ಇತ್ತೀಚೆಗೆ ಕಾಸರಗೋಡಿನ ಲಲಿತಕಲಾ ಸದನದಲ್ಲಿ ನಡೆದ ಯುವ ಪ್ರತಿಭಾವಂತ ಗಾಯಕ ರಾಮಕೃಷ್ಣನ್‌ಮೂರ್ತಿ ಅವರ ಕರ್ನಾಟಕ ಸಂಗೀತ ಕಛೇರಿ ಎಲ್ಲ ವರ್ಗದ ಶ್ರೋತೃಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಕಾಸರಗೋಡಿನ ಗೋಪಾಲಕೃಷ್ಣ ಸಂಗೀತ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಟ ರಾಗದ ಜಯ ಜಯಾ ರಚನೆಯೊಂದಿಗೆ ಕಛೇರಿ ಆರಂಭಿಸಿದ ರಾಮಕೃಷ್ಣನ್ ಮೂರ್ತಿ ಮುಂದಿನ ಬೇಗಡೆಯಲ್ಲಿ ಲವಲವಿಕೆಯ ವಾತಾವರಣವನ್ನು ತುಂಬಿದರು. ರೀತಿಗೌಳದ ನನ್ನು ವಿಡಚಿ ಮತ್ತು ಕಲ್ಯಾಣಿಯ ವಿಳಂಬ ಕಾಲದ ಕೃತಿ ನಿನ್ನುವಿನಾ ಅತ್ಯಂತ ಸೊಗಸಾಗಿ ಮೂಡಿಬಂದವು. ಕಛೇರಿಯ ಪ್ರಧಾನ ರಾಗ ಅಭೇರಿ ಎರಡು ಸ್ಥಾಯಿಗಳಲ್ಲೂ ಎಲ್ಲ ಸಂಚಾರ ಸಾಧ್ಯತೆಗಳನ್ನು ಬಳಸಿಕೊಂಡು ವಿಸ್ತರಿಸಲ್ಪಟ್ಟಿತು. ಭಜರೇ ಮಾನಸ ಕೃತಿಯಲ್ಲಿ ಸುದೀರ್ಘವಾದ ನೆರವಲ್ ಮತ್ತು ತುಸು ಭಿನ್ನವಾಗಿ ತಿಶ್ರನಡೆಯಲ್ಲಿ ಸಾಗಿದ ಸ್ವರಪ್ರಸ್ತಾರ ರಸಿಕರ ಕರತಾಡನಕ್ಕೆ ಪಾತ್ರವಾಯಿತು. ಮುಂದೆ ಯಮನ್ ರಾಗದ ಶ್ರೀರಾಮಚಂದ್ರ, ಸಿಂಧುಭೈರವಿಯ ತಮಿಳು ಹಾಡು, ಕಂಡು ಧನ್ಯನಾದೆನೋ (ಬೆಹಾಗ್) ದೇವರನಾಮದೊಂದಿಗೆ ಕಛೇರಿ ಮುಕ್ತಾಯಗೊಂಡಿತು.
ಪಿಟೀಲಿನಲ್ಲಿ ಎನ್. ಸಂಪತ್ ಉತ್ತಮ ಅನುಸರಣೆಯಿಂದ ಗಮನಸೆಳೆದರು. ಪಾಲಕ್ಕಾಡ್ ಮಹೇಶ್ ಕುಮಾರ್ (ಮೃದಂಗ), ಆರ್. ಕೃಷ್ಣಕುಮಾರ್ (ಘಟ) ಮೋರ್ಸಿಂಗ್‌ನಲ್ಲಿ ಉನ್ನತ ಮಟ್ಟದ ಸಹಕಾರ ನೀಡಿ ಕಛೇರಿಯ ಯಶಸ್ಸಿನಲ್ಲಿ ಪಾಲುದಾರರಾದರು.
ಪ್ರಧಾನ ಕಛೇರಿಗೆ ಮೊದಲು ಸಂಗೀತ ಶಾಲೆಯ ವಿದಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕಿ ಉಷಾ ಈಶ್ವರ ಭಟ್, ಜಯಲಕ್ಷ್ಮೀ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ರಂಜನೀಯವಾಗಿತ್ತು.