Tuesday, May 21, 2013
Last Updated: 2:12:50 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕರಾವಳಿಯಲ್ಲೊಂದು ಹೊಸ ಮಿಂಚು ಪಾಕಿ ಹೆಗ್ಡೆ
    • ಕರಾವಳಿಯಲ್ಲೊಂದು ಹೊಸ ಮಿಂಚು ಪಾಕಿ ಹೆಗ್ಡೆ.

      • ಪದ್ಮನಾಭ | Apr 27, 2012

        ಭೋಜ್‌ಪುರಿಯ ಪ್ರಖ್ಯಾತ ನಟಿ ಪಾಕಿ ಹೆಗ್ಡೆ ಬಗ್ಗೆ ಈಗ ಕರಾವಳಿಯಲ್ಲಿ ಬಿಸಿಬಿಸಿ ಚರ್ಚೆ. ಹೆಚ್ಚು ಕಡಿಮೆ ಕರಾವಳಿ ಮಂದಿಗೆ ಅಪರಿಚಿತಳೇ ಆಗಿದ್ದ ಪಾಕಿ ಹೆಗ್ಡೆ ಮೂಲತಃ ಕರಾವಳಿಯವಳೇ ಎಂಬ  ಸತ್ಯ ತಿಳಿದು ಬಂದಾಗ ಹೆಚ್ಚಿನವರಿಗೆ ಆಶ್ಚರ್ಯ, ಮತ್ತಷ್ಟು ಮಂದಿಗೆ ಹೆಮ್ಮೆ.   ಮುಂಬಯಿಯಲ್ಲೇ ಹುಟ್ಟಿ ಬೆಳೆದಿರುವ ಬಂಟ ಯುವತಿ ಪಾಕಿ ಹೆಗ್ಡೆ ತುಳುವಿನಲ್ಲಿ ನಿರರ್ಗಳವಾಗಿ ಮಾತಾಡುತ್ತಾರೆ. ಮನೆಯಲ್ಲಿ ತುಳುವನ್ನೇ ಮಾತಾಡುತ್ತೇವೆ ಎಂದು ಹೇಳುವ ಆಕೆಗೆ, ಮಾತೃಭಾಷೆ ಮೇಲೆ ಅಪಾರ ಪ್ರೀತಿಯಿದೆ. ಇದೀಗ  ತುಳು ಚಿತ್ರವೊಂದರಲ್ಲಿ ನಟಿಸುವ ಮೂಲಕ ತುಳುವಿಗೆ ಮತ್ತಷ್ಟು ಹತ್ತಿರವಾಗಿರುವ, ತುಳುವರಿಗೆ ಮನೆ ಮಗಳಾಗಿರುವ ಪಾಕಿ ಹೆಗ್ಡೆ ಕರಾವಳಿಯಲ್ಲಿ ಹೊಸ ಮಿಂಚಿನಂತೆ  ಕಂಗೊಳಿಸುತ್ತಿದ್ದಾರೆ. ಬಾಲಿವುಡ್‌ನ‌ ಹಿರಿಯ ಫೈಟಿಂಗ್‌ ಗುರು ರಾಮ್‌ ಶೆಟ್ಟಿ ಅವರ  ಬಂಗಾರª ಕುರಲ್‌ ಚಿತ್ರದ ಪ್ರಧಾನ  ಪಾತ್ರ ಅಂಬಿಕಾಳಾಗಿ ನಟಿಸುತ್ತಿರುವ ಪಾಕಿ, ಈಗಾಗಲೇ ಮಂಗಳೂರು ಸುತ್ತಮುತ್ತ ಚಿತ್ರೀಕರಣದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಶಿಸ್ತು, ವಿನಯ, ಅಪ್ರತಿಮ ನಟನಾ ಕೌಶಲ ಈಕೆಯ ಬಂಡವಾಳ. ಅದುವೇ ಅವರನ್ನು ಇಷ್ಟೆತ್ತರಕ್ಕೆ ಬೆಳೆಸಿದಂತಿದೆ. ಬಂಗಾರª ಕುರಲ್‌  ಚಿತ್ರದ ಮೂಲಕ ಕರಾವಳಿ ಜನರ ಗಮನ ಸೆಳೆದು,  ಪ್ರೀತಿ ಪಡೆದುಕೊಂಡಿರುವ ಅವರು ಬಿಹಾರದಲ್ಲಿ,ಅಂದರೆ  ಭೋಜ್‌ಪುರಿ ಚಿತ್ರರಂಗದಲ್ಲಿ ಎತ್ತಿದ ಹೆಸರು. ಅಲ್ಲಿ ನಿರ್ಮಾಪಕಿಯಾಗಿಯೇ ಸುದ್ದಿಯಾಗಿದ್ದಾರೆ.

        ಭೋಜ್‌ಪುರಿ ಚಿತ್ರವೊಂದಕ್ಕೆ ಫೈಟಿಂಗ್‌ ನಿರ್ದೇಶನ  ಮಾಡುವ ಹೊತ್ತಿಗೆ ರಾಮ್‌ ಶೆಟ್ಟಿ ಅವರು ಪಾಕಿ ಹೆಗ್ಡೆಯ ಪ್ರತಿಭೆಯನ್ನು ಗುರುತಿಸಿದರು. ಮುಂದೆ ತಾನು ತುಳುವಿನಲ್ಲಿ ಮಾಡುವ ಸಿನೆಮಾಕ್ಕೆ ಇವರನ್ನೇ ನಾಯಕಿಯಾಗಿಸಬೇಕು ಎಂಬ ನಿರ್ಧಾರ ಮಾಡಿದ ಅವರು, ಆ ಬಗ್ಗೆ ಪಾಕಿಯಲ್ಲಿ   ಪ್ರಸ್ತಾವಿಸಿದರು. ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಯಿತಿಲ್ಲಿ . ಮಾತೃಭಾಷೆ ತುಳುವಿನ ಒಂದು ಸಿನೆಮಾದಲ್ಲಿ ನಟಿಸಬೇಕು ಎಂಬ ಅದಮ್ಯ ಆಕಾಂಕ್ಷೆ ಹೊಂದಿದ್ದ ಪಾಕಿ  ಹೆಗ್ಡೆ, ರಾಮ್‌ ಶೆಟ್ಟಿಯವರ  ಮಾತಿಗೆ ತತ್‌ಕ್ಷಣ ಒಪ್ಪಿಗೆ ಸೂಚಿಸಿದರು. ಅದರ ಫ‌ಲವಾಗಿ ಇದೀಗ ಅವರು ಕರಾವಳಿಯಲ್ಲಿ, ಅರ್ಥಾತ್‌ ತುಳುನಾ‌ಡಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ.

        ಭೋಜ್‌ಪುರಿ ಚಿತ್ರರಂಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಪಾಕಿ ಹೆಗ್ಡೆ, ಅಲ್ಲಿನ ಚಿತ್ರರಂಗದ ಧಡ್ಕನ್‌ ಎಂದೇ ಚಿರಪರಿಚಿತರು. 4 ವರ್ಷಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ  ನಟಿಸಿರುವ ಅವರಿಗೆ ಇದೀಗ ಅಮಿತಾಭ್‌ ಬಚ್ಚನ್‌  ಅವರು ನಟಿಸುವ ಗಂಗಾದೇವಿ ಎಂಬ ಸಿನೆಮಾವೊಂದರಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಮಿತಾಭ್‌ನೊಂದಿಗೆ ನಟಿಸುವುದು ನನಗೆ ದೊರೆತಿರುವ ಬಲು ದೊಡ್ಡ ಅದೃಷ್ಟ ಎಂದು ಹೇಳುವ ಪಾಕಿ ಹೆಗ್ಡೆ,  ಎಲ್ಲರಿಗೂ ಆ ಭಾಗ್ಯ ಒಲಿಯುವುದಿಲ್ಲ ಎನ್ನುತ್ತಾರೆ.
        ಕಟೀಲು ನಿವಾಸಿ  ಮಧುಕರ ಹೆಗ್ಡೆ ಮತ್ತು ಪಡುಬಿದ್ರಿ ಇನ್ನಾದ ಸೀತಾ ದಂಪತಿಯ ಪುತ್ರಿ ಉಷಾ ಹೆಗ್ಡೆಯೇ ನಾವಿಂದು  ನೋಡುತ್ತಿರುವ ಪಾಕಿ ಹೆಗ್ಡೆ. ಉಷಾ ಹೆಗ್ಡೆ ಎಂಬ ಹೆಸರನ್ನು ಸಿನೆಮಾಕ್ಕೆ ಬೇಕಾಗಿ ಪಾಕಿ ಹೆಗ್ಡೆ ಎಂದು ಬದಲಾಯಿಸಲಾಗಿದೆಯಂತೆ. ತಂದೆ ಮಧುಕರ ಹೆಗ್ಡೆ ಅವರು ಮುಂಬಯಿಯಲ್ಲಿ ಉದ್ಯಮಿಯಾಗಿದ್ದರಿಂದ ಪಾಕಿಯ ಹುಟ್ಟು ಮುಂಬಯಿಯಲ್ಲೇ ಆಗಿದೆ. ಆದರೆ ದುರದೃಷ್ಟವಶಾತ್‌ ಪಾಕಿ ಹೆಗ್ಡೆ ನಾಲ್ಕನೇ ತರಗತಿ ಓದುತ್ತಿರುವ ಹೊತ್ತಿನಲ್ಲಿಯೇ ತಂದೆ ಗತಿಸಿದರು. ಬಳಿಕ ತಾಯಿಯ ಪ್ರೀತಿಯ ಮಗಳಾಗಿ ಬೆಳೆದರು.  ಮಗಳ ಆಸಕ್ತಿಗೆ ತಕ್ಕಂತೆ ಬೆಳೆಸಿದರು. ಓದಿನಲ್ಲೂ ಪ್ರತಿಭಾವಂತೆಯಾಗಿದ್ದ ಉಷಾ ಸಿ.ಎ. ಮಾಡಬೇಕು ಎಂಬ ಆಸೆ  ಹೊತ್ತಿದ್ದರು. ಆದರೆ, ಸಿ.ಎ.ಗಾಗಿ ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲೇ ಸಿನೆಮಾ ರಂಗದಿಂದ ಬರಲಾರಂಭಿಸಿದ ಬೇಡಿಕೆಯನ್ನು ಗಮನಿಸಿ ಸಿ.ಎ.ಯನ್ನು ಅರ್ಧಕ್ಕೇ ನಿಲ್ಲಿಸಿದರು.

        ಕಾಲೇಜು ದಿನಗಳಲ್ಲೇ ನಟನೆಯಲ್ಲಿ ಗಮನ ಸೆಳೆಯುತ್ತಿದ್ದ  ಇವರಿಗೆ  ಡಿಡಿ-1ರಲ್ಲಿ ಮೈ ಬನೂಂಗಿ ಮಿಸ್‌ ಇಂಡಿಯಾ ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಧಾರಾವಾಹಿ ಇವರಿಗೆ ತುಂಬಾ ಜನಪ್ರಿಯತೆ ತಂದು ಕೊಟ್ಟಿತು. ಪರಿಣಾಮವಾಗಿ 2006ರಲ್ಲಿ ಬೈರೀ ಪಿಯಾ ಎಂಬ  ಭೋಜ್‌ಪುರಿ ಸಿನೆಮಾದಲ್ಲಿ ಅವಕಾಶ ಸಿಕ್ಕಿತು. ಆ ಸಿನೆಮಾ ಸೂಪರ್‌ ಹಿಟ್‌ ಆಯಿತು.  ಮತ್ತೆ  ಭೋಜ್‌ಪುರಿಯಲ್ಲಿ ಅವಕಾಶದ ಹೊಳೆಯೇ ಹರಿಯಲಾರಂಭಿಸಿತು. ಪೂರ್ಣ ಪ್ರಮಾಣದಲ್ಲಿ ನಟಿಯಾಗಲು ನಿರ್ಧರಿಸಿದರು.
        ಇವರ ಸಾಧನೆಯಿಂದಾಗಿ ಭೋಜ್‌ಪುರಿಯಲ್ಲಿ  ಇವರಿಗೆ ಚಿತ್ರರಂಗದ ಧಡ್ಕನ್‌ ಎಂದು ಹೆಸರಿದೆಯಂತೆ ! ಸತತವಾಗಿ 2 ವರ್ಷಗಳಿಂದ  ಉತ್ತಮ ನಟಿ ಪ್ರಶಸ್ತಿ ಪಡೆದಿರುವುದು, ಬಿಹಾರದ ಗೌರವ ಪ್ರಶಸ್ತಿಯಾದ ಬಿಹಾರಿ ಆಸ್ಮಿತಾ ಸಮ್ಮಾನ್‌  ಲಭಿಸಿರುವುದು ಮತ್ತು 2011ರಲ್ಲಿ ಅವರು ನಟಿಸಿರುವ 6 ಚಿತ್ರಗಳು ಸೂಪರ್‌ ಹಿಟ್‌  ಆಗಿರುವುದು ಪಾಕಿ ಪ್ರತಿಭೆಗೆ ಸಾಕ್ಷಿ.

        ಬಂಗಾರª ಕುರಲ್‌ ಸಿನೆಮಾ ಚಿತ್ರೀಕರಣ ಸಂದರ್ಭ ಮಂಗಳೂರು ಸುತ್ತಮುತ್ತಲಿನ ವಾತಾವರಣಕ್ಕೆ ಮಾರು ಹೋಗಿರುವ ಅವರು, ತುಳುನಾಡು ತುಂಬ ಸುಂದರವಾಗಿದೆ ಎಂದು ಹೇಳುತ್ತಿದ್ದರು. ಇಲ್ಲಿ ದಿನ ಕಳೆದದ್ದೇ ಗೊತ್ತಾಗಲಿಲ್ಲ ಎಂದಿದ್ದರು. ತುಳುವಿನಲ್ಲಿ ಇನ್ನಷ್ಟು ಉತ್ತಮ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎಂದು ಹೇಳುವ ಅವರು, ತನಗೆ  ತೃಪ್ತಿ ತರುವ ಕಥೆ ಸಿಕ್ಕಿದರೆ ತುಳುವಿನಲ್ಲೂ ಒಂದು ಸಿನೆಮಾ ತಯಾರಿಸುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಭೋಜ್‌ಪುರಿ ಸಿನೆಮಾ ನಿರ್ಮಾಣ ಮಾಡಿರುವ ಅವರಿಗೆ ಸಿನೆಮಾ ಮಾಡುವುದು ಹೊಸತೇನಲ್ಲ.  ಬಂಗಾರª ಕುರಲ್‌ನಲ್ಲಿ ಅವರ ಅಭಿನಯವನ್ನು ಹತ್ತಿರದಿಂದ ಕಂಡ ಕೆಲವು ಚಿತ್ರೋದ್ಯಮಿಗಳು, ಇವರಿಗೆ ಕನ್ನಡದಲ್ಲೂ ಅವಕಾಶ ನೀಡಲು ಮುಂದೆ ಬಂದಿದ್ದಾರಂತೆ. ಬಂಗಾರª ಕುರಲ್‌ ಬಿಡುಗಡೆಯಾದ ಬಳಿಕ ಅವರು ಕನ್ನಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus