ ಬಂಗಾರದ ಒಡವೆಗಳನ್ನು ಕೊಂಡರೂ "ಇದು ಕೆಡಿಎಂ' ಅಂತನಾದರೂ ಕೇಳುತ್ತಾರೆ. ಆದರೆ ಕೆಡಿಎಂ ಅಂದರೆ ಏನು ಅಂತ ಅವರನ್ನು ಕೇಳಿ ನೋಡಿ? ಮುಖ ಪೆಚ್ಚಾಗದೇ ಇದ್ದರೆ ಬಂಗಾರದ ಮೇಲಾಣೆ. ಹೌದು, ಕೆಡಿಎಂ ನಿಜವಾದ ಹೆಸರು ಕ್ಯಾಡ್ಮಿಯಂ ಅಂತ. ಇದೊಂದು ಲೋಹ. ಬಂಗಾರದ ಜೊತೆ ಬಹಳ ಚೆನ್ನಾಗಿ ಹೊಂದಿಕೊಳ್ಳುವ ಗುಣ ಇದಕ್ಕೆ ಇದೆ. ಇದನ್ನು ಹೆಚ್ಚಾಗಿ ಬೆಸುಗೆಗಾಗಿ ಬಳಸುತ್ತಾರೆ. 1ಗ್ರಾಂ ಬಂಗಾರಕ್ಕೆ 100ಎಂಎಲ್. ಬೆರೆಸುತ್ತಾರೆ. ಆದರೆ ಇದು ಗಾಳಿಗೆ ತೆರೆದರೆ ಮಾಯವಾಗುತ್ತದೆ. ಕ್ಯಾಡ್ಮಿಯಂ ಎನ್ನುವ ಶಾಸ್ತ್ರೀಯ ಹೆಸರು ಮಾಯವಾಗಿ ಜನರ ಬಾಯಲ್ಲಿ ಕೆಡಿಎಂ ಅನ್ನೋ ಹೆಸರು ಚಾಲ್ತಿಗೆ ಬಂದಿದೆ. 1,2,3 ಗ್ರಾಂ. ಗಟ್ಟಿ ಬಂಗಾರದಲ್ಲಿ ಕೆಡಿಎಂ ಬಳಸಿ ಒಡವೆಗಳನ್ನು ತಯಾರಿಸಲು ಸಾಧ್ಯವಿಲ್ಲ. ತಯಾರಿಸಿದರೂ ಅದು ಬಾಳಿಕೆ ಬರುವುದಿಲ್ಲವಂತೆ. ಈ ಕಾರಣಕ್ಕೆ ಕೆಡಿಎಂನಿಂದ ತಯಾರಿಸಿದ ಒಡವೆಗಳು ಹೆಚ್ಚಿನ ತೂಕದ್ದಾಗಿರಬೇಕು ಅನ್ನೋದು ಚಿನ್ನದ ಅಂಗಡಿಯವರ ವಾದ. ಕೆಡಿಎಂ ಚಿನ್ನದ ಜೊತೆ ಹೊಂದಾಣಿಕೆ ಚೆನ್ನಾಗಿರುವುದರಿಂದ ಒಡವೆಗಳ ಬಾಳಿಕೆ ಚೆನ್ನಾಗಿರುತ್ತದೆ ಎನ್ನುವುದು ನಂಬಿಕೆ. ಆದರೆ ಇತ್ತೀಚೆಗೆ " ಕೆಡಿಎಂ ಬಳಸಿದರೆ ಚರ್ಮ ರೋಗ ಬರುತ್ತದೆ' ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದು ಸತ್ಯವೋ, ಸುಳ್ಳೋ ಅನ್ನುವುದನ್ನು ಬಂಗಾರ ಮಾರುವವರು, ತಯಾರಿಸುವವರೂ ಹಾಗೂ ಬಳಸುವವರೂ ಸಂಶೋಧಿಸಿಲ್ಲ.
ಚಿನ್ನದ ಗಣಿತ ಹೇಗೆ?
ಚಿನ್ನದ ಇಂದಿನ ಬೆಲೆ 2,800 ಅಂತಿದ್ದರೂ ಒಡವೆ ಅಂಗಡಿಯೊಳಗೆ ಮಾತ್ರ ಬೇರೆ ಬೆಲೆ. ಇದು ಹಾಗಿರಲಿ, ಅಂಗಡಿಯಿಂದ ಅಂಗಡಿಗೂ ಬೆಲೆ ಬದಲಾಗುತ್ತಿರುತ್ತದೆ. ಚಿನ್ನದ ಮೂಲ ಬೆಲೆ ಮೇಲೆ ಇತರೆ ಚಾರ್ಜುಗಳು ಚಾರ್ಜು ಆಗು ರೀತಿ ನೋಡಿದರೆ ಅಬ್ಬಬ್ಟಾ...
ಅದೇನೇನೋ ಲೆಕ್ಕ ಹಾಕಿ ಗ್ರಾಂಗೆ 200-300 ಏರಿಸಿ ಬಿಡ್ತಾರೇ? ಥೂ... ಇವರ ಲೆಕ್ಕನೇ ಅರ್ಥವಾಗಲ್ಲ ಅಂತ ನೀವು ಗೊಣಗಿರಬಹುದು. ಮನೆಯಿಂದ ಹೊರಟಾಗ ಎಷ್ಟೇ ಗಣಿತ ಮಾಡಿಕೊಂಡು ಹೋದರೂ ಚಿನ್ನದ ಅಂಗಡಿಯವನ ಕ್ಯಾಲ್ಯುಕಲೇಟರ್ ಮುಂದೆ ನೀವು ಮುಗ್ಗರಿಸಿಯೇ ತೀರುತ್ತೀರಿ. ಆತ ಏನು ಲೆಕ್ಕಾ ಹಾಕಿದ, ವೆಸ್ಟೇಜು, ಕೂಲಿ ಹಾಳು ಮೂಳು...ತಲೆ ಬುಡವೇ ಗೊತ್ತುಗುವುದಿಲ್ಲ. ಒಟ್ಟಾರೆ ಬೆಲೆಯ ಶೇ.25ರಷ್ಟು ಆಚಾರಿಯ ಗಣಿತವೇ ಆಗುತ್ತದೆ.
ಒಂದು ಗ್ರಾಂ. ಚಿನ್ನದ ಬೆಲೆ 2,000 ಇದೆ ಎಂದಿಟ್ಟು ಕೊಳ್ಳಿ. ಇದು ಮೂಲ ಬೆಲೆ. ನೀವು 5 ಗ್ರಾಂ. ಒಡವೆ ಖರೀದಿಸಿದರೆ- ಒಟ್ಟು ಮೊತ್ತ 10ಸಾವಿರ. ಇದರಲ್ಲಿ ಶೇ. 10ರಿಂದ 20ರಷ್ಟು ಮೊತ್ತ ಹೆಚ್ಚುತ್ತದೆ. ಇದರಲ್ಲಿ ವೇಸ್ಟೇಜ್, ಮೇಕಿಂಗ್ ಚಾರ್ಜ್, ಶೇ.2ರಷ್ಟು ತೆರಿಗೆ (ಈಗ ಗ್ರಾಂಗೆ 52ರೂ. ಇದೆ) ಒಂದು ಪಕ್ಷ ನೀವು ಹಣ ಪಾವತಿಗೆ ಕಾರ್ಡ್ ಬಳಸಿದರೆ ಶೇ.2ರಷ್ಟು ಸರ್ ಚಾರ್ಜ್. ಇವೆಲ್ಲ ಸೇರಿ ನಿಮ್ಮ ಒಡವೆಯ ಒಟ್ಟು ಮೊತ್ತ ಆಗುವುದು. ಮೂಲ ಮೊತ್ತಕ್ಕೂ ಒಡವೆಯ ಒಟ್ಟು ಮೊತ್ತಕ್ಕೂ ಗ್ರಾಂಗೆ 100,150ರೂ. ಹೆಚ್ಚಾಗುತ್ತದೆ. ಅಂಗಡಿ ದೊಡ್ಡದಾಗುತ್ತಾ ಹೋದಂತೆ ಹೆಚ್ಚುವರಿ ಮೊತ್ತಗಳೂ ಏರುತ್ತಾ ಹೋಗುತ್ತವೆ.
ಕೆಲವರು ಮೇಕಿಂಗ್ ಚಾರ್ಜ್ ಹಾಕಲ್ಲ, ವೇಸ್ಟೇಜ್ ತೆಗೆಯಲ್ಲ ಅಂತೆಲ್ಲಾ ಗ್ರಾಹಕರ ಕಿವಿಗೆ ಹೂ.. ಇಟ್ಟು ಕರೆತರುತ್ತಾರೆ. ಇನ್ನೂ ಕೆಲವರು ಮಾರುಕಟ್ಟೆಯಲ್ಲಿ ಒಂದು ಗ್ರಾಂ. ಚಿನ್ನಕ್ಕೆ 2,800ರೂ. ಇದ್ದರೂ, ನಮ್ಮಲ್ಲಿ 2,500ಎಂದು ಜಾಹೀರಾತು ಕೊಡುತ್ತಾರೆ.
ಹೌದು, ಇದೂ ಕೂಡ ಕಿವಿ ಮೇಲೆ ಫ್ಲವರ್. ಏಕೆಂದರೆ ಇಲ್ಲಿ ಮೂಲ ಬೆಲೆ ಕಡಿಮೆ ಮಾಡಿ, ತೆರಿಗೆ, ಮೇಕಿಂಗ್ ಚಾರ್ಜು ಇತ್ಯಾದಿಗಳನ್ನು ಶೇ. 30-40ರಷ್ಟಕ್ಕೆ ಏರಿಸುತ್ತಾರೆ. ಮೇಲ್ನೋಟಕ್ಕೆ ಒಂದು ಗ್ರಾಂ.ಗೆ 300ರೂ. ಕಡಿಮೆ ಆದರೂ ಏರಿಕೆಯ ಮೊತ್ತದಲ್ಲಿ ಆ ಹಣವನ್ನು ವಾಪಸ್ಸು ಪಡೆಯುತ್ತಾರೆ. ಕಾನೂನು ಪ್ರಕಾರ ಶೇ. 2ರಷ್ಟು ತೆರಿಗೆ ಹಾಕಬೇಕು. ಇದರ ಮೊತ್ತ ಶೇ.4-5 ದಾಟುತ್ತದೆ.
ಮೇಕಿಂಗ್ ಚಾರ್ಜು ಕೂಡ ಡಿಫರೆಂಟ್. ಒಡವೆಯ ಮೇಲೆ ಕುಸುರಿ ಕೆಲಸ ಹೆಚ್ಚಾದಷ್ಟು ಮೇಕಿಂಗ್ ಚಾರ್ಜು ಏರುತ್ತಿರುತ್ತದೆ. ಆ್ಯಂಟಿಕ್ ಪೀಸ್, ನಕಾಸಿ ಹಾಗೂ ಪಿಳಿಗಿರಿ ಹೀಗೆ ನಾನಾ ವಿಧಗಳಿವೆ ಕುಸುರಿ ಕೆಲಸದಲ್ಲಿ. ಸಣ್ಣ, ಪುಟ್ಟ ಆಚಾರಿಗಳ ಹತ್ತಿರ ಇದರ ಹೊರೆ ಗೊತ್ತಾಗುವುದಿಲ್ಲ. ಆದರೆ ಶೋ ರೂಂಗಳಲ್ಲಿ ಮೇಕಿಂಗ್ ಚಾಜೇì ಶೇ. 5ರಿಂದ 20ರಷ್ಟಾಗುವ ಸಾಧ್ಯತೆಗಳಿರುತ್ತದೆ. ಒಡವೆಗಳ ತೂಕ ಇಳಿದಷ್ಟು ಕೂಲಿ ಹೆಚ್ಚುತ್ತದೆ. ಬಹುತೇಕರು ಒಡವೆ ಚಿನ್ನ ಗ್ರಾಂ.ಗೆ 20ರೂನಿಂದ. 50ರೂ. ತನಕ ಲಾಭ ಇಟ್ಟಿರುತ್ತಾರೆ. ಸಣ್ಣ ಪುಟ್ಟ ಅಂಗಡಿಯವರಾದರೆ ಇದರಲ್ಲೇ ಅಂಗಡಿ ಬಾಡಿಗೆ, ಕೂಲಿ ಎಲ್ಲವೂ ಸೇರಿರುತ್ತದೆ.
ಕೋಳ್ಳೋ ಮೊದಲು ಕೇಳ್ಳೋ ಬಂಗಾರ
ಬಂಗಾರದ ಗುಣವನ್ನು ಕಣ್ಣಿನಿಂದ ಅಳೆಯಲು ಸಾಧ್ಯವಿಲ್ಲ. ಅದಕ್ಕೆ ಪರಿಚಿತ ಅಂಗಡಿಯನ್ನೇ ಆಯ್ಕೆ ಮಾಡಿಕೊಳ್ಳಿ.
ಬಂಗಾರದ ಬೆಲೆ ಕಡಿಮೆ ಎಂದು ಟೋಪಿ ಬೀಳದಿರಿ. ಬೆಲೆ ಕಡಿಮೆ ಇದೆ ಎಂದರೆ ಗುಣಮಟ್ಟವನ್ನು ಪರೀಕ್ಷಿಸುವುದು ಮರೆಯದಿರಿ.
ಬಂಗಾರ ಕೊಂಡಾಗ ಗುಣಮಟ್ಟ ಖಾತ್ರಿಗೆ ,999, 916, ಹಾಲ್‌ಮಾರ್ಕ್/ ಸೀಲು ಇದೆಯಾ ಪರೀಕ್ಷಿಸಿ.
ವ್ಯಾಟ್ ಶೇ. 2ರಷ್ಟು ಕೆಲವರು 6-7ರಷ್ಟು ಹಾಕುತ್ತಾರೆ ಎಚ್ಚರ.
ತೆರಿಗೆ ತಪ್ಪಿಸಿ ಕೊಳ್ಳಲು ಹೋದರೆ ಕಡಿಮೆ ದರ್ಜೆ ಬೆಂಗಾರ ಕೊಳ್ಳಬೇಕಾಗುತ್ತದೆ.
ಹಣ ಪಾವತಿಸಲು ಡೆಬಿಟ್, ಕ್ರೆಡಿಟ್‌ಕಾರ್ಡ್‌ಗಳ ಬಳಕೆ ಕಡಿಮೆ ಮಾಡಿ ಶೇ.2ರಷ್ಟು ಹಣ ಉಳಿಸಿ.
ಅಂಗಡಿಗೆ ಹೋಗುವ ಮೊದಲು ಬಂಗಾರ ಬೆಲೆ ಎಷ್ಟಿದೆ ಎಂದು ತಿಳಿದಿರಿ.
ವ್ಯವಹಾರ ಮುಗಿದಾಗ ರಸೀತಿಯನ್ನು ಪಡೆಯಲು ಮರೆಯದಿರಿ.
ಹಾಲ್‌ಮಾರ್ಕ್
ಸರ್ಕಾರ ಚಿನ್ನವನ್ನು ಪ್ರಾಮಾಣಿಕರಿಸಲು ರೂಪಿಸಿರುವ ಸಂಸ್ಥೆ ಹಾಲ್ ಮಾರ್ಕ್. ಇದರ ಮುದ್ರೆ ಇದ್ದರೆ ಅದು ಶುದ್ಧ ಚಿನ್ನ. ಹಾಲ್‌ಮಾರ್ಕ್ ಎಲ್ಲ ರೀತಿಯ ಒಡವೆಗಳಿಗೂ ಮುದ್ರೆ ಒತ್ತುತ್ತದೆ. ನಮಗೆ ಎಂಥ ಚಿನ್ನ ಬೇಕು ಅನ್ನುವುದನ್ನು ಮೊದಲೆ ತೀರ್ಮಾನಿಸಬೇಕು ಅಷ್ಟೆ. ಒಂದು ವಿಷಯ ಗೊತ್ತಿರಲಿ. ಸಣ್ಣ ಪುಟ್ಟ ಅಂಗಡಿಗಳಲ್ಲಿ ಒಡವೆಗಳಿಗೆ ಹಾಲ್ ಮಾರ್ಕ್ ಮುದ್ರೆ ಇರುವುದಿಲ್ಲ. ಕಾರಣ ಇಷ್ಟೇ. ಹಾಲ್‌ಮಾರ್ಕ್ ಮುದ್ರೆ ಒತ್ತಿಸಿಕೊಳ್ಳಲು ಮೊದಲು ಸಂಸ್ಥೆಗೆ ನೋಂದಣಿ ಮಾಡಿಸಬೇಕು. ಅದಕ್ಕೆ ಇಂತಿಷ್ಟು ಅಂತ ವಂತಿಗೆ ಕಟ್ಟಬೇಕು. ಆನಂತರ ಗ್ರಾಂಗೆ ಇಷ್ಟು ಅಂಥ ಹಣ ಕಟ್ಟಿದರೆ- ಸಂಸ್ಥೆ ಚಿನ್ನವನ್ನು ಪರಿಶೀಲಿಸಿ ಹಾಲ್‌ಮಾರ್ಕ್ ಸೀಲುಗಳನ್ನು ಹಾಕಿ ಕೊಡುತ್ತದೆ. ಇದಕ್ಕಾಗಿ ಸಣ್ಣಪುಟ್ಟ ಚಿನ್ನದ ಅಂಗಡಿಯವರು ಈ ರಗಳೆ ಬೇಡ ಎಂದು ಹಾಲ್ ಮಾರ್ಕ್ ಸೀಲುಗಳನ್ನು ಹಾಕಿಸುವುದಿಲ್ಲ. ಸೀಲು ಬೇಕೇ, ಬೇಕೆಂದರೆ ಹೆಚ್ಚಿನ ಹಣ ಪಡೆದು ಹಾಕಿಸಿ ಕೊಡುವ ಸಂಪ್ರದಾಯವೂ ಇದೆ.
ಬೆಲೆ ಏರಿಳಿತ ಕಾರಣ
ಕೆಲವೊಂದು ಸಾರಿ ಚಿನ್ನದ ಬೆಲೆಯಲ್ಲೂ ಏರಿಳಿತವಾಗುತ್ತಿರುತ್ತದೆ. ಪ್ರಮುಖವಾಗಿ ಮುಂಬೈ, ಹೈದರಾಬಾದ್, ಚೆನ್ನೈ, ಬೆಂಗಳೂರು ಚಿನ್ನದ ಪ್ರಮುಖ ಮಾರುಕಟ್ಟೆಗಳು. ಆದರೆ ಬೆಂಗಳೂರನ್ನು ನಿಯಂತ್ರಿಸುವುದು ಯಾವುದು? ಗೊತ್ತಿಲ್ಲ. ಒಟ್ಟಾರೆ ಪ್ರತಿಯೊಂದು ನಗರದ ಚಿನ್ನದ ಬೆಲೆಗೂ 50-100 ವ್ಯತ್ಯಾಸವಿರುತ್ತದೆ. ಬೆಳಗ್ಗೆ 12.30ರಿಂದ ಸಂಜೆ 8ರತನಕ ಪ್ರತೀ ನಿಮಿಷದಲ್ಲೂ ಬೆಲೆಗಳೂ ಏರಿಳಿತ ಕಾಣುತ್ತಿರುತ್ತದೆ. ಆರ್ಡರ್ ತೆಗೆದುಕೊಂಡ ನಂತರ ಏರಿದರೆ ಲಾಸ್ ಆಗುತ್ತದೆ. ಇದನ್ನು
ಮುಚ್ಚಿಕೊಳ್ಳಲು ಚಿನ್ನದ ಮೇಲಿನ ಇತರೆ ಬೆಲೆ ಏರಿಸುತ್ತಾರೆ. ಆಗಲೇ ಮೂಲ ಬೆಲೆ ಒಂದೊಂದು ಕಡೆ ಒಂದೊಂದು ರೀತಿಯಾಗುವುದು.