ಯಕ್ಷಗಾನದ ಆಡುಂಬೊಲ ಎಂದು ಕರೆಯಲ್ಪಡುವ ಕುಂದಾಪುರದ ಪರಿಸರದಲ್ಲಿರುವ ಬಸೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಈಗಾಗಲೇ ಆರಂಭವಾಗಿರುವ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅದರ ಅಂತಿಮ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಮಾರ್ಚ್ 22, 2012 ರಂದು ಅನಾವರಣಗೊಂಡಿತು. ಸುಮಾರು 20 ಗಂಟೆಗಳಷ್ಟು ತರಗತಿ ಗಳ ಪಠ್ಯ ಒಳಗೊಂಡಿರುವ ಈ ಕೋರ್ಸಿನಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆ ಹಾಗೂ ರಂಗ ನಿರ್ವಹಣೆಯ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕನ್ನಡ ವಿಭಾಗದ ಮುಖ್ಯಸ್ಥರೂ ಹಾಗೂ ಈ ಕೋರ್ಸಿನ ನಿರ್ವಾಹಕರೂ ಆಗಿ ರುವ ಡಾ| ಶ್ರೀಧರ ಉಪ್ಪೂರರು ಮತ್ತು ನರಸಿಂಹ ತುಂಗ, ಕಲಾಪೀಠ, ಕೋಟ ಇವರು ಈ ಪಠ್ಯಕ್ರಮ ರಚಿಸಿ, ತರಬೇತಿ ನೀಡಿ, ಉಡುಪಿ ಯಕ್ಷಗಾನ ಕೇಂದ್ರದ ತರಬೇತಾದ ಕಲಾವಿದರಿಂದ ಪ್ರಾತ್ಯಕ್ಷಿಕೆ ನಡೆಸಿ, ತಿದ್ದಿ ರೂಪುಗೊಳಿಸಲಾಗಿದೆ. ಕಾಲೇಜು ಶಿಕ್ಷಣದ ಸೆಮಿಸ್ಟರ್ ಪದ್ಧತಿಯ ಶೈಕ್ಷಣಿಕ ಒತ್ತಡಗಳ ನಡುವೆಯೂ ಇಂತಹ ಸಾಧನೆ ಸ್ತುತ್ಯರ್ಹವಾಗಿದೆ.
ಯಕ್ಷಗಾನದ ವಿವಿಧ ಅಂಗಗಳನ್ನು ಅಕೆಡೆಮಿಕ್ ವರ್ತುಲಕ್ಕೆ ತಂದು ಅದನ್ನು ಒಂದು ಕೋರ್ಸ್ ಅಂತ ನಿಗದಿಪಡಿಸಿ ದಾಗ ಸಹಜವಾಗಿ ಪರಿಣತ ಕ್ಷೇತ್ರಕ್ಕೆ (Specialisation) ಪ್ರಾಮುಖ್ಯ ನೀಡಬೇಕಾಗುತ್ತದೆ. ಯಕ್ಷಗಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ನೃತ್ಯ ಹಾಗೂ ರಂಗ ನಿರ್ವಹಣೆಯಲ್ಲಿ ಕರಗತಗೊಳಿಸಿ ಹಾಗೂ ಅವರ ಪರಿಣತಿಗೆ ತಕ್ಕ ಹಾಗೆ ಪ್ರಸಂಗ ರೂಪಿಸು ವುದು ಹಾಗೂ ನಿರ್ವಹಣಾ ತರಬೇತಿ ನೀಡುವುದು ನಡೆದುಬಂದಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಸಮಾರೋಪ ಕಾರ್ಯಕ್ರಮ ಕಾಲೇಜು ವಾರ್ಷಿಕೋತ್ಸವದೊಂದಿಗೆ ಆಚರಿಸಲಾಯಿತು. "ರುಕಾವತಿ ಕಲ್ಯಾಣ' ದಂತಹ ಹಳೆ ಪ್ರಸಂಗದ ಮಧ್ಯೆ ಇರುವ "ಮೈಂದ- ದ್ವಿವಿದರ ಕಾಳಗ' ಪ್ರಸಂಗವನ್ನು ಪ್ರದರ್ಶನಕ್ಕೆ ಆರಿಸಲಾಯಿತು. ಇಲ್ಲಿ ತರಬೇತಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ನಿರ್ವಹಣೆಯನ್ನು ಪ್ರದರ್ಶಿಸುವ ಎಲ್ಲಾ ಅವಕಾಶಗಳಿವೆ ಎಂದೇ ಈ ಪ್ರಸಂಗವನ್ನು ಆರಿಸಲಾಗಿತ್ತು. ""ಪ್ರತಿ ವರ್ಷ ಕೋರ್ಸಿಗೆ ಸೇರುವ ವಿದ್ಯಾರ್ಥಿಗಳು ಹಾಗೂ ಅವರ ನಿರ್ವಹಣಾ ಸಾಮರ್ಥ್ಯದ ಮೇಲೆ ಪ್ರಸಂಗವನ್ನು ಆರಿಸುವುದು ಬಹಳ ಮುಖ್ಯವಾದ ವಿಷಯ ಎಂಬುದು ಡಾ| ಉಪ್ಪೂರರ ಅಂಬೋಣ. ಮೈಂದ, ದ್ವಿವಿದರಾಗಿ (ಹರೀಶ ಹಾಗೂ ವಿಜಯ) ವಿದ್ಯಾರ್ಥಿಗಳು ತೆರೆಪೊರ್ಪಾಟು ಕುಣಿತ ದೊಂದಿಗೆ ರಂಗ ಪರಂಪರೆಯನ್ನು ನಿರ್ವಹಿಸಿದರು. ಇಲ್ಲಿ ಸಮಾನ ಸಾಮರ್ಥ್ಯ ಹೊಂದಿದ ವಿದ್ಯಾರ್ಥಿಗಳ ಪೈಪೋಟಿ ಹಾಗೂ ಸಹಕಾರದ ಪ್ರದರ್ಶನ ಅಗತ್ಯ. ಇನ್ನೊಂದು ಪ್ರಮುಖ ವೇಷ ಶ್ರೀಕೃಷ್ಣನದು. (ಕು| ಜಯಲಕ್ಷ್ಮೀ). ಗರುಡ ಗರ್ವಭಂಗ ಹಾಗೂ ಬಲಭದ್ರ ಗರ್ವಭಂಗ ಸಮ್ಮಿಳಿತವಾಗಿರುವ ಈ ಪ್ರಸಂಗದಲ್ಲಿ ಶ್ರೀಕೃಷ್ಣನಿಗೆ ವಿವಿಧ ನೃತ್ಯ ಭಂಗಿಗಳನ್ನು ತೋರಿಸುವ ಅವಕಾಶವಿದೆ. ಗರುಡ ಗರ್ವಭಂಗ ಸಂದರ್ಭದಲ್ಲಿ ಗರುಡನ ರೆಕ್ಕೆ ಹಿಡಿದು ಜೋಗುಳ ಹಾಡಿ ಗಗನಕ್ಕೆ ಎಸೆಯುವ ಸಂದರ್ಭ ಬಹಳ ಸೊಗಸಾಗಿ ಮೂಡಿಬಂತು. ಅಂತಿಮವಾಗಿ ಮೈಂದ -ದ್ವಿವಿದರು ಶ್ರೀಕೃಷ್ಣನನ್ನು ಶ್ರೀರಾಮ ನಾಗಿ ಗುರುತಿಸಿ ಭಕ್ತಿಪೂರ್ವಕವಾಗಿ ಆರಾಧಿಸುವುದರೊಂದಿಗೆ ಯಕ್ಷಗಾನ ಪರಿ ಸಮಾಪ್ತಿಯಾಯಿತು.