Wednesday, May 22, 2013
Last Updated: 2:25:30 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ರತಿಕ್ರಿಯೆ
    • ಶಾಸ್ತ್ರೀಯತೆ: ಹೆಸರು ಮತ್ತು ಶಬ್ದಗಳು ಅಮುಖ್ಯ
      • Udayavani | Apr 27, 2012

        ಯಕ್ಷಗಾನದ ಶಾಸ್ತ್ರೀಯತೆ ಮತ್ತು ಅದರ ಹೆಸರಿನ ಬಗೆಗೆ ಲಲಿತರಂಗದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಡಾ| ಎಂ. ಪ್ರಭಾಕರ ಜೋಶಿ  ಮುಂದುವರಿಸಿದ್ದಾರೆ.

        ಯಕ್ಷಗಾನ (ತೆಂಕಮಟ್ಟು, ಬಡಗಮಟ್ಟು)ದ "ಶಾಸ್ತ್ರೀಯತೆ' ಕುರಿತ ವಿಚಾರದಲ್ಲಿ ಯಕ್ಷಗಾನ ಶಬ್ದದ ಮೂಲ ಮತ್ತು ಪ್ರಾಚೀನತೆ ಮಧ್ಯೆ ಬಂದಿರುವುದು ಗೊಂದಲಕ್ಕೆ ಕಾರಣ.

        ಶಬ್ದ, ಹೆಸರು ಯಾವುದಿದ್ದರೂ ಶಾಸ್ತ್ರೀಯತೆಗೆ ಬಾಧಕವಲ್ಲ. "ಭರತನಾಟ್ಯಂ' ಎಂದು ನಾವು ಈಗ ಹೇಳುವುದು ಒಂದು ಕಲಾಪ್ರಕಾರವನ್ನು. ಅದು ಮೂಲತಃ ಸದಿರ್‌, ದೇವದಾಸಿ ನಾಟ್ಯ, ದಾಸಿ ಆಟ, ಪರತ್ತೈ ನಾಟ್ಯಂ - ಮೊದಲಾದ ಹೆಸರುಗಳಿದ್ದ ದೇವಾಲಯ ನೃತ್ಯ ಸೇವಾಪ್ರಕಾರವಾಗಿದ್ದುದು. 1930ರ ದಶಕದಲ್ಲಿ ಅದಕ್ಕೆ "ಭರತನಾಟ್ಯಂ' ಎಂಬ "ಗಂಭೀರ' ಹೆಸರಿಟ್ಟರು. (ಭರತನ ನಾಟ್ಯ ಶಾಸ್ತ್ರ 2,000 ವರ್ಷ ಹಳತು. ಆ ವಿಚಾರ ಬೇರೆ.)

        ಈಗ ಒಂದು ವೇಳೆ- ಆ ನೃತ್ಯವಿಧಾನಕ್ಕೆ "ಸದಿರ್‌' ಎಂಬ ಹೆಸರೇ ಇದ್ದಿದ್ದರೂ ಅದು ಶಾಸ್ತ್ರೀಯವೇ ತಾನೆ? "ನಟ್ಟುವ ಮೇಳ'ವಾಗಿದ್ದ "ಕೂಚುಪುಡಿ' -ಯಾವ ಹೆಸರಿಟ್ಟರೂ ಶಾಸ್ತ್ರೀಯತೆಗೆ ಬಾಧಕವಲ್ಲ. ಹೆಸರು ಮುಖ್ಯವೆ ಆದರೂ ಅದರಿಂದ ಶಾಸ್ತ್ರೀಯತೆ ಕುರಿತ ವಿವೇಚನೆ ದಿಕ್ಕು ತಪ್ಪಬಾರದು. ಕಲೆಗಳು ಕಾಲಾಂತರದಲ್ಲಿ ನಾಮಾಂತರಗೊಳ್ಳುವುದೂ, ರೂಪ ವಿಸ್ತಾರ-ಸಂಕೋಚ ಹೊಂದಿ ಶಬ್ದ ಭೇದ ಬರುವುದೂ ವಿಶ್ವಸಾಮಾನ್ಯ.

        ಶಾಸ್ತ್ರೀಯವೆಂದ ಕೂಡಲೇ ಎಲ್ಲವೂ ಎಲ್ಲ ಕಲೆಗಳಲ್ಲಿ ಇರಬೇಕಿಲ್ಲ. ಶಾಸ್ತ್ರೋಕ್ತವೆಲ್ಲ ಶಾಸ್ತ್ರೀಯವಾಗಿರಬೇಕಾಗಿಯೂ ಇಲ್ಲ. ಶಾಸ್ತ್ರೀಯ ಕಲಾ ಸ್ಥಾನಮಾನದ ಎಲ್ಲ ಅರ್ಹತೆಗಳು ಯಕ್ಷಗಾನ (ಆಟ, ದಶಾವತಾರ, ಬಯಲಾಟ)ಕ್ಕೆ ಇವೆ. ಅವನ್ನು ರಕ್ಷಿಸಿ, ವರ್ಧಿಸಿ, ಪುಷ್ಟಿಗೊಳಿಸುವುದು ಸಂಬಂಧಪಟ್ಟ ಎಲ್ಲರ ಹೊಣೆ.


        ದೇವಿ ಮಹಾತ್ಮೆ  ಆಟಗಳು: ಪರಿಷ್ಕಾರ ಅಗತ್ಯ

        ಯಕ್ಷಗಾನ ರಂಗದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದು ದೇವೀ ಮಹಾತ್ಮೆ  (ಮಹಾತ್ಮೆ) ಎಂಬುದು. ಅದರ ಪುರಾತನ ರೂಪ ಮತ್ತು ಆಶಯದ ಕುರಿತು ಚರ್ಚೆಯು ಜಾಗೃತಿಯ ಸಂಕೇತ. ಈ  ಕುರಿತು ಜರಗಿದ ಪರಿಷ್ಕರಣ ಕಮ್ಮಟವೂ ಇತರ ವಿವೇಚನೆಗಳೂ ಮುನ್ನಡೆಯ ಹೆಜ್ಜೆಗಳು. ಕೆ. ಸದಾಶಿವ ಅವರ ಬರೆದ ವಿಮರ್ಶೆ (ಲಲಿತರಂಗ, 9-3-2012)ಯು ವೈಭವೀಕರಣ ಮತ್ತು ಅದರ ಯಥಾಸ್ಥಿತಿವಾದಿ ಸಮರ್ಥನೆಗಳ ಕುರಿತು ಅತ್ಯುತ್ತಮ ಮಟ್ಟದ ವಿಶ್ಲೇಷಣೆ, ಅದು ಅನಿರಾಕರಣೀಯ.

        ದೇವಿ ಮಹಾತ್ಮೆ  ವಸ್ತು ಮತ್ತು ಆಶಯವು ಬಹು ಆಯಾಮಗಳುಳ್ಳದ್ದು. ಕಿಲ್ಬಿಶದಿಂದ ರಾಕ್ಷಸ ಜನನ, ವಟಪತ್ರ, ಹಿರಣ್ಯಗರ್ಭ, ಅಧೋಕ್ಷಜ ಕಲ್ಪನೆಗಳು, ಮಹಿಷ ವಿಚಾರ ವಿಸ್ತಾರ, ಶಕ್ತಿ ಉದ್ಭವ, ಶುಂಭ, ರಕ್ತಬೀಜಗಳೂ, ಶಕ್ತಿ ಉದ್ಭವ, ಆಯುಧ ಪ್ರದಾನ, ಸಬಲೀಕರಣ ಮೊದಲಾದವು ಅಸಾಧಾರಣ ಗಂಭೀರ. ಆದರೆ ಇವೆಲ್ಲ ಈಗಣ ಪ್ರದರ್ಶನ ರೂಪದಲ್ಲಿ ಮರೆಯಾಗಿ, ಆಟವು ಬರೇ ಆಚರಣೆ ಆಗುವುದೂ ಕಲೇತರ ಗೌಜಿಗಳು ಮೆರೆಯುವುದೂ ಖೇದಕರ.

        ದುರುಸು, ಕದಿನ, ಗರ್ನಾಲುಗಳ "ನಿತ್ಯ ಶಿಕ್ಷೆ' ಕಲೆಗೂ ಕಲಾವಿದರಿಗೂ ಮಾರಕ, ಶಾಶ್ವತ ವೈಕಲ್ಯಕಾರಣ. ಅದನ್ನು ಧಾರ್ಮಿಕತಾ ಕಾರಣದಿಂದ ಸಮರ್ಥಿಸುವುದು ಅಮಾನವೀಯವೆನ್ನದೆ ವಿಧಿಯಿಲ್ಲ.

        ದೇವೀ ಮಹಾತ್ಮೆ  ಆಟಗಳ ಸುತ್ತ ಬೆಳೆದಿರುವ ಗದ್ದಲಗಳನ್ನು ನಿವಾರಿಸಿದರೆ ಅದರ ಉತ್ತಮ ಪ್ರದರ್ಶನ ಸಾಧ್ಯ. ಈ ಕುರಿತು ನಡೆಯುವ ಯತ್ನಗಳಿಗೆ ಕಲೇತರ ಮತ್ತು ವ್ಯಕ್ತಿ ವೈಭವೀಕರಣ, ಪ್ರಕಾರಾಂತರ ಸಮರ್ಥನೆಗಳು ತಡೆಯಾಗದಿರಲಿ.


        ಏಕವ್ಯಕ್ತಿ ತಾಳಮದ್ದಳೆ: ಉತ್ತರಕ್ಕೆ ಪ್ರತ್ಯುತ್ತರ

        * ತಾಳಮದ್ದಳೆಯೆಂಬ ಕಲಾಪ್ರಕಾರವನ್ನು "ಏಕವ್ಯಕ್ತಿ'ಗೆ

        ಸೀಮಿತಗೊಳಿಸಿದ ಪ್ರಯೋಗದ ಸಾಧುತ್ವವನ್ನು ನಾನು ಆಕ್ಷೇಪಿಸಿದ್ದು. ನನ್ನ ಲಕ್ಷ éವನ್ನು ಗಮನಿಸದೆ ನೀವು ಉತ್ತರಿಸಿದ್ದೀರಿ. ಇಲ್ಲಿ ಕಲಾವಿದರು ತಮ್ಮ ಪಾತ್ರಗಳನ್ನು ಹೇಗೆ ಪ್ರಸ್ತುತಪಡಿಸಿದ್ದಾರೆ ಎನ್ನುವುದು ನನ್ನ ಪ್ರಶ್ನೆಯಲ್ಲ. ಆದ್ದರಿಂದ ಕಾರ್ಯಕ್ರಮವನ್ನು ಪ್ರತ್ಯಕ್ಷ ನೋಡಬೇಕಾದ ಅನಿವಾರ್ಯತೆ ಇಲ್ಲ.

        * ನನ್ನ ಮೊದಲಿನ ಪ್ರತಿಕ್ರಿಯೆ ವಿಷಯಾಧಾರಿತ.

        ತಾಳಮದ್ದಳೆಯ ಸ್ವರೂಪ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ತೋರಿಸುವ ಕಾಳಜಿ ಮಾತ್ರ.

        * ಹಿಮ್ಮೇಳ-ಮುಮ್ಮೇಳಗಳಿಗೆ ಪ್ರಾಧಾನ್ಯ ಇರುವ

        ತಾಳಮದ್ದಳೆಯಲ್ಲಿ "ಏಕವ್ಯಕ್ತಿ' ಎನ್ನುವ ನಿಷ್ಠೆ ಸಲ್ಲದು.

        * ಅರ್ಥಗಾರಿಕೆಯಲ್ಲಿ "ಸ್ವಗತ' ಎನ್ನುವ ಕಾರ್ಯಕ್ರಮವನ್ನು

        ನೀಡಿ ಅದನ್ನೇ ತಾಳಮದ್ದಳೆಯ ಹೆಸರಿಗೆ ಅಂಟಿಸಿದ್ದೀರಿ. ಬದಲಾವಣೆ ಸಹಜ. ಆದರೆ ಅದು ರಚನಾತ್ಮಕವಾಗಿರಬೇಕು.

        * ಹೊಸ ರುಚಿ ಬೇಕೆನ್ನುವವರು ವ್ಯಂಜನವನ್ನು ಬದಲಾಯಿಸಬೇಕೇ ಹೊರತು ಅನ್ನವನ್ನಲ್ಲ.

        * ಕಾವ್ಯನಾಮದಿಂದ ಬರೆಯುವುದು ತಪ್ಪಲ್ಲ, ರೂಢಿಯಲ್ಲಿದೆ.

        * "ಏನೂ ತಿಳಿಯದ', "ಬಾಲಿಶ', "ಪೂರ್ವಾಪರ ಎಚ್ಚರ'
        ಇತ್ಯಾದಿ ಪದ ಬಳಕೆಯಿಂದ "ಸ್ವಯಂ ಸರ್ವಜ್ಞ'ರಾಗುವುದು ಬೇಡ.

        * ಕಾರ್ಯಕ್ರಮದ ಚಿತ್ರೀಕರಣದ ಸಿ.ಡಿ.ಯನ್ನು ಕೇಳಿದರೆ
        ಕೊಡುವ ಸೌಜನ್ಯವನ್ನು ಪ್ರಕಟಿಸಿದ್ದೀರಿ -ಧನ್ಯವಾದಗಳು.

        * ಸಲಹೆಯನ್ನು ಸ್ವೀಕರಿಸುವ ಸಹೃದಯತೆ ನಿಮ್ಮಲ್ಲಿದೆ
        ಎನ್ನುವ ಗೌರವದೊಂದಿಗೆ ಈ ಪತ್ರ ವ್ಯವಹಾರಕ್ಕೆ ಮುಕ್ತಾಯ.

        ಏಕವ್ಯಕ್ತಿ ತಾಳಮದ್ದಳೆ ಕುರಿತ ಚರ್ಚೆಯನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ. - ಸಂ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus