ವಿಜಯಲಕ್ಷ್ಮೀ ಶ್ಯಾನ್‌ಭಾಗ್ | Apr 27, 2012
ಒಂದಾನೊಂದು ಕಾಲವಿತ್ತು. ಒಂದಾನೊಂದು ಎನ್ನುವುದಕ್ಕಿಂತ ಕೆಲವೇ ವರ್ಷಗಳ ಹಿಂದೆ ಅಂತ ಹೇಳಬಹುದು. ಆಗ ನಮ್ಮ ಈ ಮಧ್ಯಮ ವರ್ಗದ ಮಹಿಳೆಯರಿಗೆ ಹೊರಗೆ ಹೋಗುವುದೆಂದರೆ ಅದರಲ್ಲೂ ಮನೆ ಸಾಮಾನು ತರಲು ಹೊರಗೆ ಹೋಗುವುದೆಂದರೆ ಬಹಳ ಉದಾಸೀನ. ಮನೆಯಲ್ಲಿಯೇ ಇದ್ದು, ಅಡುಗೆಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಲೋ ಅಥವಾ ಟಿವಿ ವೀಕ್ಷಣೆ ಮಾಡುತ್ತಲೋ ಇನ್ನಿತರ ಹವ್ಯಾಸಗಳಲ್ಲೋ ದಿನ ಕಳೆಯುವುದೆಂದರೆ ಅಚ್ಚು ಮೆಚ್ಚು. ಈ ನಡುವೆ ಮನೆಗೆ ಸಾಮಾನು ಬೇಕೆಂದರೆ ಪಟ್ಟಿ ಮಾಡಿ ಗಂಡನ ಕೈಗೆ ಕೊಡುತ್ತಿದ್ದರು. ಆಚೆ ಬೀದಿಯ ಶೆಟ್ಟರ ಅಂಗಡಿಯಿಂದಲೆ ಸಾಮಾನು ತನ್ನಿ ಎಂದು ಗಂಡಂದಿರಿಗೆ ತಾಕೀತು ಮಾಡಿ ಕಳುಹಿಸುತ್ತಿದ್ದರು. ಆದರೆ, ಈಗ ಅದೇ ಪತ್ನಿಯರು ತಾವೂ ಗಂಡಂದಿರ ಜೊತೆಗೆ ಹೊರಡುತ್ತಿದ್ದಾರೆ. ಶೆಟ್ಟರ ಅಂಗಡಿಗೆ ಅಲ್ಲ; ಭಟ್ಟರ ಅಂಗಡಿಗೂ ಅಲ್ಲ; ಕಾಮತರ ಅಂಗಡಿಗೂ ಅಲ್ಲವೇ ಅಲ. ಹಾಗಾದರೆ ಮತ್ತೆಲ್ಲಿಗೆ ಅಂತ ಕೇಳ್ತೀರಾ? ಅವರೀಗ ಏನಿದ್ದರೂ ಹೊರಡುವುದು ಬಿಗ್ ಬಜಾರ್, ಸೂಪರ್ ಬಜಾರ್‌ಗಳಿಗೆ, ಸ್ಪಾರಿಗೆ, ವಿವಿಧ ಆಕರ್ಷಕ "ಮಾಲ್'ಗಳಿಗೆ.

ಸಾಮಾನಿನ ಪಟ್ಟಿ ತಯಾರಿಸುವ ಕೆಲಸವೇ ಇಲ್ಲ. "ಮಾಲ್'ನ ರ್ಯಾಕುಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟ ಸಾಮಾನುಗಳ ಆಕರ್ಷಕ ಕವಚಗಳು, ಮನೆಯೊಡತಿಯ ಮನಸೂರೆಗೊಳ್ಳುತ್ತ ಆಕೆಯೊಂದಿಗೆ ಸಂಭಾಷಿಸುತ್ತ, ಆಕೆಯ "ಬೇಕು'ಗಳ ಪಟ್ಟಿಯನ್ನು ಬೆಳೆಸುತ್ತವೆ. ಅವುಗಳು ಆಕೆಯೊಂದಿಗೆ ""ನಿನ್ನ ಕರದಿಂದ ನನ್ನ ಸ್ಪರ್ಶಿಸು, ನನ್ನನ್ನು ನಿನ್ನದಾಗಿಸಿಕೋ' ಎಂದು ಮೆಲು ನುಡಿಯಲ್ಲಿ ಮೋಹಕವಾಗಿ ಉಲಿದಂತೆ ಭಾಸವಾಗುವಂತಹ ಪರಿಸ್ಥಿತಿ ಅಲ್ಲಿ ಉಂಟಾಗುತ್ತದೆ. ಸರಿ, ಈ ಕಣ್ಣಿನೊಂದಿಗೆ ಮನಸೂ ಸಹಕರಿಸಿ ಬಿಟ್ಟರೆ ಮುಗಿಯಿತು. ಮಾನಿನಿಯರ ಸಾಮಾನಿನ ಪಟ್ಟಿ ಬೆಳೆದು, ಅವರಿಗೇ ಅರಿವಿಲ್ಲದಂತೆ ಅವರ ಕೈಯಲ್ಲಿದ್ದ ಆ ತಳ್ಳುವ ಗಾಡಿಯಲ್ಲೀ ತರತರಹದ ಚಿತ್ತಾಕರ್ಷಕ ಸರಕುಗಳು ಮೇಲೆ ಮೇಲೆ ಪೇರಿಸಲ್ಪಡುತ್ತವೆ. ಇಷ್ಟೆಲ್ಲದರ ಮಧ್ಯೆ ಮನೆಯಲ್ಲಿಲ್ಲದ ಆವಶ್ಯಕ ಸಾಮಾನೇ ಮರೆತು ಹೋಗಿ ಬಿಡುವ ಸಾಧ್ಯತೆಯೂ ಇಲ್ಲದಿಲ್ಲ. ಕೊನೆಗೆ ಬಿಲ್ ಕೊಡುವ ಹೊತ್ತಿಗೆ ಪತಿ ದೇವರ ಕಿಸೆಯ ಭಾರ ಕುಸಿದು ನಿಟ್ಟುಸಿರು ಬಿಡುವ ಪರಿಸ್ಥಿತಿ. ಹಾಗಾದರೂ ಭಯವಿಲ್ಲ. ಧರ್ಮಪತ್ನಿಯ ಜಂಬದ ಚೀಲದಲ್ಲೊಂದಷ್ಟು ತುರ್ತು ಹಣ ಇದ್ದೇ ಇರುತ್ತದೆ ಬಿಡಿ. ಇದು "ಮಾಲ್' ಎಂಬ ಮಾಯಾ ಬಜಾರಿನ ಮಹಿಮೆ.
ಮೊದಲೆಲ್ಲ ಸಾಮಾನುಗಳ ಗ್ರಾಹಕ ಹಾಗೂ ವ್ಯಾಪಾರಿಯ ನಡುವೆ ಅಂಗಡಿಯ ಕಟಕಟೆಯೊಂದು ಅಡ್ಡವಿರುತ್ತಿತ್ತು. ಗ್ರಾಹಕ ಕೈ ಹಾಕಿ ಅಂಗಡಿಯ ಸಾಮಾನುಗಳನ್ನು ತೆಗೆಯುವ ಹಾಗಿಲ್ಲ. ತನಗೆ ಏನು ಬೇಕು ಎಂದು ಹೇಳಲಷ್ಟೇ ಆತನು ಬದ್ಧನಾಗಿರುತ್ತಿದ್ದ. ವ್ಯಾಪಾರಿ ಆತ ಹೇಳಿದ ಸಾಮಾನನ್ನು ತೂಕ ಮಾಡಿ ಕಟ್ಟಿ ಕೊಡುತ್ತಿದ್ದ. ಇಲ್ಲಿ ಗ್ರಾಹಕ ಪುರುಷನಾಗಿದ್ದರೆ ಸಾಮಾನಿನ ಪಟ್ಟಿ ನೀಡಿ, ಹಣ ತೆತ್ತು, ವ್ಯಾಪಾರಿ ಕೊಟ್ಟದ್ದನ್ನು ತೆಗೆದುಕೊಂಡು ಹೋಗುವುದಷ್ಟೇ ಕೆಲಸ. ಆದರೆ, ಆತನ ಜೊತೆ ಮಹಿಳೆಯೂ ಇದ್ದರೆ, "ಚೆನ್ನಾಗಿರುವ ತೊಗ್ರಿಬೇಳೆ ಕೊಡಿ, ಕಳೆದ ಬಾರಿ ತೆಗೆದುಕೊಂಡು ಹೋಗಿದ್ದು ಚೆನ್ನಾಗಿರ್ಲಿಲ್ಲ. ಅಕ್ಕಿಯೂ ಚೆನ್ನಾಗಿರಬೇಕು. ಬೇಯಿಸಿದರೆ ಮುದ್ದೆ ಆಗಬಾರದು. ಉದುರುದುರಾಗಿ ಇರಬೇಕು. ಉದ್ದೂ ಚೆನ್ನಾಗಿರಬೇಕು. ಕಡೆದಾಗ ಒಳ್ಳೆಯ ಒದಗು ಬರ್ಬೇಕು' ಎಂದೆಲ್ಲ ತಾನು ಖರೀದಿಸುವ ಸಾಮಾನಿನ ಗುಣಮಟ್ಟದ ಬಗ್ಗೆ ಚೌಕಾಶಿ ಮಾಡಿ ಬೇಡಿಕೆ ಇಡುತ್ತಿದ್ದಳು. ಏನೇ ಆದರೂ ಈ ಪರಿಸ್ಥಿತಿಯಲ್ಲಿ ಮನೆಗೆ ಅಗತ್ಯವಾದ, ಬೇಕಾದ ಸಾಮಾನು ಮಾತ್ರ ಖರೀದಿಯಾಗುತ್ತಿತ್ತು. ಅನಾವಶ್ಯಕ ವಸ್ತುಗಳ ಬಗ್ಗೆ ದುಂಬಾಲು ಇರುತ್ತಿರಲಿಲ್ಲ. ಅದಕ್ಕೆ ಅವಕಾಶವೂ ಇರುತ್ತಿರಲಿಲ್ಲ. ಹಣ ಬೇಕಾದುದಕ್ಕಷ್ಟೇ ಖರ್ಚಾಗಿ ಉಳಿತಾಯವಾಗುವ ಸಾಧ್ಯತೆ ಇತ್ತು. ತಿಂಗಳ ಆಯವ್ಯಯದ ಒಂದು ವ್ಯವಸ್ಥಿತ ಆರ್ಥಿಕ ಯೋಜನೆಗೆ ಅನುಕೂಲವಾಗುತ್ತಿತ್ತು.
ಆದರೆ, ಯಾವಾಗ ನಮ್ಮಲ್ಲಿ ಈ ಜಾಗತೀಕರಣದ ಪ್ರಭಾವ ವ್ಯಾಪಿಸಲಾರಂಭವಾಯಿತೋ ಬೇಕಾದ, ಬೇಡವಾದ ಅತಿರಂಜಿತ ಸರಕುಗಳು ಮಾರುಕಟ್ಟೆಯಲ್ಲಿ ವಿಜೃಂಭಿಸಲಾರಂಭಿಸಿದವೋ ಯಾವಾಗ ಈ ಸೂಪರ್ ಬಜಾರ್, ಬಿಗ್ ಬಜಾರ್‌ನಂತಹ ದೊಡ್ಡ ದೊಡ್ಡ ಆಕರ್ಷಕ ಮಾಲ್‌ಗಳು ತಲೆ ಎತ್ತಿದವೋ ಆವಾಗಲೇ ನಮ್ಮ ನಗರ, ಪಟ್ಟಣ ಪ್ರದೇಶದ ಮಧ್ಯಮ ವರ್ಗದ ಮಹಿಳೆಯರು ಕಡಿವಾಣವಿಲ್ಲದ ಹುಚ್ಚು ಕುದುರೆಯ ಹಿಂದೆ ಬೀಳುವಂತೆ ಮಾಲ್‌ನೆಡೆಗೆ ಆಕರ್ಷಿತರಾಗಿ ಮಾಲ್ ಅಡಿಕ್ಟ್ಗಳಾಗುತ್ತಿದ್ದಾರೆ.
ಮಾಲ್‌ನ ಹವಾನಿಯಂತ್ರಿತ ತಂಪು ವಾತಾವರಣ, ವ್ಯವಸ್ಥಿತವಾಗಿ ರ್ಯಾಕುಗಳಲ್ಲಿ ರಾರಾಜಿಸುವ ಅಂದ ಚಂದದ ಕವಚ ಹೊತ್ತ ದುಬಾರಿ ಸಾಮಾನುಗಳು, ಮನೆಯಲ್ಲಿ ಮೂರ್ಖರ ಪೆಟ್ಟಿಗೆ (ಟಿ.ವಿ.)ಯ ಸ್ವಿಚ್ ಹಾಕಿದರೆ ಸಾಕು, ಪ್ರತ್ಯಕ್ಷವಾಗುವ ವಿಧ ವಿಧ ಬಗೆಯ ಪಾನೀಯ, ಸಾಬೂನು, ಶಾಂಪೂ, ಟೂತ್‌ಪೇಸ್ಟ್‌ಗಳ ಜಾಹೀರಾತುಗಳು. ಇವುಗಳಲ್ಲಿ ಜನಪ್ರಿಯ ಚಿತ್ರ ನಟ ನಟಿಯರು, ಕ್ರೀಡಾ ತಾರೆಯರು ಆಯಾಯ ವಸ್ತುವನ್ನು ಕೈಯಲ್ಲಿ ಹಿಡಿದು, "ನಾನಿದನ್ನು ಉಪಯೋಗಿಸಿ ಧನ್ಯನಾಗಿದ್ದೇನೆ, ನೀವೂ ಉಪಯೋಗಿಸಿ' ಎಂದು ಹೇಳಿದ್ದೆಲ್ಲ ತಲೆಯಲ್ಲಿ ಹಸಿ ಹಸಿಯಾಗಿ ಅಚ್ಚೊತ್ತಿರುವಾಗಲೇ ಮಾಲ್‌ಗೆ ನುಗ್ಗಿದ ಮಹಿಳೆಯರ ಕಣ್ಣಿಗೆ ಬೀಳುತ್ತದೆ. ರ್ಯಾಕುಗಳಲ್ಲಿ ಅದೇ ಕವಚವನ್ನು ಹೊತ್ತು "ನಾನಿಲ್ಲಿದ್ದೇನೆ' ಎಂದು ಕೈ ಬೀಸಿ ಕರೆಯುವ ಅದೇ ವಸ್ತುಗಳು, ಆಹಾ! ಅದರ ಅಂದಕ್ಕೆ ಮರುಳಾಗಿ ಅದನ್ನು ಮುಟ್ಟಿ, ಮೂಸಿ, ಸವರಿ, ಹಿಡಿದು ಆನಂದಿಸುತ್ತ ಲಲನೆಯರು ತಮಗೇ ಅರಿವಿಲ್ಲದಂತೆ ಅದನ್ನು ತಮ್ಮ ತಳ್ಳುಗಾಡಿಯ ಉದರಕ್ಕೆ ಮೆಲ್ಲನೆ ಜಾರಿಸಿ ಬಿಡುತ್ತಾರೆ.
ಮನುಷ್ಯನ ಅದರಲ್ಲೂ ಮಹಿಳೆಯ ದೌರ್ಬಲ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಉತ್ಪಾದಕರಿಂದ ಬಹಳ ಸಮರ್ಥ ರೀತಿಯಲ್ಲೇ ಈ ವ್ಯಾಪಾರೀಕರಣದ ಬ್ರೈನ್‌ವಾಷ್ ನಡೆಯುತ್ತಿರುತ್ತದೆ. ಹಾಗಾಗಿ ಇಂದು ಮಹಿಳೆಯರಿಗೆ ಖರ್ಚು ಜಾಸ್ತಿ. ಆದಾಯ ಎಷ್ಟಿದ್ದರೂ ಸಾಕಾಗುವುದಿಲ್ಲ. ಉಳಿತಾಯವೂ ಕಡಿಮೆ. ಇವೆಲ್ಲ ಇಂದಿನ ಮಧ್ಯಮ ವರ್ಗದ, ನಗರ ಪಟ್ಟಣ ಪ್ರದೇಶದ ಮಹಿಳೆಯರ ಸಮಸ್ಯೆ. ಇವರಿಗೆ ಸಾಮಾನನ್ನೆಲ್ಲ ಮಾಲ್‌ನಲ್ಲೇ ಖರೀದಿಸಬೇಕು. ಅದಕ್ಕೆ ಆದಾಯ ಬೇಕು. ಹಳ್ಳಿಯಲ್ಲಿ ಮಾಲ್ ಇರುವುದಿಲ್ಲ. ಸಿಕ್ಕಾಪಟ್ಟೆ ಹಣ ಖರ್ಚು ಮಾಡಲು ಅವಕಾಶ ಇಲ್ಲ. ಆದಾಯಕ್ಕೂ ಆಸರೆ ಇಲ್ಲ. ಯಾಕೆಂದರೆ ಈಗಿನ ಹುಡುಗಿಯರೂ ಅಮ್ಮಂದಿರ ಹಾದಿಯನ್ನೇ ಹಿಡಿಯುತ್ತಿದ್ದಾರೆ. ವಿವಾಹದ ಪ್ರಶ್ನೆ ಬರುವಾಗ ಅವರಿಗೆ ಹಳ್ಳಿ ಹುಡುಗ ಬೇಡ, ಐಟಿ, ಬಿಟಿಯಲ್ಲಿ ಕೆಲಸ ಮಾಡುವವನೇ ಆಗಬೇಕು.
ಶಾಕಾ ಹೊಟೇಲ್, ಗೂಡಂಗಡಿಗಳೆಲ್ಲ ಈ ಜಾಗತೀಕರಣದ ಹೊಡೆತಕ್ಕೆ ಕೊಚ್ಚಿ ಹೋಗುವ ಹಂತದಲ್ಲಿವೆ ಅಥವಾ ಅವುಗಳೂ ಮಾಲ್‌ನಲ್ಲಿಯೇ ಒಂದಷ್ಟು ಸ್ಥಳ ಗಿಟ್ಟಿಸಿಕೊಂಡು ಸ್ಥಾಪನೆಯಾಗಲು ಹರಸಾಹಸ ಮಾಡುತ್ತಿವೆ.
ಈಗೀಗ ಈ ಮಾಲ್‌ಗಳು ಸ್ನೇಹಿತರ, ಯುವ ಪ್ರೇಮಿಗಳ ಪರಸ್ಪರ ಭೇಟಿಯ ತಾಣವೂ ಆಗುತ್ತಿದೆ. ಇದರಿಂದಾಗಿ ಅಲ್ಲಿರುವ ಕಾಂಟಿನೆಂಟಲ್ ತಿನಸುಗಳಾದ ಪಿಜ್ಜಾ, ಬರ್ಗರ್‌ಗಳಿಗೂ ಉತ್ತಮ ಗಿರಾಕಿಗಳು ಒದಗುವಿಕೆಯಾಗುತ್ತದೆ.
ನಾವು ಆಚರಿಸುವ ಸಾಂಪ್ರದಾಯಿಕ ಹಬ್ಬಗಳ ಬಗ್ಗೆ ಮಹಿಳೆಯರು ಬೆಳೆಸಿಕೊಂಡ ಶ್ರದ್ಧೆ ಮಾಲ್‌ನ ವ್ಯಾಪಾರೀಕರಣದ ಧೋರಣೆಗೊಂದು ಧನಾತ್ಮಕ ಅಂಶವಾಗಿದೆ. ಉದಾಹರಣೆಗೆ ದೀಪಾವಳಿ ಸಂಭ್ರಮ ಆಚರಿಸಿ, ದರ ಕಡಿತ ಮಾರಾಟ, ಒಂದಕ್ಕೊಂದು ಉಚಿತ ಗಿಫ್ಟ್ ವೋಚರುಗಳು, ಆಫರ್‌ಗಳ ಸುರಿಮಳೆ. ಹಬ್ಬದ ಸಾಂಪ್ರದಾಯಕತೆಯೊಂದಿಗೆ ಹಣೆಯುವ ಈ ಸ್ಲೋಗನ್‌ಗಳಿಗೆ ಮರುಳಾಗಿ ಮಹಿಳೆಯರು ಈ ಸಂದಭದಲ್ಲಿ ಮಾಲ್‌ಗಳಿಗೆ ಮುಗಿ ಬೀಳುತ್ತಾರೆ.
ಆದರೆ, ವಾಸ್ತವವಾಗಿ ಇಲ್ಲಿ ಎಷ್ಟೇ ದರ ಕಡಿತ ಮಾಡಿದರೂ ಅದಕ್ಕಿಂತ ಎಷ್ಟೋ ಕಡಿಮೆ ದರಕ್ಕೆ ಉತ್ತಮ ಸರಕುಗಳು ಬಿಡಿ ಬಿಡಿಯಾದ ಕಿರಾಣಿ ಅಂಗಡಿಗಳಲ್ಲಿ ಲಭ್ಯವಿರುತ್ತವೆ. ಆದರೆ ಹೆಚ್ಚಿನ ಮಹಿಳೆಯರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇದರ ಬಗ್ಗೆ ಯೋಚಿಸುವುದಾಗಲಿ, ವಿಚಾರಿಸುವುದಾಗಲಿ ಮಾಡುವುದೇ ಇಲ್ಲ. ಇದಕ್ಕೆ ಕಾರಣವಾಗುವುದು ಜಾಗತೀಕರಣ, ವ್ಯಾಪಾರೀಕರಣಕ್ಕೆ ಪೂರಕವಾಗಿ ಶಂಖ ಊದುವ ಪ್ರಬಲ ಜಾಹೀರಾತುಗಳು ಹಾಗೂ ಅವುಗಳನ್ನು ವೈಭವೀಕರಿಸುವ ಮಾಧ್ಯಮಗಳ ಪ್ರಭಾವ.
ಆದರೆ, ಮಹಿಳೆ ಇಷ್ಟು ದುರ್ಬಳಾವಾಗಬಾರದು. ಯಾರಾದರೂ ಒಳ್ಳೆಯದು ಎಂದ ತತ್‌ಕ್ಷಣ ನಂಬಿ ಬಿಡುವುದಲ್ಲ. ಸ್ವಂತ ಯೋಚನೆ ಮಾಡಿ ನಿರ್ಧರಿಸಬೇಕು. ಅಂತಹ ಒಂದು ತಾಳ್ಮೆ, ತಾರ್ಕಿಕತೆಯನ್ನು ನಮ್ಮ ಮಹಿಳೆಯರು ಮೈಗೂಡಿಸಿಕೊಂಡರೆ ಯಾವ ಮಾಲ್ ಕೂಡ ಆಕೆಯನ್ನು ವಂಚಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು ಮನೋಪ್ರವೃತ್ತರಾಗುವುದು ಉಚಿತ.